ಕಲ್ಲದೇವರು ದೇವರಲ್ಲ, ಮಣ್ಣದೇವರು ದೇವರಲ್ಲ ,
ಮರದೇವರು ದೇವರಲ್ಲ, ಪಂಚಲೋಹದಲ್ಲಿ ಮಾಡಿದ ದೇವರು ದೇವರಲ್ಲ,
ಸೇತುರಾಮೇಶ್ವರ, ಗೋಕರ್ಣ, ಕಾಶಿ, ಕೇದಾರ ಮೊದಲಾಗಿ
ಅಷ್ಟಾಷಷ್ಠಿಕೋಟಿ ಪುಣ್ಯಕ್ಷೇತ್ರಂಗಳಲ್ಲಿಹ ದೇವರು ದೇವರಲ್ಲ.
ತನ್ನ ತಾನರಿದು ತಾನಾರೆಂದು ತಿಳಿದಡೆ ತಾನೇ ದೇವ ನೋಡಾ,
ಅಪ್ರಮಾಣಕೂಡಲಸಂಗಮದೇವ.
ಬಾಲ ಸಂಗಯ್ಯಾ . ವಚನ ಸಂಖ್ಯೆ 597 ಸಂಪುಟ 13 ಪುಟ 273.
ಮೇಲ್ಕಂಡ ವಚನ ಅಲ್ಲಿ ವಚನದ ಕೊನೆಗೆ ಬರುವ “ಅಪ್ರಮಾಣಕೂಡಲಸಂಗಮದೇವ”. ಅಂಕಿತ ನೋಡಿದಾಗ ಸಹಜವಾಗಿ ಯಾರೊಬ್ಬರಿಗೂ ಇಂತಹ ವಚನ ಸಿಕ್ಕಾಗ ಅವು ಬಸವಣ್ಣನವರ ವಚನ ಎಂದು ಕಾಣುವುದು 100% ಹಾಗು ಜನರು ಕೂಡಾ ಹಾಗೆ ಗ್ರಹಿಸುತ್ತಾರೆ.
ಆದರೆ ಬಾಲ ಸಂಗಯ್ಯಾ (ಅಪ್ರಮಾಣ ದೇವಾ ),ಭಿಕ್ಷಾ ಸಂಗಯ್ಯ ಹೀಗೆ ಹಲವು ಜನ ವಚನಕಾರರು ಅಪ್ರಮಾಣಕೂಡಲಸಂಗಮದೇವ. ಅಂಕಿತವನ್ನು ಬಳಸಿರುವುದು ಬಹಳ ತಡವಾಗಿ ಬಂದಿದೆ .
ಬಾಲ ಸಂಗಯ್ಯ ಸಣ್ಣ ವಯಸ್ಸಿನಲ್ಲಿಯೇ ತೀರಿಕೊಂಡ ಬಸವಣ್ಣ ಮತ್ತು ಗಂಗಾಂಬಿಕೆಯರ ಮಗ ಎನ್ನುವ ವಾದವೂ ಇತ್ತು.
1976 ರಲ್ಲಿ ಖ್ಯಾತ ಸಂಶೋಧಕ ಡಾ ಎಂ ಎಂ ಸುಂಕಾಪುರ ಅವರು ವಚನ ಪರಿಷ್ಕರಣೆಯ ಸಮಯದಲ್ಲಿ ಬಾಲ ಸಂಗಯ್ಯನವರ ಕಾವನ್ನು ಗುರುತಿಸಿದ್ದಾರೆ.
ಈ ವಚನಕಾರ 16 ನೇ ಶತಮಾನದ ಅಗ್ರ ವಚನಕಾರನು ಸುಮಾರು 920 ವಚನಗಳು ಇವನ ಹೆಸರಲ್ಲಿ ಸಂಗ್ರಹವಾಗಿವೆ.
ಪ್ರತಿ ತಾಡೋಲೆಗಳಲ್ಲಿ ತನ್ನ ಗುರು ಬೋಳ ಬಸವಯ್ಯನವರನ್ನು ನೆನೆದ ಕಾರಣ ಇವನು 16 ನೇ ಶತಮಾನದ ವಚನಕಾರ ಎಂದು ಗುರುತಿಸಲಾಗಿದೆ.
ಆದರೆ ಮೈಸೂರನ ಪಿ ಎಂ ಗಿರಿರಾಜ ಎಂಬವರು ಬಾಲ ಸಂಗಯ್ಯಾ ಅಲ್ಲ ಅದು (ಅಪ್ರಮಾಣ ದೇವಾ ) ಅಂತ ವಾದ ಹಾಕುತ್ತಾರೆ.
ಸಕಲಾಗಮ ಶಿಖಾಮಣಿ ಎಂಬ ಕೃತಿಕಾರನಾದ ಬಾಲ ಸಂಗಯ್ಯ ಮತ್ತು ಅಪ್ರಮಾಣದೇವಾ ಬೇರೆ ಬೇರೆ .ಆದರೆ ಇಬ್ಬರ ಅಂಕಿತ ಅಪ್ರಮಾಣಕೂಡಲಸಂಗಮದೇವ ಎಂದು ಕಂಡು ಬಂದಿರುವದರಿಂದ ,ಸಂಶೋಧಕರು ಏಕ ರೂಪದ ಅಭಿಪ್ರಾಯಕ್ಕೆ ಬರುವುದು ಕಠಿಣವಾಗಿದೆ .ಆದರೆ ಅವರಿಗೆ ದೊರೆತ ಹಸ್ತ ಪ್ರತಿಗಳಲ್ಲಿ ತಮ್ಮ ಗುರು ಮೂಲ ಮತ್ತು ಪರಂಪರೆಯನ್ನು ಹೇಳಿಕೊಂಡು ಬರುವ ಹಿನ್ನೆಲೆಯಲ್ಲಿ 1976 ರಲ್ಲಿ ಡಾ ಎಂ ಎಂ ಸುಂಕಾಪುರ ಅವರು ಬಾಲ ಸಂಗಯ್ಯನವರ ಗುರು ಮೂಲ ಮತ್ತು ತಾಡೋಲೆಯಲ್ಲಿ ಬಂದಿರುವ ಪರಂಪರೆಯ ಉಲ್ಲೇಖಿಸಿ ಅವರ ವಚನಗಳನ್ನು ಗುರುತಿಸಿರುವುದು ಶ್ಲಾಘನೀಯ ,ಬಾಲ ಸಂಗಯ್ಯನವರ ವಚನಗಳ ತಾಡೋಲೆಗಳು ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಲಭ್ಯವಿರುತ್ತವೆ.
ಕಾರಣ ವಚನಾಸಕ್ತರು ಇಂತಹ ಗೊಂದಲಗಳು ಬಂದಲ್ಲಿ ವಿಚಲಿತರಾಗದೆ ವಚನ ಸಂಪುಟ ಮೂಲ ಪ್ರತಿಗಳನ್ನು ನೋಡಬೇಕು.ವಚನ ನೆಟ್ ಮತ್ತು ಇತರ ಇಂಟರ್ನೆಟ್ ಅಂತರಜಾಲದ ಸಹಾಯ ಪಡೆಯ ಬಾರದು.
ವಚನಗಳಲ್ಲಿ ಬರುವ ಅನೇಕ ಪಾರಿಭಾಷಿಕ ಪದಗಳ ಅರ್ಥ ಕೋಶಗಳಲ್ಲಿಯೂ ಸಾಕಷ್ಟು ತಪ್ಪುಗಳಿವೆ. …. ” ಜಂಗಮರ ಗಳಗರ್ಜನೆ ,ಜಂಗಮದ ಕೋಳಾಟಕ್ಕೆ ಸೈರಿಸದಿದ್ದಡೆ ನೀನನ್ನ ಮೂಗ ಕೋಯ,ಕೂಡಲ ಸಂಗಮದೇವ.” ವಚನ .ಇಲ್ಲಿ ” ಜಂಗಮದ ಕೋಳಾಟಕ್ಕೆ ” ಅಂದರೆ ಜಂಗಮನ ಅತ್ಯಾಚಾರಕ್ಕೆ ಎಂದು ಅರ್ಥ ಕೊಟ್ಟಿದ್ದಾರೆ. ಅಂದರೆ ಜಂಗಮ ಅತ್ಯಾಚಾರವನ್ನು ಮಾಡಿದ್ದರು ಸೈರಿಸಬೇಕೆನ್ನುವ ಅರ್ಥ ಕೊಡುತ್ತದೆ.ಆದರೆ ” ಕೋಳಾಟಕ್ಕೆ” ಗೋಳಾಟವು ಪರ್ಯಾಯ ಪದವಾಗಿರುವದರಿಂದ ಅಂತಹ ಪದಗಳನ್ನು ಬಳಸಿ ವಚನ ಬಿಡಿಸಬೇಕು ಇಲ್ಲದಿದ್ದರೆ ಅದು ಅತ್ಯಂತ ಘೋರ ತಪ್ಪಾಗುವುದು.
ಇದೆ ರೀತಿ ಆಯ್ದಕ್ಕಿ ಲಕ್ಕಮ್ಮನ ವೃತ್ತಿ ಆಯ್ದ ಅಂದರೆ ಕೂಲಿಯ ವೃತ್ತಿಯೆಂದಾಗಬೇಕು.ಹಾದರ ಕಾಯಕ -ಶರಣರ ಅನೇಕ ವಚನಗಳಲ್ಲಿ ಬರುವ ಈ ಪದವು ಅತ್ಯಂತ ವಿಚಿತ್ರ ಸೋಜಿಗವಾಗಿ ಕಾಡುತ್ತದೆ. ಕಾರಣ “ಹರದ” ಕಾಯಕವು -ಅಂದರೆ ಮಹಿಳೆಯರು ತಮ್ಮ ಬಿದಿರಿನ ಬುಟ್ಟಿಯಲ್ಲಿ ಕಾಯಿ ಪಲ್ಲ್ಯೆ ಹರಿವಿ (ಹರದ)ಕೊಂಡು ಕುಳಿತು ಕೊಳ್ಳುತ್ತಿದ್ದರು .ಇದು ಅಪಬ್ರಂಶವಾಗಿ ಹಾದರ ಎಂದು ಬಂದಿದೆ.
ಇಂತಹ ಅನೇಕ ಕುಚೋದ್ಯ ಮತ್ತು ತಪ್ಪುಗಳು ಜರುಗಿ ಹೋಗಿವೆ.
ಬಸವಣ್ಣನವರ ವಚನಗಳನ್ನೇ ಪಾಠಾಂತರ ಮಾಡುವ ಸಂದರ್ಭದಲ್ಲಿ ಬಾಲ ಸಂಗಯ್ಯ ಮತ್ತು ಅಪ್ರಮಾಣದೇವ ತಮ್ಮ ಗುರು ಪರಂಪರೆ ಜೊತೆಗೆ ಬಸವಣ್ಣನವರ
ವಚನಗಳನ್ನು ಪ್ರತಿ ಮಾಡುವ ಸಾಧ್ಯತೆಯೂ ಇದೆ.ಇಂತಹ ಪ್ರಮಾದಗಳ ಹಿಂದೆ ಕಾಪಾಲಿಕ ವೀರಶೈವ ಆಚಾರ್ಯರ ಕೈವಾಡಗಳು ಉಂಟು .
ನನ್ನ ಆತ್ಮೀಯ ವಚನಾಸಕ್ತರ ಜೊತೆ ನಾನು ಇಂತಹ ಪ್ರಮಾದಗಳನ್ನು ಶುದ್ದೀಕರಿಸುವ ವಿಚಾರವಾಗಿ ” ಶರಣರು ಸುಗ್ಗಿ ಮಾಡಿ ಒಕ್ಕಲು ಒಟ್ಟಿ ಹೋಗಿದ್ದಾರೆ.ಅಲ್ಲಿ ಕೂಡಿರುವ ಕಸ ಕಡ್ಡಿ ಹೂಲ ಹುಪ್ಪಳ ನಾವು ಹೆಕ್ಕಿ ತೆಗೆಯಬೇಕು.”
ಇಂತಹ ವಚನ ಸಂಶೋಧನೆ ,-ಪರಿಷ್ಕರಣೆ ಮಾಡಿ ಏಕೋಭಿಪ್ರಾಯ ಮೂಡಿಸುವಲ್ಲಿ ಪ್ರಯತ್ನಿಸಬೇಕು ಇದಕ್ಕೆ ವಚನ ಅಧ್ಯಯನ ಅಕಾಡೆಮಿ ವಚನ ವಿಶ್ವ ವಿದ್ಯಾಲಯ ” ಮಾಡಿ ತನ್ಮೂಲಕ ವಚನ ಸಂಶೋಧನೆ ಪಾಠಾಂತರ ಪರಿಷ್ಕರಣೆ
ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಶರಣಾರ್ಥಿ
ಡಾ.ಶಶಿಕಾಂತ.ಪಟ್ಟಣ -ಪೂನಾ