ಬೀದರ– ಚುನಾವಣೆ ಇನ್ನೂ ಎಲ್ಲಿ ಇದೆಯೋ ಏನೋ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಲು ಹೊರಟಂತೆ ಜಿಲ್ಲೆಯ ಇಬ್ಬರು ರಾಜಕೀಯ ನಾಯಕರು ಈಗಲೇ ಸಚಿವ ಸ್ಥಾನದ ಕನಸು ಕಟ್ಟಿಕೊಂಡಿದ್ದಾರೆ.
ಬೀದರ್ ಜಿಲ್ಲೆಯ ಪಶುಸಂಗೋಪನೆ ಇಲಾಖೆ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಪಕ್ಷದ ಶಾಸಕರು ಹಾಗು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ನಡುವೆ ಖಾತೆ ಬಗ್ಗೆ ಜಟಾಪಟಿ ನಡೆಯಿತು.
ಮುಂಬರುವ ಚುನಾವಣೆಯಲ್ಲಿ ತಾವಿಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಗೆಲುವುದು ಅನುಮಾನವಿಲ್ಲ ನಾವು ಈಗಾಗಲೇ ಗೆಲುವು ಸಾಧಿಸಿದ್ದೇ ಎಂಬರ್ಥದಲ್ಲಿ ಒಂದೇ ವೇದಿಕೆಯ ಮೇಲೆ ಇಬ್ಬರಲ್ಲೂ ಖಾತೆ ಕಿತ್ತಾಟ ನಡೆಯುತ್ತಿದೆ.
ಮುಂದಿನ ಸರ್ಕಾರದಲ್ಲಿ ಪಶು ಸಂಗೋಪನೆ ಖಾತೆಗೇ ಬೇಡಿಕೆಯಿಟ್ಟ ಹಾಲಿ ಸಚಿವರು ಹಾಗೂ ಶಾಸಕರು.
ಹಾಲಿ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ರಹೀಂಖಾನ್ ಇಬ್ಬರೂ ಪಶು ಸಂಗೋಪನೆ ಖಾತೆ ಮೇಲೆ ಒಲವು ಹೊಂದಿದ್ದು, ಮೊದಲ ಬಾರಿ ನಾನು ಸಚಿವನಾಗುವಾಗ ಪಶು ಸಂಗೋಪನೆ ಖಾತೆ ಬೇಕು ಎಂದು ಮನವಿ ಮಾಡಿದ್ದೆ ಎರಡನೇಯ ಸಲ ಸಚಿವನಾದಾಗಲೂ ನನಗೆ ಈ ಖಾತೆ ಬೇಕು ಎಂದು ಹೇಳಿ ಪಡೆದಿದ್ದೇನೆ. ಗೋಮಾತಾ ಮೇರೆ ಮಾತಾ, ನನಗೆ ಪಶು ಸಂಗೋಪನೆ ಇಲಾಖೆ ಬೇಡಿ ಪಡೆದಿದ್ದೇನೆ ಎಂದು ಪ್ರಭು ಚವ್ಹಾಣ ಹೇಳಿ, ಮುಂದೆ ಕೂಡಾ ನೂರಕ್ಕೆ ನೂರು ಬಿಜೆಪಿ ಸರ್ಕಾರ ರಾಜ್ಯದಲ್ಲಿ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಶು ಸಂಗೋಪನೆ ಖಾತೆ ಬೇಕು ಎಂಬ ಚವ್ಹಾಣ್ ಹೇಳಿಕೆಗೆ ವೇದಿಕೆ ಮೇಲೆ ಇದ್ದ ಕಾಂಗ್ರೆಸ್ ಶಾಸಕ ರಹೀಂಖಾನ್ ಟಾಂಗ್ ಕೊಟ್ಟರು. ರಾಜನ ಮಗ ರಾಜನಾಗುತ್ತಿದ್ದ ಆದ್ರೆ ಅಂಬೇಡ್ಕರ್ ಸಂವಿಧಾನದಲ್ಲಿ ಇಂದು ಎಲ್ಲರಿಗೂ ನ್ಯಾಯ ಸಿಗುತ್ತಿದೆ…ಎಲ್ಲಾ ಸೇರಿ ಒಳ್ಳೆ ಅಭಿವೃದ್ಧಿ ಕೆಲಸಗಳನ್ನು ಮಾಡೋಣ ಎಂದರು.
ಚವ್ಹಾಣ್ ಹೇಳುತ್ತಿದ್ದಾರೆ ಮುಂದಿನ ಬಾರಿ ತಮ್ಮ ಸರ್ಕಾರ ಬಂದ್ರೆ ಮತ್ತೆ ಪಶು ಸಂಗೋಪನೆ ಮಂತ್ರಿಯಾಗುತ್ತೇನೆ ಎಂದು, ನಮ್ಮ ಸರ್ಕಾರ ಬಂದ್ರೆ ನಾನು ಪಶು ಸಂಗೋಪನೆ ಸಚಿವನಾಗುತ್ತೇನೆ ಎಂದು ರಹೀಂಖಾನ್ ನುಡಿದರು.
ಬೀದರ್ ನ ನೇಹರು ಕ್ರೀಡಾಂಗಣದಲ್ಲಿ ಸಂಚಾರಿ ಪಶು ಚಿಕಿತ್ಸಾಲಯದ ಆಂಬುಲೆನ್ಸ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಇಬ್ಬರು ನಾಯಕರು ತಮ್ಮ ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ.
ಆದರೆ ಮುಂಬರುವ ಚುನಾವಣೆಯಲ್ಲಿ ಮತದಾರ ಪ್ರಭು ಯಾರ ಕೊರಳಿಗೆ ಹೂವಿನ ಹಾರ ಹಾಕಿ ಬೆಂಗಳೂರಿಗೆ ಕಳಿಸಿ ಕೊಡತ್ತಾರೆ ಎಂಬುದು ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ, ಬೀದರ