spot_img
spot_img

ಕೃತಿ ಪರಿಚಯ: ಮೌನ ಮಾತಿನ ರೂಪಕಗಳ ರಾಶಿ “ವಸಂತಗಾನ”

Must Read

- Advertisement -

ಮೌನ ಮಾತಿನ ರೂಪಕಗಳ ರಾಶಿ “ವಸಂತಗಾನ”

ಕಾವ್ಯ ಎಂಬುದು ಸುಂದರವಾದ ಒಂದು ಅಭಿವ್ಯಕ್ತಿಯ ಪ್ರಕಾರವಾಗಿದೆ. ಶಬ್ದ ಮತ್ತು ಅರ್ಥಗಳ ಒಟ್ಟುಗೂಡುವಿಕೆಗೆ ಕಾವ್ಯ ಎಂದು ಹಿರಿಯರು ವ್ಯಾಕ್ಯಾನಿಸಿದ್ದಾರೆ. ಜಗತ್ತಿನ ಪ್ರಖರತೆ ಕುಂದುವ ಸಮಯದಲ್ಲಿ ಕಾವ್ಯವೇ ಚೇತನ ಮೂಡಿಸಬಲ್ಲದು ಎಂದು ನಮ್ಮ ಹಿರಿಯರು ಹೇಳಿದ್ದಿದೆ.

ಸಾಹಿತ್ಯದ ಸಾಗುವಳಿಯಲ್ಲಿ ನಿರತರಾದವರು,ಸಮಾಜದ ಆದರ್ಶ ಮೌಲ್ಯಗಳನ್ನು ಅಕ್ಷರಗಳ ಬೀಜಗಳೊಂದಿಗೆ ಬಿತ್ತುವುದಾಗಿದೆ. ಇಂತಹ ಅರ್ಹತೆಯು ಸಾಹಿತ್ಯದಿಂದಲೆ ವ್ಯಾಪಕ ಕೃಷಿಗೈದು ಅರಿವು ಮೂಡಿಸುವುದರಿಂದ ಎಲ್ಲೆಡೆಯು ಸಮನಾಂತರ ಚಿಂತನೆ ಬೆಳೆಯುತ್ತದೆ ಎಂದರೆ ತಪ್ಪಿಲ್ಲ.

ಸಾಹಿತ್ಯ ಎಂದರೆ ಒಂದು ಶಿಸ್ತು.ಒಂದು ಧ್ಯಾನಸ್ಥ ಮನಸ್ಸು. ಒಂದು ಸ್ಥಾಯಿ ಭಾವದ ಬೆಳಕು ಎಂದು ಹೇಳಬೇಕಾಗಿಲ್ಲ.ನಮ್ಮ ಹಿರಿಯ ಸಾಹಿತಿಗಳೂ ಬೆಳಕನ್ನೇ ತೋರಿದ್ದಾರೆ. ಅವರು ಸೃಜಿಸಿದ ಬೆಳಕಿನಲ್ಲಿ ನಾವಿಂದು ದಾರಿಯನು ತುಳಿದು, ಸಂದರ್ಭ, ಔಚಿತ್ಯ ಪ್ರಜ್ಞೆಯನ್ನಿಟ್ಟುಕೊಂಡು ಕಾವ್ಯದ ಭಾಷೆಯಲ್ಲಿ ಭಿನ್ನ ವಿಭಿನ್ನ ದೇಣಿಗೆ ನೀಡುತ್ತಿರುವುದು ನಮ್ಮ ಹಿರಿಯರ ಕೊಡುಗೆಯೊಂದಿಗೆ ನಮಗೆ ದಕ್ಕಿದೆ.
ನಾನಿಂದು ಓದಿದ ಪುಸ್ತಕ “ವಸಂತ ಗಾನ” ಕವನ ಸಂಕಲನದ ಕುರಿತು ಎರಡು ಸಾಲುಗಳಲ್ಲಿ ಹೇಳಬಯಸುತ್ತೇನೆ. ಸಂಕಲನದ ವಿಶ್ಲೇಷಣೆಯಾಗಲಿ, ವಿಮರ್ಶೆಯಾಗಲಿ,ತುಲನಾತ್ಮಕ ಬರಹವಾಗಲಿ, ನಿರ್ಣಯಗಳಂತಹ ನುಡಿಯನ್ನು ನಿರೂಪಿಸಲು ಕಷ್ಟ ಸಾಧ್ಯ. ಯಾಕೆಂದರೆ ನಾನು ಸಾಹಿತಿಯಲ್ಲ.ಹವ್ಯಾಸಿ ಬರಹಗಾರ (free lancer) ನಷ್ಟೆ.

- Advertisement -

ಸಂಕಲನದ ವಿಷಯವಾಗಿ ನಾನಿಲ್ಲಿ ಒಂದು ಕುಂಟು ನೆಪದ ಸಾಲುಗಳನು ಬರೆದರೆ,ಅದು ಕೇವಲ ತಾತ್ಕಾಲಿಕ ಹೊಗಳಿಕೆಗೆ ಸೀಮಿತವಾದೀತು. ಪುಸ್ತಕದ ಒಂದಕ್ಷರ ಬಿಡದೇ ಓದಿದಾಗ ಕಾಡಿದ ಕೆಲವು ಅನಿಸಿಕೆಗಳನು ವ್ಯಕ್ತಪಡಿಸುತ್ತಿರುವೆನು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತುರುವಿಕೆರೆ ತಾಲೂಕಾಧ್ಯಕ್ಷರಾದ ಲತಾಮಣಿ.ಎಂ.ಕೆ ಇವರ ವಸಂತ ಗಾನ ಕವನ ಸಂಕಲನವನು ಮನದಲ್ಲಿ ತುಂಬಿಕೊಂಡೆನು.ಇವರ ಕಾವ್ಯವು ಸಹಜವಾಗಿ ಅರಿವಿಗೆ ದಕ್ಕಿಬಿಡುತ್ತವೆ.

ಕವಿಯ ಹೃದಯಕ್ಕೆ ಅಧ್ಯಯನದ ಅನುಭವ ಸಿಕ್ಕಾಗ,ಲಯಬದ್ಧವಾದ ಕಾವ್ಯದ ಸಿವುಡು ಕಟ್ಟಲು,ಕಲ್ಪನೆಗೆ ಹೊಳೆದ ಸಾಲುಗಳನು ರೇಖಿಸಲು ಸಾಧ್ಯವಾಗಿದೆ. ಸಂಕಲನದ ಶೈಲಿ ಸರಳವಾಗಿದೆ. ಬಳಕೆಯಾದ ಪದಗಳು, ಪ್ರಾಸಗಳು ಸಶಕ್ತವಾಗಿವೆ. ಪ್ರಥಮ ಸಂಕಲನವಾಗಿದ್ದರಿಂದ ಬರಹದ l ಅನುಭವ ಅಭ್ಯಾಸ ಬೆಳೆದು ಛಂದಸ್ಸಿನ ವಿವಿಧತೆಗಳನ್ನು ರೂಡಿಸಿಕೊಂಡು ಹೃದಯಸ್ಪರ್ಷಿಗಳಾಗಿ ಅಭಿವ್ಯಕ್ತಿಸಿದ್ದಾರೆ.

“ಗಿಡ ಮರಗಳ ಕಡಿದು
ಪೊದೆಲತೆಗಳ ತುಳಿದು
ಹಸಿರ ಉಸಿರನೂ ಚಿವುಟಿ
ಉಸಿರುಗಟ್ಟಿ ತಾ ಸಾಯುತಿಹನು
ಧಗೆ ಹೊತ್ತು ಧರೆಗುರುಳುತಿಹನು
ತಾ ಮಾಡಿದನು ತಾನುಣ್ಣುತಿಹನು

- Advertisement -

ನುಡಿಯು ಸತ್ಯವೇ ಆಗಿದೆ. ಕೇವಲ ವ್ಯವಹಾರಕ್ಕೊ,ಐಷಾರಾಮಿ ಜೀವನಕ್ಕೊ,ಬದುಕಿನ ಯಾವುದೋ ಒಂದು ಸಾಧ್ಯತೆ ನೀಗಿಸಿಕೊಳ್ಳಲೋ, ನಮ್ಮ ನಮ್ಮ ತಾತ್ಕಾಲಿಕ ವ್ಯವಸ್ಥೆಗಳನ್ನು ಪಡೆಯಲು, ನಾವಿಂದು ಗಿಡ ಮರ ಕಡಿದು ಹಾಕುತ್ತೇವೆ.

ಒಣಗಿಸಿ ಬಿಟ್ಟಿದ್ದೇವೆ. ನಿತ್ಯವೂ ಪ್ರಕೃತಿಯ ಉಸಿರನು ಗಟ್ಟಿಯಾಗಿ ಮುಚ್ಚಿ ಧರೆಗುರುಳಿಸಿಬಿಟ್ಟಿದ್ದೇವೆ. ಪರಿಸರ ದಿನಾಚರಣೆಯ ದಿನದಂದು ಮಾತ್ರ ಗಿಡಮರ ಬೆಳಸಿರಿ, ಹಸಿರನುಳಿಸಿರಿ, ಎಂದು ಜಾಹಿರಾತು ನೀಡುತ್ತೇವೆ.

ಮನುಷ್ಯನ ನಿಜವಾದ ಸ್ವಾರ್ಥವಿದು. ಸಧ್ಯದ ಕರೋನಾ ಕಾಲಗತಿಯಲ್ಲಿ ಆಮ್ಲಜನಕದ ಕೊರತೆಯಾಗಿದೆ. ದೇಶಕ್ಕೆ ದೇಶವೇ ಉಸಿರಾಡಲಾಗದ ಪ್ರಮಾದವನು ಎದುರಿಸುತಿದೆ. ಕರೋನಾದ ಮಹಾ ಮಾರಿ ಧೈತ್ಯವು,ಓತ ಪ್ರೇತವಾಗಿ ಹರಿದಾಡುತ್ತಿರುವುದರಿಂದ ಈಗೀಗ ನಿಸರ್ಗದ ಕುರಿತು ಮನುಷ್ಯನಿಗೆ ವಾಸ್ತವಿಕ ಪ್ರಜ್ಞೆಯುಂಟಾಗಿದೆ.

ನಮ್ಮ ಜನಗಳು ಈಗೀಗ ಪರಿಸರದ ಕುರಿತು ಯೋಚಿಸುತ್ತಿದ್ದಾರೆ ಎಂದು ಸುಲಲಿತವಾಗಿ ಲತಾಮಣಿಯವರು ಹಸಿರಿನ ಮಹತ್ವವನು ಉದಾಹರಿಸಿದ್ದಾರೆ.

“ಮಣ್ಣಿನ ತಾಟಿನಲುಣುವಾಗ
ಮನಕೆ ಮನ ಬೆಸೆದು
ಮನದ ಭಾವಕೆ ಮಣಿದು
ಮನವೊಂದು ಮನಯೊಂದೆಂದು
ಬದುಕಿದರೊಡಗೂಡಿ”

ವಿಜ್ಞಾನ, ತಂತ್ರಜ್ಞಾನ ಮುಂದುವರೆದಂತೆಲ್ಲಾ ಹಳೆಯ ಕಾಲಮಾನವನು ಮರೆತುಬಿಡುತ್ತೇವೆ. ಇಲ್ಲಿ ಕವಿತೆಯ ಸರಳವಾದ ಸಾಲುಗಳಾದರೂ ಯೋಚಿಸಬಹುದಾದ ಕಾವ್ಯಾಪ್ತವಿದೆ. ಇತಿಹಾಸವಿದೆ ಮಣ್ಣಿನ ಪಾತ್ರೆಗೆ. ಹಿಂದಿನ ಕಾಲದ ಜೀವನವು ನಮಗೆ ಲಭಿಸಿಲ್ಲ.

ಈಗಿನ ತಂತ್ರಜ್ಞಾನದ ಸುಖವು ಹಿಂದಿನವರಿಗಿಲ್ಲ. ಮಣ್ಣಿನ ಪರ್ಯಾಣದಲಿ ಉಣ್ಣುವವರು ಬಹುಶಃ ಇವತ್ತಿಗಾರೂ ಸಿಗಲಿಕ್ಕಿಲ್ಲ. ಮಣ್ಣಿನ ಪರ್ಯಾಣ(ಮಣ್ಣಿನ ಗಂಗಾಳ)ದಲ್ಲುಣುವಾಗ ಅದೆಷ್ಟು ರುಚಿ, ಅದೆಂಥಾ ಪರಮ ಸುಖ, ಅದೆಷ್ಟು ಸಂತೃಪ್ತಿ, ಅಮೃತವೇ ಸರಿ.ಅವಿಭಕ್ತ ಕುಟುಂಬದವರೆಲ್ಲರೂ ಕುಳಿತು,ಬೆರೆತು,ಉಣ್ಣುವಾಗಿನ ಗಳಿಗೆ ಈಗೆಲ್ಲಿದೆ? ನಮ್ಮ ಪೀಳಿಗೆಗೆ ಅಚ್ಚರಿಯೇ ಸರಿ. ಗಡಿಗೆ ಮೇಲಿನ ಮುಚ್ಚಳ ತೋರಿಸಿ ಇದೇ ಮಣ್ಣಿನ ಗಂಗಾಳ ಎನ್ನಬೇಕಾಗಿದೆ.

“ನಗ ನಾಣ್ಯ ವಸ್ತ್ರಾಭರಣ
ಪೆಟ್ಟಿಗೆಯಲ್ಲಿಟ್ಟು ಹೊರಟೆ
ನನ್ನನೇಕೆ ನೀನು
ಕೆಲಸದಾಕೆಗೆ ಕೊಟ್ಟೆ?

ಅಮ್ಮಾ…….?
ನಗ ನಾಣ್ಯ ವಸ್ತ್ರಾಭರಣಕ್ಕಿಂತ
ನಾ….ನಿನಗೆ ಕನಿಷ್ಟವೆ?
ನನ್ನಂಥ ಮುದ್ದು ಮಗುವಿಗಿಂತ
ಆಸ್ತಿ ಪಾಸ್ತಿ ಶ್ರೇಷ್ಟವೆ? “

ಈ ಕವಿತೆಯಲ್ಲಿ ಅನಾಥ ಪ್ರಜ್ಞೆ ಕಾಡಿದೆ.ಹೆತ್ತವಳಿಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ, ನೇರವಾಗಿ ತನ್ನ ಒಂಟಿತನದ ನೋವಿಗೆ, ಪ್ರೀತಿಯಿಲ್ಲದ ಶೂನ್ಯ ವಾತಾವರಣವನ್ನರಿಯಲು, ಸವಾಲಾಗಿ ನಿಲ್ಲುತ್ತದೆ ಪ್ರಶ್ನೆ. ಆಧುನಿಕ ಕಾಲಮಾನದ ವೇಗದ ಬದುಕು ಇದಕ್ಕೆ ಕಾರಣವಾಗಿದೆ.

ಮಗುವು ಇಲ್ಲಿ ನೆಪವಾದರೆ, ಕವಯಿತ್ರಿಗೆ ಮಾಗುವಿಕೆಯ ವಾಹಿನಿಯಾಗಿದೆ. ಮುಗುದ ಮಗುವಿನ ಕನಸು ವಿನಾಶದತ್ತ ಸಾಗುವ ಅಕರಾಳ ವಿಕರಾಳ ಅತೃಪ್ತ ಹಂಬಲಗಳು ಮತ್ತು ಒಂಟಿತನದ ಖಯಾಲು ಕತ್ತಲ ಪರದೆಯನು ಎಳೆದುಕೊಂಡು ಮಲಗಿದಂತೆ ವ್ಯಕ್ತವಾಗುತ್ತದೆ.ಸರಳ ರೂಪಕವಾದರೂ ಅಭಿವ್ಯಕ್ತಿಸುವ ಧ್ಯಾನಸ್ಥವು ಗಮನ ಸೆಳೆದಿದೆ.

“ತೊರೆದೇವು ಆಸೆ
ಮೆರೆದೇವು ಈರ್ಷೆ
ಛಲದಿಂದ ಪಣವ ತೊಟ್ಟೇವು
ಗುರಿ ತೋರೋ ಗುರುವಾಗಿ
ಜ್ಞಾನದ ಜ್ಯೋತಿಯನು ಬೆಳಗೇವು

ಹಚ್ಚೇವು ಕನ್ನಡದ ದೀಪ ಎನ್ನುವ ನಾಡಗೀತೆಯ ಹಣಕು ಹಾಡಿನಂತೆ ಬರೆದಿದ್ದಾರೆ. ಇದು ಸಹ ಕೊಡುಗೆಯಾಗಿದೆ. ಸ್ವತಹಃ ಸಂಗೀತ ಬಲ್ಲವರಾದ ಲತಾಮಣಿಯವರು ನವಿರಾದ ಭಾವವನು ಚಿತ್ರಿಸಿ, ರಾಗ, ತಾಳ, ಲಯಕ್ಕೆ ಹೊಂದುವಂತೆ ಕವನ ರಚಿಸಿದ್ದಾರೆ.

ಶಿಖರ ಪ್ರಾಯವೆಂಬಂತೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೊಟ್ರೇಶ ಎಸ್.ಉಪ್ಪಾರ ಅವರ ಮುನ್ನುಡಿಯು ಪುಸ್ತಕಕ್ಕೆ ಮತ್ತಷ್ಟು ಹಿರಿತನ ಸಿಕ್ಕಿದೆ. ಮಾಣಿಕ್ಯ ಪ್ರಕಾಶನ ದ ಸುಂದರ ಪುಟ ವಿನ್ಯಾಸದೊಂದಿಗೆ ಪುಸ್ತಕವನ್ನು ಬೊಗಸೆಯಲ್ಲಿಡಿದು ಖುಷಿಯಿಂದ ಓದುವಂತೆ, ಜವಬ್ದಾರಿಯುತ ಭರವಸೆಯ ರಾಯಭಾರ ಕಾರ್ಯವನು ನೆರವೇರಿಸಿದೆ.

ಕೊನೆಯ ನುಡಿಯಲ್ಲಿ ನನ್ನದೊಂದು ಮಾತು.ಯಾವುದೇ ಸಾಹಿತ್ಯದ ಒಂದು ಮಾದರಿಯಲ್ಲಿ, ಕವಿಯಾದವರು ತಮ್ಮನ್ನು ತಾವು ದುಡಿಸಿಕೊಳ್ಳಬೇಕು, ನಾವು ಬರೆದದ್ದೇ ಸರಿ ಎನ್ನುವ ಬರಹಗಾರರು ಸಾಮಾಜಿಕ ಜಾಲತಾಣದಲ್ಲಿ ಕಡಿಮೆಯೇನೂ ಇಲ್ಲ.ಮೊದಲು ಬರಹಗಾರರಾದವರು ಸಹಜವಾಗಿ ಕೇಳಬೇಕು, ಉನ್ನತ ಮಟ್ಟದಲ್ಲಿ ಓದಬೇಕು,ನಾಲ್ಕಾಣೆ ಭಾಗ ಬರಹದಲ್ಲಿ ತೊಡಗಬೇಕು.

ನಮ್ಮ ಓದುವಿನ ಸಂಪತ್ತಿದ್ದು,ಮುಂದೆ ಏನಾದರೂ ಸಾಧಿಸಬಹುದಾಗಿದೆ ಎಂಬುದು ನನ್ನ ಮನದಾಳದ ಮಾತು.ಕವಯಿತ್ರಿಯವರು ಮುಂದಾಲೊಚನೆಯಿಂದ ಅಧ್ಯಯನದಲಿ ಕೇಂದ್ರೀಕರಿಸಿ ಸಿದ್ಧತೆ ಮಾಡಿಕೊಂಡಂತಿದೆ.

“ವಸಂತ ಗಾನ” ಕವನ ಸಂಕಲನದೊಳಗೆ ಹಲವಾರು ಕವಿತೆಗಳನು ನಾನಿಲ್ಲಿ ಉದಾಹರಿಸಬಹುದಿತ್ತು ಈಗಾಗಲೆ ನಮ್ಮ ಸಾಹಿತ್ಯ ಬಳಗದ ಪ್ರಮುಖ ಬರಹಗಾರರು ಬಹು ಮುಖ್ಯವಾದ ನುಡಿಗಳನ್ನಾರಿಸಿ ಬರೆದ ಕಾರಣ ಮತ್ತು ಓದುಗ ಅಭಿಮಾನಿಗಳಿಗೂ ಈ ಪುಸ್ತಕವನು ಗುರುತಿಸಲಿ ಎಂಬ ಅಭಿಪ್ರಾಯ ಇರಾದೆ ನನ್ನದು.ಒಟ್ಟಾರೆಯಾಗಿ ಪುಸ್ತಕವು ಓದಿಸಿಕೊಂಡೋಗುತ್ತದೆ.

ನಿಸರ್ಗದ ಕೊಡುಗೆ, ಶೃಂಗಾರ, ಪ್ರೇಮ, ವಿರಹ, ನೋವು, ಜಾತಿಗಳ ತಳಕು, ಹೀಗೆ ಮೌನದಲಿ ಮಾತಾಡುವ ಸಾಲುಗಳು ಮನದಲ್ಲುಳಿದು ಬಿಡುವ ತುಡಿತಗಳಿವೆ.ಸುಮಾರು ಕವಿತೆಗಳ ಸಾಲುಗಳಲ್ಲಿ ಬಯಸಿದ್ದನ್ನು,ಬಯಸಿದವರಿಗೆ ತಲುಪಿಸುವ ಸಹಜ ಪ್ರಯತ್ನವನ್ನು ಕವಯಿತ್ರಿ ಲತಾಮಣಿ.ಎಂ.ಕೆ.ಇವರು ಮಾಡಿದ್ದಾರೆ.

ಇಲ್ಲಿ ಎಲ್ಲವೂ ಹೊಸತಿಲ್ಲ.ದಕ್ಕಿರುವ ಕಲ್ಪನೆಯನ್ನೆ ಅಕ್ಷರಕ್ಕಿಳಿಸಿ,ವ್ಯವಸ್ಥೆಗೆ ತಮ್ಮ ಪ್ರಾಜ್ಞತೆಯ ಪುಟವನ್ನು ವಾಸ್ತವದ ನೆಲೆಗೆ ತೆರೆದಿಟ್ಟಿದ್ದಾರೆ.ಬರೆದ ಶೈಲಿ ಮತ್ತು ಅನುಸಂದಾನ ಕ್ರಿಯೆ ವಿಚಾರ ಪ್ರಿಯವಾಗಿವೆ. ರೂಪಕಗಳ ವಸ್ತುಸ್ಥಿತಿ ಉತ್ತಮವಾಗಿ ಬಣ್ಣಿಸುವ ಕಲೆ ಲತಾಮಣಿ.ಎಂ.ಕೆ.ಇವರಿಗೆ ಸಿದ್ಧಿಸಿದೆ.

ಕೆಲವು ಸಂಭನೀಯ ಹೇಳಿಕೆಗಳು ಮತ್ತೆ….ಮತ್ತೆ…ಸರಳತೆಯಲಿ ಎಣೆದ ನುಡಿಗಳು, ವ್ಯವಹಾರಿಕ ಸತ್ಯಗಳಾಗಿ,ಸಮಸಮಾಜದ ಪರಸ್ತಿತಿಗಳಿಗೆ ತೆರೆದಿಟ್ಟ ಕನ್ನಡಿಯಂತೆ ಓದುಗರಿಗೆ ದರ್ಶನವಾಗುತ್ತದೆ. ಕವಯಿತ್ರಿ ಲತಾಮಣಿ.ಎಂ.ಕೆ.ಇವರ ಸಾಹಿತ್ಯವು ಸಾಂಗವಾಗಿ ಸಾಗಲಿ.

ಇನ್ನೂ ಉತ್ತಮೊತ್ತಮ ಕೃತಿಗಳನು ಕನ್ನಡ ನಾಡಿಗೆ ನೀಡಲಿ. ಓದುಗ ಮಿತ್ರರು ವಸಂತ ಗಾನ ದ ಸವಿಯನು ಸವಿದು ಪ್ರೋತ್ಸಾಹ ನೀಡಲೆಂದು ಬಯಸುತ್ತಾ, ಇವರ ಕಾವ್ಯವು ನಿತ್ಯ ಸತ್ಯವಾಗಲಿ ಎಂದು ಶುಭ ಕೋರುವೆನು.

ಶರಣಪ್ಪ ತಳ್ಳಿ ಕುಪ್ಪಿಗುಡ್ಡ
ಅಧ್ಯಕ್ಷರು.
*ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಗಂಗಾವತಿ.*

- Advertisement -
- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group