- Advertisement -
ಅವ್ವ ನೆನಪಾದವಳು
ಚೆಂದಮಾಮನ ತೋರಿಸಿ ಕೆನೆ ಹಾಲು
ರುಚಿ ಬುತ್ತಿ ಮೊಸರ ಉಣಿಸಿದವಳು
ಮುಗಿಲ ಮನೆಯ ಚಿಕ್ಕೆಗಳ ಕರೆಯುತ
ಕಣ್ಣಲಿ ಸವಿ ಮಿನುಗ ಕುಣಿಸಿದವಳು…
ಬದುಕ ರೆಕ್ಕೆಗೆ ಬಣ್ಣ ಬಳಿಯುತ
ಮಿನುಗು ಕಣ್ಣಲಿ ಕನಸ ಬಿತ್ತಿದವಳು
ಮಾಗುತ ಸಿಹಿ ಹಣ್ಣಾಗಿ ಹೆಣ್ಣ ಬಾಳಲಿ
ಬೆಳಕ ಬಿತ್ತುತ ಕತ್ತಲ ಮಣಿಸಿದವಳು
- Advertisement -
ಬಾಳಗಾಣದ ನೊಗವಾಗಿ ನಗುತ ನಡೆದು
ಬದುಕ ಬಾಣಲಿಯಲಿ ಬೆಂದು ನಗವಾದವಳು
ನೋವ ತೆಕ್ಕೆಯಲಿ ನಲಿಯುತ ಅರಳುತ
ಜಗದ ಜಂಜಡಕೆ ಹೂವ ಗುಣಿಸಿದವಳು
ಬದುಕ ಬವಣೆಯ ಎದೆಯ ಬಾನಿಗೆ
ನೇರ ನಗೆ ಕವಣೆ ಬೀಸಿದವಳು
ನಂಜು ನುಂಗುತ ನಂಜುಂಡನಂತೆ ನಗುತ
ಎದೆ ಮೀಟುವ ಗಾಯವ ಎಣಿಸಿದವಳು..
ಅಳಲ ದನಿಯ ಕೊಳಲ ಕೊರಳಲಿ
ಸವಿಗಾನ ನುಡಿಸಿದವಳು..
ಸುರಿವ ಕಂಬನಿಯ ಮಳೆ ಹನಿಯಲಿ
ಹನಿಸಿ ಸುಡುವ ಬೇಗೆಯ ತಣಿಸಿದವಳು..
- Advertisement -
ಎಲ್ಲರಿಗೂ ಬೇಕಾಗಿ ಕಲ್ಲುಸಕ್ಕರೆಯಂತೆ
ಮೆಲ್ಲ ಸವಿ ಬೆಲ್ಲವಾಗಿ ಕರಗಿದವಳು..
ಹುಲ್ಲಾಗಿ ಹೂವಾಗಿ ಎಲ್ಲೆಡೆ ಸಲ್ಲುತ
ಮನದಿ ಮಲ್ಲಿಗೆ ನೆನಪ ಪೋಣಿಸಿದವಳು…
— ಇಂದಿರಾ ಮೋಟೆಬೆನ್ನೂರ. ಬೆಳಗಾವಿ.