Homeಲೇಖನಲಾಕಡೌನ್ ; ತಮ್ಮ ಲಾಕ್ ತೆರೆಯಲು ಸದವಕಾಶ

ಲಾಕಡೌನ್ ; ತಮ್ಮ ಲಾಕ್ ತೆರೆಯಲು ಸದವಕಾಶ

ಲಾಕಡೌನನಿಂದಾಗಿ ಮತ್ತೊಮ್ಮೆ ಮನೆಯಲ್ಲೇ ಇರಬೇಕಾದ ಅನಿವಾರ್ಯತೆ ಬಂದಿದೆ. ದಿನನಿತ್ಯದ ಕೆಲಸಕ್ಕೆ ಬ್ರೇಕ್ ಬಿದ್ದಿದೆ. ಹೊರಗಡೆ ಹೋದರೆ ಕ್ರಿಯಾಶೀಲ ಆಗಿರ್ತೇವೆ ಇದೇನಪ್ಪಾ ಮನೆಯಲ್ಲೇ ಲಾಕ್ ಆಗಿ ಇರಬೇಕಾದ ಸ್ಥಿತಿ ಬಂತಲ್ಲ ಎಂದು ದಯವಿಟ್ಟು‌ ಕೊರಗಬೇಡಿ ಅದರಲ್ಲೂ ಗಂಡಸರಂತೂ ಮೊದಲೇ ಕೊರಗಬೇಡಿ.

ಗಂಡಸರು ಮನೆ ಎಂದರೇನೇ ಅಲರ್ಜಿ.ಮನೆಯಲ್ಲಿದ್ರಂತೂ ಬರೀ ಟಿವಿ ನೋಡೋದು,ಮೊಬೈಲ್ ಒತ್ತೋದು,ಸಮಯಕ್ಕೆ ಸರಿಯಾಗಿ ತಿನ್ನೋದು ,ಹಾಸಿಗೆಗೆ ಒರಗಿಕೊಳ್ಳುವುದಷ್ಟಕ್ಕೆ ಮಾತ್ರ ಸೀಮಿತವಾಗಿರುತ್ತಾರೆ. ಖಾಲಿ ಇರುವಾಗ ಇವರು ಮಾಡುವ ಅತ್ಯಂತ ಶ್ರಮದಾಯಕ‌ ಕೆಲಸವೆಂದರೆ ನ್ಯೂಜ್ ಪೇಪರ್ ತಿರುವಿ ಹೆಡ್ಡಿಂಗ್ಸ ನೋಡೋದು. ಯಾವಾಗ್ಲೋ ಒಂದಿನ ಮನೆಯಲ್ಲಿದ್ರೇನೇ ಬೇಸರಿಸಿಕೊಳ್ಳುವ ಈ ಗಂಡಸರಿಗೆ ಇನ್ನು ಹದಿನಾಲ್ಕು ದಿನ ಮನೆಯಲ್ಲಿ ಇರೋದು ಎಂದರೆ ಜೈಲಿನಲ್ಲಿ ಇದ್ದಂತೆಯೇ ಲೆಕ್ಕ. ಮನೆಯಲ್ಲೇ ಇದ್ದು ತಿಂದು, ಮಲಗಿ ಹದಿನಾಲ್ಕು ದಿನಗಳ ನಂತರ ಹದಿನಾಲ್ಕು ಕಿಲೋ ತೂಕ ಹೆಚ್ಚಿಸಿಕೊಂಡೇ ಹೊರಬಿದ್ದಾಗ ಇವರನ್ನು ಗುರುತು ಹಿಡಿಯುವುದೇ ಕಷ್ಟ. ಹಾಗಾಗಿ ಈ ಲೇಖನವನ್ನು ಗಂಡಸರಿಗೆ ಮೀಸಲಾಗಿ ಇಡುವೆ…

ಹೆಂಗಸರು (ಹೌಸ್ ವೈವ್ಸ್) ದಿನಾಲೂ ಮನೆಯಲ್ಲೇ ಇದ್ದರೂ ಎಂದೂ ಬೇಸರಿಸಿಕೊಳ್ಳಲ್ಲ. ಮೇಲಾಗಿ ಅವರ ಕೈಗಳಿಗೆ ಪುರುಷೊತ್ತಿಲ್ಲದ ಕೆಲಸ. ಸದಾ ಚುರುಕಿನಿಂದ ಇರುವ ಇವರು ಏನಾದರೊಂದು ಕೆಲಸವನ್ನು ಮಾಡುತ್ತಲೇ ಇರುತ್ತಾರೆ. ಪ್ರತಿ ಕೆಲಸದಲ್ಲೂ ಅದೇ ಆಸ್ಥೆ ಮತ್ತು ಆಸಕ್ತಿ ಅವರಿಗೆ. ಹೀಗಿರುವ ಇವರನ್ನು ನೋಡಿ ಬದುಕನ್ನು ಕಲಿಯಬೇಕಾಗಿದೆ. ಸದಾ ಬಿಡುವಿಲ್ಲದ ಕೆಲಸ ಮಾಡುವ ಮನೆ ಹೆಂಗಸರ ಕೈ ಕೆಳಗೆ ನಿಮಗೆ ಸಾದ್ಯವಾಗಬಲ್ಲ ಕೆಲಸವನ್ನು ಲಾಕಡೌನ್ ಅವಧಿಯಲ್ಲಿ ಮಾಡಿದರೆ ಅವರು ತಮ್ಮ ಉಪಕಾರವನ್ನು ಎಂದೆಂದೂ ಮರೆಯಲಾರರು. ಅಷ್ಟೇ ಅಲ್ಲದೇ ತಮಗೆ ವಿಶೇಷ ಗೌರವ ಪ್ರಾಪ್ತವಾಗುವುದರಲ್ಲಿ ಸಂದೇಹವಿಲ್ಲ. ತಾವು ಈ ಕೆಲಸ ಮಾಡುವಿರೆಂಬ ಆಶಾವಾದ ನನ್ನದು.

ಮನೆಯಲ್ಲಿ ಅವರ ಜೊತೆಗಿದ್ದು ಒಂದಿಷ್ಟು ಅಡುಗೆ ಮಾಡುವುದನ್ನು ಕಲಿತರೆ ನಾಳೆ ತಾವು ಏಕಾಂಗಿ ಆಗಿ ಇರಬೇಕಾದ ಸಂದರ್ಭದಲ್ಲಿ ಬೇಕಾಗಿರುವುದನ್ನು ತಾವೇ ಮಾಡಿ ತಿನ್ನಬಹುದು. ಇದರ ಜೊತೆಗೆ ಹೊರಗಡೆ ತಿಂದು ಆರೋಗ್ಯ ಹದಗೆಡಿಸಿಕೊಳ್ಳುವ ಮತ್ತು‌ ಡಾಕ್ಟರ್ ಗೆ ದಂಡ ನೀಡುವ ಪ್ರಮೇಯ ತಪ್ಪುತ್ತದೆ. ಹಾಗಾಗಿ ಈ ಹತ್ತು ಹದಿನೈದು ದಿನಗಳಲ್ಲಿ ಓರ್ವ ಒಳ್ಳೆಯ ಅಡುಗೆ ಭಟ್ಟ ತಾವಾಗಬಹುದು.ಪ್ರಯತ್ನಿಸಿ ನೋಡಿ.

ಗಂಡಸನಾಗಿ ನಾನು ಹೆಂಗಸರ ಕೈಯಲ್ಲಿ ಅಡುಗೆ ಮಾಡುವುದೇ? ಥೂ ..ಇದು ನನ್ನಿಂದಾಗಲ್ಲ ಬಿಡಿ ಎನ್ನುವ ಮನಸ್ಥಿತಿಯ ಗಂಡಸರಿಗೆ ಇನ್ನೂ ಬೇರೆ ಮಾದರಿಯ ಕೆಲಸಗಳಿವೆ. ಅವುಗಳನ್ನಾದರೂ ಮಾಡಿ. ಮನೆಯನ್ನು ಎಷ್ಟೇ ಸ್ವಚ್ಛವಾಗಿ ಇಟ್ಟುಕೊಂಡರೂ ಕಡಿಮೆಯೇ. ಕೆಲವು ಕಡೆ ಹೆಂಗಸರ ಕೈಗಳು ಹೋಗಲು ಸಾದ್ಯವಿಲ್ಲ. ಆದರೂ ಅವರು ಅವುಗಳನ್ನು ಮಾಡಿ ಮುಗಿಸಲು ಬಯಸಿರುತ್ತಾರೆ. ಆದರೆ ,ದಿನನಿತ್ಯದ ಹತ್ತು ಹಲವಾರು ಅತ್ಯವಶ್ಯಕ ಕೆಲಸಗಳ ಮಧ್ಯೆ ಅದು ಮರೆತೇ ಹೋಗಿರುತ್ತದೆ ಅಂತಹ ಕೆಲಸಗಳನ್ನು ತಾವು ಲಾಕ್ ಡೌನ್ ಅವಧಿಯಲ್ಲಿ ವಿಶೇಷವಾಗಿ ಕೈಗೆತ್ತಿಕೊಂಡರೆ ಮನೆಯೂ ಓರಣವಾಗಿರಬಲ್ಲುದು ಜೊತೆಗೆ ಮನಸ್ಸು ಕೂಡಾ.

ಇನ್ನು ಮನೆಯ ಹಿಂದೆ-ಮುಂದೆ, ಎಡ-ಬಲ, ಮೇಲೆ-ಕೆಳಗೆ, ಅಲುಗಾಡದೇ ಕೂತಿರುವ ಕೆಲ ವಸ್ತುಗಳು (ಪಾಟ್ಸ್, ಇಟ್ಟಿಗೆ, ಕಲ್ಲು, ಮನೆಯಲ್ಲಿ ಬೇಡವಾದ ಹಳೆಯ ವಸ್ತುಗಳು…ಇತ್ಯಾದಿ) ಎಷ್ಟೋ ಬಾರಿ ಓಡಾಡುವಾಗ ತಮಗೆ ಅಡಚಣೆ ಮಾಡಿದ್ದೂ ಉಂಟು. ಅವುಗಳನ್ನು ವ್ಯವಸ್ಥಿತ ರೀತಿಯಲ್ಲಿಡುವ ಇಲ್ಲವೇ ಹಾಳಾಗಿ ಹೋಗಿದ್ದರೆ ವಿಲೇವಾರಿ ಮಾಡಿ ಬೇರೆಡೆಗೆ ಸ್ಥಳಾಂತರಿಸುವ ಕೆಲಸಕ್ಕೆ ಕೈ ಹಾಕಬಹುದು.

ಖಾಲಿಯಾಗಿ ವ್ಯರ್ಥ ಬಿದ್ದು ಕಸ ಬೆಳೆದ ನೆಲವನ್ನು ಹದ ಮಾಡಿ ತಮ್ಮ ಮನೆಯ ತೋಟವನ್ನಾಗಿ ಮಾಡಿಕೊಳ್ಳಲು ಇದು ಸಕಾಲ. ಇದರಿಂದ ಮನೆಯ ಅಂದವೂ ಹೆಚ್ಚುವುದು. ಮಾಡಿ ನೋಡಿ. ಅದರ ಆನಂದ ಮನಸಾರೆ ಅನುಭವಿಸಿ.

ತಾವು ಯಾವಾಗ ಓದು ಮುಗಿಸಿ ಕೆಲಸಕ್ಕೆ ಸೇರಿಕೊಂಡಿದ್ದಿರೋ ಅಂದಿನಿಂದ ತಾವೇ ಸಂಗ್ರಹಿಸಿಟ್ಡ ಪುಸ್ತಕಗಳನ್ನು ಇಲ್ಲಿಯವರೆಗೂ ಕಣ್ತೆರೆದು ನೋಡಲು ಸಾಧ್ಯವಾಗಿಲ್ಲ. ನೋಡಲು ಸಮಯಾವಕಾಶ ಇದ್ದರೂ ಮೊಬೈಲ್ ಎಂಬ ಕಪ್ಪು ಸುಂದರಿಯ ಮುಖ ನೋಡುತ್ತಲೇ ಸಮಯ ಹಾಳು ಮಾಡಿದ್ದೀರಿ. ಈಗಲಾದರೂ ಅಂತಹ ದೂಳು ತಿಂದ ಪುಸ್ತಕಗಳನ್ನು ಎತ್ತಿ ಅವುಗಳಿಗೊದಗಿರುವ ದುಸ್ಥಿತಿಯನ್ನು ದೂರ ಮಾಡಿ. ಮುತ್ತು ಕೊಡುವ ಮಡದಿ (ಮೊಬೈಲ್) ಬಂದಾಗ ತುತ್ತು ಕೊಡುವ ತಾಯಿಯನ್ನು (ಪುಸ್ತಕ) ಮರೆತಿದ್ದೀರಿ.

ದಯವಿಟ್ಟು ಆ ಕೆಲಸ ಲಾಕ್ ಡೌನ್ ನ ಆದ್ಯತೆಗಳಲ್ಲಿ ಒಂದಾಗಲಿ. ಸಾದ್ಯವಾದರೆ ಒಂದಿಷ್ಟು ದಿನ ಮೊಬೈಲ್ ಬದಿಗಿರಿಸಿ ಓದಿದರೆ ಮನೆಯವರಿಗೂ ನೆಮ್ಮದಿ ತಮಗೂ ಖುಷಿ. ಮನೆಗೆ ಬಂದರೂ ಮೊಬೈನಲ್ಲಿಯೇ ಇರುವ ತಮ್ಮ ಮೇಲೆ ಮನೆಯಾಕೆಗೂ ಏನೋ ಒಂದು ಸಂದೇಹ ತುಂಬಿಕೊಂಡಾಗಿದೆ.

ಮೊಬೈಲ್ ಕೆಳಗಿರಿಸಿ, ಪುಸ್ತಕ ಕೈಗೇರಿಸಿ, ತಲೆ ಬಗ್ಗಿಸಿ ಓದಲು ಅಣಿಯಾದರೆ ಹೆಂಡತಿಯ ತಲೆಯಲ್ಲಿನ ಸಂದೇಹದ ಕಾರ್ಮೋಡ ದೂರ ಸರಿದು ಮತ್ತೆ ತಿಳಿಯಾಗುತ್ತದೆ. ತಲೆ ಬಗ್ಗಿಸಿ ಓದಿದ ಬಳಿಕ ತಲೆ ಎತ್ತರಿಸಿ ನಡೆಯುವ ತಾಕತ್ತೂ ಕೂಡಾ ತಮ್ಮಲ್ಲಿ ಸಹಜವಾಗಿ ಬೆಳೆಯುತ್ತದೆ. ಇದು ನನ್ನ ಸ್ವಂತ ಅನುಭವವೂ ಹೌದು. ಒಮ್ಮೆ ಪ್ರಯೋಗಾರ್ಥವಾಗಿ ಲಾಕ್ ಡೌನ್ ನಲ್ಲಿ ಈ ಕೆಲಸ ಮಾಡಿ ನೋಡಿ.

ದಿನನಿತ್ಯದ ಒತ್ತಡದ ಓಡಾಟದಲ್ಲಿ ಮನೆಯನ್ನೇ, ಮನೆಯವರನ್ನೇ, ಮಕ್ಕಳನ್ನೇ ಮರೆತ ನಮಗೆ ದೂರದಲ್ಲಿರುವ ತಂದೆ-ತಾಯಿ, ಅಣ್ಣ-ತಮ್ಮ, ಅಕ್ಕ-ತಂಗಿ, ಅತ್ತೆ-ಮಾವ, ಕಾಕಾ-ಕಾಕಿ, ದೊಡ್ಡಪ್ಪ-ದೊಡ್ಡಮ್ಮ ,ಹಳೆಯ ಗೆಳಯ-ಗೆಳತಿಯರು ಸೇರಿದಂತೆ ಇನ್ನಿತರ ನಮ್ಮ ಬಂಧುಗಳಂತೂ ಇನ್ಯಾವ ಲೆಕ್ಕ ? ಅವರ ಹೆಸರುಗಳೂ ಮರೆತು ಹೋಗಿವೆ. ಲಾಕ್ ಡೌನ್ ನೆಪದಿಂದಲಾದರೂ ಜಸ್ಟ್ ಪಾರ್ ಅ ಚೇಂಜ್ ಅಂತ ಕರೆ ಮಾಡಿ ಅವರನ್ನೊಮ್ಮೆ ಮಾತನಾಡಿಸಿ.

ಇದು ಸಂಬಂಧಗಳನ್ನು ಜೀವಂತವಾಗಿಡಲು ಸಹಕಾರಿ ಎಂಬ ವಿಚಾರ ನನ್ನದು. ಪೇಸ್ ಬುಕ್ ನಂತಹ ಜಾಲತಾಣಗಳಲ್ಲಿ ಕಷ್ಟಕ್ಕಾಗದ ಗೆಳೆಯರನ್ನು ಡಿಚ್ ಹೊಡೆದು ನಾನು ಈ ಮೇಲೆ ಹೇಳಿದ ಕೆಲಸ ಮಾಡಿ ನೋಡಿ. ಇದರಿಂದ ಖಂಡಿತ ತಮಗೂ ಖುಷಿ, ಅವರಿಗೂ ಖುಷಿ..

ಮೊದಲೆಲ್ಲ ತಮ್ಮ ಜೊತೆ ಓದು ಇತ್ತು,ಅದಕ್ಕೆ ಪೂರಕವಾಗಿ ಮನಶಾಂತಿಗಾಗಿ ಏನಾದರೂ ಗೀಚುವ ಒಳ್ಳೆಯ ಹವ್ಯಾಸ ಇತ್ತು. ಇತ್ತೀಚಿಗೆ ಅದನ್ನು ತಾವೂ ಮರೆತಿದ್ದೀರಿ ಅಷ್ಟೇ ಅಲ್ಲ, ಅದೂ ಕೂಡಾ ತಮ್ಮನ್ನು ಮರೆತಿದೆ. ಹೀಗಾಗಿ ತಮ್ಮಲ್ಲಿ ಅವಶ್ಯಕತೆ ಬೇಕಾಗುವಷ್ಟು ಹತ್ತಾರು ಶಬ್ಧ ಬಿಟ್ಟರೆ ಬೇರೇನೂ ಬಂಡವಾಳ ಉಳಿದಿಲ್ಲ. ಎಲ್ಲಾದರೂ, ಯಾರಾದರೂ ತಮ್ಮನ್ನು ಹತ್ತಾರು ಜನರೆದಿರು ಮಾತನಾಡಲು ಕರೆದರೆ ಹತ್ತಾರು ಮಾರು ದೂರ ಓಡುವಿರಿ

. ಏಕೆ ಹೀಗಾಯ್ತು?ಎಲ್ಲಿ ಹೋಯ್ತು ತಮ್ಮ ಮೊದಲಿನ ಮಾತುಗಾರಿಕೆ ? ಎಲ್ಲಿ ಹೋಯ್ತು ಆ ತಮ್ಮ ಬರಹ ? ತಮ್ಮ ದಿನನಿತ್ಯದ ಕರ್ತವ್ಯಕ್ಕೆಷ್ಟು ಬರಹ ಬೇಕೋ ಅದನ್ನು ಬಿಟ್ಟರೆ ತಮ್ಮಲ್ಲಿ ಏನೂ ಉಳಿದಿಲ್ಲ. ಸ್ವಾತಂತ್ರ್ಯ ದಿನಾಚರಣೆಗೋ,ಪ್ರಜಾರಾಜ್ಯ ದಿನಾಚರಣೆಗೋ ಅಥವಾ ಗಾಂಧಿ ಜಯಂತಿಗೋ ತಮ್ಮ ಮಕ್ಕಳಿಗೆ ಒಂದೆರಡು ಸಾಲು‌ ಭಾಷಣ ಗೀಚಿ ಕೊಡುವ ಬಂಡವಾಳವೂ ತಮ್ಮಲ್ಲಿ‌ ಉಳಿದಿಲ್ಲ.

ಅಲ್ಲೇ ಎಲ್ಲಾದರೂ ಗೂಗಲ್ ನಲ್ಲಿ ಸರ್ಚ್ ಮಾಡಿ ಬರೆದುಕೋ ಎಂದು ತಾವು ಎಷ್ಟು‌ ಬಾರಿ ಮಕ್ಕಳಿಗೆ ಹೇಳಿದ್ಧೀರಿ ನೆನಪು ಮಾಡಿಕೊಳ್ಳಿ. ಗಾಳಿಗೆ ಬಿದ್ದ ಕಬ್ಬಿಣಕ್ಕೆ ತುಕ್ಕು ಹಿಡಿದಂತೆ, ಬಿದ್ದಲ್ಲೇ ಬಿದ್ದ ಆ ಕೊರಡಿಗೆ ಗೆದ್ದಲು ಹಿಡಿದಂತೆ ತಾವಾಗಿದ್ದೀರಿ. ಲಾಕ ಡೌನ್. ತಮ್ಮ ಓದಿಗೆ ಮತ್ತು ಬರಹಕ್ಕೆ ಬಿದ್ದ ಲಾಕ್ ತೆರೆಯಲು ಸದಾವಕಾಶ ನೀಡಿದೆ. ನೋಡೋಣ ಈ ಚಾಲೆಂಜ್ ಸ್ವೀಕರಿಸಿ ಚಲನ ಸ್ಥಿತಿಗೆ ಬನ್ನಿ.

ಶಾಲಾ ದಿನಗಳಲ್ಲಿ ನಾನು ರ್ಯಾಂಕ್ ಹೋಲ್ಡರ್ ಅಂತಾ ಜಂಬ ಕೊಚ್ವುವ ನಮಗೆ ಇಂದು‌ ಒಂದು‌ ಹೋಲ್ಡರ್ ಜೋಡಿಸಿ ಲೈಟ್ ಹಚ್ಚುವ ಜ್ಞಾನವಿಲ್ಲ. ಗೋಲ್ಡ ಮೆಡೆಲಿಸ್ಟ ಎಂದು ಎದೆ ಉಬ್ಬಿಸಿ ಹೇಳುವ ನಮಗೆ ಮಕ್ಕಳಿಗೆ ಕಠಿಣವೆಂದೆಣಿಸುವ ವಿಷಯವನ್ನು ತಿಳಿಸಿಕೊಡುವ ಎದೆಗಾರಿಕೆ ಉಳಿದಿಲ್ಲ.

ಈಗಲೂ ಕಾಲ ಮಿಂಚಿಲ್ಲ ಲಾಕ್ ಡೌನ್ ಒಂದು ವರವಾಗಿ ಈಗ ನಮ್ಮ ವೈಯಕ್ತಿಕ‌ ಲಾಕ್ ಓಪನ್ ಮಾಡಲು ಅವಕಾಶ ಕಲ್ಪಿಸಿದೆ. ಮಕ್ಕಳಿಗಾಗಿ ಅಲ್ಲಿ ಇಲ್ಲಿ ಟ್ಯೂಶನ್ ಕ್ಲಾಸ್ ಹುಡುಕುವ ಬದಲು ನಾವೇ ನಮ್ಮ ಮಕ್ಕಳ ಪಠ್ಯ ತೆರೆದು ನೋಡಿದರೆ ತಂದೆಯ ಪಾತ್ರದ ಜೊತೆಗೆ ಗುರುವಿನ ಪಾತ್ರವನ್ನೂ ನಿಭಾಯಿಸಬಹುದು.ಟ್ಯೂಶನ್ ಖರ್ಚಾದರೂ ಉಳಿದೀತು.

ವಾಕಿಂಗ್ ಇಲ್ಲ, ವಾರ್ಮಪ್ ಇಲ್ಲ, ಆಸನಗಳಿಲ್ಲ, ಪ್ರಾಣಾಯಾಮಗಳಿಲ್ಲ, ಧ್ಯಾನ ವಿಲ್ಲ, ಪೂಜೆ ಪುನಸ್ಕಾರಗಳಿಲ್ಲ, ಮಂತ್ರೋಚ್ಛಾರಣೆ ಇಲ್ಲ, ನಗುವಂತೂ ಮೊದಲೇ ಇಲ್ಲ. ಇದನ್ನು ತಾವು ಎಂದಿನಿಂದ ಮರೆತಿರುವಿರಿ ಎಂಬುದೂ ಮರೆತ್ಹೋಗಿದೆ. ಇವುಗಳೆಲ್ಲವನ್ನೂ ರಿಟೇಕ್ ಮಾಡಲು ಇದರಂತಹ ಒಳ್ಳೆಯ ಅವಕಾಶ ತಮಗೆ ಮತ್ತೆ ಮುಂದೆಂದೂ ಸಿಗದು. ಇದನ್ನು ಸರಿಯಾಗಿ ಬಳಸಿಕೊಳ್ಳಿ.

ನನ್ನ ಈ ಅನುಭವಗಳೇ ತಮ್ಮ ಅನುಭವಗಳೂ ಆಗಿರಬಹುದು.ಏಕೆಂದರೆ ನಮ್ಮ ಮನೆಯಂತೆ ತಮ್ಮ ಮನೆ ದೋಸೆಯೂ ತೂತೇ .ನನ್ನೀ ಮಾತುಗಳು ಇಷ್ಟವಾದರೆ ಎಷ್ಟೇ ಕಷ್ಟವಾದರೂ ಪಾಲಿಸಿ. ಲಾಕ್ ಡೌನ್ ನಲ್ಲಿ ತಮ್ಮ ಲಾಕ್ ಓಪನ್ ಮಾಡಿ.ಜೈ ಹೋ..


ಬಸನಗೌಡ.ಶಿ.ಪಾಟೀಲ (ಶಿವಪಾರ್ವತಿಸುತ) ಸಾಲಹಳ್ಳಿ,ಬೆಳಗಾವಿ ಜಿಲ್ಲೆ
(ಲೇಖಕರು ವೃತ್ತಿಯಿಂದ ಬೋಧಕರು)

RELATED ARTICLES

Most Popular

error: Content is protected !!
Join WhatsApp Group