ಮೂಡಲಗಿ: ೧೨ನೇ ಶತಮಾನ ವಚನ ಸಾಹಿತ್ಯದ ಸುವರ್ಣಯುಗ. ಶಿವಶರಣರು ಬಸವಣ್ಣನವರ ನೇತೃತ್ವದಲ್ಲಿ ಸಾವಿರಾರು ವಚನಗಳನ್ನು ರಚಿಸುವ ಮೂಲಕ ಸಮಾಜವನ್ನು ಶುದ್ಧಿಕರಿಸಿದ್ದಾರೆ. ಬಸವಣ್ಣನವರ ವಚನಗಳಲ್ಲಿ ಸಮಾನತೆ, ಕಾಯಕ, ಲಿಂಗ ತಾರತಮ್ಯ ಮತ್ತು ಜಾತಿ ಪದ್ಧತಿ ವಿರೋಧ, ಮೂಢನಂಬಿಕೆಗಳು, ಮಾನವೀಯ ಮೌಲ್ಯಗಳು ಮುಂತಾದ ಚಿಂತನೆಗಳನ್ನು ಕಾಣಬಹುದು ಎಂದು ಬೆಳಗಾವಿಯ ಅಂಜುಮನ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಎಚ್.ಆಯ್.ತಿಮ್ಮಾಪೂರ ನುಡಿದರು.
ತಾಲೂಕಿನ ಕಲ್ಲೋಳಿಯ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಮಹಾವಿದ್ಯಾಲಯದ ಆತಿಥ್ಯದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಿಂದ ಏರ್ಪಡಿಸಿದ್ದ ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂಬ ವಿಷಯದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಬಸವಣ್ಣನ ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಕೊಳ್ಳಬೇಕು ಎಂದರು.
ವಿಚಾರ ಸಂಕಿರಣದ ಸಹ-ಸಂಯೋಜಕ ಡಾ. ಗಜಾನನ ನಾಯ್ಕ ಪ್ರಾಸ್ತವಿಕ ಮಾತುಗಳನ್ನಾಡುತ್ತಾ, ಎರಡು ದಿನಗಳ ಕಾಲ ನಡೆದ ವಿಚಾರ ಗೋಷ್ಠಿಯಲ್ಲಿ ಬಸವಣ್ಣನ ಚಿಂತನೆಗಳನ್ನು ವಿವಿಧ ದೃಷ್ಟಿಕೋನದಲ್ಲಿ ವಿದ್ವಾಂಸರು ಚರ್ಚಿಸುವ ಮೂಲಕ ಸಂಕಿರಣದ ಆಶಯವನ್ನು ಈಡೇರಿಸಿದ್ದಾರೆ ಎಂದರು.
ಮೂಡಲಗಿಯ ಹಿರಿಯ ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ, ಮಹಾವಿದ್ಯಾಲಯವು ವರ್ಷದುದ್ದಕ್ಕೂ ವಿವಿಧ ಸದಭಿರುಚಿಯ ಸಾಂದರ್ಭಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಜಿಲ್ಲೆಯಲ್ಲಿಯೇ ಮಾದರಿಯಾಗಿದೆ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಮಾತನಾಡಿ, ಬಸವಣ್ಣ ಕೇವಲ ಕರ್ನಾಟಕವಲ್ಲ, ವಿಶ್ವದ ಸಾಂಸ್ಕೃತಿಕ ನಾಯಕನಾಗಿದ್ದಾನೆ. ಜನಪದರು ಬಸವ ಎಂಬ ಮಂತ್ರವನ್ನು ತಮ್ಮ ದಿನನಿತ್ಯದ ಬದುಕಿನಲ್ಲಿ ಜಪಿಸುವ ಮೂಲಕ ಕಾಯಕದಲ್ಲಿ ತೊಡಗಿಕೊಂಡು ಅಣ್ಣನ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುತ್ತಿದ್ದಾರೆ. ಇಂತಹ ವಿಚಾರ ಸಂಕಿರಣಗಳ ಮೂಲಕ ಬಸವಣ್ಣನ ಚಿಂತನೆಗಳನ್ನು ಎಲ್ಲ ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಳಗಾವಿಯ ಬೆನನ್ ಸ್ಮಿತ್ ಪದವಿ ಕಾಲೇಜಿನ ಪ್ರಾಚಾರ್ಯ ಸಾಮುವೇಲ್ ಡ್ಯಾನಿಯೇಲ್, ವಿಚಾರ ಸಂಕಿರಣದ ಸಲಹಾ ಮತ್ತು ಆಯೋಜನಾ ಸಮಿತಿಯ ಸದಸ್ಯರಾದ ಡಾ. ಆನಂದಕುಮಾರ ಜಕ್ಕಣ್ಣವರ, ಎಂ.ಬಿ.ಕೊಪ್ಪದ, ಎನ್.ಬಿ.ಸಂಗ್ರೇಜಿಕೊಪ್ಪ, ಶಂಕರ ನಿಂಗನೂರ, ಎಂ.ಬಿ.ಕುಲಮೂರ, ಆರ್.ಎಸ್.ಪಂಡಿತ, ಆರ್.ಎನ್.ತೋಟಗಿ, ಅಧ್ಯಾಪಕರಾದ ವಿ.ಪಿ.ಕೆಳಗಡೆ, ವಸುಂಧರಾ ಕಾಳೆ, ಬಿ.ಸಿ.ಮಾಳಿ, ಸಂತೋಷ ಬಂಡಿ, ಸಂತೋಷ ಜೋಡಕುರಳಿ, ಬಿ.ಕೆ.ಸೊಂಟನವರ, ಬಿ.ಬಿ.ವಾಲಿ, ಮಲ್ಲಪ್ಪ ಕರಗಣ್ಣಿ, ಮಲ್ಲಪ್ಪ ಮುರಗೋಡ, ಸಾಗರ ಐದಮನಿ, ಕಛೇರಿ ಸಿಬ್ಬಂಧಿಗಳಾದ ನಿರಂಜನ ಪಾಟೀಲ, ಮಂಜುನಾಥ ಗೋರಗುದ್ದಿ, ಮಹೇಶ ಹೊಸಮನಿ, ರಾಣಿ ನಿಡೋಣಿ, ಬಸವರಾಜ ಬೆಳವಿ ಮುಂತಾದವರು ಉಪಸ್ಥಿತರಿದ್ದರು.
ಬಸವರಾಜ ಮರಗನ್ನವರ ಪ್ರಾರ್ಥಿಸಿದರು, ಡಿ.ಎಸ್.ಹುಗ್ಗಿ ಸ್ವಾಗತಿಸಿದರು, ಡಾ. ಕೆ.ಎಸ್.ಪರವ್ವಗೋಳ ನಿರೂಪಿಸಿದರು, ಎಂ.ಬಿ.ಜಾಲಗಾರ ವಂದಿಸಿದರು.