ಮೈಸೂರು -ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಐಡಿಯಲ್ ಜಾವಾ ರೋಟರಿ ಶಾಲೆ ಸಭಾಂಗಣದಲ್ಲಿ ಸೆ.೨೮ರಂದು ಶನಿವಾರ ಮಧ್ಯಾಹ್ನ ೩.೩೦ಕ್ಕೆ ಲೇಖಕ ಡಾ.ಎನ್.ಎನ್.ಚಿಕ್ಕಮಾದು ಅವರ ಬರೆದಿರುವ ‘ಪ್ರಜಾಮಾತೆ’ ಮತ್ತು ‘ಕೃಷ್ಣರಾಜಭೂಪ ಮನೆಮನೆದೀಪ’ ಕೃತಿಗಳ ಬಿಡುಗಡೆ ಸಮಾರಂಭವನ್ನು ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ವೇದಿಕೆ ಏರ್ಪಡಿಸಲಾಗಿದೆ.
ಕೃತಿಗಳ ಲೋಕಾರ್ಪಣೆಯನ್ನು ಪ್ರಸಿದ್ಧ ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪನವರು ನೆರವೇರಿಸಲಿದ್ದಾರೆ. ‘ಪ್ರಜಾಮಾತೆ’ ಕೃತಿಯನ್ನು ಕುರಿತು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಎಸ್.ಡಿ.ಶಶಿಕಲಾ ಮಾತನಾಡಲಿದ್ದಾರೆ. ‘ಕೃಷ್ಣರಾಜಭೂಪ ಮನೆಮನೆದೀಪ’ ಕೃತಿಯ ಕುರಿತು ಸಾಹಿತಿ ಹಾಗೂ ಪತ್ರಕರ್ತ ಬನ್ನೂರು ಕೆ.ರಾಜು ವಿಚಾರ ಮಂಡಿಸಲಿದ್ದಾರೆ.
ವೇದಿಕೆಯಲ್ಲಿ ಲೇಖಕರಾದ ಡಾ.ಎನ್.ಎನ್.ಚಿಕ್ಕಮಾದು, ಕನ್ನಡ ಉಪನ್ಯಾಸಕ ವೇದಿಕೆಯ ಅಧ್ಯಕ್ಷ ಎಂ.ಮಹೇಶ್, ಪ್ರಕಾಶಕರಾದ ಓಂಕಾರಪ್ಪ ಉಪಸ್ಥಿತರಿರುತ್ತಾರೆ.
ಲೇಖಕ ಡಾ.ಎನ್.ಎನ್.ಚಿಕ್ಕಮಾದು ಅವರ ಪರಿಚಯ: ಮೂಲತಃ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ನಾಗನಹಳ್ಳಿಯವರಾಗಿದ್ದು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕ ಪದವಿ ಹಾಗೂ ಪಿಹೆಚ್‌ಡಿ ಪದವಿ ಗಳಿಸಿರುವ ಇವರು ಪ್ರಸ್ತುತ ಮಹಾರಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ, ಕಾಲನಿಕ ಅಧ್ಯಯನ, ಭ್ರಷ್ಟಾಚಾರ ಮತ್ತು ಅದರ ನಿರ್ಮೂಲನೆ, ಶೋಧ ಸಂಪದ, ಕನ್ನಡ ಸಾಂಸ್ಕೃತಿಕ ಲೋಕಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಮತ್ತು ಶೋಷಿತ ವರ್ಗಕ್ಕೆ ಕುರಿತ ಕಳಕಳಿ ಹಾಗೂ ಯುವರಾಜ ಅಭಿನವ ಕಂಠೀರವ ನರಸಿಂಹರಾಜ ಒಡೆಯರ್, ಅಭಿವೃದ್ಧಿ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೀವನ ಚರಿತ್ರೆಗಳನ್ನು ಪ್ರಕಟಿಸಲಿದ್ದಾರೆ. ಜಾನಪದ ಸಂಪದ, ಉಪಕರಣ, ವಿಶ್ವಕೋಶ, ಹುಣಸೂರಿನ ಸುತ್ತಲಿನ ನಂಬಿಕೆ ಮತ್ತು ಸಂಪ್ರದಾಯಗಳ ಕುರಿತು ಜಾನಪದ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ. ಇವರ ಸಾಧನೆಯನ್ನು ಗೌರವಿಸಿ ಕರ್ನಾಟಕ ನಾಟಕ ಅಕಾಡೆಮಿ ಫೆಲೋಶಿಪ್, ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಮಟ್ಟದ ಕರುನಾಡು ರತ್ನ ಪ್ರಶಸ್ತಿ, ಕರ್ನಾಟಕ ಕಲಾ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಶಸ್ತಿಗಳು ಲಭಿಸಿವೆ.