spot_img
spot_img

“ಚೆಲ್ವರಾಶಿ”ಯ ಹೊತ್ತ ಕವಿ ಅಮರೇಗೌಡ ಪಾಟೀಲರು

Must Read

- Advertisement -

ಅಮರೇಗೌಡ ಪಾಟೀಲರು ಕಳೆದ ೨ ವರ್ಷಗಳಿಂದ ವ್ಯಾಟ್ಸಪ್‌ನಲ್ಲಿ ತಮ್ಮ ಕವನಗಳನ್ನು ನನಗೆ ಕಳಿಸುತ್ತಿದ್ದರು. ಕವನ ಓದುತ್ತ ಸಾಗಿದಂತೆ ಹಿರಿಯರ ಪರಿಚಯ ಒಡನಾಟ ಪೋನ್ ಮೂಲಕ ಸಾಗಿತು. ಜೊತೆಗೆ ಸಾಕ್ಷಾತ್ಕಾರ. ಕರ್ನಾಟಕ ಟೈಮ್ಸ. ಪಬ್ಲಿಕ್ ಟುಡೇ ಅಂತರ್ಜಾಲ ತಾಣದಲ್ಲಿ ಅವುಗಳನ್ನು ಪ್ರಕಟಿಸತೊಡಗಿದೆ.

ನನ್ನ ಅಂತರ್ಜಾಲ ಸಂಪಾದಕರು ಅವುಗಳನ್ನು ಪ್ರಕಟಿಸುವ ಜೊತೆಗೆ ಲಿಂಕ್ ಕಳಿಸತೊಡಗಿದರು. ಹೀಗೆ ನಮ್ಮ ಆತ್ಮೀಯ ಒಡನಾಟ ಸಾಗಿರುವಾಗಲೇ ಅವರ ಕವನ ಸಂಕಲನಕ್ಕೆ ಆಶಯ ನುಡಿಗಳನ್ನು ಬರೆದುಕೊಡಲು ಕೊರಿಯರ್ ಮೂಲಕ ಕವನಗಳನ್ನು ಕಳಿಸಿದರು.

ಹಿರಿಯರ ಕವನಗಳನ್ನು ಓದಿ ಆಶಯ ನುಡಿಗಳನ್ನು ಬರೆಯಲು ಅವಕಾಶ ಕೊಟ್ಟ ಅವರ ಹೃದಯ ವೈಶಾಲ್ಯತೆಗೆ ಮೊಟ್ಟ ಮೊದಲಿಗೆ ನಮನಗಳು. ಇತ್ತೀಚೆಗಷ್ಟೇ ಆ ಕವನ ಸಂಕಲನ ಲೋಕಾರ್ಪಣೆಗೊಂಡಿತು. ಈ ಕವನ ಸಂಕಲನವು ೯೨ ಪುಟಗಳನ್ನು ಒಳಗೊಂಡಿದೆ. ಬೆಲೆ.೧೦೦ ರೂ. ಮುಖಪುಟ ಅವರ ಕ್ಯಾಮರಾ ಕೈಚಳಕದಲ್ಲಿ ಮೂಡಿ ಬಂದ ಹಂಪಿಯ ರಾಜಬೀದಿಯ ಚಿತ್ರ. ಈ ಕೃತಿಗೆ ಮುನ್ನುಡಿ ಬರೆದವರು ಶಿಕ್ಷಣ ಇಲಾಖೆಯ ಧಾರವಾಡ ವಿಭಾಗದ ಆಯುಕ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ದಕ್ಷ ಪ್ರಾಮಾಣಿಕ ಅಧಿಕಾರಿ ಸಿದ್ರಾಮ ಮನಹಳ್ಳಿಯವರು. ಬೆನ್ನುಡಿ ಬರೆದವರು ಪತ್ರಕರ್ತ ಸಾಹಿತಿ ಡಿ.ಎಂ.ಸಾಹುಕಾರ ಬೀಳಗಿ ತಾಲೂಕಿನ ಅರಕೇರಿಯವರು.

- Advertisement -

ಸಿದ್ಧರಾಮ ಮನಹಳ್ಳಿಯವರ ಮುನ್ನುಡಿಯ ಕೆಲವು ವಿಚಾರಗಳನ್ನು ಇಲ್ಲಿ ಪ್ರಸ್ತಾಪ ಮಾಡುತ್ತ ನನ್ನ ಅನಿಸಿಕೆಗಳನ್ನು ವ್ಯಕ್ತಪಡಿಸುವೆನು. ಮನಹಳ್ಳಿಯವರ ನುಡಿಗಳಲ್ಲಿ ಅಮರೇಗೌಡ ಪಾಟೀಲರು, ನಿವೃತ್ತ ಬ್ಯಾಂಕ ವ್ಯವಸ್ಥಾಪಕರು ಹಾಗೆ ಹೇಳಿದರೆ ಕೇವಲ ಇವರ ವೃತ್ತಿ ಬದುಕನ್ನು ಮಾತ್ರ ಹೇಳಿದಂತಾಗುತ್ತದೆ. ಆದರೆ ಪ್ರವೃತ್ತಿಯಿಂದ ಅವರೊಬ್ಬ ಪ್ರತಿಭೆಯುಳ್ಳ ಲೇಖಕರು. ಬರಹಗಾರರು ಕೂಡ. ನಿಸ್ಸಂಶಯವಾಗಿ ಅವರಲ್ಲಿ ಒಬ್ಬ ಕವಿ ಬೆರೆತುಕೊಂಡಿದ್ದಾನೆ. ಅವರು ರಚಿಸಿದ ಕವನಗಳಲ್ಲಿ ಅದನ್ನು ಋಜುವಾತು ಪಡಿಸಿದ್ದಾರೆ

ಬೋಳುಮರ ಆದರೇನಂತೆ
ಮತ್ತೆ ಚಿಗುರ ಬಲ್ಲೆ
ಮುಗಿಲೆತ್ತರಕೆ ಕೈ ಚಾಚಬಲ್ಲೆ
ಕೊರಡು ಕೊನರಬಲ್ಲದೆಂದು ತೋರಬಲ್ಲೆ(ಜೀವನೋತ್ಸಾಹ)

ಎಂಬ ಕವನದ ಸಾಲುಗಳನ್ನು ಉಲ್ಲೇಖಿಸುತ್ತ ಅವರ ಕವಿತೆಯ ಅನಾವರಣವನ್ನು ತಮ್ಮ ಮುನ್ನುಡಿಯಲ್ಲಿ ಅನಾವರಣಗೊಳಿಸಿರುವರು.

- Advertisement -

ಕವಿ ತನ್ನ ಅಭಿವ್ಯಕ್ತಿಗಾಗಿ ಆಯ್ಕೆ ಮಾಡಿಕೊಳ್ಳುವ ಪ್ರಥಮ ಆದ್ಯತೆ ಕಾವ್ಯ. ಎಲ್ಲ ಶ್ರೇಷ್ಠ ಸಾಹಿತಿಗಳು ಕೂಡ ತಮ್ಮ ಬರವಣಿಗೆಯನ್ನು ಆರಂಭಿಸಿದ್ದೇ ಕವನ ರಚನೆಯ ಮೂಲಕ. ಇಂದಿನ ಕವನಗಳಂತೂ ಅಂತರ್ಜಾಲ ತಾಣಗಳ ಮೂಲಕ ಕ್ಷಣ ಕ್ಷಣಕ್ಕೂ ತನ್ನದೇ ಓದುಗರನ್ನು ಸೃಷ್ಟಿಸಿಕೊಂಡಿವೆ. ಅಂತಹದರಲ್ಲಿ ಬ್ಯಾಂಕ್ ಉದ್ಯೋಗಿಯಾಗಿ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ನಿವೃತ್ತಿ ಬದುಕಿನಲ್ಲಿ ಕವನ ರಚಿಸುತ್ತಿರುವ ಮತ್ತು ಹವ್ಯಾಸಕ್ಕಾಗಿ ಕ್ಯಾಮರಾ ಹೆಗಲಿಗೆ ಹಾಕಿಕೊಂಡು ಸುಂದರವಾದ ಭಾವಚಿತ್ರಗಳನ್ನು ಸೆರೆ ಹಿಡಿಯುವ ಅವುಗಳನ್ನು ತಮ್ಮದೇ ಲೇಖನ ಮೂಲಕ ಪತ್ರಿಕೆಗಳಿಗೆ ಕಳಿಸಿ ಮುದ್ರಣವಾದ ಬರಹಗಳನ್ನು ನನಗೆ ವ್ಯಾಟ್ಸಪ್ ಮೂಲಕ ಕಳಿಸುವ ಅಮರೇಗೌಡ ಪಾಟೀಲರ ಈ ಹವ್ಯಾಸ ನಮ್ಮಂತಹ ಯುವಕರಿಗೆ ಸ್ಪೂರ್ತಿ ಎಂದರೆ ಅತಿಶಯೋಕ್ತಿಯಲ್ಲ.

ಪಾಟೀಲರ ಸಂಕ್ಷಿಪ್ತ ಪರಿಚಯ:

ಅಮರೇಗೌಡ ಪಾಟೀಲರ ತಂದೆ ಹನುಮಗೌಡ ತಾಯಿ ರುದ್ರಮ್ಮ ಮನೆಯ ಹೆಸರು ಪೋಲಿಸ್ ಪಾಟೀಲ ಎಂದು. ಇದು ಬ್ರಿಟಿಷ್ ಕಾಲದಲ್ಲಿ ಮಾಲೀಗೌಡರು ಪೋಲೀಸ್ ಪಾಟೀಲ ಗೌಡರು ಹೀಗೆ ಒಂದು ಊರಿಗೆ ಇಬ್ಬರು ಗೌಡಕಿ ಮನೆತನಗಳಿರುತ್ತಿದ್ದವು.ಇವರ ತಂದೆಯವರು ಅಂದಿನ ಕಾಲದಲ್ಲಿ (೧೯೭೬ ರ ವರೆಗಿನ ಅವಧಿಯಲ್ಲಿ) ಪಟೇಲಕಿ ಮಾಡಿದವರು.ನಂತರ ಸರಕಾರ ಈ ಪಟೇಲಕಿ ಪದ್ದತಿಯನ್ನು ತಗೆದುಹಾಕಿತು. ಹನುಮೇಗೌಡ ಮತ್ತು ರುದ್ರಮ್ಮ ದಂಪತಿಗಳ ಆರು ಜನ ಗಂಡು ಮಕ್ಕಳಲ್ಲಿ ಇವರು ಐದನೇಯವರು. ಇಬ್ವರು ಸಹೋದರಿಯರು ಒಬ್ಬ ಅಕ್ಕ ಮತ್ತೊಬ್ಬ ಸಹೋದರಿ. ಹೀಗೆ ೮ ಮಕ್ಕಳ ಕುಟುಂಬದಲ್ಲಿ ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ೧ ರಿಂದ ೭ ನಾಗರಹಾಳ ಲಿಂಗಸೂರು ತಾಲೂಕಿನಲ್ಲಿ ಸೋದರತ್ತೆಯ ಮನೆಯಲ್ಲಿ ಕಲಿತು ನಾಗರಹಾಳದ ಹತ್ತಿರದ ೮ ನೇ ತರಗತಿ ಸುಬ್ಬಲಗುಡ್ಡದಲ್ಲಿ ವ್ಯಾಸಂಗ ಪೂರೈಸಿದರು. ೯ ಮತ್ತು ೧೦ ನೇ ತರಗತಿಯನ್ನು ಕುಷ್ಠಗಿಯಲ್ಲಿ ಅಣ್ಣನ ಮನೆಯಲ್ಲಿ ಇದ್ದುಕೊಂಡು ಕಲಿತರು.ನಂತರ ಪಿ.ಯು.ಸಿಯನ್ನು ಕಿಟೆಲ್ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದಲ್ಲಿ (೧೯೭೩-೭೫) ನಂತರ ಬಿ.ಎಸ್ಸಿಯನ್ನು ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪೂರೈಸಿದರು. ನಂತರ ಬಳ್ಳಾರಿ ಜಿಲ್ಲೆಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ನೌಕರಿ ಪ್ರಾರಂಭಿಸಿದರು.

ಇವರು ಕಾಲೇಜಿನಲ್ಲಿರುವಾಗಲೇ ಕವನ ರಚನೆಗೆ ತೊಡಗಿದ್ದರು. ಅಂದು ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಪಾಟೀಲ ಪುಟ್ಟಪ್ಪನವರ ವಿಶ್ವವಾಣಿ ದಿನಪತ್ರಿಕೆಗಳಲ್ಲಿ ಅವು ಪ್ರಕಟವಾಗುತ್ತಿದ್ದವು. ೧೯೭೮ ರಲ್ಲಿ ಕರ್ನಾಟಕ ಮಹಾವಿದ್ಯಾಲಯದಲ್ಲಿ ಬಿ.ಎಸ್ಸಿ ಪದವಿ ಓದುತ್ತಿರುವ ಸಂದರ್ಭದಲ್ಲಿ ಹತ್ತಿರದ ಮುಗದ ಗ್ರಾಮದಲ್ಲಿ ಎನ್.ಎಸ್.ಎಸ್ ಕ್ಯಾಂಪ್ ಜರುಗಿತ್ತು. ಅದರ ವರದಿಯನ್ನು ತಯಾರಿಸಿ ಪ್ರಾಚಾರ್ಯರ ಸಹಿಯೊಂದಿಗೆ ಸಂಯುಕ್ತ ಕರ್ನಾಟಕಕ್ಕೆ ಕಳಿಸಿದಾಗ ಅದು ಪ್ರಕಟಗೊಂಡು ಗುರುಗಳ ಮೆಚ್ಚುಗೆಗೆ ಪಾತ್ರವಾಯಿತು.

ಅಷ್ಟೇ ಅಲ್ಲ ಎನ್,ಎಸ್,ಕ್ಯಾಂಪ್ ಅಧಿಕಾರಿಗಳ ಮೂಲಕ ವಿಶ್ವವಿದ್ಯಾಲಯದ ಕುಲಪತಿಗಳ ಗಮನಕ್ಕೆ ಇವರ ಬರವಣಿಗೆ ತಲುಪುವಂತಾಯಿತು. ಆಗ ಉಪಕುಲಪತಿಗಳ ಗೌರವಾರ್ಥ ಏರ್ಪಡಿಸಿದ್ದ ಉಪಾಹಾರ ಕೂಟಕ್ಕೆ ಮೂವರು ವಿದ್ಯಾರ್ಥಿಗಳು ಇವರ ಕಾಲೇಜಿನಿಂದ ಆಯ್ಕೆ ಆದಾಗ ಆ ಮೂವರಲ್ಲಿ ಇವರೂ ಒಬ್ಬರಾಗಿದ್ದರು.

ಅಲ್ಲಿ ಇವರ ಅದ್ಯಾಪಕರು ಉಪ ಕುಲಪತಿಗಳಿಗೆ ಇವರನ್ನು ನಮ್ಮ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿ ಎಂದು ಪರಿಚಯಿಸಿದಾಗ ಅಭಿಮಾನ ಎನಿಸಿತ್ತು. ಹೀಗೆ ಇವರಲ್ಲಿನ ಬರಹಗಾರ ಅಲ್ಲಿ ಮೊಳಕೆಯೊಡೆದಿದ್ದ. ಕವನಗಳನ್ನು ಬರೆಯೋದು ಬಿಡಿ ಲೇಖನಗಳನ್ನು ಬರೆಯೋದು ಅವರ ಹವ್ಯಾಸವಾಗಿತ್ತು.

ಕರ್ನಾಟಕ ಬ್ಯಾಂಕ್‌ನಲ್ಲಿ ಸೇವೆಯನ್ನು ೩೬ ವರ್ಷ ಸಲ್ಲಿಸಿ ನಿವೃತ್ತರಾದ ನಂತರ ತಮ್ಮ ಮೊದಲಿನ ಹವ್ಯಾಸ ಪಕ್ಷಿಗಳ ವೀಕ್ಷಣೆಗಾಗಿ ವಿಭಿನ್ನ ಕ್ಯಾಮರಾ ಖರೀದಿಸಿ ಅಲೆಮಾರಿಯ ಅಲೆತದ ರೂಪದಲ್ಲಿ ಸಾಗತೊಡಗಿತು. ಇಂದಿಗೂ ನಿವೃತ್ತರಾದರೂ ಕೂಡ ಕ್ಯಾಮರಾ ಬಗಲಿಗೆ ಹಾಕಿಕೊಂಡು ಪೋಟೋ ತಗೆಯುವುದಷ್ಟೇ ಅಲ್ಲ ಪೋಟೋ ಬರಹಗಳನ್ನು ಕೂಡ ರಚಿಸಿ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿರುವರು.

ಇವರ ಬರವಣಿಗೆಗೆ ಸಹಕಾರ ನೀಡಿದ್ದು ಇವರ ಸಹಧರ್ಮಿಣಿ ಕೂಡ ಶ್ರೀಮತಿ ಲಕ್ಷ್ಮೀಬಾಯಿ.ಇವರ ಮಕ್ಕಳಾದ ಶಿವಕುಮಾರ ಪಾಟೀಲ, ಮಂಜುನಾಥ ಪಾಟೀಲ, ಸಂಜಯ ಪಾಟೀಲ, ಮಗಳಾದ ನೀಲಾಂಬಿಕಾ ಮೇಟಿ ಸ್ನೇಹಿತರಾದ ಡಾ.ಶರಣಪ್ಪ ನಿಡಶೇಸಿ.ಗುರುಗಳಾದ ಶ್ರೀ ಅಮರಪ್ಪ ಇಲಕಲ್ ಹಾಗೂ ದೇಶದೂತ ಮತ್ತು ಅರುಹು ಕುರುಹು ಗಾಣಿಗ ಸೌರಭ ಪತ್ರಿಕೆ ಸಂಪಾದಕ ನಾಗೇಶ ಹೊನ್ನೂರ ಹಾಗೂ ವಿವಿಧ ಪತ್ರಿಕೆಗಳ ಸಂಪಾದಕರ ಪ್ರೇರಣೆ ಎಂಬುದನ್ನು ಹೆಮ್ಮೆಯಿಂದ ನೆನೆಯುತ್ತಾರೆ.

ಚೆಲ್ವರಾಶಿ ಕುರಿತು:

ಅಮರೇಗೌಡ ಪಾಟೀಲರ ‘ಚೆಲ್ವರಾಶಿ’ ಕವನ ಸಂಕಲನದಲ್ಲಿ ಕವನಗಳನ್ನು ಕಂಡಾಗ ಅವರ ಕವನಗಳಲ್ಲಿ ಪ್ರಾಮಾಣಿಕತೆ, ಶೃದ್ಧೆ,ವಿಡಂಬನೆ, ದಾರಿದೀಪವಾಗುವ ಅಧ್ಯಾತ್ಮದ ವಿಚಾರಧಾರೆಯುಳ್ಳ ಸಾಲುಗಳನ್ನು ಒಳಗೊಂಡಿರುವುದನ್ನು ಗಮನಿಸಿದೆನು. ಮೊದಲ ಕವನ ‘ಸತ್ಯಮಿಥ್ಯೆ’ ಯಿಂದ ಆರಂಭಗೊಂಡು ಕೊನೆಯ ಕವನ’ಕ್ಷಮಯಾಧರಿತ್ರಿ’ ವರೆಗಿನ ಎಲ್ಲ ಕವನಗಳನ್ನು ಓದಿದೆನು.ಅವುಗಳೆಲ್ಲವೂ ಒಂದಕ್ಕಿಂತ ಒಂದು ಅಮೂಲ್ಯವಾದವುಗಳು.ಅವುಗಳಲ್ಲಿ ಹಲವನ್ನು ಇಲ್ಲಿ ಉದಾಹರಿಸ ಬಯಸುವೆನು.

ಸತ್ಯ ಆರಾಧಕರು ನಾವೆಲ್ಲರೂ
ನೋಡಿ ಅಲ್ಲಿ ಇಲ್ಲಿ ಎಲ್ಲೆಲ್ಲೂ
ಮಿಥ್ಯೆ ಅಡಗಿಸಿಟ್ಟಿರುವೆವು ಸತ್ಯದಲ್ಲಿ
ದಿನನಿತ್ಯ ಸತ್ಯವೇ ಅಲ್ಲದೇ ಮಿಥ್ಯೆ

ಎಂಬ ಸತ್ಯದ ಕುರಿತ ಸಾಲುಗಳು ಅವರು ಸತ್ಯವನ್ನು ನೋಡಿದ ಬಗೆಯನ್ನು ಸತ್ಯದ ವಿವಿಧ ಮಜಲುಗಳನ್ನು ತಮ್ಮ ಮೊದಲ ಕವನದಲ್ಲಿ ಮೂಡಿಸಿರುವುದು ಇದು ಸತ್ಯದ ನಿಜ ಮುಖದ ಅನಾವರಣವನ್ನು ಒಳಗೊಂಡಿದ್ದು ಮುಂದಿನ ಕವನ ಪ್ರಕೃತಿ ವೈಭವದ ಕಾಳಜಿಯನ್ನು ಒಳಗೊಂಡ ‘ಸಹ್ಯಾದ್ರಿ’ ಮತ್ತು ‘ಚೆಲ್ವರಾಶಿ’ತಮ್ಮದೇ ಆದ ಮನಮುಟ್ಟುವ ಸಾಲುಗಳ ಮೂಲಕ ಗಮನ ಸೆಳೆಯುತ್ತವೆ.

‘ಭವ ಸಾಗರ’ ಎಂಬ ಕವನದಲ್ಲಿ ನಾನೊಂದು ಗುಬ್ಬಚ್ಚಿಯಾಗಿದ್ದರೆ ಎಂಬ ಆಶಾಭಾವ. ಮತ್ತು ಹಾಜಬ್ಬ ಅವರ ವ್ಯಕ್ತಿ ಚಿತ್ರಣದ ಕವನ ಪದುಮಗಳು.ಭಾಷಾ ವೈಶಿಷ್ಟ್ಯತೆ ಮೆರೆಯುವ ‘ಸಿರಿಗನ್ನಡ’ ವಿಡಂಬನೆಯನ್ನು ಒಳಗೊಂಡ ‘ಸ್ವಾರ್ಥ’. ಪುನೀತ ರಾಜಕುಮಾರ ನೆನಪಿನ ‘ಡಾ.ಪುನೀತರಾಜ’ ಕವನಗಳು ವಿಶಿಷ್ಟತೆಯಿಂದ ಮೂಡಿ ಬಂದಿವೆ

ಹದವರಿತ ಮಾತು, ಮಾತಿಂದ ಪ್ರೀತಿ
ಭಾವ ಸಮತೆಯಿಂದ ಘನತೆ
ಕೂಗುತ್ತವೆ ಅಂತರಾತ್ಮ ಉಮ್ಮಳಿಸಿ
ಹೃದಯ ಮಿಡಿತ ಯತಾರ್ಥ ಬಯಸಿ
‘ಕದ್ದಿರುವುದೇನು.?”

ಎಂದ ಕವನ ಕದ್ದಿರುವುದೇನು ಮುಚ್ಚಿಡಲು ಎನ್ನುತ್ತ ಸತ್ಯ ಹೇಳಲು ಹಿಂಜರಿಕೆ ಯಾಕೆ ? ಎನ್ನುವುದನ್ನು ವೈಚಾರಿಕತೆಯ ಮನೋಭಾವದೊಂದಿಗೆ ಮೂಡಿ ಬಂದಿದೆ.

‘ಮೇಘರಾಜನ ಆಲಾಪ’. ಸಿದ್ದಗಂಗಾ ಶ್ರೀಗಳ ನೆನಪು, ದಿಟ್ಟ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರೀ, ಅಷ್ಟೇ ಏಕೆ ಅನುಭವ ಜನ್ಯವಾದ ತಾವು ೨೫-೬-೧೯೭೫ ರಿಂದ ೨೧-೩-೧೯೭೭ ರ ಅವಧಿಯಲ್ಲಿ ಆಪತ್ಕಾಲೀನ ಸಂದರ್ಭದಲ್ಲಿ ಕಂಡಿರುವ ಘಟನೆಗಳನ್ನು ‘ಭುಗಿಲು’ ಎಂಬ ಕವನದಲ್ಲಿ ನಿರೂಪಿಸಿರುವ ರೀತಿ ಅನನ್ಯವಾದುದು.

ಎಂಥ ಕಾಲ ಬಂದೈತ್ರಪ ಇದು ನಮಗ
ಏನೆಲ್ಲ ನಡೀತೈತಿ ಈ ಭೂಮಿ ಮ್ಯಾಗ
ಜನತೆಗಿಲ್ಲ ನೋಡಿಲ್ಲಿ ನೀತಿ ನಿಯಮ
ಒಬ್ಬರಿಗೊಬ್ಬರು ಮಾಡ್ತಾರ ಬಿಡದೇ ವಂಚನಾನ

ಎನ್ನುವ ಇವರು ೧೯೭೯ ರಲ್ಲಿ ಕರ್ನಾಟಕ ಮಹಾವಿದ್ಯಾಲಯದಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಕಾಲೇಜು ಮ್ಯಾಗಜಿನ್‌ದಲ್ಲಿ ಪ್ರಕಟವಾದ ಅಂದಿನ ಕವನ ಇಂದಿನ ವಾಸ್ತವತೆಗೂ ಹಿಡಿದ ಕನ್ನಡಿಯಂತೆ ಅಂದೇ ರಚಿಸಿದ್ದು ಇವರ ಹೆಗ್ಗಳಿಕೆ.ಅಂದಿನ ಸಂದರ್ಭದ ಘಟನೆಗಳು ಇಂದಿಗೂ ಇರುವುದರ ಸಂಕೇತ. ಅದೂ ಆಡು ಭಾಷೆಯ ಶೈಲಿಯನ್ನು ಪದ್ಯದುದ್ದಕ್ಕೂ ಅಳವಡಿಸುವ ಮೂಲಕ ಲಾವಣಿಯ ರೀತಿ ಹಾಡಲು ಅನುಕೂಲವಾಗಿಸಿರುವರು.

ಕೋರೋನಾ ಛಾಯಿಯೂ ಇವರ ಕವನಗಳಲ್ಲಿ ದಟ್ಟವಾಗಿ ಮೂಡಿ ಬಂದಿದೆ. ಬಸವಣ್ಣನವರ ಕುರಿತು ಕವನಗಳು ಮೂಡಿ ಬಂದಿವೆ. ಎಲ್ಲ ಕವನಗಳೂ ಗಂಭೀರ ವೈಚಾರಕತೆಯುಳ್ಳ ಮತ್ತು ಅಧ್ಯಾತ್ಮದ ತಳಹದಿಯಲ್ಲಿ ವಾಸ್ತವಿಕ ನೆಲೆಗಟ್ಟನ್ನು ಹೊಂದುವ ಮೂಲಕ ಮೂಡಿಬಂದಿರುವುದು ಅಭಿನಂದನಾರ್ಹ.ಅದಕ್ಕೆ ಅವರ ಮಾಗಿದ ವಯಸ್ಸು ವಯೋ ಸಹಜ ಅಧ್ಯಾತ್ಮದ ತುಡಿತವೂ ಕಾರಣವೆನ್ನಬಹುದು.

ಹಿರಿಯರ ಕವನಗಳ ಭಾಷೆ ಸರಳವಾದರೂ ಕಾವ್ಯದ ವಸ್ತು ಗಹನತೆಯಿಂದ ಕೂಡಿದ್ದು ವಸ್ತುನಿಷ್ಟ ಚಿಂತನೆಯನ್ನು ಒಳಗೊಂಡಿವೆ.ನಮ್ಮೊಳಗನ್ನು ನಾವು ಹುಡುಕಿಕಳ್ಳುತ್ತ ಜೀವಿಸಲು ಈ ಜೀವಯಾನದಲ್ಲಿ ‘ಕವನ’ಗಳು ಮೂಡಿ ಬಂದಿವೆ.ತಮ್ಮ ಸುತ್ತಲಿನ ಪರಿಸರ, ವಿದ್ಯಮಾನಗಳನ್ನು ಇವರು ಅವಲೋಕಿಸಿರುವ ರೀತಿ, ದೈನಂದಿನ ಬದುಕನ್ನು ಅತ್ಯಂತ ಸೂಕ್ಷ್ಮವಾಗಿ ಗ್ರಹಿಸಿ ಸಾಮಾಜಿಕ ಕಾಳಜಿಯಿಂದ ಬರೆದಿರುವುದು ಇವರ ಕವಿತಾಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ.’ಕಬೀರದಾಸರ ’ ಮೌಲ್ಯಯುತ ದೋಹಾಗಳನ್ನು ಓದಿರುವ ನನಗೆ ಇಲ್ಲಿನ ಪ್ರತಿಯೊಂದು ಕವನಗಳು ಮನಸ್ಸಿಗೆ ಅದೇ ಭಾವವನ್ನು ನೀಡಿದವು.

ಬ್ಯಾಂಕ್ ವೃತ್ತಿಯಿಂದ ನಿವೃತ್ತರಾದ ನಂತರ ಪತ್ರಿಕೆಗಳಿಗೆ ಹೆಚ್ಚು ಹೆಚ್ಚು ಬರಹಗಳನ್ನು ಬರೆಯುತ್ತ ಪಕ್ಷಿಗಳ ವಿಭಿನ್ನ ಪೋಟೋ ತಗೆಯುತ್ತ ವೈಶಿಷ್ಟ್ಯಪೂರ್ಣ ಬರಹಗಳನ್ನು ರೂಪಿಸುತ್ತಿರುವ ಇವರ ಈ ಹವ್ಯಾಸ ಈಗ ಚಿಗುರೊಡೆದು ಹೆಮ್ಮರವಾಗುತ್ತಿದೆ. ಐತಿಹಾಸಿಕ ತಾಣಗಳ ಭೇಟಿ, ಪರ್ಯಟನ, ಅಧ್ಯಯನ ಮತ್ತು ಛಾಯಾಗ್ರಹಣದ ಮೂಲಕ ಸಾಹಿತ್ಯದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿರುವರು.

ದೇವರು ಇವರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ನೀಡಲಿ. ಇವರ ಕವಿತಾಶಕ್ತಿ ಇಮ್ಮಡಿಗೊಳಿಸಲಿ ಇನ್ನೂ ಹೆಚ್ಚಿನ ಕೃತಿಗಳು ಇವರಿಂದ ಮೂಡಿ ಬರಲಿ ಎಂದು ಆಶಿಸುವೆ.


ವೈ.ಬಿ.ಕಡಕೋಳ
ಶಿಕ್ಷಕ ಸಾಹಿತಿಗಳು
ಮುನವಳ್ಳಿ

- Advertisement -
- Advertisement -

Latest News

ಬಡವರ ಮನೆ ಊಟ ಚಂದ ಸ್ಥಿತಿವಂತರ ಮನೇಲಿ ಆಟ ಚಂದ ಆದರೂ ಯಾರ ನೆಮ್ಮದಿ ಎಲ್ಲಿ ಅಡಗಿದೆಯೋ ಬಲ್ಲವರಾರು?

ಅಮ್ಮ ನಿನಗ್ ಎಷ್ಟ ಸಲ ಹೇಳಿದಿನಿ ಪಕ್ಕದ ಮನೆಗೆ ಹೋಗಬೇಡಾ ಅಂತ.ನಿನಗೆ ಬೇಜಾರಾದ್ರೆ ಟಿವಿ ನೋಡು,ನಿದ್ದೆ ಮಾಡು, ಬೇಕಿದ್ರೆ ಮನೇಲೆ ಭಜನೆ, ದೇವರ ನಾಮಸ್ಮರಣೆ ಇಂತದ್ದೇನೋ...
- Advertisement -

More Articles Like This

- Advertisement -
close
error: Content is protected !!
Join WhatsApp Group