ಸಾಗು ಅಭ್ಯುದಯದ ಹಾದಿಯಲಿ…
ಜಡತ್ವ ಬಿಡು,ಹಗಲುಕನಸು ಬಿಡು,
ಬಾಳಲಿ ಮಹದುದ್ದೇಶ ಧ್ಯಾನಿಸಿ,ಹೊರಡು,
ದಾರಿ ನಿನಗಾಗಿ ಕಾದಿದೆ,ಅಭ್ಯುದಯದ ಹಾದಿ,
ಆರಂಭದ ಹೆಜ್ಜೆಗಳು ಕಠಿಣವಿರಬಹುದು,
ಕಲ್ಲುಮುಳ್ಳುಗಳಿರಬಹುದು,
ಹಳ್ಳದಿಣ್ಣೆಗಳಿರಬಹುದು,
ಬೇಸರವೆನಿಸುವಷ್ಟು ತಿರುವುಗಳಿರಬಹುದು,
ಹಾವು-ಚೇಳುಗಳ ಭಯವಿರಬಹುದು,
ಹುಲಿ-ಸಿಂಹ-ಕರಡಿಗಳ ಕಾಟವಿರಬಹುದು,
ಎಲ್ಲವನು ಎದುರಿಸಿ,ಏಕಾಗ್ರತೆಯಲಿ ಹೊರಡು…
ನೂರು ಸ್ನೇಹಿತರಿರಬಹುದು,
ಅಪ್ಪ-ಅಮ್ಮ,ಸಹೋದರ-ಸಹೋದರಿಯರಿರಬಹುದು,
ಪ್ರಗತಿಯತ್ತ ಓಟ ನಿನ್ನದೇ…
ಚಂಚಲತೆಯಿಲ್ಲದೇ ಏಕಾಗ್ರತೆಯೊಂದಿಗೆ ಚಲಿಸು,
ವಿಜಯದೇವತೆ ನಿನಗೊಲಿವಳು…
ಬಸವಣ್ಣನ ಕಾಯಕತತ್ವ ,
ಗಾಂಧೀಜಿಯವರ ಸತ್ಯ,ಅಹಿಂಸೆ,
ಸ್ವಾಮಿವಿವೇಕಾನಂದರ ಸಹೋದರತ್ವ,
ಸರ್.ಎಂ.ವಿಶ್ವೇಶ್ವರಯ್ಯ ನವರ ದೂರದೃಷ್ಟಿ,ಕಾಯಕಪ್ರೀತಿ,
ಬುದ್ದ,ಮಹಾವೀರರ ಶಾಂತಿ, ತ್ಯಾಗ,
ಡಾ.ಅಬ್ದುಲ್ ಕಲಾಂರ ಸರ್ವಧರ್ಮ ನಿಷ್ಠೆ,ಕಾಯಕನಿಷ್ಠೆ
ಎಂದೆಂದೂ ನಿನ್ನದಾಗಿರಲಿ,ಗೆಲುವು ಎಂದೆಂದೂ ನಿನಗಿರಲಿ…
ಕ್ರಮಿಸುವ ಹಾದಿ ದೂರದ ಹಾದಿ,
ಬೇಸರ ಬೇಡ,ಆತಂಕ ಬೇಡ,
ಇದೇ ಹಾದಿಯಲ್ಲಿ ಸಾಗಿದ ನೂರಾರು ಮಂದಿ…
ಅಸಾಧಾರಣ ಸಾಧಕರಾಗಿಹರು,
ಸಮಾಜಕ್ಕೆ ದಾರಿದೀಪವಾಗಿಹರು,
ನೀನೂ ಜಯಶಾಲಿಯಾಗು,ಸಾಧಕನಾಗು,
ಸಮಾಜಕ್ಕೆ ದಾರಿದೀಪವಾಗಿರು,
ಮುಂದಿನ ಯುವಜನತೆಗೆ ಮಾರ್ಗದರ್ಶಕನಾಗು….
ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು, ಪತ್ರಕರ್ತರು,
ಮೊ:94496 80583,
63631 72368
ಹೀಗೇಕೆ?
ಕಾಡುಗಳನ್ನೆಲ್ಲ ನಾಶ ಮಾಡಿದ್ದೇವೆ ಕಾಡುಪ್ರಾಣಿಗಳು ನಗರಕ್ಕೆ ಬಂದಾಗ
ಕೊಲ್ಲುತ್ತೇವೆ
ಹೀಗೇಕೆ?
ಕೆರೆಗಳನ್ನೆಲ್ಲ ಮುಚ್ಚಿ ಜಲ್ಲಿ ಕಾಡನ್ನು ಕಟ್ಟಿ
ಮಳೆಗಾಗಿ ಬಾಯ್ಬಿಡುತ್ತ ಕಣ್ಣೀರು ಹಾಕುತ್ತೇವೆ
ಹೀಗೇಕೆ?
ಕೇಳುತ ಎಲ್ಲೆಡೆ ಸದ್ವಿಚಾರ ಹಿತನುಡಿಗಳ ,
ಬದುಕುತ್ತೇವೆ ಕೇಳಿಯೂ ಕೇಳದಂತೆ
ಹೀಗೇಕೆ?
ಹೆತ್ತವರು ಹೊಟ್ಟೆ ಬಟ್ಟೆ ಕಟ್ಟಿ ದೇಹಗೂಡಾಗಿಸಿ
ಅಧಿಕಾರಿ ಆದ ಮಗ ವೃದ್ಧಾಶ್ರಮಕೆ
ಕಳುಹಿಸಿದಾಗ ಹತಾಶರಾಗುತ್ತೇವೆ
ಹೀಗೇಕೆ?
ಆದರೂ ಸೊಸೆ ಮಕ್ಕಳು ಚೆನ್ನಾಗಿರಲಿ
ಮೊಮ್ಮಕ್ಕಳು ಅವರಿಗೆ ಹೀಗೆ ಮಾಡದಿರಲಿ
ಎಂದು ಹಲಬುತ್ತೇವೆ
ಹೀಗೇಕೆ?
ಈ ಎಲ್ಲ ಏಕೆ ಗಳಿಗೆ
ಪರಿಹಾರ ಕಂಡುಕೊಳ್ಳದೇ
ಹೀಗೆ ಕುಳಿತಿರುವದೇಕೆ?
ರಾಧಾ ಶಾಮರಾವ.
ನೀನಿಲ್ಲ ರಾಯ….
ರಾಯ
ಅಲ್ಲೇ ಹುಡುಕಾಡಿದೆ
ನೀ ಅಲೆದಾಡಿದ ಮಣ್ಣಲ್ಲಿ
ಸುಳಿದಾಡಿದ ಗಾಳಿಯಲ್ಲಿ
ಹೆಬ್ಬಂಡೆಗಳ ಸಂಧಿಯಲ್ಲಿ
ನಿನ್ನದೆನ್ನುವುದು ಏನಾದರೂ ಸಿಗುವುದೆಂದು
ಇಲ್ಲ ಸಿಗಲೇ ಇಲ್ಲ!
ಪಹರೆಗಾರರ ಬೂಟಿನ ಸದ್ದು
ರಾಣಿಯರ ಪಿಸುಮಾತು
ಆನೆ-ಕುದುರೆಗಳ ಝಂಕಾರ
ನಗಾರೆ-ಕಹಳೆಗಳ ನಾದ
ಇಲ್ಲ ಕೇಳಿಸಲಿಲ್ಲ!
ಅಲ್ಲಲ್ಲಿ ಚದುರಿಹೋದ
ಕಡೆದ ಶಿಲ್ಪಗಳು…
ಅನಾಥವಾದ ಕೃಷ್ಣಮಂದಿರ
ಕೃಷ್ಣ ನಿಲ್ಲದೆ…
ಮಾಸಿಹೋಗುತ್ತಿರುವ
ಇತಿಹಾಸ ಹೊತ್ತ
ಶಾಸನಗಳು
ತೆಪ್ಪಗೆ ಮಲಗಿವೆ ಸಂಗ್ರಹಾಲಯದಲ್ಲಿ
ಹಲವು ದಿನಗಳಿಂದ ರಕ್ತದ ರುಚಿ ಕಾಣದೇ
ತುಕ್ಕು ಹಿಡಿದ ಕತ್ತಿ ಗುರಾಣಿಗಳು
ಮಾತ್ರ ಕಂಡವು….
ಸುಂದರ ತಲೆ ಉಡುಗೆ
ಮುತ್ತು ರತ್ನ ಖಚಿತ ನಿಲುವಂಗಿ
ದೃಢಕಾಯದ ಸದೃಢ ಶರೀರ
ಗಾಂಭೀರ್ಯ ಮುಖಭಾವ
ಯಾವುದೋ ಕುಂಚಗಾರ ತೀಡಿದ
ಬಣ್ಣದ ಚಿತ್ರ
ನಿನ್ನನ್ನೇ ಮತ್ತೆ ಮತ್ತೆ ನೆನಪಿಸುತ್ತಿದೆ
ರಾಯ ಕೃಷ್ಣದೇವರಾಯ!
ಶಂಕರ ನಿಂಗನೂರ
ಇತಿಹಾಸ ಅಧ್ಯಾಪಕರು
ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜು, ಕಲ್ಲೋಳಿ