ಚೀನಾದ ಬೌದ್ಧ ಭಿಕ್ಕು, ಹ್ಯುಯೆನ್ ತ್ಸಾಂಗ (ಕ್ರಿ.ಶ. ೬೦೦-೬೬೪) ನ ಭಾರತ ಯಾತ್ರೆ ಅಪೂರ್ವವಾದದ್ದು.
ಇನ್ನಿತರರು ಸಾಹಸಕ್ಕಾಗಿ, ಸ್ವಪ್ರತಿಷ್ಠೆಗಾಗಿ, ಲಾಭಕ್ಕಾಗಿ ಪರ್ಯಟನ ಕೈಕೊಂಡರೆ, ಇವನು ವಿದ್ಯಾರ್ಜನೆಗೆ ಮತ್ತು ಪ್ರಮುಖ ಬೌದ್ಧ ವಿಶ್ವವಿದ್ಯಾಲಯಗಳಿಂದ ಬುದ್ಧರ ನಿಜವಾದ ಬೋಧನೆಗಳನ್ನು ಸಂಗ್ರಹಿಸಲು ಬಂದವನು.
ಮಧ್ಯ ಏಷ್ಯದ ಹಲವಾರು ದೇಶಗಳು, ರಷ್ಯ, ಆಫಘಾನಿಸ್ತಾನ, ಈಗಿನ ಪಾಕಿಸ್ತಾನಗಳನ್ನು ಸುತ್ತಿ ಕ್ರಿ.ಶ. ೬೨೬ ರಲ್ಲಿ ಶ್ರೀನಗರ ತಲುಪಿದನು. ಸುಡುಬಿಸಿಲು, ಹಿಮಗಾಳಿ, ಚಳಿ, ಮಳೆ, ಸುಂಟರಗಾಳಿಗಳನ್ನು ಎದುರಿಸಿ ಪರ್ವತ, ಕೊರಕಲುಗಳನ್ನು ಹಾದು, ಭಿನ್ನಮತೀಯರ ವಿರೋಧ, ಅಧಿಕಾರಿಗಳ ಕೀಟಲೆ, ಕಳ್ಳಕಾಕರ ಭೀತಿ, ಯಾವುದನ್ನೂ ಲೆಕ್ಕಿಸದೇ, ಹದಿನಾರು ವರ್ಷಗಳ ದೀರ್ಘ ಪರ್ಯಟನವನ್ನು ಕೈಕೊಂಡನು.
ಭಾರತದಲ್ಲಿ ಹರಡಿ ಕೊಂಡಿದ್ದ ಬೌದ್ಧ ಧರ್ಮ-ಶಿಕ್ಷಣ ಕೇಂದ್ರಗಳಿಗೆ ಭೇಟಿಕೊಡಲು ಅವನು ಕುದುರೆ, ಕತ್ತೆ, ಹೇಸರಗತ್ತೆ, ಮೇನೆ, ಎತ್ತು, ನಾವೆ, ಕಾಲ್ನಡಿಗೆ ಎಲ್ಲವನ್ನೂ ಬಳಸಿದ.
ಹೋದಲ್ಲೆಲ್ಲ ಆತನ ವಾಗ್‌ವೈಖರಿ, ಬೋಧನೆ ಮತ್ತು ತತ್ವ ಪ್ರತಿಪಾದನೆಯನ್ನು ಕೇಳಲು ಜನರು ಕಿಕ್ಕಿರಿದು ತುಂಬುತ್ತಿದ್ದರು.
ಮಹಾಯಾನ ಮತ್ತು ಥೇರವಾದ ಎರಡೂ ಪರಂಪರೆಯ ಬೌದ್ಧ ಅನುಯಾಯಿಗಳು ಒಟ್ಟಾಗಿ ಹ್ಯುಯೆನ್ ತ್ಸಾಂಗನನ್ನು “ತ್ರಿಪಿಟಕಾಚಾರ್ಯ”, “ಮಹಾಯಾನದೇವ” ಮತ್ತು “ಮೋಕ್ಷದೇವ” ಎಂಬ ಬಿರುದು ನೀಡಿದ್ದರು, ಇದು ಬೌದ್ಧ ತತ್ತ್ವಶಾಸ್ತ್ರಕ್ಕೆ ಅವರ ಆಳವಾದ ಜ್ಞಾನ ಮತ್ತು ಕೊಡುಗೆಗಳಿಗಾಗಿ ಅವರು ಗಳಿಸಿದ ಆಳವಾದ ಗೌರವವನ್ನು ಪ್ರತಿಬಿಂಬಿಸುತ್ತದೆ.
ಹರ್ಷವರ್ಧನನ ಓಲಗದಲ್ಲಿ ಅವನು ಅಸಂಖ್ಯಾತ ವಾದ, ಸಭೆಗಳಲ್ಲಿ ಪಾಲುಗೊಂಡು, ಬೌದ್ಧಧರ್ಮದ ಹಿರಿಮೆಯನ್ನು ಸ್ಥಾಪಿಸಿ, ಎಲ್ಲರಿಂದಲೂ ತಲೆದೂಗಿಸಿಕೊಂಡನು.
ಅವನು ಕ್ರಿ.ಶ ೬೪೩ ರಲ್ಲಿ ಚೀನಕ್ಕೆ ಮರುಪ್ರಯಾಣ ಬೆಳೆಸಿದಾಗ ತನ್ನ ಜೊತೆಗೆ ಐದುನೂರ ಐವತ್ತಾರು ಮೂಟೆಗಳಲ್ಲಿ ಆರನೂರ ಐವತ್ತೇಳು ಸೂತ್ರಗಳ ಹಸ್ತ ಪ್ರತಿ ಗಳು ಮತ್ತಿತರ ಸಾಮಗ್ರಿಗಳನ್ನು ಒಯ್ದಿದ್ದ.
ಅವುಗಳಲ್ಲಿ ಕರ್ನಾಟಕದವು ಕೆಲವಾದರೂ ಇರಬಹುದು! ಎರಡು ವರ್ಷಗಳ ಕಷ್ಟಕರವಾದ ಪ್ರಯಾಣದ ನಂತರ ಅವನು ಚೀನದ ರಾಜಧಾನಿ ಚಾಂಗ್-ಅಸ್‌ವನ್ನು ತಲುಪಿದಾಗ, ಅವನಿಗೆ ಭವ್ಯ ಸ್ವಾಗತ ನೀಡಲಾಯಿತು.
ಹ್ಯುಯೆನ್ ತ್ಸಾಂಗ ಈ ಪ್ರವಾಸದಲ್ಲಿ ೧೬ ವರ್ಷಗಳನ್ನು ಕಳೆದರು, ಈ ಸಮಯದಲ್ಲಿ ಅವರು ನೋಡಿದ ಎಲ್ಲವನ್ನೂ ಸೂಕ್ಷ್ಮವಾಗಿ ದಾಖಲಿಸಿದರು. ಚೀನಿ ಚಕ್ರವರ್ತಿ, ಪರಮ ವಿಶ್ವಾಸದಿಂದ ಅವನಿಗೆ ಆಶ್ರಯವಿತ್ತ. ಕೆಲ ವರ್ಷ ಆಳರಸರ ಆತಿಥ್ಯದಲ್ಲಿ ಅಧ್ಯಯನ ಕೈಕೊಂಡು, ಭಾರತದಿಂದ ಒಯ್ದ ಬೌದ್ಧ ಸೂತ್ರ ಮತ್ತು ಗ್ರಂಥಗಳನ್ನು ‘ಮಾತೃ ಪ್ರೇಮ’ವೆಂಬ ಬೌದ್ಧಾಲಯಕ್ಕೆ ಸಾಗಿಸಿ, ಭಾಷಾಂತರ ಕಾರ್ಯವನ್ನು ಆರಂಭಿಸಿದನು.
ಹ್ಯುಯೆನ್ ತ್ಸಾಂಗ ತನ್ನ ಪ್ರವಾಸ ಕಥನವನ್ನು ಚಕ್ರವರ್ತಿಗೆ ಪ್ರಸ್ತುತಪಡಿಸಿದ. ಇದು Ta-Tang-Hsi-yü-chi (ಗ್ರೇಟ್ ಟ್ಯಾಂಗ್ ಅವಧಿಯ ಪಾಶ್ಚಿಮಾತ್ಯ ದೇಶಗಳ ದಾಖಲೆಗಳು) ಎಂದು ಹೆಸರಿಸಲಾಯಿತು. ಈ ಪ್ರವಾಸ ಕಥನವು ಒಂದು ಮೇರುಕೃತಿಯಾಗಿದ್ದು, ಚೀನಾದ ಪಶ್ಚಿಮಕ್ಕೆ ಇರುವ ಭೂಮಿ ಮತ್ತು ಜನರ ಮೊದಲ ಲಿಖಿತ ಖಾತೆಯನ್ನು ಒದಗಿಸುತ್ತದೆ.
ಅವನು ತಂದ ಈ ಅಪೂರ್ವನಿಧಿಯನ್ನು ಶಾಶ್ವತವಾಗಿ ಕಾಯ್ದಿರಿಸಲು, ಸಾಯನ್ ನಗರದಲ್ಲಿ ಕ್ರಿ. ಶ. ೬೫೨ ರಲ್ಲಿ ಸಾಯನ್ ಪಗೋಡವನ್ನು ಕಟ್ಟಲಾಯಿತು. ಈ ಭವ್ಯ ಕಟ್ಟಡ ಇಂದಿಗೂ ಸುಸ್ಥಿತಿಯಲ್ಲಿರುವದು ಸೋಜಿಗ.
ಹ್ಯುಯೆನ್ ತ್ಸಾಂಗನ ಬರಹಗಳ ಸಹಾಯದಿಂದ, ಬ್ರಿಟಿಷ್ ವಿದ್ವಾಂಸರು, ವಿಶೇಷವಾಗಿ ಸರ್ ಅಲೆಕ್ಸಾಂಡರ್ ಕನ್ನಿಂಗ್‌ಹ್ಯಾಮ್ (೧೮೧೪-೧೮೯೩), ಮಹಾಬೋಧಿ(ಗಯಾ), ಸಂಕಶ್ಯ, ಶ್ರಾವಸ್ತಿ, ವೈಶಾಲಿ, ನಳಂದಾ ಮತ್ತು ಸಾರನಾಥ ಮುಂತಾದ ಪ್ರಮುಖ ಬೌದ್ಧ ಯಾತ್ರಾ ಸ್ಥಳಗಳನ್ನು ಕಂಡುಹಿಡಿದರು.
ಚೀನೀ ಸಾಹಿತ್ಯವು ಹ್ಯುಯೆನ್ ತ್ಸಾಂಗನ ಪ್ರವಾಸ ಕಥನವನ್ನು ಅದರ ಐದು ಶ್ರೇಷ್ಠ ಕೃತಿಗಳಲ್ಲಿ ಒಂದೆಂದು ಪರಿಗಣಿಸುತ್ತದೆ.
ಜಗತ್ತಿಗೆ, ಬೌದ್ಧ ಭಿಕ್ಷು, ತ್ರಿಪಿಟಕಾಚಾರ್ಯ “ಹ್ಯುಯೆನ್ ತ್ಸಾಂಗ”ನ ಪ್ರವಾಸ ಕಥನವು ಬುದ್ಧರ ಹೆಜ್ಜೆಗಳನ್ನು ಪತ್ತೆಹಚ್ಚಲು ಒಂದು ಅನಂತ ಖಜಾನೆಯಾಗಿದೆ.
ಭವತು ಸಬ್ಬ ಮಂಗಲ ( ವಾಟ್ಸಪ್ ಕೃಪೆ )