ನಮ್ಮ ಗುಬ್ಬಚ್ಚಿಗಳ ದಿನ ಬಂತು. ಆ ಗುಬ್ಬಚ್ಚಿಗಳು ಇಂದು ಎಲ್ಲೋ ಅಪರೂಪವಾಗಿ ಅಡಗಿ ಹೋಗಿದ್ದರೂ ಹೃದಯದಲ್ಲಿನ ಗುಬ್ಬಚ್ಚಿ ತಾನೇ ಕುಣಿ ಕುಣಿದು ನೂರಾರು ಗುಬ್ಬಚ್ಚಿಗಳೆಂಬ ವಿವಿಧಾಕಾರಗಳನ್ನು ತಳೆದ ಅನುಭಾವ ಉಂಟಾಗುತ್ತಿದೆ.
ನಾವು ಪುಟ್ಟವರಿದ್ದಾಗ ನಾವು ಇದ್ದ ಹೆಂಚಿನ ಮನೆಗಳ ತೊಲೆಗಳ ಮೇಲೆ ಅದೆಷ್ಟು ಚೆನ್ನಾಗಿ ಬಂದು ಆಟ ಆಡಿ ಹೋಗೋದು. ಅಕ್ಕ ಪಕ್ಕದಲ್ಲಿದ್ದ ಸೀಬೆ ಕಾಯಿ ಮರ ಹಾಗೂ ಬಾವಿ ಕಟ್ಟೆ ಬಳಿಗಳಲ್ಲಿ ಎಷ್ಟು ಚೆನ್ನಾಗಿ ಕಿಚಿ ಕಿಚಿಗುಟ್ಟುತ್ತಾ ಇತ್ತು. ಅಲ್ಲಲ್ಲಿ ನಿಂತ ರಸ್ತೆ ಬದಿಯ ಪುಟ್ಟ ಪುಟ್ಟ ಹಳ್ಳಗಳಲ್ಲಿ ಎಷ್ಟು ಚಂದದಿಂದ ಸ್ನಾನ ಮಾಡಿ ಹೋಗ್ತಾ ಇತ್ತು. ಮನೆಯಲ್ಲಿ ಮೆತ್ತಗೆ ಕದ್ದು ತೆಗೆದು ಒಂದಿಷ್ಟು ಕಾಳುಗಳನ್ನು ಉದುರಿಸಿದಾಗ ಗುಬ್ಬಚ್ಚಿಗಳು ಕುಣಿ ಕುಣಿದು ಬಂದು ಒಂದೆರಡು ಕಾಳು ಹೆಕ್ಕಿ ಹೋದರೆ ಏನು ಸಂತೋಷ ಆಗ್ತಾ ಇತ್ತು.
ಈಗ ಗುಬ್ಬಚ್ಚಿ ನೋಡ್ಬೇಕು ಅಂದ್ರೆ ಯಾವುದಾದರೂ ಪಾರ್ಕಿಗೆ ಬಿಸಿಲು ಇಲ್ಲದ ಸಮಯದಲ್ಲಿ ಮಾತ್ರವೇ ಹೋಗ್ಬೇಕು. ಈ ಫ್ಲಾಟ್ ಮನೆಗಳ ಒಳಗೆ ನಾವು ಬರೋದೇ ಕಷ್ಟ. ಇನ್ನು ಗುಬ್ಬಚ್ಚಿ ಬರುತ್ತಾ ???? ಗುಬ್ಬಚ್ಚಿ, ಕಾಗೆ, ಪಾರಿವಾಳ ಬಂದು ಗಲೀಜು ಮಾಡಿಬಿಟ್ಟೀತು ಅಂತ ಕಬ್ಬಿಣದ ಬೇಲಿ ಕೂಡಾ ನಮ್ಮ ಜನ ಹಾಕಬೇಕಾದ್ರೆ ನಮ್ಮ ಬಳಿ ಬರಬೇಕು ಅಂತಾ ಆದ್ರೂ ಈ ಗುಬ್ಬಚ್ಚಿಗಳಿಗೆ ಹೇಗೆ ಅನ್ನಿಸೀತು???
ಇನ್ನು ಮೊಬೈಲ್ ಹಾವಳಿ ಬೇರೇ ಅಂತಾನೂ ಅಭಿಪ್ರಾಯ ಇದೆ. ಪಾಪ ನಮ್ಮ ಪುಟ್ಟು ಗುಬ್ಬಚ್ಚಿಗಳು ಏನು ಮಾಡಿದ್ವು ಈ ಮೊಬೈಲ್ ಸಂಶೋಧಕರಿಗೆ. ಜೀವನದಲ್ಲಿ ಗುಬ್ಬಚ್ಚಿ ತರಹ ಸಾಧಾರಣವಾಗಿ, ಇರುವುದರಲ್ಲಿ ಸಂತೋಷವಾಗಿ ಕುಣಿ ಕುಣಿದು ಕುಪ್ಪಳಿಸೋದನ್ನ ಹಾಳು ಮಾಡೋದೇ ಈ ‘some’ಶೋಧಕರ ಕೆಲಸ. ನಾವೂ ಸರೀ ಇದ್ದೇವೆ. ಈ ಮೊಬೈಲ್ ಹಿಡ್ಕೊಂಡು ದಿನವೆಲ್ಲಾ ಬಾಯಿ ಬಡ್ಕೋತಾ ಇದ್ರೆ ಯಾವ ಪಕ್ಷಿಗೆ ತಾನೇ ಹಾಡೋಕೆ, ಕುಣಿಯೋಕೆ ಮನಸ್ಸು ಬರುತ್ತೆ.
ಈಗ್ಲೂ ಒಮ್ಮೊಮ್ಮೆ ನಮ್ಮ ಪಕ್ಕದ ಕಾಂಪೌಡಿನಲ್ಲಿ ದಟ್ಟವಾಗಿ ಹರಡಿರುವ ಪೊದೆಗಳಲ್ಲಿ ಒಂದೆರಡು ಗುಬ್ಬಚ್ಚಿಗಳು ಆಗಾಗ ಕಿಚ್ ಕಿಚ್ ಅಂದು ಹೋಗುತ್ತ್ವೆ. ಆದರೆ ಅವೂ ಅಷ್ಟೇ, ನಮ್ಮ ಅಕ್ಕಪಕ್ಕದ ಬಾಗಿಲು ತೆರೆಯದೇ ಇರೋ ಫ್ಲಾಟಿನ ಮೇಲ್ವರ್ಗದ ಜನದ ತರ ನನ್ನ ಕಡೆ ನೋಡಿಯೇ ಇಲ್ವೇನೋ ಅನ್ನೋ ತರ ಹೊರಟುಹೋಗುತ್ತೆ.
ಪುಟ್ಟ ವಯಸ್ಸಲ್ಲಿ ಅನಿಸುತ್ತಾ ಇತ್ತು. ಎಷ್ಟು ಚೆನ್ನಾಗಿ ಒಂದು ಚೂರು ಪಾರು ಗುಳುಂ ಮಾಡಿಕೊಂಡು ಆಟ ಆಡಿಕೊಂಡು ಬದುಕು ನಡೆಸುತ್ವೆ ಈ ಗುಬ್ಬಚ್ಚಿಗಳು, ನಮ್ಮ ಹಾಗೆ ಹೊಡಿಸ್ಕೊಂಡು, ಓದಲಿಲ್ಲ ಅಂತ ಬಯ್ಯಿಸಿಕೊಂಡು, ಸ್ಕೂಲು ಗೀಲು ಅಂತ ತಾಪತ್ರಯ ಇಲ್ಲದೆ ಎಷ್ಟು ಚೆನ್ನಾಗಿರುತ್ತೆ ಅಲ್ವ ಹಾಗಿದ್ರೆ ಅನ್ನಿಸ್ತಿತ್ತು. ಚಾನ್ಸ್ ಸಿಕ್ಕಿದರೆ ಇಂದೂ ಹಾಗಿರಬೇಕು ಅನ್ಸುತ್ತೆ. ಅದೆಲ್ಲಾ ಆಗುತ್ಯೆ???
ಅದೆಲ್ಲಾ ಏನೇ ಇರಲಿ, ಇದ್ದರೆ ಹೀಗಿರಬೇಕು, ನಲಿ ನಲಿಯುತ್ತಾ, ಸಾಧಾರಣವಾಗಿ, ಸಾಮಾನ್ಯವಾಗಿ, ಸಂತೋಷವಾಗಿ, ಎಲ್ಲರೊಳಗೊಂದಾಗಿ ಎಂದು ಜೀವನದಲ್ಲಿ ಅನಿಸುವಂತೆ ಮಾಡಿದ ಈ ಗುಬ್ಬಚ್ಚಿಗಳನ್ನು ಹೇಗೆ ತಾನೇ ಮರೆಯಲಿಕ್ಕೆ ಸಾಧ್ಯ.
ಕೇಳಿಸುತ್ತಿಲ್ಲ ಗುಬ್ಬಚ್ಚಿ ಚಿಲಿಪಿಲಿ
ಬೆಳೆಯುತ್ತಲೇ ಇರುವ ತಂತ್ರಜ್ಞಾನದ ನಾಗಾಲೋಟಕ್ಕೆ ಗುಬ್ಬಚ್ಚಿ ಸಹಿತ ಅನೇಕ ಜೀವ ಸಂಕುಲಗಳು ನಮ್ಮ ಜೀವನದಿಂದ ಕಣ್ಮರೆಯಾಗುತ್ತಿವೆ. ನಗರೀಕರಣ ಹೆಚ್ಚಾದಂತೆ ಮೊಬೈಲ್ ಟವರ್‌ಗಳು ಸೂಸುವ ವಿಕಿರಣದ ಪ್ರಭಾವಕ್ಕೆ ಒಳಗಾಗಿ ಇದೀಗ ಗುಬ್ಬಚ್ಚಿಗಳು ಸ್ವಚ್ಛಂದವಾಗಿ ಮನೆಯಂಗಳದಲ್ಲಾಡುವ ದೃಶ್ಯ ಸಂಪೂರ್ಣವಾಗಿ ಮಾಸಿದೆ. ಅಲ್ಲೊಂದು ಇಲ್ಲೊಂದು ಕಾಣುವ ಈ ಗುಬ್ಬಚ್ಚಿಗಳು ಮನುಷ್ಯ ಕಣ್ಣುಗಳಿಂದ ತಪ್ಪಿಸಿಕೊಂಡು ಓಡಾಡುತ್ತಿರುವಂತೆ ಭಾಸವಾಗುತ್ತಿದೆ.
ಗುಬ್ಬಚ್ಚಿಗಳಿಲ್ಲದ ಮನೆ ಇಲ್ಲ ಎಂಬ ಮಾತು ಸುಮಾರು 20 ವರ್ಷಗಳ ಹಿಂದೆಯೂ ಚಾಲ್ತಿಯಲ್ಲಿತ್ತು. ಪ್ರತಿ ಮನೆಯಂಗಳಗಳಲ್ಲಿ, ಪೇಟೆ ಬೀದಿಯ ಅಂಗಡಿಗಳ ಮುಂಭಾಗದಲ್ಲಿ ಗುಬ್ಬಚ್ಚಿಗಳ ಚಿಲಿಪಿಲಿ ಕೇಳುತ್ತಲೇ ಇತ್ತು. ಅವುಗಳ ಪುಕ ಪುಕ ಓಡಾಟಗಳೊಂದಿಗೆ ಬಾಲ್ಯದಲ್ಲಿ ಅದೆಷ್ಟೋ ಕ್ಷಣಗಳನ್ನು ಅನುಭವಿಸುವ ಮಜಾ ಮಕ್ಕಳಿಗಿತ್ತು. ಆದರೆ ಮನೆಯ ಸದಸ್ಯರಂತೆಯೇ ಹಾರಾಡಿಕೊಂಡು, ಚಿಲಿಪಿಲಿ ಎನ್ನುತ್ತಿದ್ದ ಪುಟ್ಟ ಪುಟ್ಟ ಗುಬ್ಬಚ್ಚಿಗಳನ್ನೂ ಸಹ ಇಂದಿನ ಮಕ್ಕಳಿಗೆ ಸಿಂಹ, ಹುಲಿ ಎಂದು ಚಿತ್ರಗಳನ್ನು ತೋರಿಸುವ ಸಾಲಿಗೆ ಗುಬ್ಬಚ್ಚಿಗಳು ಸೇರಿರುವುದು ಬೇಸರದ ಸಂಗತಿ. ಜೀವ ಸಂಕುಲದ ಉಳಿವಿನ ಕುರಿತು ಜಾಗೃತಿ ಮೂಡಿಸುವ ಹಾಗೂ ಅವುಗಳಿಗಾಗುತ್ತಿರುವ ಭೀತಿಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಮಾ.20 ರಂದು ವಿಶ್ವ ಗುಬ್ಬಚ್ಚಿಗಳ ದಿನವಾಗಿ ಆಚರಿಸಲಾಗುತ್ತಿದೆ.
ಬೆಳೆಯುತ್ತಲೇ ಇರುವ ತಂತ್ರಜ್ಞಾನದ ನಾಗಾಲೋಟಕ್ಕೆ ಗುಬ್ಬಚ್ಚಿ ಸಹಿತ ಅನೇಕ ಜೀವ ಸಂಕುಲಗಳು ನಮ್ಮ ಜೀವನದಿಂದ ಕಣ್ಮರೆಯಾಗುತ್ತಿವೆ. ನಗರೀಕರಣ ಹೆಚ್ಚಾದಂತೆ ಮೊಬೈಲ್ ಟವರ್‌ಗಳು ಸೂಸುವ ವಿಕಿರಣದ ಪ್ರಭಾವಕ್ಕೆ ಒಳಗಾಗಿ ಇದೀಗ ಗುಬ್ಬಚ್ಚಿಗಳು ಸ್ವಚ್ಛಂದವಾಗಿ ಮನೆಯಂಗಳದಲ್ಲಾಡುವ ದೃಶ್ಯ ಸಂಪೂರ್ಣವಾಗಿ ಮಾಸಿದೆ. ಅಲ್ಲೊಂದು ಇಲ್ಲೊಂದು ಕಾಣುವ ಈ ಗುಬ್ಬಚ್ಚಿಗಳು ಮನುಷ್ಯ ಕಣ್ಣುಗಳಿಂದ ತಪ್ಪಿಸಿಕೊಂಡು ಓಡಾಡುತ್ತಿರುವಂತೆ ಭಾಸವಾಗುತ್ತಿದೆ.
ಮುಷ್ಟಿಯಲ್ಲಿಡುವಷ್ಟು ಗಾತ್ರದ ಈ ಗುಬ್ಬಚ್ಚಿಗಳು ತನ್ನ ಸಂಸಾರವನ್ನು ಜತನದಿಂದ ಕಾಯುತ್ತಿರುವುದು ಮನುಷ್ಯನಿಗೂ ಜೀವನ ಪಾಠವನ್ನು ಕಲಿಸುವಂತಿದೆ. ಕಿ.ಮೀ.ದೂರ ಹಾರಿಯೂ ಸಣ್ಣಪುಟ್ಟ ಕಸ ಕಡ್ಡಿಗಳನ್ನು ಹೆಕ್ಕಿಕೊಂಡು ಬೆಚ್ಚನೆಯ ಗೂಡು ನಿರ್ಮಿಸಿ, ತನ್ನ ಮಕ್ಕಳಿಗೆ ಆಹಾರವನ್ನು ಅರಸಿ ತಂದು ತುತ್ತು ತಿನ್ನಿಸುವ ದೃಶ್ಯಗಳು ಇಂದು ಗೋಚರಿಸದೇ ಇರುವುದು ಆಧುನಿಕ ಲಾಲಸೆಗೊಳಗಾದ ಮನುಷ್ಯ ಜೀವ ಸಂಕುಲಕ್ಕೆ ಮಾಡಿದ ಮಹಾ ಅನ್ಯಾಯ ಎನ್ನಿಸಿದೆ.
ಪ್ರಕೃತಿ ಸೌಂದರ್ಯವನ್ನು ಮರೆತ ಆಧುನಿಕ ನಾಗರಿಕ , ಪ್ಲಾಸ್ಟಿಕ್‌ನ ವಿಪರೀತ ಬಳಕೆ ಹಾಗೂ ತಾಂತ್ರಿಕ ಬದುಕಿಗೆ ಜೋತು ಬಿದ್ದ ಮನುಷ್ಯರಿಂದಾಗಿ , ಪ್ಯಾಕೆಟ್ ಆಹಾರ, ಕೃಷಿಯಲ್ಲಿ ಕೀಟನಾಶಕಗಳ ಸಿಂಪಡನೆಯಿಂದಾಗಿ ಗುಬ್ಬಚ್ಚಿಗಳಿಗೆ ಸರಿಯಾದ ಆಹಾರದ ಕೊರತೆಯಿಂದ ಅವುಗಳ ಸಂಖ್ಯೆ ಗಣನೀಯವಾಗಿ ಕುಸಿಯಲು ಕಾರಣವಾಗಿದೆ. ಗಗನಚುಂಚಿ ಕಟ್ಟಡಗಳು, ಹಂಚಿನ ಬದಲು ಕಾಂಗ್ರೀಟಿನ ಮನೆಗಳಿಂದಾಗಿ ಗುಬ್ಬಚ್ಚಿಗಳಿಗೆ ವಾಸಿಸಲು ಗೂಡು ಕಟ್ಟಿಕೊಳ್ಳಲಾಗದ ಹಿನ್ನೆಲೆಯಲ್ಲಿ ಗುಬ್ಬಚ್ಚಿಗಳು ಬಿಸಿಲು, ಮಳೆ, ಗಾಳಿಗೆ ತತ್ತರಿಸುತ್ತಿದ್ದು, ಅಳಿವಿನಂಚಿಗೆ ಸಾಗಲು ಕಾರಣವಾಗಿದೆ.
ಗುಬ್ಬಚ್ಚಿಗಳ ನಿಮ್ಮನ್ನು ತುಂಬಾ ಮಿಸ್ ಮಾಡ್ಕೋತೀನಿ. ನಿಮ್ಮ ಜೊತೆ ಮುಂಬರುವ ದಿನಗಳಲ್ಲಿ ಸಹಾ ಖುಷಿಯಿಂದ ಅಡ್ಡಾಡುವ ಸಂತಸವನ್ನು ಎದುರು ನೋಡುತ್ತೇನೆ. ನಿಮ್ಮ ಸರಳ, ಸುಕೋಮಲ, ಸಂತಸತನವೇ ನನ್ನ ಬದುಕಿನ ರೀತಿ ನೀತಿಯೂ ಆಗಲಿ ಎಂದು ಆಶಿಸುತ್ತೇನೆ. ಗುಬ್ಬಚ್ಚಿಗಳೇ ನಿಮ್ಮ ಸಂಖ್ಯೆ ಕೋಟಿ ಕೋಟಿಯಾಗಲಿ.
ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ