ಉನಕೀ ಕ್ಷೇತ್ರ ಯಾತ್ರೆ

Must Read

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...

ನದಿ ಸ್ವಚ್ಛತೆಗೆ ಚಾಲನೆ ನೀಡಿದ ಈರಣ್ಣ ಕಡಾಡಿ

ಗೋಕಾಕ: ಪ್ರಕೃತಿ ಉಚಿತವಾಗಿ ಕೊಟ್ಟಿರುವ ನೀರನ್ನು, ಗಿಡ ಮರಗಳು ಉಚಿತವಾಗಿ ಕೊಟ್ಟಿರುವ ಆಮ್ಲಜನಕವನ್ನು ನಾಶ ಮಾಡುವ ಮೂಲಕ ಸ್ವಯಂಕೃತ ಅಪರಾಧಗೈದ ನಾವೆಲ್ಲ ನದಿ ಸ್ವಚ್ಛತೆ ಮಾಡುವ...

ಮುಷ್ಕರ ಮತ್ತು ಆರ್ಥಿಕ ಪರಿಸ್ಥಿತಿ

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರುವ ಒಂದು ವಿದ್ಯಮಾನಗಳಲ್ಲಿ ಮುಷ್ಕರ ಕೂಡ ಒಂದು. ಬಂದ್ ಬಂದ್ ಬಂದ್.ಏನಿದು?ಏಕೆ ಮಾಡಬೇಕು? ಇದರಿಂದ ಆಗುವ ಬದಲಾವಣೆಗಳೇನು? ಯಾರಿಗೆ ಲಾಭ?...

ಈ ಪುಣ್ಯ ಕ್ಷೇತ್ರವು ಶ್ರೀ ಚಿದಾನಂದ ಅವಧೂತರು ಒಮ್ಮೆ ಕಾಶಿಯಾತ್ರೆ ಸಮಯದಲಿ ಭೇಟಿ ನೀಡಿದ ಒಂದು ಸ್ಥಳ. ಸಂದರ್ಭ ಬಹುಶಃ (ಕ್ರಿ.ಶ. ಸು:1715-25)ನೇ ಸಾಲು ಇರಬಹುದೆಂದು ಊಹಿಸಬಹುದು. (ಕೆಳಗಿನ ಕೃತಿಗೆ ಆಧಾರವಿಡಿದು.) ಉನಕಿದೇವಿ ಹಾಗೂ ಉನಕೀಶ್ವರ ಇರುವ ಪ್ರತಿಷ್ಟಾಪನೆಗೊಂಡ ಕ್ಷೇತ್ರ.

ಪ್ರಾಚೀನವಾದ, ರಾಮಾಯಣ ಕಾಲದ್ದು ಈ ಪುಣ್ಯಕ್ಷೇತ್ರ. ಹಿಂದೆ ಶ್ರೀರಾಮನ ವನವಾಸ ಕಾಲದಲ್ಲಿ, ಇಲ್ಲಿಗೆ ರಾಮ ಸೀತೆ ಲಕ್ಷ್ಮಣ ಮೂವರು ಭೇಟಿ ನೀಡಿದರೆಂದು ಹೇಳುವರು. ವಿಶ್ವಾಮಿತ್ರರ ಮಹಾಮುನಿಗಳ ಆಶ್ರಮ ಇಲ್ಲಿ ಇತ್ತಂತೆ. ರಾಮ ಸೀತೆ ಸುಮಾರು ೧೫ ದಿನಗಳ ಕಾಲ ಇಲ್ಲಿಯೇ ತಂಗಿದ್ದರಂತೆ. ಇಲ್ಲಿ ಸೀತೆಯು ರಜಸ್ವಲೆಯಾಗಲು ಪವಿತ್ರ ಸ್ನಾನಕ್ಕಾಗಿ ವಿಶ್ವಾಮಿತ್ರ ಮಹರ್ಷಿಗಳು ಸ್ನಾನಕ್ಕಾಗಿ ಒಟ್ಟು ಏಳು ( ೭) ಹೊಂಡಗಳನ್ನು ತಮ್ಮ ತಪೋಶಕ್ತಿಯಿಂದ ಉಂಟು ಮಾಡಿದರಂತೆ. (ಉಲ್ಲೇಖ: ಶ್ರೀ ಚಿದಾನಂದ ಅವಧೂತರ ಬಾಲಲೀಲೆ.)

ಈ ಗ್ರಂಥವು ಒಟ್ಟು ಏಳು ಅಧ್ಯಾಯದ ಸಾಂಗತ್ಯ ಕಾವ್ಯ.ಶ್ರೀ ಚಿದಾನಂದರ ಆತ್ಮಚರಿತ್ರೆ ಸಾರುವ ಕೃತಿ ಇದು. ಚಿದಾನಂದರು ಹೇಳಿದಂತೆ ಬರೆದವರು ಅವರ ಶಿಷ್ಯ ಶ್ರೀ ಅಯ್ಯಪ್ಪ ಕವಿ.ಆತ ಬಹುಶಃ ಪೆದ್ದ ಹರಿವಾಣದಲ್ಲೆಲ್ಲೋ ಸಮೀಪದ ಒಂದು ಗ್ರಾಮದವರಿರಬೇಕು.

- Advertisement -

ಈ ಕ್ಷೇತ್ರವನ್ನು ನಾವು ಹುಡುಕಲು ಕಾರಣ 2009-10 ರಲ್ಲಿ ಈ ಗ್ರಂಥದ ಪಾರಾಯಣವನ್ನು ಒಟ್ಟು ೭ ದಿನಗಳ ಕಾಲ ಕೊಳಾಳು ಶ್ರೀ ಕೆಂಚಾವಧೂತರ ಮಠದಲ್ಲಿ ಏರ್ಪಡಿಸಿದ್ದೆವು. ಕೊನೆಯ ದಿನ ಅನ್ನಸಂತರ್ಪಣೆ ನಡೆಸಿದೆವು. ಆ ದಿನ ಈ ಕ್ಷೇತ್ರಕ್ಕೆ ಹೋಗಬೇಕು,ಪತ್ತೆ ಹಚ್ಚಬೇಕು ಎಂಬ ಕೂತೂಹಲಕಾರಿ ವಿಷಯ ಪ್ರಸ್ತಾಪಿಸಿದರು. ಅದೊಂದು ಕಾಣದ ಸ್ಥಳ, ವಿಳಾಸ, ಕೂನು-ಕುರ್ತು ಏನೇನು ಇಲ್ಲದ ಸ್ಥಳ. ಯಾವ ರಾಜ್ಯ ಎಂಬುದು ಗೊತ್ತಿಲ್ಲ. ಗೋದಾವರಿ ನದಿ ಎಂಬ ಉಲ್ಲೇಖವಿದೆ. ಎಲ್ಲಿಂದ ಎಲ್ಲೀ ತನಕ ನದಿ ದಂಡೆ ಶೋಧಿಸೋದು.ಯಾಕೆ ರಿಸ್ಕ್ ಅಂತ ಎಲ್ಲಾ ಜನ ಹಿಂಜರಿದರು. ಆದರೂ ಸಹೃದಯಿಗಳಾದ ದೊಡ್ಡಮನೆ ರುದ್ರಪ್ಪ, ತೇಕಲವಟ್ಟಿ ರಾ|| ರುದ್ರಪ್ಪ, ಛೇರ್ಮನ್ ರು|| ಎಂ. ಆರ್. ರುದ್ರಪ್ಪ, ಚಳ್ಳಕೆರೆಯ ದೊಡ್ಡೇರಿ ಕೆಂಚಪ್ಪ, ಹಾಗೂ ಹಾಲೇನಹಳ್ಳಿ ಕೆ. ನರಸಿಂಹಪ್ಪ ಮತ್ತು ನಾನು ಧೈರ್ಯಮಾಡಿ ಹೊರಟೆವು.

ಆದರೆ ಗ್ರಂಥದಲಿ’ ಉನಕಿ ‘ಎಂಬೋ ಮೂರಕ್ಷರ ಬಿಟ್ಟರೆ ವಿಳಾಸವಾಗಲಿ ,ತಾಲೂಕ್,ರಾಜ್ಯ ಏನೇನು ಗುರುತನ್ನು ಶ್ರೀ ಚಿದಾನಂದರು ಹೇಳಿಲ್ಲ. ಇಂಥ ಸ್ಥಳ ಹುಡುಕೋದು ಬಹು ಕಷ್ಟಸಾಧ್ಯದ ಕೆಲಸ ಎಂದಾಯಿತು. ಆದರೂ ಭಗವಂತನ ಮೇಲೆ ನಂಬಿಕೆ ಇಟ್ಟು ಹೊರೆಟೆವು.ಬಹುಷ: ಚಿದಾನಂದರು ಕ್ಷೇತ್ರ ಸಂಚಾರ ಮಾಡೋ ಕಾಲಕ್ಕೆ ದೇಶದಲ್ಲಿ ಮುಸ್ಲಿಂ/ದೇಶಿ ಅರಸರ ಆಡಳಿತ ಕಾಲ ಇರಬೇಕು. ಅದರಿಂದಾಗಿ ತಾಲೂಕ, ಜಿಲ್ಲಾ, ರಾಜ್ಯಗಡಿ ನಕಾಶೆ ತಯಾರಿ ಕಲ್ಪನೆಗಳು ಇರಲಿಕ್ಕಿಲ್ಲ.

ಬ್ರಿಟೀಷರು ಬಂದಾದಮೇಲೆ ಪೂರ್ತಿ ದೇಶಗತಿ ಚುಕ್ಕಾಣಿ ಹಿಡಿದ ನಂತರ ರೈಲು ,ಗಡಿ, ಆಧುನಿಕತೆ ಬಂದ ನಂತರ ಅಳತೆ ಗಡಿ ಮ್ಯಾಪು , ರಾಜ್ಯದ, ಜಿಲ್ಲಾ, ತಾಲೂಕ ಮ್ಯಾಪ್ ಬಂದಿರಬೇಕು.

ಹಾಂಗಾಗಿ ಚಿದಾನಂದರು ತಾಲೋಕ್, ರಾಜ್ಯದ ಹೆಸರನು ಕಥೆಯಲ್ಲಿ ತಿಳಿಸಿಲ್ಲ ಎಂದು ಭಾವಿಸಿದೆವು. ಆದರೂ ಬಾಲಲೀಲೆ ಪುಸ್ತಕ ಬಗಲಲಿ ಇಟ್ಟುಕೊಂಡು ರೈಲಿನಲಿ ನಾವು ಐದು ಜನ ಪ್ರಯಾಣ ಹೊರಟೆವು. ರೈಲಿನಲ್ಲಿ ಕಾಶಿಯಾತ್ರೆ ಮಾಡೋ ಸಾಧು ಸಂತರು/ಇತಿಹಾಸ ಸಂಶೋದಕರನೆಲ್ಲಾ/ ಪಂಡಿತರನೆಲ್ಲಾ ವಿಚಾರಿಸುತ್ತಿದ್ದೆವು. ಅವರು ಅಂತ ಸ್ಥಳದ ಹೆಸರೇ ಕೇಳಿಲ್ಲ ಅಂಬೋರು. ಈ ಬಗ್ಗೆ ಗೊತ್ತಿಲ್ಲ ಅಂದು ಬಿಡೋರು. ಕರ್ನಾಟಕ, ಮಹಾರಾಷ್ಟ್ರ,ಆಂದ್ರ ಭಾಗ ಸುತ್ತಿ ಸುತ್ತಿ ಬೇಸತ್ತೆವು. ತಂದ ಬುತ್ತಿ ಗಂಟು ಖಾಲಿಯಾಯಿತು. ರೈಲಿನಲ್ಲಿ ಹುಬ್ಬಳ್ಳಿ ಬಿಜಾಪುರ, ಪಂಡ್ರಪುರ,ಸೋಲಾಪುರ ,ತುಳಜಾಪುರ ತಲುಪಿದೆವು.

ಒಂದು ದಿನ ತುಳಜಾದೇವಿ ದರ್ಶನ ಮಾಡಿಕೊಂಡು,ಊಟ ಮಾಡಿ, ಬಂದು ಬಸ್ಸ್ ಸ್ಟಾಂಡ್ನಲ್ಲಿ ಸ್ವಲ್ಪ ಕಾಲ ಚರ್ಚೆ ಮಾಡಿ ನಿರಾಸೆಯಿಂದ ಮಲಗಿದೆವು. ಅಲ್ಲಿಗೆ 4-6 ದಿನ ಕಳೆದೋಗಿದ್ದವು. ನಾವು ಮಾನಸಿಕವಾಗಿ, ಆರ್ಥಿಕವಾಗಿ ಬಹು ಕುಗ್ಗಿದ್ದೆವು. ಯಾರನ್ನ ಕೇಳಿದರೂ ಆ ಸ್ಥಳ ಗೊತ್ತು ಅಂತ ಒಬ್ಬರಿಂದಲೂ ಮಾತು ಬರುತ್ತಿರಲಿಲ್ಲ. ಕೇಳಿ ಕೇಳಿ ಬೇಸತ್ತಿದ್ದೆವು. ದೇವರಿಚ್ಚೆಯಂತಾಗಲಿ ಎಂದು ಚೀಲಗಳಿಗೆ ತಲೆ ಕೊಟ್ಟೆವು. ಲಾಡ್ಜಿಂಗ್ ಮಾಡಲು ಆಗದೆ ಸಧ್ಯ ಎಕಾನಮಿ ಮೆಜರ್(ತಂತ್ರ) ಅಳವಡಿಸಿಕೊಂಡಿದ್ದೆವು. ಮಧ್ಯರಾತ್ರಿ 12 ಅಥವಾ 1-00 ರಾತ್ರಿ ಹೊತ್ತಿಗೆ ಓರ್ವ ವ್ಯಕ್ತಿ ಬಂದು, ಯಾರೀ.. ಅದು? ಏಕೆ ಇಲ್ಲಿ ಮಲಗಿರೋದು? ಅಂದರು. ಓಹ್…ಇಲ್ಲಿನೂ ಪೋಲಿಸರ ಕಾಟ!!? ಏನು ಉತ್ತರ ಹೇಳೋದು? ಅಂದ್ಕೊಂಡೆವು. ಸಮೀಪಕೆ ಬಂದಾತ ಎಲ್ಲಿಗೆ..? ಹೋಗೋದು ಎಂದು ಗಡಸು ಧ್ವನಿಯಿಂದಲೇ (ಹಿಂದಿ ಭಾಷೆಯಲಿ ) ನಮ್ಮನ್ನು ಕೇಳಿದ.

ನಾವು ಅಂಜಿ-ಅಂಜುತ್ತಾ’ ಉನಕಿ ಜಾನೆವಾಲೆ ‘ಅಂದೆವು (ನಮ್ಮ ಅರಕು- ಮುರುಕು ಹಿಂದಿ ಭಾಷೆಯಲಿ.) ಆತ ಅಂದ “ಸತ್ತು ಹೋಗುತ್ತೀರಿ ನಕ್ಸಲೈಟ್ಗಳು …ಗೊತ್ತಿಲ್ಲ ನಿಮಗೆ…” ಆದರೂ ನಾವು ಸುಮ್ಮನಾಗದೆ ಹತ್ತಿರ ಹೋಗಿ ಮೆಲು ಧ್ವನಿಯಿಂದ ” ಸಾರ್. ತಾವೇನಾದರೂ ಆ ಜಾಗ ನೋಡಿರೋದುಂಟೇ” ?ಎಂದು ಕೇಳಿದೆವು. ನಿಜಕ್ಕೂ ತಾವು ನೋಡಿದಿರಾ…ಉನಕಿಸ್ಥಳ? ಎಂದೆವು. ಆತ ಹೇಳಿದ ಎಂದೋ ಮಿಲ್ಟ್ರಿ ಕ್ಯಾಂಪ್ನಲ್ಲಿ ನೋಡಿದ್ದೆ ಅಂದ. ಆಗ ಹುಮ್ಮಸ್ಸೆಂಬುದು ಇಮ್ಮಡಿಯಾಗಿ” ಸಾರ್ ನಾವು ನೋಡಲೇಬೇಕು ಆ ಸ್ಥಳ. ದೂರದ ಬೆಂಗಳೂರಿನಿಂದ ಬಂದೀದ್ದೀವಿ ಎಂದೆವು., ನಮ್ಮ ತೀವ್ರ ವಾದ ಹಂಬಲ, ತಳಮಳ ವನೆಲ್ಲಾ ತಿಳ್ಕೊಂಡು ಸೈ ನೀಡಿದರು. ನಮ್ಮನ್ನೆಲ್ಲಾ ಅದಾವುದೋ ಒಂದು ಬಸ್ಸುಲ್ಲಿ ಕರಕೊಂಡು ಹೊರಟ ಪುಣ್ಯಾತ್ಮ. ಇಡೀ ರಾತ್ರಿಯೆಲ್ಲಾ ಪ್ರಯಾಣ ಮಾಡಿದೆವು ,ಆ ದಾರಿ ಬಟ್ಟೆ ನಮಗೇನೂ ತಿಳಿಯದು, ಕಾರಣ ಬಸ್ಸು ಏರಿದೊಡನೆ ದಣಿದಿದ್ದ ನಾವು ಗಾಢನಿದ್ರೆಗೆ ಜಾರಿದೆವು.ಯಾವುದೋ ಒಂದು ಸ್ಥಳ. ಅಲ್ಲಿ ಇಳಿಸಿದರು ಲಗೇಜ್ ಸಮೇತ.

ಆ ನಿವೃತ್ತ ಮಿಲ್ಟ್ರಿ ಮ್ಯಾನ್ ನಮಗೊಂದು ಪೇಪರ್ ಕಾರು ಬಾಡಿಗೆ ಮಾತನಾಡಿ ಡ್ರೈವರ್ಗೆ ನಮ್ಮ ವಿಷಯವೆಲ್ಲಾ ತಿಳಿಸಿ, ಎಚ್ಚರಿಕೆ ನೀಡಿ ಗಾಡಿ ನಂಬರ್ ಬರ್ಕೊಂಡು ಟಾಟಾ ಹೇಳಿ ಹೊರಟೇ ಬಿಟ್ಟ. ನಮಗೆಲ್ಲಾ ಆಪದ್ಭಾಂಧವನೆ ದೂರಾದನೆ ಎಂಬಂತಾಯಿತು. ನಾವು ತಾಯಿ ಅಗಲಿದ ತಬ್ಬಲಿಯಂತಾದೆವು. ಗೊತ್ತಿದ್ದ ಒಬ್ಬ ಮನುಷ್ಯ ಸಹ ಬಿಟ್ಟು ಹೋದ, ಇನ್ನು ಮುಂದೆ ಏನು ಗತಿ ? ಇದು ಬೇರೆ ಪೇಪರ್ ಕಾರ್. ಒಬ್ಬರೂ ಪರಿಚಯವಿಲ್ಲ, ಕಾಣದ ಪ್ರದೇಶ, ಭಾಷಾ ಸಮಸ್ಯೆ ಬೇರೆ. ಕಾರಿನಲ್ಲಿ ಇದ್ದವರು ಪರಿಚಯವಿಲ್ಲ, ಅವರ ಮಾತು ನಮಗೆ ತಿಳಿತಿರಲಿಲ್ಲ. ನಾವು ಐದೂ ಜನ ಒಂದು ತಾ ಐಸ್ ಗಡ್ಡೆಯಂತಾದೆವು, ಕೆಲವರ ಎದೆ ಬಡಿತ ಏರಿ, ದಂಗಾದರು. ಅದು ಬೆಳಗಿನ ಜಾವ ಐದುವೊರೆ ಸಮಯ. ನಮ್ಮ ತುಟಿಯಲ್ಲಾ…ಆಗಲೆ ಒಣಗಿದ್ದವು. ಕೆಲವರು ಊರು,ಮಡದಿ ಮಕ್ಕಳ ವಾರ್ತೆ ಮೆಲುಕು ಹಾಕಿದರು. ಅಲ್ಲೊಂದು ಸಣ್ಣಹೋಟೆಲ್ನಲ್ಲಿ ಟೀ ಕುಡಿಸಿ ಹೊರಟರು.

ಬೆಳಿಗ್ಗೆ ೬-೦೦ರಿಂದ ೯-೦೦ರ‌ ತನಕ ಕಾರ್ ಓಡಿಸಿ ಒಂದು ಕಡೆ ನಿಲಿಸಿದರು. ಅದು ಅಷ್ಟು ಪ್ರಸಿದ್ಧಿ ಸ್ಥಳವಾಗಿರಲಿಲ್ಲ. ನಾಲ್ಕಾರು ಮನೆಗಳ ಹಾಡಿ ಅದು. ಸಿಂಹಾದ್ರಿಯ ದಟ್ಟವಾದ ಅರಣ್ಯ. ಬೆಟ್ಟ ಕಣಿವೆಗಳ ದುರ್ಗಮವಾದ ಹಾದಿ. ನಮ್ಮ ಆತಂಕದ ಪ್ರಯಾಣ ಮುಂದೆ ಸಾಗಿತು. ಕೆಲವರ ಮುಖ ಕಾಂತಿ ಬಾಡಿಹೋಗಿತ್ತು. ಕೆಲವರು ಬೆವರುತಿದ್ದರು. ಅನಿವಾರ್ಯವಾಗಿ ಸುಮ್ಮನೆ ಕೂತಿದ್ದೆವು. ಯಾವ ಸ್ಥಳ, ಯಾವ ದಾರಿ? ಎಲ್ಲಿಗೆ ಬಂದೆವು ? ಏನೂ ಅರಿಯದ ಅಬ್ಬೇಪಾರಿಗಳ ತಾ ಆದೆವು. ಬೆಳಿಗ್ಗೆ 9-30ಕ್ಕೆ ಆ ಶಿವನು ಅವರಿಗೆ ಅದೇನು ಬುದ್ಧಿ ಕೊಟ್ಟನೋ ಅಲ್ಲಿ ಒಂದು ಸಣ್ಣ ಟೀ ಅಂಗಡಿ ಕಂಡು, ಅಲ್ಲಿ ನಮ್ಮನ್ನು ಇಳಿಸಿ, ಉನಕ ದಾರಿ ಸರಿಯಿಲ್ಲಾ, ನಡೆದಾಗಲಿ/ಟೆಂಪೋದಲಾಗಲಿ ಹೋಗಿರಿ ಎಂದು ಹೇಳಿ ಹಣ ಪಡೆದು ಹೊರಟೇ ಬಿಟ್ರು. ನೀರಿದ್ದ ಮೀನನು ದಡೆಕೆ ಎಂಬಂತಾಯಿತು ನಮಗೆ. ಏನೂ ತೋಚದೆ ಮೌನವಾದೆವು. ನಮಗೆಲ್ಲಾ ತುಂಬಾ ದುಗುಡ ಆವರಿಸಿತು. ಎಲ್ಲಿಗೋ ಬಂದಿರುವೆವು. ಯಾರನ್ನು ವಿಚಾರಿಸೋದು? ಮುಂದೇನು ಶಿವ ಅಮ್ತಾ ಆಕಾಶವೇ ಕಳಚಿ ಬಿದ್ದಂತಾಯಿತು. ನಮ್ಮ ಜೇಬಿನಲ್ಲಿ ಝಣ ಝಣ ಅನ್ನೋ ಶಬ್ದ ಕೂಡ ಕಡಿಮೆಯಾಗಿ, ಕಳೆಗುಂದಿತ್ತು.

ಟೀ ಅಂಗಡಿ ಮಾಲೀಕನ ಬಳಿ ತೆರಳಿ ವಿಚಾರಿಸಿದೆವು. ನಮ್ಮ ಕಷ್ಟ-ನಷ್ಟ, ಗೊತ್ತು- ಗುರಿ ಎಲ್ಲಾ ಹೇಳಿಕೊಂಡು ದೈನಾಸಿಯಿಂದ ಬೇಡಿಕೊಂಡೆವು. ಆತನ ಮನ ಕರಗಿ ಹೇಳಿದ ಅದು ತುಂಬಾ ದಟ್ಟವಾದ ಕಾಡು. ಕಚ್ಚಾ ದಾರಿ . ಜೋಪಾನ. ಅಂತಾ ಹೇಳಿ ಒಂದು ಆಟೋ ಬಾಡಿಗೆ(೧೫೦ರೂ) ಮಾಡಿ ಕೊಟ್ಟ.

ಮಧ್ಯಾಹ್ನ ೧-೦೦ತನಕ ಆ ಕಚ್ಚಾ ರೋಡಲ್ಲೇ ಹೋದೆವು. ಹುಡುಗರು ಈತನ ಜೊತೆ ಇನ್ನೆಂದು ಬಾರಬಾರದು ಅಂತ ಮಾತಾಡಿ ಕೊಂಡರು. ಅದ ಅವರಿಗೆ ಸಹಜವೇ ಆಗಿತ್ತು ಪಾಪ! ಅಷ್ಟೊತ್ತಿಗೆ ಕೆಲವು ಜನರ ಶಬ್ದ ಕೇಳಿ ಬಂತು.ಅದು ಗಿಡಮೂಲಿಕೆ/ ಔಷಧಿಗಳನ್ನು ಮಾರುವ, ಚಿಕಿತ್ಸೆ ನೀಡುವ ಜನರ ಗುಂಪು. ಆತ ಹೇಳಿದ ಇಲ್ಲಿಂದ ನಡೆದು ಹೋಗಿ( ೭)ಏಳು ಹೊಂಡಗಳ ಸ್ಥಳ ಸಿಗುತ್ತದೆ ಅಮ್ತಾ ಅರುಕ-ಬರುಕ ಹಿಂದಿಯಲಿ ಹೇಳಿದ. ಲಗೇಜ್ ಹಿಡಿದು ಮೆಲ್ಲಗೆ ಹೆಜ್ಜೆ ಹಾಕಿದೆವು. ಸ್ವಲ್ಪ ದೂರ ಸಾಗಿ ಕಡೆಗೆ ಉನಕಿ ಕ್ಷೇತ್ರವಂ ಕಂಡೆವು.

ಸುತ್ತ ಕಾಡು ,ಬೆಟ್ಟಗಳ ಸಾಲು,ಕಾಡು ಮೃಗಗಳು. ನಿಸರ್ಗದತ್ತ ನೀರಿನ ಝರಿ, ಬುಗ್ಗೆಗಳು. ಮಹತ್ ಸಾಧಕರಿಗೆ ಯೋಗ್ಯವಾದ ಸ್ಥಳ. ಲೋಕ ಜನರ ಸಂಪರ್ಕ,ಗೋಜಲೇ ಎಂತದೂಯಿಲ್ಲ. ಪ್ರಕೃತಿದತ್ತವಾದ ಬಿಸಿನೀರು, ತಣ್ಣೀರು ಹೊಂಡಗಳನು ಕಂಡು,ಐದು ರೂಪಾಯಿ ನೀಡಿ ಚೀಟಿ ಪಡೆದು ಎಲ್ಲರೂ ಹೊಂಡದೊಳು ಸ್ನಾನ ಮಾಡಿದೆವು. ಆನಂತರ ದೇವಿಯ ದರ್ಶನ ಪೂಜೆ ಮಾಡಿದೆವು. ಕಥೆಯಲ್ಲಿ ಏನು ವರ್ಣನೆ ಇದೆಯೋ ಇದು ಹಾಗೆನೇ ಇದೆ. ಉನಕಿದೇವಿ ಹಾಗೂ ಉನಕೀಶ್ವರ, ಗಣಪತಿ ದೇವಸ್ಥಾನ. ನಟ್ಟ ನಡುವೇ ಒಂಟಿ ಕುಂಭ.ಅದರ ಸುತ್ತು ಬಂಡೆ ಹರಡಿದೆ. ಬಂಡೆಗಲ್ಲು ನೆಲಕೆ ಹಾಸಿದೆ.

ಇದು ಮಹಾಮುನಿ ಶ್ರೀ ಶರ್ಭಾಂಗ ಋಷಿವರೇಣ್ಯರ ಪುಣ್ಯ ಕ್ಷೇತ್ರವೂ ಹೌದು.ಈ ಕ್ಷೇತ್ರದ ನೈಸರ್ಗಿಕ (ಕಲ್ಯಾಣಿ) ಹೊಂಡಗಳಲ್ಲಿ ಸ್ನಾನಗೈದವರಿಗೆ ಚರ್ಮವ್ಯಾಧಿ ಮುಂತಾದವು ಗುಣವಾಗುತ್ತದಂತೆ. ಆದಿವಾಸಿ /ಬುಡಕಟ್ಟು ಜನಾಂಗದವರು ಹೆಚ್ಚು ಇರುವ ಸ್ಥಳವಿದು. ದಟ್ಟವಾದ ಕಾಡುಪ್ರದೇಶ, ಮೃಗಗಳ ಓಡಾಟ. ಭಯ ಹಾಗೂ ಭಾಷೆಯ ಸಮಸ್ಯೆ ಬೇರೆ. ಕಾಪೀ ಟೀ,ಹೋಟೆಲ್ಲು ಪ್ರಶ್ನೆನೇನೆ ಇಲ್ಲ. ಅಲ್ಲಿನ ಕಾಡುಜನವೇ ನಮಗೆ ಊಟ ನೀಡಿದರು. ಅವರು ಯಾರು ಬಡಿಸಲಿಲ್ಲ. ಕಾರಣ ವೇನಂದರೆ ಕೇಳಲು ನಮಗೆ ಅವರ ಭಾಷೆ ತಿಳಿಯದು. ಇನ್ನೂ ನಾವು ಆಡಿದ ಮಾತುಗಳು ಅವರಿಗೆ ಅರ್ಥವೇ ಆಗದು. ಆದಕಾರಣ ಅಡಿಗೆ ತಂದು ಒಂದೆಡೆ ಇಟ್ಟು ಹೋದರು. ಹಿಟ್ಟು ಅಳಸಿತ್ತು, ಹೊಟ್ಟೆ ಹಸಿದಿತ್ತು… ಎಂಬ ಗಾದೆ ಮಾತಿನಂತೆ ಸ್ಥಿತಿಯಲ್ಲಿ ನಾವಿದ್ದೆವು. ಚೆನ್ನಾಗಿ ಜಮಾಯಿಸಿದೆವು.

ಅಂತು ಉನಕಿ ಪುಣ್ಯ ಕ್ಷೇತ್ರ ದರ್ಶನ ಮಾಡಿ ಸುಗಮವಾಗಿ ೧೨ ದಿನಕೆ ಊರಿಗೆ ವಾಪಾಸು ಬಂದೆವು. ದಾರಿ ಯುದ್ದಕ್ಕೂ ಮಿಲ್ಟ್ರಿ ಪುಣ್ಯಾತ್ಮನ ಸಹಾಯ, ದಾಸೋಹ ನೀಡಿದ ಮಹಾತಾಯಿ, ಇತರೆ ನೆರವು ನೀಡಿದವರನು ಸ್ಮರಣೆ, ಗುಣಗಾನ ಮಾಡ್ತಾ ಮರಳಿದೆವು. ಆಗ ಸಣ್ಣಪ್ಯಾಡ್ ಫೋನ್ಗಳು. ಅವು ಸಹ ಸ್ವಿಚ್ ಆಫ್ ಆಗಿದ್ದವು. ಚಾರ್ಜರ್ ಬೇರೆ ಇರಲಿಲ್ಲ. ಊರ ಜನಕೆ ಆಂತಕ ಬೇರೆ. ಪೋನಿನ ಸಂಪರ್ಕ ಪೂರ್ಣವಾಗಿ ಕಡಿದೋಗಿತ್ತು. ಕೆಲುವರ ಮನೆಯಲಿ ಬೇರೆ-ಬೇರೆಯೇ ಯೊಚನೆ ಮಾಡಿದ್ದರಂತೆ.

ಈ ಕೆಂಚಪ್ಪ ಮೇಷ್ಟ್ರಿಗೆ ಬುದ್ಧಿ ಸರಿಯಿಲ್ಲ ಕಣ್ರಯ್ಯಾ… ನಮ್ಮ ಹುಡುಗರಿಗೆ ತಲೆಯೊಳಗೆ ಏನೇನೋ ಐಲು ಹಚ್ಚಿ, ಉಪರಾಲ್ ಮಾಡಿ ಕರ್ಕೊಂಡು ಹೋಗಿಬಿಟ್ಟ. ಒಂದೂ ಸುದ್ಧಿ ಹೇಳೋರೆ ಇಲ್ಲ. ಅಯ್ಯೋ… ದೇವರೆ ಇದೇನಪ್ಪಾ ಹಿಂಗಾತು ಅಮ್ತೆಲ್ಲಾ ಊರು ಜನ ಮಾತಾಡಿ ಕೊಂಡರಂತೆ. ಇಲ್ಲೀ ತನಕ ಬರಲಿಲ್ಲ ಅಂತ ಕಟ್ಟೆಚರ್ಚೆ, ಸುಪ್ರಭಾತಗಳು ಊರತುಂಬ. ಯಾರಾದರೂ ಬುದ್ಧಿವಂತರನು ಈ ಬಗ್ಗೆ ಸಲಹೆ ಪಡೆದು ,ಮುಂದುವರೀಬೇಕ್ರಪ್ಪಾ ಅಮ್ತಾ ಚರ್ಚೆ ಯಾಗಿದ್ದವಂತೆ. ಸಕಾಲಕ್ಕೆ ನಾವೂ ಹಿಂತಿರುಗಿದೆವು.

ಹುಬ್ಬಳ್ಳಿಗೆ ಬಂದೆವು. ಕೊರತೆ ಬಡ್ಜೆಟ್ ಆಗಿದ್ದರಿಂದ ಅಲ್ಲಿ ಗೆಳೆಯನೊಬ್ಬನ ಬಳಿ ಸ್ವಲ್ಪ ಹಣ ಪಡೆದು ಪುನಃ ಹೊರೆಟೆವು.

ಊರಿಗೆ ಮರಳಿದ ನಂತರ ನಮ್ಮ ನಮ್ಮ ಮನೆಗಳ ಪರಿಸ್ಥಿತಿ ತಿಳಿಯಾಯಿತು. ಕೆಲವು ದಿನ ಇದೇ ಸುದ್ಧಿ ಚರ್ಚೆಗೆ ಗ್ರಾಸವಾಗಿತ್ತು. ಜೊತೆಯಲ್ಲಿ ಬಂದವರಾರಿಗೂ ಅನ್ಯ ಭಾಷೆ ಬರುತ್ತಿರಲಿಲ್ಲ. ಊಟ, ತಿಂಡಿ, ಮುಂತಾದವನ್ನು ಹೇಗೆ ನಿಭಾಯಿಸಿದಿರಿ? ಹಣದ ಸಮಸ್ಯೆ ಹೇಗೆ ನಿಭಾಯಿಸದಿರಿ? ವಿಳಾಸ ಹೇಗೆ ಸಿಕ್ಕಿತು? ಯಾತ್ರೆ ಹೇಗಿತ್ತು? ಎಂಬುದೆ ಪ್ರಾಧಾನ್ಯವಾಗಿತ್ತು.

ಒಟ್ಟಾರೆ ಯಾತ್ರೆ ಸುಖಾಂತ್ಯವೂ, ಯಶಸ್ವಿಯೂ ಆಯಿತು. ಓದಿದ ತಮಗೆಲ್ಲಾ ನನ್ನ ಧನ್ಯವಾದಗಳು.

ಉನಕಿ ಕ್ಷೇತ್ರದ ಹೆಚ್ಚಿನ ಮಾಹಿತಿಗಾಗಿ ಓದಿ:

  1. ಚಿದಾನಂದ ಚರಿತ್ರೆ,
    ಸಂಪಾದಕ: ಶ್ರೀ ಶಾಶ್ವತಯ್ಯಾ ಮುಕ್ಕುಂದಿಮಠ.
  2. ಚಿದಾನಂದಾವಧೂತ ಚಾರಿತ್ರ
    ಸಂಪಾದನೆ: ಶ್ರೀ ಎಪ್. ಟಿ. ಹಳ್ಳಿಕೇರಿ.
    ಕನ್ನಡ ವಿಶ್ವವಿದ್ಯಾಲಯ.
- Advertisement -

LEAVE A REPLY

Please enter your comment!
Please enter your name here

- Advertisement -

Latest News

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...
- Advertisement -

More Articles Like This

- Advertisement -
close
error: Content is protected !!