spot_img
spot_img

ಹೊಸ ವರ್ಷಕೆ ಹೊಸ ಭಾಷ್ಯ ಬರೆಯಿರಿ

Must Read

spot_img
- Advertisement -

ಹೌದು! ನೋಡ ನೋಡುತ್ತಲೇ ವರ್ಷ ಉರುಳಿ ಮತ್ತೆ ಹೊಸ ವರ್ಷದ ಹಾದಿಯಲ್ಲಿ ಸಾಗುತ್ತಲೇ ಇರುತ್ತೇವೆ. ವರ್ಷದ ಹರ್ಷ ಎಲ್ಲರ ಮನ ಮನೆಗಳಲ್ಲೂ ಮನೆಮಾಡಲಿ. ಹಾಗೆ ನೋಡಿದರೆ ಹಿಂದೂಗಳೆಲ್ಲ ಹೊಸ ಚಿಗುರಿನ ವಸಂತವಾದ ಯುಗಾದಿಯೇ ನಮ್ಮ ಪಾಲಿಗೆ ಹೊಸ ವರ್ಷ ಎನ್ನುವುದುಂಟು. ಇನ್ನು ಕಳೆದ ವರ್ಷ ಮರಳುವುದಿಲ್ಲ ಬರುವ ಹೊಸ ವರ್ಷ ನಮ್ಮ ಪಾಲಿಗೆ ಅದೃಷ್ಟವನ್ನು ಹೊತ್ತು ತರಲೆಂದು ಭಗವಂತನಲ್ಲಿ ಪ್ರಾರ್ಥನೆ ಅಬ್ಬಾ ಎಷ್ಟೊಂದು ಸಡಗರ. ಈ ಹಬ್ಬಗಳೇ ಹಾಗೆ ನಮ್ಮೆಲ್ಲರ ಪಾಲಿಗೆ ಅವುಗಳಿಗೊಂದು ಹೆಸರು ಆದರೆ ಅದರ ಹಿಂದೆ ನಿಜವಾಗಿಯೂ ಇರುವುದು ಏನೆಂದರೆ ಎಲ್ಲಿಯೋ ದುಡಿಮೆ ಹರಸಿ, ಪರ ಊರಲ್ಲಿ ಉದ್ಯೋಗಗೈಯುತ್ತಾ, ತನ್ನವರಿಂದ ಕಣ್ಣಿಗೆ ದೂರವಾಗಿ ಇನ್ನೆಲ್ಲೋ ಬದುಕು ಸವೆಸುವ ಜೀವಗಳೆಲ್ಲವೂ ಒಟ್ಟುಗೂಡುವ ಸಂಭ್ರಮವೇ ಹಬ್ಬ. ಎಲ್ಲರ ಬದುಕಿನಲ್ಲಿ ಸುಖ ದುಃಖಗಳು ಕೇಳದೆ ಬಂದು ಹೋಗುವ ಬಂಧುಗಳು. ಸೀಸನ್ ಬದಲಾಗುವಂತೆ ಖುಷಿ ದುಃಖಗಳು ಬದಲಾವಣೆಯ ಹೊಸ ಹಾದಿಯನ್ನು ತೆರೆಯುತ್ತಲೇ ಇರುತ್ತವೆ ಅವುಗಳನ್ನು ಅಪ್ಪಿ ಒಪ್ಪಿ ನಡೆಯಲೇಬೇಕು. ಮನೆಯ ಮೂಲೆ ಒಂದರಲ್ಲಿ ಕುಳಿತ ಹಿರಿ ಜೀವಗಳು ನಮ್ಮವರು ಈಗ ಬಂದಾರು, ಆಗ ಬಂದಾರೆಂದು ಆಸೆಕಂಗಳಿಂದ ಕಾಯುತ್ತಿದ್ದಾರೆ. ಆ ಜೀವಗಳನ್ನು ಹೇಗಿದೀರಾ ಅಂದ್ರೆ ಸಾಕು ಮತ್ತಿನ್ನೇನು ಬೇಡ ಹೂಂ ಅನ್ನುತ್ತಲೇ ಏನೇ ನೋವಿದ್ದರೂ ಮರೆತು ಹಾಯಾಗಿದೀವಿ ಅಂತ ಒಳಗೊಳಗೇ ಖುಷಿಪಡುತ್ತವೆ.

ಯುಗಾದಿ ಅಂದರೆ ಯುಗದ ಹಾದಿ. ಹೊಸ ಚಿಗುರು ಚಿಗುರುವ ಹೊಸ್ತಿಲಿನಲ್ಲಿ, ಪ್ರಕೃತಿ ಹಸಿರೊದ್ದು ನಿಂತಿರುವುದನ್ನು ನೋಡಲು ಎರಡೂ ಕಂಗಳು ಸಾಲವು. ಕೋಗಿಲೆಗಳ ಇಂಪಾದ ದ್ವನಿಗೆ ಕಿವಿಗೊಡುತ್ತಾ, ನಮ್ಮವರೊಟ್ಟಿಗೆ ಸಂಭ್ರಮದಿಂದ ಮನೆಯೆಲ್ಲಾ ಗದ್ದಲದಿಂದ ಕೂಡಿದ್ದರೆ ಅರೆ ಸ್ವರ್ಗನೇ ಮನೇಲಿದೆ ಅನ್ನುವಷ್ಟು ಖುಷಿ. ಎಲ್ಲಿದ್ದವರು ಹಬ್ಬಕ್ಕೆ ಹಾಜರಿ. ಇನ್ನು ಹಬ್ಬಕ್ಕೆ ಎರಡು ದಿನಗಳಿಗೂ ಮುನ್ನ ಮನೆಯ ಸ್ವಚ್ಛತೆ,ಅಲಂಕಾರ,ಹಬ್ಬಕ್ಕೆ ಬೇಕಾದ ತಯಾರಿ, ಹಿರಿ ಜೀವಗಳು ಅಲ್ಲೆಲ್ಲೋ ಕುಳಿತು ಇದನ್ನ ಹಾಗೆ ಮಾಡು ಅದನ್ನ ಹೀಗೆ ಮಾಡು, ನಮ್ಮ ಮನೆಯಲ್ಲಿ ಪಾರಂಪರಿಕವಾಗಿ ಹೀಗೆ ನಡ್ಕೊಂಡು ಬಂದಿದೀವಿ, ಹಾಗೆ ಮಾಡಬೇಕು ಅಂತೆನೇನೋ ಹೇಳ್ತಿದ್ರೆ ಅದನ್ನ ಕೇಳೋಕೆ ಒಂದು ಚಂದ. ಪ್ರತಿ ಆಚರಣೆಗಳ ಹಿಂದೆ ಒಂದರ್ಥ, ಪ್ರತಿ ಮಾತಿನ ಹಿಂದೊಂದು ಮೌಲ್ಯ, ಪಾರಂಪರಿಕತೆ ಸಾಗುವಿಕೆಯ ಹಿಂದಿನ ನಡೆದು ಬಂದ ಚಹರೆ ಹೌದು ಬದುಕಿನಲ್ಲಿ ಏನೆಲ್ಲಾ ಮಾಡಿದರು ನಾವು ನಮ್ಮ ಸಂತೋಷಕ್ಕೆ, ನಮಗಾಗಿ ಮಾಡ್ತೀವಿ ಅನ್ನೋದಾದರೆ ಕೊಂಚ ನಮ್ಮವರು ನಡೆದು ಬಂದ ದಾರಿಯನ್ನು ನೆನಪಿಸಿಕೊಳ್ಳಲೇಬೇಕಲ್ಲವೇ. ಏನೆಲ್ಲಾ ಬದಲಾದರೂ ಬಹುತೇಕರಲ್ಲಿ ಕೆಲವರು ಇಂತಹ ಹಬ್ಬ, ಹರಿದಿನ, ಸಂಭ್ರಮಗಳೊಂದಿಗೆ ರಾಜಿಮಾಡಿಕೊಳ್ಳದೆ ಅವುಗಳನ್ನು ಉಳಿಸಿಕೊಂಡು ಹೋಗುತ್ತಿರುವುದು ಕೂಡ ಒಂದು ಸಾಹಸವೇ ಸರಿ.

ಈ ಹಬ್ಬಗಳೇ ಹಾಗೆ, ಪ್ರಾದೇಶಿಕತೆಗೆ ಅನುಗುಣವಾಗಿ ಹಬ್ಬ ಆಚರಿಸುವುದುಂಟು. ಈ ಯುಗಾದಿಯನ್ನು ಆಚರಿಸುವುದು, ಹೊಸವರ್ಷವೆಂದು ಭಾವಿಸುವುದು ಏಕೆಂದರೆ ಬ್ರಹ್ಮ ದೇವರು ಈ ದಿನ ಮಾನವಕುಲ ಸೃಷ್ಟಿ ಮಾಡಿದರೆಂಬ ನಂಬಿಕೆ ಜನರಲ್ಲಿದೆ. ಯುಗಾದಿ ಅಮಾವಾಸ್ಯೆ ಪ್ರಾರಂಭದ ದಿನವೇ ಮನೆಯಲ್ಲಿ ಸಂಭ್ರಮ ಸಡಗರ, ಹಬ್ಬದ ತಯಾರಿ ಜೋರೆ ಜೋರು. ಅಮಾವಾಸ್ಯೆ ಆದ ಮಾರನೇ ದಿನ ವಿಶೇಷವಾಗಿರುತ್ತದೆ.

- Advertisement -

ಬೇವು-ಬೆಲ್ಲ
ಬದುಕಿನುದ್ದಕ್ಕೂ ನೊಂದು ಬೆಂದ ಜೀವಗಳು, ಅದರಲ್ಲೂ ಕೃಷಿ ಚಟುವಟಿಕೆಗಳು ಮುಗಿದು ದವಸ ಧಾನ್ಯಗಳನ್ನು ಪೂಜಿಸುವ ಈ ಹಬ್ಬವು ಸುಗ್ಗಿಯಂತೆಯೇ ಸಂಭ್ರಮ ಹೊಂದಿದ್ದು ಅವರೊಂದಿಗೂ ವಿಶೇಷ ನಂಟನ್ನು ಹೊಂದಿದೆ. ಬೇವು-ಬೆಲ್ಲ ಸವಿಯುವ ಮುನ್ನ ಮುಂಜಾನೆಯೇ ಎಲ್ಲರೂ ಎಣ್ಣೆ ಹಚ್ಚಿಕೊಂಡು ಬೇವಿನ ಎಲೆಗಳನ್ನು ನೀರಿಗೆ ಬೆರೆಸಿ ಸ್ನಾನ ಮಾಡಿ ಮಡಿಯಿಂದ ಹೊಸಬಟ್ಟೆ ಧರಿಸಿ ಎಲ್ಲರೂ ಸೇರಿ ಮಾವಿನ ಎಲೆಗಳನ್ನು ಏರಿಸಿ ಮನೆಯ ಬಾಗಿಲುಗಳಿಗೆಲ್ಲ ತೋರಣ ಕಟ್ಟಿ ಮಾವು ಬೇವಿನ ಎಲೆಗಳನ್ನು ಎಡ ಮತ್ತು ಬಲಭಾಗಕ್ಕೆ ಕಟ್ಟಿ ಸಂಭ್ರಮಿಸುತ್ತಾರೆ. ಆ ದಿನ ದೇವರಿಗೆ ಅಭಿಷೇಕಗೈದು ಪೂಜಿಸಿ ಜಂಗಮರನ್ನು ಮನೆಗೆ ಆಹ್ವಾನಿಸಿ ಪೂಜೆ-ಪುನಸ್ಕಾರಗೈದು ಜಂಗಮ ತೃಪ್ತಿಗೊಂಡರೆ ಮುಕ್ಕೋಟಿ ದೇವತೆಗಳು ತೃಪ್ತಗೊಂಡಂತೆ ಎಂಬ ನಂಬಿಕೆಯಿಂದ ಶಿವಸ್ವರೂಪಿ ಎಂದು ಪೂಜಿಸುವ ಜಂಗಮನ ಆಶೀರ್ವಾದ ಪಡೆದು ಮನೆಯಲ್ಲಿನ ದವಸ ಧಾನ್ಯವನ್ನು ಅವರಿಗೆ ಕಾಣಿಕೆ ನೀಡಿ ಬೇವು-ಬೆಲ್ಲವನ್ನು ದೇವರಿಗೆ ನೈವೇದ್ಯ ಮಾಡುತ್ತಾರೆ. ಆ ದಿನ ಗುರುವಯ್ಯ ಎನಿಸಿಕೊಂಡವರು ಶಂಖ ಹಿಡಿದು ಬಂದು ಪ್ರತಿ ಮನೆಗಳಲ್ಲೂ ಕಾಳು-ಕಡಿಗಳನ್ನು ಪಡೆದು ಶಂಖ ಊದುತ್ತಾರೆ. ದವಸ ಧಾನ್ಯವನ್ನು ದಾನದ ರೂಪವಾಗಿ ಕೊಟ್ಟರೆ ನಮಗೆ ಅಂಟಿದ್ದ ಕಷ್ಟ ಕಾರ್ಪಣ್ಯಗಳು ಕಳೆಯುತ್ತವೆ ಎಂಬ ನಂಬಿಕೆ ಮತ್ತು ಶಂಖದ ಶಬ್ದಕ್ಕೆ ಮನೆಯಲ್ಲಿನ ಕೆಟ್ಟ ಶಕ್ತಿಗಳೇನಾದರೂ ಇದ್ದರೂ ತೊಲಗುತ್ತವೆ ಎಂಬ ನಂಬಿಕೆ ಜನರದು. ನಂತರ ನೀರು ಬೇವು ಎಂದು ಮಾವು, ಹಣ್ಣುಗಳ ಮಿಶ್ರಣ, ಹುಣಸೆ ಹುಳಿ ಸಿಹಿ ಬೇವು ಬೆರೆಸಿ ಒಬ್ಬರಿಗೊಬ್ಬರು ಯುಗಾದಿಯ ಶುಭ ಕೋರುತ್ತಾರೆ. ಅಷ್ಟು ಮಾತ್ರವಲ್ಲ ವಂಶಪಾರಂಪರಿಕವಾಗಿ ಕೆಲವರು ಅನೇಕ ಕಾರಣಗಳಿಂದ ಈ ಹಬ್ಬವನ್ನು ಮಾಡುವುದಿಲ್ಲ ಅಂತವರಿಗೆ ಹಬ್ಬ ಮಾಡಿದವರು ಬೇವು ಕೊಡುವ ವಾಡಿಕೆ ಇದೆ. ಇದನ್ನು ಗಮನಿಸಿದರೆ ನೆರೆಹೊರೆಯವರ ಬಾಂಧವ್ಯವನ್ನು ಬೆಸೆಯುವ ಹಬ್ಬವಾಗಿಯೂ ಕಂಡುಬರುತ್ತದೆ.

ಇನ್ನು ಈ ಯುಗಾದಿಯಲ್ಲಿ ವ್ಯವಸಾಯ(ಕೃಷಿ)ಮೊದಲು ಅಂತ ಹೊಸ ವರ್ಷದ ಈ ಯುಗಾದಿಯಲ್ಲಿ ಎಲ್ಲ ಕೆಲಸ ಕಾರ್ಯಗಳಿಗೂ ಶುಭ ಎಂದು ತಿಳಿದು ಹಳ್ಳಿಗಳಲ್ಲಿ ಈ ದಿನ ಎತ್ತುಕಟ್ಟಿ ವ್ಯವಸಾಯ ಹೂಡುವ ಶಾಸ್ತ್ರ ಮಾಡಿ ಒಂದೆರಡು ಸಾಲು ಕುಂಟೆ ಹೊಡೆದು ಭೂಮಿತಾಯಿಗೂ ಪೂಜೆ ಸಲ್ಲಿಸಿ ನಮ್ಮ ಸಂಭ್ರಮಕ್ಕೆಲ್ಲ ನಿಮ್ಮ ಪರಿಶ್ರಮ ಕಾರಣ ಎಂದು ಎತ್ತುಗಳಿಗೂ ಪೂಜಿಸಿ ಬೇವು-ಬೆಲ್ಲ ಪ್ರಸಾದ ಕೊಡುವ ವಾಡಿಕೆ ಇದೆ. ಎಷ್ಟು ಚಂದ ಅಲ್ವಾ. ವರ್ಷವಿಡೀ ನಮ್ಮ ಜೊತೆಗಿದ್ದು ನಮಗಾಗಿ ಶ್ರಮಿಸುವ ಎತ್ತುಗಳನ್ನು ಸ್ಮರಿಸುವ ಸುಂದರ ಕ್ಷಣಗಳು ಇಲ್ಲಿ ಕಾಣಸಿಗುತ್ತವೆ.

ಯುಗಾದಿ ಚಂದಿರ
ಹೌದು ಬೇವು-ಬೆಲ್ಲ ಅಂದ್ರೆ ಬದುಕಿನಲ್ಲಿ ಬರುವ ಸಿಹಿ-ಕಹಿಗಳನ್ನು ಸರಿದೂಗಿಸಿಕೊಂಡು ಹೋಗುವ ಬಲ ನೀಡೆಂದು ದೇವರಲ್ಲಿ ಎಲ್ಲರೂ ಪ್ರಾರ್ಥಿಸಿದ ನಂತರ ಬೇವು ಹಂಚಿ ಆ ದಿನ ಬೇವು ಬೆಲ್ಲ ಸವಿಯುತ್ತಾರೆ. ಇನ್ನು ಗೋಧೂಳಿ ಸಮಯದಿಂದಲೇ ಎಲ್ಲರೂ ಆಕಾಶದತ್ತ ಕಣ್ಣು ಹಾಯಿಸಿ ಚಂದ್ರನನ್ನು ಹುಡುಕುತ್ತಾರೆ. ಯುಗಾದಿಯಲ್ಲಿ ಚಂದ್ರನನ್ನು ನೋಡುವುದು ಸಹ ಒಂದು ಸಂಭ್ರಮವಾಗಿದೆ. ಇದಕ್ಕೆ ಒಬ್ಬೊಬ್ರು ಒಂದೊಂದು ರೀತಿಯಲ್ಲಿ ಕಥೆಗಳನ್ನ ಹೇಳುವುದುಂಟು.

- Advertisement -

ಚಂದಿರ ಹಾಲಿನಂತೆ ಹೊಳೆಯುತ್ತಾನೆ. ಅಮ್ಮ ಎಷ್ಟೋ ಬಾರಿ ಅವನನ್ನು ತೋರಿಸಿ ತುತ್ತಿಟ್ಟ ಕ್ಷಣಗಳು ಪ್ರತಿಯೊಬ್ಬರಿಗೂ ನೆನಪಿಗೆ ಬರುತ್ತಲೇ ಬರುತ್ತದೆ. ಕವಿಗಳು ತಮ್ಮ ಕವಿತೆಯಲ್ಲಿ ಚಂದ್ರನನ್ನು ಹಾಡಿ ಹೊಗಳಿ ಹೆಣ್ಣಿಗೆ ಹೋಲಿಸಿದ್ದು ಉಂಟು. ಇದಕ್ಕೆಲ್ಲಾ ಕಾರಣ ಚಂದ್ರನ ಪ್ರಕಾಶಮಾನವಾದ ಹೊಳಪು. ಎಷ್ಟೊಂದು ಬಾರಿ ಆತನನ್ನು ನೋಡಿದರೆ ಮನಸ್ಸಿಗೆ ಎಲ್ಲಿಲ್ಲದ ಸಂತೋಷವೆನಿಸುತ್ತದೆ. ಹಾಲೆ ಭೋರ್ಗರೆದು ಚಂದಿರನಾಗಿ ನಕ್ಕಂತೆ ಕಾಣಿಸುತ್ತದೆ. ಹೀಗಿರುವಾ ಚಂದಿರ ಒಮ್ಮೆ ಗಣೇಶ ಭಕ್ತರ ಮನೆಯಲ್ಲಿ ಉಂಡು ತನ್ನ ವಾಹನವಾದ ಇಲಿಯನೇರಿ ಹೋಗುತ್ತಿರುವಾಗ ಅವನನ್ನು ಕಂಡು ಹೊಟ್ಟೆ ಬಿರಿಯುವಷ್ಟು ತಿಂದು ಎಷ್ಟು ಡುಮ್ಮವಾಗಿದ್ದಾನೆ ಎಂದು ನೋಡಿ ನಕ್ಕಿದ್ದನಂತೆ. ಅದರಿಂದ ಬಲು ಕೋಪಗೊಂಡಂತಹ ಗಣೇಶನು ಚೌತಿಯ ದಿನದಂದು ನನ್ನನ್ನು ನೋಡದೆ ಯಾರಾದರೂ ನಿನ್ನನ್ನು ನೋಡಿದರೆ ಅವರಿಗೂ ಮತ್ತು ನಿನಗೂ ಶಾಪ ತಪ್ಪಿದ್ದಲ್ಲ ಎನ್ನುತ್ತಾನೆ ಗಣೇಶ. ಹಾಗಾಗಿ ವರ್ಷದ ಆರಂಭ ಸಂಭ್ರಮದಿಂದ ಕೂಡಿರಬೇಕು ವರ್ಷದುದ್ದಕ್ಕೂ ಯಾವುದೇ ಕಷ್ಟ ಕಾರ್ಪಣ್ಯಗಳು ಬಾಧಿಸದೆ ಸಂತೋಷವಾಗಿ ಇರಬೇಕು ಎಂದು ಜನರು ಯುಗಾದಿಯ ಪ್ರಾರಂಭದಲ್ಲಿ ಒಂದು ಗೆರೆಯಂತೆ ಕೊರೆದ ಚಂದಿರನನ್ನು ನೋಡುತ್ತಾರೆ. ನೋಡುವ ಮುನ್ನ ಗಣೇಶನ ಶಾಪಕ್ಕೆ ತುತ್ತಾಗಬಾರದೆಂದು ನೆಲದಲ್ಲಿ ಸಗಣಿ ಸಾರಿಸಿ ಒಂದು ಸಗಣಿಯ ಉಂಡೆಯನ್ನು ಮಾಡಿ, ಅದರೊಳಗೆ ಗಣೇಶನಿಗೆ ಪ್ರಿಯವಾದ ಗರಿಕೆಯನ್ನು ಇಟ್ಟು ಗಣೇಶನ ವಿಗ್ರಹವನ್ನು/ಫೋಟೋ ಇಟ್ಟು ಮೊದಲ ಪೂಜೆ ಗಣೇಶನಿಗೆ ಸಲ್ಲಿಸಿ ಗಣೇಶನ ಮುಖವನ್ನು ನೋಡಿ ನಂತರ ಚಂದ್ರನ ಚಿತ್ರವನ್ನು ರಂಗೋಲಿ ಯಲ್ಲಿ ಬರೆದು ಪೂಜಿಸಿ ನಿನ್ನಂತೆಯೇ ಪ್ರಕಾಶಮಾನವಾಗಿ ನಮ್ಮ ಬಾಳು ಬದುಕು ಬೆಳಗಲಿ ಎಂದು ಪೂಜಿಸಿ ಚಂದ್ರನನ್ನು ನೋಡಿ, ನೆರೆಹೊರೆಯವರಿಗೂ ತೋರಿಸಿ ಕಿರಿಯರು ಹಿರಿಯರಿಗೆ ಬನ್ನಿ ಪತ್ರೆ, ಹೂ, ಬಿಲ್ವಪತ್ರೆ ಕೊಟ್ಟು ಚಂದ್ರನನ್ನು ನೋಡಿದ್ರ ಎಂದು ಕೇಳುತ್ತಾ ಆಶೀರ್ವಾದ ಪಡೆಯುತ್ತಾರೆ. ಇದು ಹಳ್ಳಿಗಳಲ್ಲಿ ಇಂದಿಗೂ ಜೀವಂತವಾಗಿದೆ. ಇದು ನೆರೆಹೊರೆಯವರೊಂದಿಗೆ ಹೆಚ್ಚಿನ ಬಾಂಧವ್ಯವನ್ನು ರೂಢಿಸಿಕೊಳ್ಳಲು ಮತ್ತಷ್ಟು ಹಿಂಬು ನೀಡುವ ಹಬ್ಬವಾಗಿಯೂ ಕಂಡುಬರುತ್ತದೆ.

ಬಣ್ಣದ ನೀರೇರೆಚುವ ಆಚರಣೆ
ಮಾರನೇ ದಿನ ಬಣ್ಣದ ನೀರು ಕಲಿಸಿ ಭಾವನೆಗಳು ಬದುಕು ಬಣ್ಣವಲ್ಲ ಆದರೆ ಬದುಕಿನುದ್ದಕ್ಕೂ ರಂಗು ತುಂಬಲಿ ಎಂದು ಬಣ್ಣದ ನೀರನ್ನು ಹಾಕುವ ಮೂಲಕ ಹರೆಯ ಮಕ್ಕಳು ಸಂಭ್ರಮಿಸುತ್ತಾರೆ. ಅಷ್ಟು ಮಾತ್ರವಲ್ಲ ಮುದಿ ಜೀವಗಳಿದ್ದರೆ ಅವರ ತಲೆಯ ಮೇಲು ಒಂದು ಹನಿ ಬಣ್ಣದ ನೀರನ್ನ ಹಾಕಿಯೂ ನೀರು ಎರಚುವ ಹಬ್ಬವನ್ನು ಆಡುತ್ತಾರೆ. ಕೆಲವರಂತು ಮರೆಯಿಂದ ಎಲ್ಲಿಗಾದರೂ ಹೊರಟವರಿಗೂ ನೀರು ಎರಚಿ ಈಗ ಬಿಸಿಲು ಹೆಚ್ಚು ತಂಪಾಗತ್ತೆ ಎಂದು ಹೇಳುವ ಮೂಲಕ ಸಂಭ್ರಮಿಸುತ್ತಾರೆ. ಇನ್ನು ನೀರೆರಚುವುದು ಸಾಕೆಂದು ಒದ್ದೆ ಬಟ್ಟೆ ಬದಲಿಸಿ ತಮ್ಮ ಕೆಲಸದಲ್ಲಿ ತೊಡಗಿಕೊಂಡವರಿಗೆ ಬಿಂದಿಗೆ ತುಂಬಿ ಮರೆಮಾಚಿ ನೀರೆರಚಿ ನನಗೆ ನೀ ಎರಚಿದ್ದೆ ಅಲ್ವಾ ಎಂದು ತಿರುಗಿ ನೀರೆರೆಚಿ ಹೀಗೆ ಹಬ್ಬವನ್ನು ಜೀವಿಸುತ್ತಾರೆ.

ಅದೇನೇ ಇರಲಿ ಬದುಕೆಂಬ ಕಾದ ಬಾಣಲೆ ಮುಂದೆ ನಿಂತು ನೊಂದು ಬೆಂದ ಜೀವಗಳೆಲ್ಲವೂ ಈ ಹಬ್ಬದಲ್ಲಿ ಕೊಂಚ ವಿಶ್ರಾಂತಿ, ನಮ್ಮವರೆಲ್ಲರೂ ಸೇರಿದ್ದಾರೆ ಎಂಬ ಸಂಭ್ರಮ, ಎಲ್ಲರೂ ಒಟ್ಟಿಗೆ ಕುಳಿತು ಸವಿಯುವ ಭೋಜನ, ಹರಟೆ, ಹಾಡು, ಹಬ್ಬ, ಹಿರಿಯ ಜೀವಗಳ ನೆರಳಿನಲ್ಲಿ ಕುಳಿತು ಕಳೆಯುವ ಸಮಯ ಅಬ್ಬಬ್ಬ ಎಷ್ಟು ಖುಷಿ. ಬದುಕಿನುದ್ದಕ್ಕೂ ಕಷ್ಟ ನಷ್ಟ ಏನೆಲ್ಲಾ ನೋಡಿದ ಜೀವಗಳು ಈ ವಸಂತದ ಚಿಗುರಿನ ಸಮಯದಲ್ಲಿ ನಮ್ಮ ನಾಳೆಗಳಾದರೂ ಚಿಗುರುತ್ತವೆಂಬ ಆಸೆಯನ್ನೊತ್ತು ಬದುಕಿನ ಬಂಡಿಯನ್ನು ತೂಗಿಸುತ್ತವೆ. ಈ ಯುಗಾದಿಯು ಹೊಸ ಚೈತನ್ಯದಿಂದ ಕೂಡಿರಲಿ. ನೆಮ್ಮದಿಯ ನಾಳೆಗಳು ಸೃಷ್ಟಿಗೊಳ್ಳಲಿ. ಸೃಷ್ಟಿ ಸಡಗರಕೆ ಎಲ್ಲರೂ ಸಾಕ್ಷಿಯಾಗುವ ಹೊಸ್ತಿಲಲ್ಲಿ ಹೊಸ ಯೋಜನೆಗಳಿಗಾಗಿ ರೂಪುರೇಷೆ ತೆರೆದುಕೊಳ್ಳಲಿ. ಮುಂದಿನ ಹೊಸ ವರ್ಷ ಅಂದರೆ ಯುಗಾದಿಗೆ ನಿಮ್ಮ ಎಲ್ಲ ಯೋಜನೆಗಳು ಗೆಲುವು ಕಾಣಲಿ. ಈ ಹಬ್ಬಗಳೇ ಹಾಗೆ ನಮ್ಮ ಸುತ್ತಲಿನ ಬಂಧಗಳನ್ನು ಗಟ್ಟಿಗೊಳಿಸಿ ಬಾಂಧವ್ಯ ಬೆಸೆಯುತ್ತವೆ. ಎಲ್ಲಿದ್ದವರು ಒಂದೆಡೆ ಸೇರಿ ಕಷ್ಟ, ಸುಖಗಳನ್ನು ಹಂಚಿಕೊಂಡು ತಮ್ಮ ನಾಳೆಗಳ ಕುರಿತಾಗಿ ಹೊಸ ಕನಸುಗಳನ್ನು ನೇಯುತ್ತಾ ಬದುಕಿನಲ್ಲಿದ್ದ ಕಹಿ ಕರಗಿ ಬದುಕು ಪೂರಾ ಸಿಹಿ ತುಂಬಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವರು. ಹೀಗೆ ಪ್ರತಿ ಮನೆಗಳಲ್ಲೂ ಯುಗಾದಿ ಮನೆ ಮಾಡುವುದು. ಯುಗಾದಿ ಬದುಕು ಪೂರಾ ಹೊಸತನ ತುಂಬಲಿ ಸಕ್ಸಸ್ ನಿಮ್ಮೆಲ್ಲರ ಅಡ್ರೆಸ್ ಹುಡುಕಿಬರಲಿ. “ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.”ಮತ್ತೆ ಮರಳಿ ಬರುವ ಯುಗಾದಿಗೆ ಕಷ್ಟಗಳು ಕರಗಿ ಬದುಕು ಪೂರಾ ಸಿಹಿ ಹೂರಣ ತುಂಬಿರಲಿ.

ಡಾ ಮೇಘನ ಜಿ
ಉಪನ್ಯಾಸಕರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ದಲಿತರ ಹಣ ಗ್ಯಾರಂಟಿಗಳಿಗೆ ಬಳಸಿದ ಕಾಂಗ್ರೆಸ್ ; ತನಿಖೆ ಮಾಡಿಸಬೇಕು – ಈರಣ್ಣ ಕಡಾಡಿ ಆಗ್ರಹ

ಮೂಡಲಗಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಾದ ಅನುದಾನದ ಹಣವನ್ನು ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಿಕೊಂಡಿದ್ದು, ಅದು ದಲಿತ...
- Advertisement -

More Articles Like This

- Advertisement -
close
error: Content is protected !!
Join WhatsApp Group