ಮೂಡಲಗಿ – ೧೫ ನೇ ಹಣಕಾಸು ಆಯೋಗದಲ್ಲಿ ಐಡಿಎಸ್ಎಂಟಿ ಯೋಜನೆಯ ಅಡಿಯಲ್ಲಿ ಮೂಡಲಗಿಯ ಕಲೇಶ್ವರ ವೃತ್ತದಿಂದ ಪೊಲೀಸ್ ಠಾಣೆಯವರೆಗೆ ತೀರಾ ಇತ್ತೀಚೆಗೆ ಕೈಗೊಳ್ಳಲಾದ ಡಾಂಬರು ರಸ್ತೆಯಲ್ಲಿ ಈಗಲೇ ಮೊಳಕಾಲುದ್ದದ ತಗ್ಗು ಬಿದ್ದಿದೆ.
ಪೊಲೀಸ್ ಠಾಣೆಗೆ ಹೋಗುವ ಗೇಟ್ ಎದುರಿಗೇ ಈ ತಗ್ಗು ಬಿದ್ದಿದ್ದು ಕಳಪೆ ರಸ್ತೆ ಕಾಮಗಾರಿಯ ದರ್ಶನ ಮಾಡಿಸುತ್ತಿದೆ ! ಈ ರಸ್ತೆ ನಿರ್ಮಾಣಕ್ಕೆ ೪೧.೬೦ ಲಕ್ಷ ರೂ. ವೆಚ್ಚವಾಗಿದೆಯೆನ್ನಕಾಗಿದ್ದು ತೆಳುವಾದ ಡಾಂಬರೀಕರಣ ಮಾಡಿ ಕೈ ತೊಳೆದುಕೊಳ್ಳಲಾಗಿದೆ.
ರಸ್ತೆ ಕಾಮಗಾರಿಯಲ್ಲಿ ಶಿಸ್ತು ಅಥವಾ ಶ್ರದ್ಧೆಯಾಗಲಿ ಕಂಡುಬರದೇ ಕೇವಲ ನೆಪ ಮಾತ್ರಕ್ಕೆ ರಸ್ತೆ ನಿರ್ಮಿಸಿದಂತೆ ಕಂಡುಬರುತ್ತಿದೆ ಯಾಕೆಂದರೆ ಮೊದಲು ಕಲ್ಮೇಶ್ವರ ವೃತ್ತದಿಂದ ಕನ್ನಡ ಶಾಲೆಯವರೆಗೆ ಮಾತ್ರ ರಸ್ತೆ ಮಾಡಲಾಗಿತ್ತು. ಈ ಬಗ್ಗೆ ಪತ್ರಿಕೆಯಲ್ಲಿ ‘ಈ ರಸ್ತೆಗೆ ೪೦ ಲಕ್ಷ ವೆಚ್ಚ’ ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ಪ್ರಕಟವಾದ ಮೇಲೆ ಮತ್ತೆ ರಸ್ತೆ ಕಾಮಗಾರಿ ಕೈಗೊಂಡು ಪೊಲೀಸ್ ಠಾಣೆಯವರೆಗೆ ತಂದು ನಿಲ್ಲಿಸಲಾಯಿತು ! ಡಾಂಬರೀಕರಣದ ಮೇಲೆ ಬಿಳಿ ರೇಡಿಯಂ ಮಾತ್ರ ಕನ್ನಡ ಶಾಲೆಯವರೆಗೆ ಮಾತ್ರ ಉಳಿಯಿತು ! ಕೆಲವೇ ದಿನಗಳ ಹಿಂದೆ ನಿರ್ಮಾಣಗೊಂಡ ಈ ರಸ್ತೆಯಲ್ಲಿ ಮೊಳಕಾಲುದ್ದದ ತಗ್ಗು ಬಿದ್ದು ವ್ಯವಸ್ಥೆಯನ್ನು ಅಣಕಿಸುವಂತಿದೆ.
ಇದು ಮುಖ್ಯ ರಸ್ತೆಯಾಗಿರುವುದರಿಂದ ನಿತ್ಯ ನೂರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ಪೊಲೀಸ್ ಠಾಣೆಗೇ ಸಾಕಷ್ಟು ವಾಹನಗಳು ಬರುತ್ತವೆ. ಯಾವಾಗ ಯಾವ ಬೈಕ್ ಈ ತಗ್ಗಿನಲ್ಲಿ ಸ್ಕಿಡ್ ಆಗಿ ಬೀಳುತ್ತದೆಯೋ ದೇವರೇ ಬಲ್ಲ.
ಈ ಬಗ್ಗೆ ರಸ್ತೆಯ ಗುತ್ತಿಗೆದಾರ ಗಂಗರಡ್ಡಿಯವರಿಗೆ ಕಾಲ್ ಮಾಡಿದರೆ ಅವರು ಸ್ಪಂದಿಸಲೇ ಇಲ್ಲ. ಇದೇ ಗುತ್ತಿಗೆದಾರರು ನಗರದ ಚನ್ನಮ್ಮ ನಗರದಲ್ಲಿ ನಿರ್ಮಿಸಿದ್ದ ಡಾಂಬರು ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂಬುದಾಗಿ ಜಿಲ್ಲಾ ಗುಣಮಟ್ಟ ತಪಾಸಣಾ ಅಧಿಕಾರಿಗಳು ೨೦೨೩ ರಲ್ಲಿ ತನಿಖೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು. ಮುಂದೆ ಏನು ಕ್ರಮ ಕೈಗೊಂಡರು ಎಂಬುದು ಗೊತ್ತಾಗಲೇ ಇಲ್ಲ. ಇನ್ನು ಈ ರಸ್ತೆಯ ಗುಣಮಟ್ಟ ತಪಾಸಣೆ ಆಗಿದೆಯೋ ಇಲ್ಲವೋ ಸಂಬಂಧಪಟ್ಟವರು ತಿಳಿಸಬೇಕು.
ಉಮೇಶ ಬೆಳಕೂಡ,, ಮೂಡಲಗಿ