ಮೂಡಲಗಿ : ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹೋರಾಡಿದ, ಸತ್ಯ ಮತ್ತು ಅಹಿಂಸೆಯ ಉನ್ನತ ಧ್ಯೇಯದೊಂದಿಗೆ ಗಾಂಧೀಜಿ ಅವರ ಚಿಂತನೆಗಳು ಇಂದು ಇಡೀ ಜಗತ್ತಿಗೆ ಸ್ಫೂರ್ತಿ ಮತ್ತು ಪ್ರೇರಣೆ ನೀಡಿವೆ. ಗಾಂಧೀಜಿ ಕಂಡ ಕನಸು ನನಸಾಗಿಸಲು ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಹೇಳಿದರು.
ತಾಲ್ಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವಿವಿಧ ಘಟಕಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಗೌರವ ಸಮರ್ಪಿಸಿ ಅವರು ಮಾತನಾಡಿದರು.
ಜೈಜವಾನ್, ಜೈಕಿಸಾನ್ ಘೋಷಣೆ ಮೂಲಕ ರೈತರಲ್ಲಿ ಆತ್ಮಸ್ಥೈರ್ಯ ತುಂಬಿದವರು ಶಾಸ್ತ್ರಿ, ಈ ದೇಶಕ್ಕೆ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕೊಡುಗೆ ಅಪಾರ ಎಂದರು.
ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಶಂಕರ ನಿಂಗನೂರ ಮಾತನಾಡಿ, ಇದೇ ಸಂದರ್ಭದಲ್ಲಿ ಗಾಂಧೀಜಿ ಸ್ಮರಣಾರ್ಥ ಕೇಂದ್ರ ಸರ್ಕಾರ ಸ್ವಚ್ಛ ಹೀ ಸೇವಾ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ಅರ್ಥಪೂರ್ಣವಾಗಿದೆ. ದೇಶದ ಬಡತನವನ್ನು ಕಣ್ಣಾರೆ ಕಂಡು, ಸರಳ ಜೀವನ ನಡೆಸುವ ಮೂಲಕ ಗ್ರಾಮಸ್ವರಾಜ್ಯ, ಸ್ವಚ್ಛಭಾರತದ ಕಲ್ಪನೆಯನ್ನು ಅಂದೇ ಗಾಂಧೀಜಿ ಹೊಂದಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದರಷ್ಟೇ ಸಾಕು ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನಿ ಆಗಿ ಆಡಳಿತ ನಡೆಸಿದ್ದು ಕೇವಲ 18 ತಿಂಗಳು ಮಾತ್ರ. ಅಷ್ಟುಸಣ್ಣ ಅವಧಿಯಲ್ಲೇ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ದೇಶವನ್ನೂ ಮುನ್ನಡೆಸಿದರು. ದೇಶದಲ್ಲಿನ ಆಹಾರ ಕೊರತೆಯಯನ್ನು ನೀಗಿಸಿದರು. ಹಿಂದಿ, ಇಂಗ್ಲಿಷ್ ಭಾಷಾ ಗೊಂದಲವನ್ನು ಬಗೆಹರಿಸಿದರು. ಕಾಶ್ಮೀರದ ಹಜರತ್‌ಬಾಲ್‌ನಂತಹ ಸಮಸ್ಯೆಯನ್ನು ಹೂವೆತ್ತಿದಂತೆ ಪರಿಹರಿಸಿದ್ದರು. ಬಡತನದಲ್ಲೇ ಹುಟ್ಟಿ, ಬಡತನದಲ್ಲೇ ಬೆಳೆದು, ಬಡತನದಲ್ಲೇ ನಿಧನರಾಧ ಭಾರತದ ಏಕೈಕ ಪ್ರಧಾನಿ ಲಾಲ್ ಬಹದ್ಧೂರ್ ಶಾಸ್ತ್ರಿ ಅವರು. ಬಡತನ ಅವರಿಗೆ ಸಹನೆ, ತಾಳ್ಮೆ ಮತ್ತು ವಿನಯವನ್ನು ಕಲಿಸಿತ್ತು ಎಂದು ಹೇಳಿದರು.
ಸಮಾರಂಭದಲ್ಲಿ ಪ್ರೊ. ಡಿ.ಎಸ್.ಹುಗ್ಗಿ, ರಘುನಾಥ ಮೇತ್ರಿ, ಬಸವರಾಜ ಶೀಗಿಹಳ್ಳಿ, ಮಂಜುನಾಥ ಗೊರಗುದ್ದಿ, ಮಹೇಶ ಹೊಸಮನಿ ಇನ್ನಿತರರು ಉಪಸ್ಥಿತರಿದ್ದರು.