spot_img
spot_img

ವಚನ ಸಾರ: ಅಲ್ಲಮ ಪ್ರಭುದೇವರ ವಚನ

Must Read

spot_img

ವಚನ ಸಾರ

ಅಲ್ಲಮ ಪ್ರಭುದೇವರ ವಚನ

- Advertisement -

ಈಶ್ವರನ ದ್ರೋಣವ ಮಾಡಿ,

ಪದ್ಮನಾಭನ ನಾರಿಯ ಮಾಡಿ,

ಕಮಲಜನೆಂಬ ಬಾಣವ ತೊಟ್ಟು,

- Advertisement -

ತ್ರಿಭುವನವನೆಚ್ಚವರಾರೊ?

ಚಂದ್ರಸೂರ್ಯರ ಬೆನ್ನ ಮೆಟ್ಟಿ,

ಸುವರ್ಣದ ಮಳೆಯ ಕರಸಿದವರಾರೊ?

- Advertisement -

ದೇವದಾನವ ಮಾನವರೆಲ್ಲ,

ಈ ಬಾಣಕ್ಕೆ ಗುರಿಯಾಗಿ ಬಿದ್ದರು.

ಗುಹೇಶ್ವರ ಶೂನ್ಯ ನಿಶ್ಶೂನ್ಯದೊಳಗೆ! 

   ರುದ್ರ ತಮೋಗುಣವನ್ನು, ವಿಷ್ಣು ರಜೋಗುಣವನ್ನು,  ಬ್ರಹ್ಮ ಸಾತ್ವಿಕಗುಣವನ್ನು ಪ್ರತಿನಿಧಿಸುತ್ತಾರೆ.   ಹೀಗಾಗಿ ಇಲ್ಲಿ ತಮೋಗುಣವನ್ನೇ ಬಿಲ್ಲಾಗಿಸಿ,  ರಜೋಗುಣವನ್ನು ಬಾಣವಾಗಿಸಿಕೊಂಡು,  ಸಾತ್ವಿಕ ಗುಣದ ಹೆದೆಯೇರಿಸಿಕೊಂಡು ಮೂರು ಲೋಕವನ್ನು ಗುರಿಯಾಗಿಸಿಕೊಂಡು ಬಾಣವನ್ನು ಹೊಡೆಯುತ್ತಿರುವವರಾರೋ?   ಜ್ಞಾನ ಅಜ್ಞಾನಗಳಿಂದೊಡಗೂಡಿ   ನೂರಾರು ಸ್ವಕಲ್ಪಿತ ಕಲ್ಪನೆಗಳನ್ನು ಮೈ ಮೇಲೆ ಎಳೆದುಕೊಂಡಿರುವ ಪ್ರಕೃತಿ ಪುರುಷರೆನಿಸಿದ ಚಂದ್ರ ಸೂರ್ಯರ ಬೆನ್ನು ಮೆಟ್ಟಿ ಅಧೋಮುಖವಾಗಿಸಿ, ಸಾಂಸಾರಿಕ  ತಾಪತ್ರಯಗಳ ಜಲದ  ಸುವರ್ಣ ಮಳೆಯನ್ನು  ಸುರಿಸಿದವರಾರೋ?  ಎಂದು ಪ್ರಶ್ನಿಸುತ್ತಾರೆ.  ಒಂದೆಡೆಗೆ ಸಾತ್ವಿಕ,  ರಾಜಸಿಕ ಹಾಗೂ ತಾಮಸ ಗುಣಗಳನ್ನು ಒಟ್ಟಿಗೆ ಸೇರಿಸಿ,  ಭವದ ಜೀವಿಗಳ ಮೇಲೆ ನಿರಂತರವಾಗಿ ಪ್ರಯೋಗಿಸುವ ಕ್ರಿಯೆ ನಡೆದಿದೆ.   ಪರಿಣಾಮವಾಗಿ ಭವದ ಜೀವಿಗಳು ಲೌಕಿಕದ ಬಾಧೆಗಳಿಗೆ ಗುರಿಯಾಗುತ್ತಿದ್ದಾರೆ.  ಈ ಜನಕ್ಕೆ ನಿಜವಾದ ಜ್ಞಾನ ಯಾವುದು,  ಅಜ್ಞಾನ ಯಾವುದು ಎಂಬುದು ಸರಿಯಾಗಿ ತಿಳಿಯದಾಗಿದೆ.   ರೂಪ, ರಸ, ಗಂಧಾದಿ ವಾಸನೆಗಳಿಗೆ ಬಲಿಯಾಗಿ, ಸರಿ – ತಪ್ಪು,  ಸತ್ಯ- ಸುಳ್ಳು,  ಒಳ್ಳೆಯದು – ಕೆಟ್ಟದ್ದು , ಇತ್ಯಾದಿಗಳ ಕುರಿತಾಗಿ ಪ್ರತಿ ಜೀವಿಯೂ ಸ್ವಕಪೋಲ ಕಲ್ಪಿತ ಕಲ್ಪನೆಗಳನ್ನೇ ನೆಚ್ಚಿ ಅದೇ ನಿಜವಾದ ಜ್ಞಾನವೆಂದು ನಂಬಿ ಅಜ್ಞಾನದಲ್ಲಿಯೇ ಹೊರಳಾಡುತ್ತಿದ್ದಾನೆ.  ಇದೇ ಸುವರ್ಣವೃಷ್ಟಿಯಿo ದಾದ ಜಲ.  ಅದರಲ್ಲಿಯೇ ತೇಲುತ್ತಾ ಮುಳುಗುತ್ತಾ ದಡ ಸೇರದೆ ಒದ್ದಾಡುತ್ತಿದ್ದಾರೆ.   ಈ ಬಾಣಕ್ಕೆ ದೇವ ದಾನವ ಮಾನವರೆಲ್ಲರೂ ಗುರಿಯಾಗಿದ್ದಾರೆ.

        ಹೀಗೆ  ಲೌಕಿಕದ ದಂದುಗಗಳಿಗೆ ಗುರಿಯಾಗುತ್ತಾ,  ಭವಾವಳಿಯ  ಚಕ್ರದಲ್ಲಿ ಸುತ್ತುತ್ತಾ  ಸಾಗುವ ನಿರಂತರ ಪ್ರಕ್ರಿಯೆಯೇ ಶಿವಲೀಲಾ ವಿಲಾಸವಾಗಿದೆ.  ಹಾಗಾದರೆ ಇವರೆಲ್ಲ ಉದ್ಧಾರವಾಗುವುದೆಂದು ? ಇವರಿಗೆ ಬಿಡುಗಡೆಯೇ ಇಲ್ಲವೇ?  ಎಂಬಿತ್ಯಾದಿ ಸಂದೇಹಗಳಿಗೆ ವಚನದ ಕೊನೆಯಲ್ಲಿ, ”   ಗುಹೇಶ್ವರ ಶೂನ್ಯ ನಿಶ್ಶೂನ್ಯದೊಳಗೆ ” ಎಂದು ಎಂದುತ್ತರಿಸಿದ್ದಾರೆ.  ಯಾವ ಜೀವರು ಪರಾತ್ಪರ ಚೈತನ್ಯದ ಮಹಾ ಬಯಲು ಸತ್ಯವನ್ನು ಅರಿತು ಆ ಶೂನ್ಯದಲ್ಲಿ ಇಳಿದು ನಿಶ್ಯೂನ್ಯರಾಗುತ್ತಾರೋ ಅವರೇ ಮುಕ್ತರು.   ಹೀಗೆ ಪ್ರಸ್ತುತ ವಚನದಲ್ಲಿ ಶಿವಲೀಲಾ ವಿಲಾಸದಲ್ಲಿ ಮೂರು ಲೋಕದ  ಜೀವಿಗಳು ಹೋರಾಡುವ, ತೊಳಲಾಡುವ ಪ್ರವೃತ್ತಿಯ ಜೊತೆಗೆ ಬಹು ಅಪರೂಪವಾಗಿ ಭವದ ಸಾಂಸಾರಿಕ ಪ್ರವೃತ್ತಿಯಿಂದ ನಿವೃತ್ತಿಯಾಗುವ ಅವಕಾಶವನ್ನೂ  ಶಿವಲೀಲೆ ನೀಡಿದೆ ಎಂಬುದನ್ನು ಅಲ್ಲಮರು ಸೂಚ್ಯವಾಗಿ ಹೇಳಿದ್ದಾರೆ ಎಂದೆನಿಸುತ್ತದೆ.

ಪ್ರೊ. ಜಿ ಎ. ತಿಗಡಿ ಸವದತ್ತಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿಶ್ವ ಶಾಂತಿಗೆ ಕುವೆಂಪು ಚಿಂತನೆಗಳೇ ದಾರಿದೀಪ : ಡಾ. ಭೇರ್ಯ ರಾಮಕುಮಾರ್

ಇಂದು ವಿಶ್ವವನ್ನು ಕಾಡುತ್ತಿರುವ ಹಿಂಸೆ, ಭಯೋತ್ಪಾದನೆ, ಯುದ್ಧಗಳ ನಿವಾರಣೆಗೆ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವವೊಂದೇ ಪರಿಹಾರ ಎಂದು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group