ಹೊಸದಿಲ್ಲಿ – ಭಾರತದ ನಾಗರಿಕರು ಸದ್ಯದಲ್ಲಿಯೇ ಖಾದ್ಯ ತೈಲದ ಬೆಲೆ ಏರಿಕೆಯನ್ನು ಎದುರಿಸಲು ಸಜ್ಜಾಗಬೇಕಾಗಿದೆ.
ಈಗಾಗಲೇ ತಿನ್ನುವ ಎಣ್ಣೆಯ ದರ ಹೆಚ್ಚಾಗಿದ್ದು ಮಧ್ಯಮ ವರ್ಗದ ಕುಟುಂಬಗಳನ್ನು ಕಾಡಿಸಿದೆ ಆದರೆ ಈಗ ಬಂದಿರುವ ಸುದ್ದಿ ಎಲ್ಲರ ನಿದ್ದೆಯನ್ನೇ ಕೆಡಿಸಲಿದೆ.
ಸೂರ್ಯಕಾಂತಿ ಎಣ್ಣೆಯನ್ನು ಉತ್ಪಾದಿಸುವ ಎರಡು ಪ್ರಮುಖ ದೇಶಗಳೆಂದರೆ ರಷ್ಯಾ ಮತ್ತು ಉಕ್ರೇನ್ ! ಎರಡೂ ದೇಶಗಳು ಪರಸ್ಪರ ಯುದ್ಧದಲ್ಲಿ ತೊಡಗಿವೆ. ಉಕ್ರೇನ್ ನಲ್ಲಿಯಂತೂ ಸೂರ್ಯಕಾಂತಿ ಎಣ್ಣೆಯ ಉತ್ಪಾದನೆಯೇ ನಿಂತು ಹೋಗಿದೆ. ಹಾಗೆ ನೋಡಿದರೆ ಜಗತ್ತಿನ ಒಟ್ಟು ಸೂರ್ಯಕಾಂತಿ ಎಣ್ಣೆಯ ಉತ್ಪಾದನೆಯ ಶೇ. ೨೫ ರಷ್ಟನ್ನು ಯುದ್ಧ ಪೀಡಿತ ಉಕ್ರೆನ್ ದೇಶವೊಂದೇ ಉತ್ಪಾದಿಸುತ್ತಿತ್ತು ಆದರೆ ಈಗ ಅಲ್ಲಿಂದ ಕೆಜಿ ಕೂಡ ಎಣ್ಣೆ ಉತ್ಪಾದನೆಯಾಗುತ್ತಿಲ್ಲ. ಇದು ಜಗತ್ತಿನ ನಿದ್ದೆಗೆಡಿಸಿದೆ. ಅಷ್ಟೇ ಅಲ್ಲ ಭಾರತವನ್ನು ದುಃಸ್ವಪ್ನದಂತೆ ಕಾಡುತ್ತಿದೆ.
ಇನ್ನೊಂದು ವಿಷಯವೆಂದರೆ ಭಾರತಕ್ಕೆ ತಾಳೆ ಎಣ್ಣೆ ರಫ್ತು ಮಾಡುತ್ತಿದ್ದ ಇಂಡೋನೇಷ್ಯಾ ಕೂಡ ಇನ್ನು ಮುಂದೆ ಪಾಮ್ ಆಯಿಲ್ ಭಾರತಕ್ಕೆ ಕೊಡುವುದಿಲ್ಲ ಎಂದಿದೆ. ಇದರಿಂದಾಗಿ ಸದ್ಯದಲ್ಲಿಯೇ ಖಾದ್ಯ ತೈಲದ ದರ ಗಗನ ಮುಟ್ಟಲಿದೆಯೆಂಬುದಾಗಿ ವರದಿಗಳು ಹೇಳುತ್ತಿವೆ.
ಇನ್ನು ಮುಂದೆ ಭಾರತಕ್ಕೆ ಬರಲಿರುವ ೪೦ ಲಕ್ಷ ಟನ್ ತಾಳೆ ಎಣ್ಣೆ ಆಮದು ಸ್ಥಗಿತಗೊಳ್ಳಲಿದೆ. ಭಾರತ ವರ್ಷಕ್ಕೆ ೨.೨೫ ಲಕ್ಷ ಟನ್ ಎಣ್ಣೆ ಬಳಸುತ್ತದೆ. ದೇಶದಲ್ಲಿ ಉತ್ಪಾದನೆಯಾಗುವ ಎಣ್ಣೆ ಕೇವಲ ೯೫ ಲಕ್ಷ ಟನ್. ಉಳಿದದ್ದು ಬೇರೆ ದೇಶಗಳಿಂದ ಬರಬೇಕು.
ರಷ್ಯಾ ಯುದ್ಧ ಹಾಗೂ ಇಂಡೋನೇಷ್ಯಾದ ರದ್ದತಿಯಿಂದಾಗಿ ಭಾರತದಲ್ಲಿ ಖಾದ್ಯ ತೈಲದ ಕೊರತೆ ಉಂಟಾಗಿ ದರಗಳು ಗಗನ ಮುಟ್ಟಲಿವೆಯೆನ್ನಲಾಗಿದೆ.