ಮೈಸೂರು – ಯುವ ಜನತೆ ಕನ್ನಡ ನಾಡು-ನುಡಿ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ಭಾಷೆಯು ಬದುಕು ರೂಪಿಸುವಂತಹದ್ದು. ನಮ್ಮ ಸಂಸೃತಿ ಯ ಸಂಕೇತವಾಗಿದೆ. ಭಾಷೆ ಮಾತೆಯಿದ್ದಂತೆ ಎಂದು ಕರ್ನಾಟಕ ನಾಟಕ ಅಕಾಡೆಮಿಯ ನಿವೃತ್ತ ರಿಜಿಸ್ಟ್ರಾರ್ ಹಾಗೂ ಮೈಸೂರು ಕನ್ನಡ ಜಾಗೃತಿ ಸಮಿತಿ ಸದಸ್ಯ ಎ.ಎಸ್.ನಾಗರಾಜ್ ಯುವಜನತೆಗೆ ಕರೆ ನೀಡಿದರು.
ಕೆ.ಆರ್.ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮೈಸೂರು ಕನ್ನಡ ಜಾಗೃತಿ ಸಮಿತಿ ವತಿಯಿಂದ ಕನ್ನಡ ಕಾಯಕ ವರ್ಷದ ಸಮಾರೋಪ ಸಮಾರಂಭದ ಅಂಗವಾಗಿ ಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲ್ಲೂಕುಗಳ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ನಾಡು-ನುಡಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಒಂದು ಭಾಷೆಯನ್ನು ಬಹಳ ದೀರ್ಘಕಾಲ ಬಳಸದಿದ್ದರೆ ಆ ಭಾಷೆ ವಿನಾಶದತ್ತ ಸಾಗುತ್ತದೆ.ಕನ್ನಡದ ಕೂಳು ಎಂಬ ಶಬ್ದ ನಾಪತ್ತೆಯಾಗಿ ಅನ್ನ ಎಂಬ ಪದ ಬಳಕೆಗೆ ಬರಲು ಇದೇ ಕಾರಣ.ಅನ್ನ ಎಂಬುದು ಸಂಸ್ಕೃತ ಭಾಷೆಯ ಪದ.ಕನ್ನಡದಲ್ಲಿ ಅನ್ನವನ್ನು ಕೂಳು ಎನ್ನಲಾಗುತ್ತಿತ್ತು ಎಂದವರು ವಿವರಿಸಿದರು.
ಇನ್ನು ಪ್ರಾಚೀನ ಕಾಲದಲ್ಲಿ ವಡ್ಡರು ಎಂದರೆ ವಿದ್ವಾಂಸರು, ಗೌರವಾನ್ವಿತರು ಎಂದು ಅರ್ಥವಿತ್ತು. ಆದರೆ ಇದೀಗ ವಡ್ಡರು ಎನ್ನುವುದು ಜಾತಿ ಸೂಚಕವಾಗಿದೆ.ಹೀಗೆ ಕನ್ನಡ ಭಾಷೆಯ ಹಲವು ಪದಗಳು ಬಳಕೆಯಾಗದೇ ಕಣ್ಮರೆಯಾಗಿಬಿಟ್ಟಿವೆ. ಈಗಲಾದರೂ ಕನ್ನಡಿಗರು ಕನ್ನಡ ಭಾಷೆಯ ಬಗ್ಗೆ ಮಮತೆ ತೋರಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಡಾ.ಭೇರ್ಯ ರಾಮಕುಮಾರ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕರ್ನಾಟಕದ ಏಕೀಕರಣ ನೂರಾರು ಸಾಹಿತಿಗಳು, ಕನ್ನಡಿಗ ಪ್ರೇಮಿಗಳ ಸುದೀರ್ಘ ಹೋರಾಟದ ಫಲ.೧೯೦೫ ರಲ್ಲಿ ಆರಂಭಗೊಂಡ ಈ ಹೋರಾಟದ ಫಲವಾಗಿ ೧೬೫೬ ರ ನವಂಬರ್ ೧ ರಂದು ಕನ್ನಡ ಭಾಷೆ ಮಾತನಾಡುವ ಪ್ರದೇಶಗಳೆಲ್ಲವೂ ಒಟ್ಟುಗೂಡಿ ಮೈಸೂರು ರಾಜ್ಯ ರಚನೆಯಾಯಿತು.
೧೯೭೩ ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಲಾಯಿತು. ಕರ್ನಾಟಕ ರಾಜ್ಯ ರಚನೆಯಾಗಿ ೬೬ ವರ್ಷಗಳು ಕಳೆದರೂ ಗಡಿ ಭಾಗದ ಜಿಲ್ಲೆಗಳಲ್ಲಿ ಕನ್ನಡ ಭಾಷೆ ಹಾಗೂ ಸಂಸೃತಿ ಯ ಮೇಲೆ ಹೊರರಾಜ್ಯಗಳ ಪ್ರಭಾವ ಅಪಾರವಾಗಿದೆ.
ರಾಜ್ಯದ ಏಳು ಕೋಟಿ ಜನತೆಯ ಪೈಕಿ ಗ್ರಾಮೀಣ ಪ್ರದೇಶಗಳಲ್ಲಿ ನ ಸುಮಾರು ನಾಲ್ಕು ಕೋಟಿ ಜನರು ಕನ್ನಡಿಗರಾಗಿ ಉಳಿದಿದ್ದಾರೆ. ಗಡಿ ಜಿಲ್ಲೆಗಳಲ್ಲಿ ಹಾಗೂ ನಗರ,ಪಟ್ಟಣ ಪ್ರದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುವ ಮೂಲಕ ಮಾತೃಭಾಷೆ ಬಗ್ಗೆ ಅಸಡ್ಡೆ ತೋರಿಸುತ್ತಿದ್ದಾರೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ನುಡಿದರು.
ಪ್ರತಿಯೊಬ್ಬರೂ ತಮ್ಮ ದೈನಂದಿನ ವ್ಯವಹಾರಗಳನ್ನು ಕನ್ನಡದಲ್ಲೇ ಮಾಡಬೇಕು.ಕನ್ನಡದಲ್ಲಿಯೇ ಸಹಿ ಮಾಡಬೇಕು. ತಮ್ಮ ಮಕ್ಕಳನ್ನು ಕನ್ನಡ ಶಾಲೆಗೇ ಸೇರಿಸಬೇಕು. ಕನ್ನಡದಲ್ಲಿಯೇ ಮಾತನಾಡಬೇಕು. ಒಬ್ಬ ಕನ್ನಡೇತರನಿಗಾದರೂ ಕನ್ನಡ ಕಲಿಸಬೇಕು. ಕನ್ನಡ ಪತ್ರಿಕೆ ಹಾಗೂ ಕನ್ನಡ ಪುಸ್ತಕಗಳನ್ನೇ ಓದಬೇಕೆಂದು ಅವರು ಕರೆ ನೀಡಿದರು.
ಕನ್ನಡ ಚಳವಳಿಗಾರರಾದ ಮೈಸೂರು ಕನ್ನಡ ಜಾಗೃತಿ ಸಮಿತಿ ಸದಸ್ಯ ಎ.ಅರವಿಂದ ಶರ್ಮಾ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಸಾಹಿತಿಗಳು ಮೃದು ಮನಸ್ಸಿನವರು. ಆದರೆ ಕನ್ನಡ ಹೋರಾಟಗಾರರು ಕಬ್ಬಿಣದಷ್ಟೇ ಒರಟು. ನಾಡು-ನುಡಿಗಾಗಿ ತಮ್ಮ ಜೀವನವನ್ನೇ ಪಣಕಿಟ್ಟವರು. ಇಂತಹ ಹೋರಾಟಗಳಿಂದಲೇ ರಾಷ್ಟ್ರಕ್ಕೆ ಸ್ವಾತಂತ್ರ್ಯ ಬಂತು.ಕರ್ನಾಟಕದ ಏಕೀಕರಣ ಉಂಟಾಯಿತು. ಕನ್ನಡ ನಾಡು-ನುಡಿಗಳ ಅಸ್ತಿತ್ವಕ್ಕೆ ಧಕ್ಕೆ ಉಂಟಾದರೆ ಕನ್ನಡಿಗರು ಕೈಕಟ್ಟಿ ಕೂರುವುದಿಲ್ಲ. ಇದಕ್ಕೆ ಗೋಕಾಕ್, ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಈ ಹಿಂದೆ ರಾಜ್ಯದಲ್ಲಿ ನಡೆದ ಉಗ್ರ ಹೋರಾಟಗಳೇ ಸಾಕ್ಷಿ ಎಂದು ನುಡಿದರು.
ಕೆ.ಆರ್.ನಗರ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಯುವಜನತೆಯಲ್ಲಿ ನಾಡು-ನುಡಿ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ನಡೆಸಿರುವ ತಾಲ್ಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯವು ಅತ್ಯಂತ ಶ್ಲಾಘನೀಯವಾದುದು.
ಇದರಿಂದಾಗಿ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ವಿಕಸನವಾಗುತ್ತದೆ ಜೊತೆಗೆ ಅವರಲ್ಲಿ ಕನ್ನಡ ನಾಡು-ನುಡಿಗಳ ಬಗ್ಗೆ ಜಾಗೃತಿ ಉಂಟಾಗುತ್ತದೆ ಎಂದು ಶ್ಲಾಘಿಸಿದರು. ಉಪನ್ಯಾಸಕರಾದ ನಾಗೇಂದ್ರ ಸ್ವಾಗತಿಸಿದರು.ಪ್ರಭು ಅವರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲ್ಲೂಕುಗಳ ವಿವಿಧ ಪದವಿ ಪೂರ್ವ ಕಾಲೇಜುಗಳ ಸುಮಾರು ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಕನ್ನಡ ಗೀತೆಗಳ ಗಾಯನ,ಭಾವಗೀತೆಗಳ ಗಾಯನ, ಪ್ರಬಂಧ ಸ್ಪರ್ಧೆ, ಕನ್ನಡ ಕವಿಗಳ ಬಗ್ಗೆ ಭಾಷಣ ಸ್ಪರ್ಧೆ ಹಾಗೂ ಸಾಮೂಹಿಕ ನೃತ್ಯ ಸ್ಪರ್ಧೆಗಳನ್ನು ಈ ಸಂದರ್ಭದಲ್ಲಿ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಗಳ ವಿಜೇತರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಮೈಸೂರಿನ ಲ್ಲಿ ನಡೆಸಲಿರುವ ಕನ್ನಡ ಕಾಯಕ ವರ್ಷದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು.
ಈ ಸಂದರ್ಭದಲ್ಲಿ ವಿವಿಧ ಕಾಲೇಜಿನ ಉಪನ್ಯಾಸ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.