spot_img
spot_img

ಸ್ತ್ರೀಕುಲದ ಕೀರ್ತಿಯನ್ನು ವರ್ಧಿಸಿದ ಶ್ರೀಶೈಲ ಶರಣೆ ಹೇಮರಡ್ಡಿ ಮಲ್ಲಮ್ಮ

Must Read

- Advertisement -

ಶಿವಶರಣೆ ಹೇಮರಡ್ಡಿ ಮಲ್ಲಮ್ಮ, ಮೌನ ತಪಸ್ವಿನಿ ಅವರ ಅಂತರಂಗವು ಮೃದುವಾದಷ್ಟೇ ದೈವಿ ಸಾಧನೆಯಿಂದ ಹದವಾಗಿತ್ತು ಪ್ರತಿವರ್ಷ ಮೇ ೧೦ ರಂದು ಮಹಾಶರಣೆ ಮಲ್ಲಮ್ಮಳ ಜಯಂತಿ ಉತ್ಸವವನ್ನು ಸರ್ಕಾರ ಆಚರಿಸಲು ಕರೆ ಕೊಟ್ಟಿದೆ. ಬರೀ ಮಲ್ಲಮ್ಮಳ ಪೋಟೋ ಪೂಜಿಸಿದರೆ ಮಾತ್ರ ಅದು ಆಚರಣೆ ಅಲ್ಲ. ಅವಳ ಬದುಕಿನ ರೀತಿಯನ್ನು ಮೌಲ್ಯಗಳನ್ನು ತಿಳಿಸುವ ಕಾರ್ಯ ಜರುಗಬೇಕು.

ಭಾರತದೇಶ ಧರ್ಮದ ನೆಲೆ, ಭಕ್ತಿಯ ಬೀಡು ಋಷಿಗಳ ತಪೋಭೂಮಿಯೆಂದು ಪ್ರಸಿದ್ಧಿ ಪಡೆದಿದೆ. ದೇಶದಲ್ಲಿ ಶರಣರು, ಸಂತರು, ದಾರ್ಶನಿಕರು ಕಾಲಕಾಲಕ್ಕೆ ಜನಿಸಿ ಧರ್ಮದ ಮೂಲಕ ಜನರ ಬದುಕು ಹಸನುಗೊಳಿಸಿದ್ದಾರೆ. ಸಮೃದ್ಧಿಯ ನಾಡು ಆಂದ್ರಪ್ರದೇಶದ ಶ್ರೀಶೈಲ ಕ್ಷೇತ್ರ ಪ್ರಾಚೀನ ಕಾಲದಿಂದಲೂ ಪ್ರಸಿದ್ಧಿ ಪಡೆದಿದ್ದು. ಈ ಕ್ಷೇತ್ರದ ಅದಿದೇವನಾದ ಶ್ರೀ ಮಲ್ಲಿಕಾರ್ಜುನನ ಪರಮಭಕ್ತೆ ಹೇಮರಡ್ಡಿ ಮಲ್ಲಮ್ಮ. ಸತಿ ಸಾದ್ವಿ ಮಲ್ಲಮ್ಮನ ಭಕ್ತಿಗೆ ಮೆಚ್ಚಿ ಅನವರತ ಬೆಂಬಲಿಸಿ ಅವಳ ಭಕ್ತಿಯನ್ನು ಉತ್ಕಟ ಪರೀಕ್ಷೆಯ ಮೂಲಕ ಮನೆಯವರೆಗೆ ಮತ್ತು ಜನಸಾಮಾನ್ಯರಿಗೆ ಅರಿಯುವಂತೆ ಮಾಡಿ ಕೊನೆಗೆ ತನ್ನಲ್ಲೆ ಅಂತರ್ಧಾನವಾಗುವಂತೆ ಕರುಣಿಸಿದವನೇ ಶ್ರೀಶೈಲ ಮಲ್ಲಯ್ಯ.

ಅವಳ ಹೆಸರ ಹೇಳಬೇಡ
ಊರನರಸಿ ದಣಿಯಬೇಡ
ಹೆಣ್ಣೇ ಅವಳ ಹೊತ್ತ ಹೆಸರು
ಹೆಣ್ಣೇ ಅವಳ ಹೆತ್ತ ಬಸಿರು
ಕಡ್ಲಂಗೋಡು ಶಂಕರಭಟ್ಟ

- Advertisement -

ವೇದಗಳ ಕಾಲದಲ್ಲಿದ್ದ ಗಾರ್ಗಿ ಮೈತ್ರೇಯಿಯರ ಬೌಧ್ಧಿಕ ಸಾಧನೆ ಅಮೋಘವಾಗಿರುವಂತೆ ಪುರಾಣ ಕಾಲದಿಂದಲೂ ಆದಿಶಕ್ತಿ ದುಷ್ಟ ಶಿಕ್ಷಕಿಯಾಗಿ ಸ್ತ್ರೀ ಸರ್ವಶಕ್ತಿಯನ್ನು ಮೆರೆದಿರುವಳು.ಶಿಷ್ಟ ರಕ್ಷಕಿಯಾಗಿ,ಸರ್ವಶಕ್ತಿಯನ್ನು ಹಿಂದೂ ಮಹಾಕಾವ್ಯಗಳಾದ ರಾಮಾಯಣ ಮಹಾಭಾರತ ಕೃತಿಗಳ ರಚನೆಗೆ ಸ್ತ್ರೀ ಕಾರಣಳು.

ಕಾರ್ಯೇಷು ದಾಸಿ,
ಸಲಹೇಷು ಮಂತ್ರಿ,
ಭೂಜೇಷು ಮಾತ,
ಶಯನೇಷು ರಂಭಾ,
ನಾರಿ ಕ್ಷಮಯಾಧರಿತ್ರಿ”

ಎಂದಿದ್ದಾರೆ. ಮನು ತನ್ನ “ಮನುಸ್ಮೃತಿ”ಯಲ್ಲಿ” “ಯತ್ರ ನಾರ್ಯೇಷ್ತು ಪೂಜ್ಯತಾ” ಎಂದಿದ್ದಾರೆ. ಹೀಗೆ ನಮ್ಮ ದೇಶದಲ್ಲಿ ನಾರಿಯರು ಪೂಜ್ಯನೀಯರಾಗಿರುವರು.ಅಂಥ ಪೂಜ್ಯನೀಯ ಸಾನ್ಥ ಮಲ್ಲಮ್ಮಳದು ಕೂಡ.

- Advertisement -

ಹೇಮರಡ್ಡಿ ಮಲ್ಲಮ್ಮಳ ಕುರಿತು ಅಧ್ಯಯನಗೈದ ಬಾಗಲಕೋಟ ಜಿಲ್ಲೆಯ ಹುನಗುಂದದ ಡಾ.ಮಲ್ಲಣ್ಣ ನಾಗರಾಳ ಆಂಧ್ರದಲ್ಲಿ ಕಾಕತೀಯ ಅರಸರ ಆಳ್ವಿಕೆ ಕುರಿತು ಹೀಗೆ ತಿಳಿಸುವರು.

“ಆಂದ್ರ ಪ್ರದೇಶವನ್ನು ಬಹು ವಿಜೃಂಭಣೆಯಿಂದ ಆಳಿದ ಅರಸರೆಂದರೆ ಶಿವಭಕ್ತ ಸಂಪನ್ನರಾದ ವರಂಗಲ್ಲಿನ ಕಾಕತೀಯ ಅರಸು ಕ್ರಿ.ಶ. ೧೩೨೬ ರಲ್ಲಿ ಕಾಕತೀಯ ಸಾಮ್ರಾಜ್ಯ ಪತನವಾದ ನಂತರ ಕಾಕತೀಯ ಪ್ರತಾಪರುದ್ರ ದೇವನ ಸೇನಾಪತಿಯಾದ ವೇಮಾರಡ್ಡಿ ಸ್ವತಂತ್ರನಾಗಿ “ವಿನುಕೊಂಡು” ಪ್ರದೇಶವನ್ನು ಕ್ರಿ.ಶ ೧೩೩೯ ರ ವರೆಗೆ ಆಳಿದನು. ಇವನ ನಂತರ ಮಗನಾದ ದೇಶಟಿ ವೇಮಾರಡ್ಡಿಯು ೧೩೫೦ ರ ವರೆಗೆ ಆಳಿದನು. ಇವನು ಪರಾಕ್ರಮಿಯಂತೆ ಧರ್ಮಿಷ್ಟನಾಗಿದ್ದನು. ಅವಚಿ ದೇವಯ್ಯ ಶೆಟ್ಟಿಯ ಸಹಾಯದಿಂದ ಶ್ರೀಶೈಲ ಪರ್ವತಕ್ಕೆ ಸೋಪಾನ ಕಟ್ಟಿಸಿ ಆಂದ್ರಕವಿ ಶ್ರೀನಾಥನಿಂದ ವೀರಮಾಹೇಶ್ವರ ಚಕ್ರವರ್ತಿ ಎಂದು ಹೊಗಳಿಸಿಕೊಂಡಿರುವನು.

ಇವನ ನಂತರ ಅನಪೋತ ಭೂಪಾಲ ಅನವೇಮಾರಡ್ಡಿ, ಕುಮಾರ ಗಿರಿರಡ್ಡಿ ಅಧಿಕಾರಕ್ಕೆ ಬಂದರು. ಕುಮಾರಗಿರಿರಡ್ಡಿ ರಾಜ್ಯಭಾರಕ್ಕೆ ಅಸಮರ್ಥನಾದ್ದರಿಂದ ಅನವೇಮರಡ್ಡಿಯ ಮೊಮ್ಮಗ ಪದಕೋಟಿ ವೇಮಭೂಪಾಲನು ಅವನ ರಾಜ್ಯವನ್ನು ವಶಪಡಿಸಿಕೊಂಡನು. ಅನಿವಾರ್ಯವಾಗಿ ಕುಮಾರ ಗಿರಿರಡ್ಡಿ ತನ್ನ ಮಕ್ಕಳಾದ ಕೋಮಟಿ ವೆಂಕಾರರಡ್ಡಿ, ನಾಗೇಂದ್ರರಡ್ಡಿ, ಭರಮರಡ್ಡಿ ಹಾಗೂ ವೇಮಾರಡ್ಡಿಯವರೊಂದಿಗೆ ಶ್ರೀಶೈಲ ಪರ್ವತ ಸಮೀಪದ ಸಿದ್ದಾಪೂರಕ್ಕೆ ಬಂದು ನೆಲಸಿದನು.” ಎಂಬ ಸಂಗತಿ ತಿಳಿಸಿರುವರು.

ಹೇಮರಡ್ಡಿ ಮಲ್ಲಮ್ಮಳ ಕುರಿತು ಸರಕಾರಿ ಪ್ರಥಮದರ್ಜೆ ಮಹಾವಿದ್ಯಾಲಯ ಆಳಂದದಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದ ಡಾ.ಸುಮಂಗಲಾ ನಂದೀಶ ರಡ್ಡಿಯವರು ಪ್ರೊ.ಎಸ್.ಎಂ.ಹಿರೇಮಠರ ಮಾರ್ಗದರ್ಶನದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಸಂಶೋಧನಾ ಪ್ರಬಂಧವನ್ನು ಸಲ್ಲಿಸಿ ೨೦೧೦ ರಲ್ಲಿ ಡಾಕ್ಟರೇಟ್ ಪದವಿ ಗೌರವವನ್ನು ಪಡೆದಿರುವರು.ಇವರು ಕ್ಷೇತ್ರ ಅಧ್ಯಯನವನ್ನು ವೈಶಿಷ್ಟ್ಯಪೂರ್ಣವಾಗಿ ಮಾಡಿದ್ದು ಅಲ್ಲಿಯೂ ಕೂಡ ಮಲ್ಲಮ್ಮಳ ಬದುಕಿನ ಮೇಲೆ ಬೆಳಕು ಚೆಲ್ಲುವ ಕಾರ್ಯವನ್ನು ಮಾಡಿರುವರು.

ಕ್ರಿ.ಶ. ೧೫ ನೇ ಶತಮಾನದಲ್ಲಿ ಶ್ರೀಶೈಲ ಸುತ್ತಮುತ್ತಲಿನ ಪ್ರಾಂತಗಳನ್ನು ಅನೇಕ ರಡ್ಡಿ ಜನಾಂಗದ ಮನೆತನಗಳು ಆಳುತ್ತಿದ್ದವು. ಈ ಮನೆತನಗಳಿಗೆ ಪಕನಾಕರಡ್ಡಿ ಕೊಂಡವೀಡುರೆಡ್ಡಿ ಮತ್ತು ಬಡಗನಾಡು ರಡ್ಡಿ ಎಂದು ಕರೆಯುತ್ತಿದ್ದರು. ಇತಿಹಾಸ ಪ್ರಸಿದ್ದವಾದ ಶ್ರೀಶೈಲದ ದಕ್ಷಿಣ ಭಾಗದಲ್ಲಿರುವ ರಾಮಪೂರವು ಶಿವಭಕ್ತಿ ಸಂಪನ್ನರಿಂದ ತುಂಬಿತ್ತು. ಈ ಊರಿನಲ್ಲಿ ಧರ್ಮ ಮತ್ತು ಭಕ್ತಿಗೆ ಸೋಮರಡ್ಡಿ ಎಂಬ ಮನೆತನ ಹಸರಾಗಿತ್ತು.

ಸೋಮರೆಡ್ಡಿಯ ಮನೆಯಲ್ಲಿ ನಾಗರಡ್ಡಿ ಮತ್ತು ಗೌರಮ್ಮ ದಂಪತಿಗಳು ಶ್ರೀಶೈಲ ಮಲ್ಲಿಕಾರ್ಜುನನ್ನು ಪರಮಭಕ್ತರು. ಸದಾಕಾಲ ಸೇವಾನಿರತರು. ಧನ-ಕನಕಾದಿಯಿಂದ ಸಂಪನ್ನರು. ಆದರೆ ಇವರಿಗೆ ಮಕ್ಕಳ ಭಾಗ್ಯ ಮಾತ್ರ ಇರಲಿಲ್ಲ. ಮಕ್ಕಳಿಗಾಗಿ ಹಗಲಿರುಳು ಶ್ರೀಶೈಲ ಮಲ್ಲಿಕಾರ್ಜುನನನ್ನು ಪ್ರಾರ್ಥಿಸುತ್ತಿದ್ದರು. ಶ್ರೀಶೈಲ ಮಲ್ಲಿಕಾರ್ಜುನನ ಅವರ ಭಕ್ತಿಗೆ ಮೆಚ್ಚಿದನು. ಒಂದು ದಿನ ದಂಪತಿಗಳು ಪ್ರಾರ್ಥಿಸಿ ಮಲಗಿದಾಗ ಕನಸಿನಲ್ಲಿ ಬಂದು “ಭಕ್ತರೆ ಚಿಂತಿಸಬೇಡಿ ನಿಮಗೆ ಮಹಿಮಾಶಾಲಿಯಾದ ಸತ್ಪುತ್ರಿ ಜನಿಸುವಳು ನಿಮ್ಮ ಮನೆತನದ ಕೀರ್ತಿಯನ್ನು ಲೋಕದಲ್ಲಿ ಬೆಳಗುವಳೆಂದು ಅನುಗ್ರಹಿಸಿ” ಮಾಯವಾದನು. ಎಚ್ಚತ್ತ ದಂಪತಿಗಳು ಶ್ರೀಶೈಲ ಮಲ್ಲಿಕಾರ್ಜುನನ್ನು ನೀಡಿದ ಆಶೀರ್ವಾದವು ಬೇಗ ದೊರೆಯಲೆಂದು ಅನುದಿನ ಮಲ್ಲಯ್ಯನನ್ನು ಪೂಜಿಸಿದರು.

ಕೆಲವೇ ದಿನಗಳಲ್ಲಿ ಗೌರಮ್ಮ ಗರ್ಭಧರಿಸಿದಳು. ನವಮಾಸ ತುಂಬಿ ಕ್ರಿ.ಶ. ೧೪೨೨ ರಲ್ಲಿ ಮುಹೂರ್ತದಲ್ಲಿ ಸುಲಕ್ಷಣವಾದ ಸುಪುತ್ರಿಗೆ ಜನ್ಮವಿತ್ತಳು. ಬಂಧು ಬಾಂಧವರು ಸೇರಿ ಗುರುಗಳ ಸಮ್ಮುಖದಲ್ಲಿ ಸಂತೋಷದಿಂದ ಶ್ರೀಶೈಲ ಮಲ್ಲಿಕಾರ್ಜುನನ ಹರಕೆಯಿಂದ ಮಗು ಪಡೆದಿದ್ದರಿಂದ “ಮಲ್ಲಮ್ಮ”ನೆಂದು ನಾಮಕರಣ ಮಾಡಿದರು.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಚಿಕ್ಕಮಗು ಇರುವಾಗಲೇ ಮಲ್ಲಮ್ಮ ದೈವಭಕ್ತಳು. ತನ್ನ ಗೆಳತಿಯರ ಜೊತೆ ಆಟವಾಡುವಾಗಲೂ ದೇವರ ಪೂಜೆ ಮಾಡುತ್ತಿದ್ದಳಂತೆ. ಪ್ರತಿಯೊಂದರಲ್ಲಿಯೂ ದೈವತ್ವ ಕಾಣುತ್ತಿದ್ದ ಈಕೆ ಆಟವಾಡುವಾಗ ಕೈಗೆ ಸಿಕ್ಕ ಕಾಳು ಹಣ್ಣು ನೈವೆದ್ಯ ಮಾಡಿ ದೇವರಿಗೆ ಉಣಿಸುವಳು. ಹೀಗೆ ದೇವರ ಆಟದಲ್ಲಿಯೇ ಮಲ್ಲಮ್ಮ ಬೆಳೆದಳು.

ಒಮ್ಮೆ ಮಲ್ಲಮ್ಮನ ದೈವ ಪರೀಕ್ಷೆ ಜರುಗಿತು. ರೋಗದಿಂದ ಬಳಲುತ್ತಿದ್ದ ಹಣ್ಣು-ಹಣ್ಣಾದ ಮುದುಕನೊಬ್ಬ “ಅಮ್ಮಾ ನೀರು ಕೊಡಿ ನನಗೆ ಬಾಯಾರಿಕೆ ಆಗಿದೆ ನೀರು ಕೊಡಿ ತಾಯಿ” ಎಂದು ಬೇಡಿದನಂತೆ. ಇವರಿದ್ದ ಆ ಓಣಿಯಲ್ಲಿ ತಿರುಗಾಡುವ ಯಾವ ಜನರೂ ಆತನನ್ನು ನೋಡಿದರೂ ನೋಡದಂತೆ ಮೂಗು ಬಾಯಿ ಮುಚ್ಚಿಕೊಂಡು ನಡೆಯತೊಡಗಿದರು. ಮುದುಕ ಒಂದೇ ಸಮನೆ ಕೂಗಿಕೊಳ್ಳುವದನ್ನು ಮನೆಯ ಮುಂದೆ ಗೆಳತಿಯರೊಂದಿಗೆ ಆಟವಾಡುವ ಮಲ್ಲಮ್ಮ ನೋಡಿದಳು. ಆಡುವುದು ಬಿಟ್ಟು ಓಡಿ ಬಂದು ಮನೆಯೊಳಗೆ ಹೋಗಿ ತಂಬಿಗೆಯಲ್ಲಿ ನೀರು ತಂದು ”ಕುಡಿಯಿರಿ” ಎಂದು ಕೊಟ್ಟಳು. ನೀರು ಕುಡಿದ ಮುದುಕ “ನಿನ್ನ ದಯಾಗುಣದಿಂದ ಬದುಕಿದೆನು ಮಗಳೆ ನಿನ್ನ ಕೀರ್ತಿ ನಾಡಿನ ತುಂಬಾ ಬೆಳಗಲಿ” ಎಂದು ಆಶೀರ್ವದಿಸಿ ಹೋದನು ಎಂಬ ಒಂದು ಘಟನೆ ಅವಳಲ್ಲಿದ್ದ ದಯೆ,ಕರುಣೆಗೆ ಹಿಡಿದ ಕೈಗನ್ನಡಿ.ಅವಳ ಬದುಕಿನುದ್ದಕ್ಕೂ ಇಂಥ ಅನೇಕ ಸಂಗತಿಗಳನ್ನು ಅವಳ ಚರಿತ್ರೆಯಲ್ಲಿ ನಾವು ಕಾಣುತ್ತೇವೆ.

ಮಲ್ಲಮ್ಮ ದೊಡ್ಡವಳಾಗಿ ಬೆಳೆದು ನಿಂತಳು. ತಂದೆ-ತಾಯಿಗಳು ಮಲ್ಲಮ್ಮನಿಗೆ ವರ ನೋಡಲು ಪ್ರಾರಂಭಿಸಿದರು. ಗಿರಿರಡ್ಡಿ ಪದ್ಮಾವತಿ ದಂಪತಿಗಳಿಗೆ ಐದು ಜನ ಗಂಡು ಮಕ್ಕಳು ಜನಿಸಿದರು. ಮೊದಲನೆಯವನು ಕೋಮಟಿ ವೆಂಕಾರಡ್ಡಿ, ಎರಡನೆಯವರನು ನಾಗರಡ್ಡಿ ಮೂರನೆಯವನು ಭರಮರಡ್ಡಿ, ನಾಲ್ಕನೆಯವನು ನಾಗೇಂದ್ರ ರಡ್ಡಿ, ಐದನೆದವನು ವೇಮನರಡ್ಡಿ. ಇವರಲ್ಲಿ ಮೂರನೆಯವನಾದ ಬರಮರಡ್ಡಿಯು ಸ್ವಭಾವತ ಮುಗ್ದನೂ ವ್ಯವಹಾರ ಚತುರನಲ್ಲದಿದ್ದರೂ ದೈವಭಕ್ತಿ ಸಂಪನ್ನನು. ಹೇಮರಡ್ಡಿಯವರ ಮಗ ಭರಮರಡ್ಡಿಯೊಂದಿಗೆ ರಾಮಪೂರದ ಸೋಮರೆಡ್ಡಿಯವರ ಮಗಳು ಮಲ್ಲಮ್ಮನ ಮದುವೆ ಕ್ರಿ.ಶ. ೧೪೪೪ ರಲ್ಲಿ ಶುಭದಿನದಲ್ಲಿ ವಿಜೃಂಭಣೆಯಿಂದ ನೆರವೇರಿತು. ಇದು ಕೂಡ ಅವಳ ಬದುಕಿನಲ್ಲಿ ತಿರುವು ಪಡೆದುಕೊಂಡ ಘಟ್ಟ.

ಮಲ್ಲಮ್ಮ ಒಳ್ಳೆ ಸುಶೀಲೆ ಮನೆಯ ಕೆಲಸವನ್ನು ತಾನೇ ಹಿರಿಯಳೆಂದು ಒಳ್ಳೆ ಹಿಡಿತದಿಂದ ಮಿತವ್ಯಯದಿಂದ ಅಚ್ಚುಕಟ್ಟಾಗಿ ದಕ್ಷತೆಯಿಂದ ಮಾಡುತ್ತಿದ್ದಳು. ನಸುಕಿನಲ್ಲಿ ಎದ್ದು ಸ್ನಾನಮಾಡಿ ಭಸ್ಮಧರಿಸಿ ಹಿರಿಯರಿಗೆ ನಮಸ್ಕರಿಸಿ ಅಂಗಳವನ್ನು ಗೋಮಯದಿಂದ ಸಾರಿಸಿ ರಂಗದಲ್ಲಿ ಚಿತ್ರಿಸಿ ಉತ್ಸಾಹ ಬೀರುವಳು. ಅತಿಥಿಗಳನ್ನು ಆದರದಿಂದ ಸತ್ಕರಿಸುವಳು.ಅವಳ ದೈವಭಕ್ತಿ ತನ್ನಷ್ಟಕ್ಕೆ ತಾನೇ ಪತಿಯ ಮನೆಯಲ್ಲಿ ಸಾಂಗವಾಗಿ ಸಾಗಿತ್ತು. ಇದು ಅವಳ ಸವತಿಯರಿಗೆ ಮಲತಾಯಿಗೆ ಸಹಿಸದಾಯಿತು. ಅವರು ಮಲ್ಲಮ್ಮನ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಕಾಡತೊಡಗಿದರು. ಇದರ ಪರಿಣಾಮವಾಗಿ ಮಲ್ಲಮ್ಮನಿಗೆ ಮನೆಯ ದನವನ್ನು ಕಾಯುವ ಕೆಲಸ ಒಪ್ಪಿಸಲಾಯಿತು.

ಮಲ್ಲಮ್ಮನು ತನಗೊಪ್ಪಿಸಿದ ದನಕಾಯುವ ಕೆಲಸವನ್ನು ಕೂಡ ನಿಷ್ಠೆಯಿಂದ ಮಾಡುತ್ತಾ ಇದೊಂದು ಮಲ್ಲಿಕಾರ್ಜುನನ ಸೇವೆಯೆಂದು ತಿಳಿದಳು. ಒಂದು ದಿನ ಶ್ರೀಶೈಲ ಮಲ್ಲಿಕಾರ್ಜುನನು ಹೇಮರಡ್ಡಿಯ ಮನೆಗೆ ವೃದ್ಧ ಜಂಗಮನಾಗಿ ಭಿಕ್ಷೆಗೆ ಬಂದನು. ಆದರೆ ಆ ಮನೆಯ ಸೊಕ್ಕಿನ ಸೊಸೆಯರು ಅವನನ್ನು ಸತ್ಕರಿಸದೆ ಭಿಕ್ಷೆ ನೀಡದೆ ನಿಷ್ಟುರ ನುಡಿಗಳಿಂದ ಹಿಯಾಳಿಸಿ ಬೈದು ಅಂಗಳಕ್ಕೆ ನೂಕಿ ಕೆಡವಿದರು. ಜಂಗಮನು ತಾಪದಿಂದ ಆ ಮನೆಯಿಂದ ಹಿಂದಿರುಗಿದನು.

ತುಸು ದಿವಸಗಳಲ್ಲೆ ಹೇಮರಡ್ಡಿಯ ಮನೆಯ ಐಶ್ವರ್ಯವೆಲ್ಲ ಮಾಯವಾಯಿತು. ಸಿರಿ ಅಡಗಿ ಧಾನ್ಯದ ರಾಶಿ ಕಾಣದಾಯಿತು. ಅತ್ತೆ ಹಾಗೂ ಸೊಸೆಯರಿಗೆ ಸಹಿಸಲಸಾಧ್ಯ ಬೇನೆಗಳು ಅಂಟಿಕೊಂಡವು ಮಕ್ಕಳು ಅನ್ನ ನಿರ್ಗತಿಕರಾದರು. ಇದೆಲ್ಲ ಆ ಜಂಗಮನನ್ನು ಬೈಯ್ದು ಹೊಡೆದಿದ್ದರ ಫಲವೆಂದು ಹೇಮರಡ್ಡಿಗೆ ಅರಿವಾಯಿತು. ಕೂಡಲೇ ಅವನು ಮಲ್ಲಮ್ಮನಲ್ಲಿ ಈ ಸಂಗತಿ ಹೇಳಿಕೊಂಡನು. ಮಲ್ಲಮ್ಮನು ಶ್ರೀಶೈಲ ಮಲ್ಲಿಕಾರ್ಜುನನ್ನು ಪರಿ ಪರಿಯಿಂದ ಪ್ರಾರ್ಥಿಸಿದಳು. ಹಾಗೂ ಮಲ್ಲಯ್ಯನ ಪಾದೋದಕಗಳನ್ನು ತನ್ನ ಬಳಗದವರಿಗೆ ಸಿಂಪಡಿಸಿದಳು. ಆಗಲೇ ಅವರೆಲ್ಲರೂ ರೋಗರಹಿತರಾಗಿ ಮೊದಲಿನಂತೆ ನೆಮ್ಮದಿಯುಳ್ಳವರಾದರು.ಹೀಗೆ ಬದುಕಿನುದ್ದಕ್ಕೂ ಆದರ್ಶಪ್ರಾಯಳಾಗಿ ಬದುಕಿದ ಮಲ್ಲಮ್ಮ ಇಂದು ಜಗತ್ತಿಗೆ ತನ್ನ ಬದುಕಿನಿಂದ ಮಾದರಿಯಾಗಿರುವಳು.

ಕೊನೆ ಕೊನೆಗೆ ಮಲ್ಲಮ್ಮನು ಶ್ರೀಗಿರಿಯಲ್ಲಿ ತನ್ನ ಪತಿಯೊಡನೆ ಕೆಲವು ವರ್ಷ ತಪಸ್ಸು ಮಾಡಿ ಸುಮಾರು ೧೪೭೪ ರಲ್ಲಿ ಲಿಂಗದಲ್ಲಿ ಲೀನವಾದಳು. ದಾನಕ್ಕೆ ಕರ್ಣ, ಸತ್ಯಕ್ಕೆ ಹರಿಶ್ಚಂದ್ರ, ನೀತಿಗೆ ಧರ್ಮರಾಜ, ಛಲಕ್ಕೆ ದುರ್ಯೋಧನ, ಪತಿವ್ರತಕ್ಕೆ ಪಂಚಕನ್ಯೆಯರು ಹೆಸರಾದಂತೆ, ಅತ್ತೆ ಮನೆ ಸೊಸೆತನಕ್ಕೆ ಹೇಮರೆಡ್ಡಿ ಮಲ್ಲಮ್ಮಳ ಹೆಸರು ಕಳಶ ಪ್ರಾಯ. ‘ಮಹಿಳೆ ತ್ಯಾಗದ ಪ್ರತೀಕ’ ಎಂಬ ಮಾತು ಮಲ್ಲಮ್ಮನ ಬೇಡಿಕೆಯಿಂದ ಸತ್ಯವಾಗಿದೆ. ಕೇವಲ ಸಿರಿತನವನ್ನಷ್ಟೇ ಬೇಡಿ ಸುಮ್ಮನಾಗಿದ್ದರೆ ಮಲ್ಲಮ್ಮನ ವ್ಯಕ್ತಿತ್ವದಲ್ಲಿ ಕೊಂಚ ಕೊರತೆ ಕಾಣುತ್ತಿತ್ತೇನೋ ಆದರೆ ತನ್ನ ಕುಲದವರಿಗೆ ಬಂದ ನಿಮ್ಮೈಸಿರಿಗೆ ಹಿಗ್ಗದಿರಿ, ದಾನದೊಳು ಹಿಂದಾಗದಿರಿ ಎಂದು ಅಮೂಲ್ಯ ಸಂದೇಶ ಸಾರಿ ಈ ಕೊರತೆಯೂ ಕಾಣದಂತೆ ಮಾಡಿದಳು. ಪ್ರಸ್ತುತ ಸಮಾಜಕ್ಕೆ ಹೇಮರಡ್ಡಿ ಮಲ್ಲಮ್ಮ ಆದರ್ಶವಾಗಿ ನಿಲ್ಲುವಳು. ಇಂದಿನ ವಿಭಕ್ತ ಕುಟುಂಬಕ್ಕೆ ಮಾದರಿಯಾಗಿದ್ದಾಳೆ. ಕೇವಲ ಅವಳ ಬದುಕಿನ ಸಂದೇಶ ರೆಡ್ಡಿ ಸಮುದಾಯಕ್ಕೆ ಮಾತ್ರವಲ್ಲ, ಇಡೀ ಮನುಕುಲಕ್ಕೆ ಅವಳು ನೀಡಿದ ತಾಳ್ಮೆ, ತ್ಯಾಗ, ಸಹನೆ ಹಾಗೂ ಒಂದುಗೂಡಿಸುವ ಮನೋಭಾವವು. ಎಲ್ಲ ಸಮುದಾಯಕ್ಕೂ ಮಾದರಿಯಾಗಿದೆ.

ಮಲ್ಲಮ್ಮನ ಕುರಿತು ಹಲವು ಪುರಾಣ, ಪುಣ್ಯಕತೆಗಳಿವೆ. ಮಲ್ಲಮ್ಮನ ಬಗ್ಗೆ ಹಲವು ಪವಾಡದ ಸಂಗತಿಗಳು ಬಿತ್ತುವ ಬೀಜವನ್ನು ಜಂಗಮಗೆ ಕೊಟ್ಟು ಮುಳಲು ಬಿತ್ತಿ ಧಾನ್ಯವನ್ನು ಬೆಳೆದುಕೊಂಡ ಮಲ್ಲಮ್ಮನ ಅನುಗ್ರಹದಿಂದ ಬೇರೆ ದಂಪತಿಗಳು ಮಳಲು ಬಿತ್ತಿ ಹೊನ್ನ ಬೆಳೆದು ಮುಕ್ತರಾದದ್ದು.ದುರ್ವ್ಯಸನವನ್ನು ಬಿಡದೆ ಗತಿಗೆಟ್ಟ ಅವಳ ಮೈದುನನಾದ ವೇಮರಡ್ಡಿಗೆ ಮುಗುತಿಯ ಕೊಟ್ಟು ಮೋಹದ ಬಲೆಯನ್ನು ಬಿಡಿಸಿ ಕೃಷಿ ಕಾಯಕಕ್ಕೆ ಹಚ್ಚಿ ಯೋಗಿ ಮಾಡಿದ ಮಹಾಸಾದ್ವಿ ಮಲ್ಲಮ್ಮ.

ಮಲ್ಲಮ್ಮನು ವೇಮರಡ್ಡಿಯಿಂದ ಕಾಡಕ ವಡಿಯನ್ನು ಬಿತ್ತಿಸಿ ಹೊನ್ನುಗಳನ್ನು ಒಕ್ಕಿಸಿದು. ಮತ್ತು ಸ್ತ್ರೀ ಧರ್ಮ ನಿಸ್ಪ್ರಹತೆ ನೀತಿ ಶಿವಭಕ್ತಿಗಳನ್ನು ತಿಳಿಸಿ ನೆರೆಹಳ್ಳಿಯ ದಂಪತಿಗಳನ್ನು ಉದ್ದರಿಸಿದ್ದು.

ಶಿವದ್ರೋಹದಿಂದ ಕುರುಡನಾದ ಕಾಳಿದಾಸನಿಗೆ ಮಲ್ಲಮ್ಮನು ಕಣ್ಣುಕೊಟ್ಟು ರಕ್ಷಿಸಿದ್ದು ಹುಟ್ಟುಗುರುಡರಿಗೆ ಕಣ್ಣುಕೊಟ್ಟು ಶಿವಭಕ್ತರನ್ನು ಮಾಡಿದ್ದು, ಮಲ್ಲಮ್ಮನು ಮಾವನಿಗೆ ಮಲ್ಲಿಕಾರ್ಜುನನನ್ನು ತೋರಿಸಿ, ಕಾಡಿನಲ್ಲಿ ಕೂಡಿಸಿಟ್ಟ ಕುಳಬಾನವನ್ನು ಮುಟ್ಟಿದಾಗ ಅದು ಹೊನ್ನ ರಾಶಿಯಾಗಿ ಮಾರ್ಪಟ್ಟಿದ್ದು ಆಗ ಹೇಮರಡ್ಡಿಯು ಹನ್ನೆರಡು ಸಾವಿರ ಕೂಲಿಕಾರರನ್ನು ಬರಮಾಡಿಕೊಂಡು ಮಲ್ಲಿಕಾರ್ಜುನನ ಮಂದಿರವನ್ನು ನಿರ್ಮಿಸಿದ್ದು ಈ ಎಲ್ಲ ಘಟನೆಗಳು ಅವಳ ಬದುಕಿನುದ್ದಕ್ಕೂ ನಡೆಯುವ ಮೂಲಕ ಮಹಾಸಾದ್ವಿ ಮಲ್ಲಮ್ಮನೆಂದು ಅವಳನ್ನು ಕರೆಯುವಂತಾಯಿತು.ಸ್ವತಃ ತನ್ನ ಮಾವನಿಗೆ ತನ್ನ ಹಿತನುಡಿಗಳಿಂದ ಮನೆಯಲ್ಲಿ ನಡೆಯುತ್ತಿರುವ ಕಟುಸತ್ಯಗಳನ್ನು ಹೊರಗೆಡಹುವ ಮೂಲಕ ತನ್ನ ಗಂಡನಿಗೂ ಜ್ಞಾನವನ್ನುನೀಡಿದ್ದು ಅವಳ ಬದುಕಿನ ಅನೇಕ ಸಂಗತಿಗಳಿಂದ ತಿಳಿದು ಬರುತ್ತದೆ.

ಶ್ರೀಶೈಲ ಮಲ್ಲಯ್ಯನು ಮಲ್ಲಮ್ಮನನ್ನು ಕುರಿತು “ತಾಯೇ ನೀನು ಅನನ್ಯ ಭಕ್ತಿಯಿಂದ ನನ್ನನ್ನು ಈ ರೀತಿ ಉಪಚರಿಸಿದ ಇತಿಹಾಸ ನಿರಂತರ ಪ್ರಸಿದ್ದವಾಗಲಿ. ನಿನ್ನ ಪವಿತ್ರ ಕುಲವು ಧರಣಿಯ ಮೇಲೆ ಸದಾ ಧನ, ಧಾನ್ಯ ಮತ್ತು ಬಂಗಾರ ವಿಶೇಷಗಳಿಂದ ಮರೆಯಲಿ ನಿನಗೆ ಕೈಲಾಸದಲ್ಲಿ ಶರಣಪದವಿ ದೊರಕಲಿ” ಎಂದು ಅನುಗ್ರಹಿಸಿ ಲಿಂಗದಲ್ಲಿ ಅಂತರ್ಧಾನನಾದನು. ಈ ಮಹಿಮಾ ದೃಶ್ಯವನ್ನು ನೋಡಿದ ಮಲ್ಲಮ್ಮನು ತನ್ನ ಬಳಗವನ್ನೆಲ್ಲ ಕರೆದು ಈ ವರಪ್ರಧಾನದಿಂದ ವಂಶಪಾರರ‍್ಯ ಬರುವ ಐಶ್ವರ್ಯಕ್ಕೆ ಹಿಗ್ಗಬೇಡಿ, ದಾನದಲ್ಲಿ ಹಿಂದಾಗಬೇಡಿ ಎಂದು ಬೋಧಿಸಿದಳು.

ನಾಟಕ ಮತ್ತು ಚಲನಚಿತ್ರಗಳಲ್ಲಿ ಮಲ್ಲಮ್ಮಳ ಬದುಕಿನ ಚಿತ್ರಣ ಶ್ರೀಕಂಠಶಾಸ್ತ್ರೀಗಳು ಬರೆದ ಹೇಮರೆಡ್ಡಿ ಮಲ್ಲಮ್ಮ ಎಂಬ ನಾಟಕವು ಮಲ್ಲಮ್ಮನ ಚರಿತ್ರೆಯನ್ನು ನಿರೂಪಿಸುತ್ತದೆ. ಶಾಸ್ತ್ರಿಗಳು ಬರೆದ ಈ ಕೃತಿಯು ಹೆಣ್ಣು ಮಕ್ಕಳಿಗಾಗಿಯೇ ರಚಿತವಾದ ಕೃತಿ ನೀತಿಬೋಧಕವಾಗಿದೆ. ಮಲ್ಲಮ್ಮನ ಜೀವನವು ನಾಟಕ ರೂಪದಲ್ಲಿ ಹಲವಾರು ಪವಾಡಗಳನ್ನು ಹೆಣೆದು ಮನಮುಟ್ಟುವಂತೆ ರಚಿಸಿಕೊಂಡಲಾಗಿದೆ. ಇದು ಸುಂದರ ಗದ್ಯದಲ್ಲಿದೆ. ಹೇಮರೆಡ್ಡಿ ಮಲ್ಲಮ್ಮ ನಾಟಕವು ದೀರ್ಘ ಕಥೆಯನ್ನೊಳಗೊಂಡಿದ್ದರಿಂದ ಪೂರ್ವಾರ್ಧ ಉತ್ತರಾರ್ಧ ಭಾಗಗಳನ್ನು ಮಾಡಿಕೊಳ್ಳಲಾಗಿದೆ. ಪ್ರತಿ ಭಾಗದಲ್ಲಿ ನಾಲ್ಕು ಅಂಕಗಳಿವೆ.ಒಟ್ಟಾರೆ ಇಡೀ ನಾಟಕದ ಕಥಾನಾಯಕಿಯಾಗಿ ಅವಳ ಜೊತೆಗೆ ಒಟ್ಟು ಇಪ್ಪತೈದು ಪಾತ್ರಗಳನ್ನು ಕೃತಿಕಾರರು ರಚಿಸಿರುವರು.

ಕನ್ನಡ ಚಿತ್ರರಂಗದಲ್ಲಿ ಬಿ.ಪುಟ್ಟಸ್ವಾಮಿಯವರ ಕಾದಂಬರಿ ಆಧಾರಿತ ಮಲ್ಲಮ್ಮನ ಪವಾಡ ಹೆಸರಿನಲ್ಲಿ ೧೯೬೯ ರಲ್ಲಿ ಚಲನಚಿತ್ರವು ಡಾ.ರಾಜಕುಮಾರ, ಬಿ.ಸರೋಜಾದೇವಿಯವರ ನಟನೆಯಲ್ಲಿ ಬಂದಿದ್ದು ಇದರಲ್ಲಿ ಮಲ್ಲಮ್ಮನ ಬದುಕಿನ ಕೆಲವು ಘಟ್ಟಗಳನ್ನು ಬಹಳ ವೈಶಿಷ್ಟ್ಯ ಪೂರ್ಣವಾಗಿ ಚಿತ್ರಿಸಿದ್ದು. ಬಿ.ಸರೋಜಾದೇವಿ ಅಭಿನಯ ನಿಜಕ್ಕೂ ಅಮೋಘವಾಗಿದೆ.ಈ ಚಿತ್ರವು ಚಿತ್ರಬ್ರಹ್ಮ ಎಸ್.ಆರ್.ಪುಟ್ಟಣ್ಣ ಕಣಗಾಲ್ ರ ನಿದೇಶನದಲ್ಲಿ ಅದ್ಬುತವಾಗಿ ಮೂಡಿಬಂದಿದೆ.

೧೯೭೬ ಟಿ.ವಿ.ಸಿಂಗ್ ಟಾಕೂರ್ ಎನ್.ಸಿ.ರಾಜನ್ ನಿರ್ದೇಶನದಲ್ಲಿ ಪಂಡರೀಬಾಯಿ ಅಭಿನಯದ ಚಲನಚಿತ್ರ ತೆರೆಕಂಡು ಜನಪ್ರೀಯವಾಯಿತು.ಇಲ್ಲಿ ನಾಗಯ್ಯ ಯಶವಂತ ರಾಜಶೇಖರ್ ಎಂಬ ಕಲಾವಿದರು ಅಭಿನಯಿಸಿದ್ದರು. ಹರಿಕಥೆಯ ರೂಪದಲ್ಲಿ ಆರಂಭವಾಗುವ ಈ ಚಲನಚಿತ್ರದಲ್ಲಿ ಫಂಡರೀಬಾಯಿ ಅಭಿನಯ ಅಮೋಘವಾಗಿತ್ತು.

೨೦೦೫ ರಲ್ಲಿ “ಮಹಾಸಾದ್ವಿ ಮಲ್ಲಮ್ಮ” ಚಲನಚಿತ್ರವು ಸಾಯಿಕುಮಾರ್ ಮೀನಾರ ನಟನೆಯಲ್ಲಿ ಪ್ರಚಲಿತ ಮಲ್ಲಮ್ಮನ ದೇವಾಲಯದೊಂದಿಗೆ ಅವಳ ಬದುಕಿನ ಘಟ್ಟಗಳನ್ನು ವರ್ಣದಲ್ಲಿ ತೋರಿಸಿತು. ಹೀಗೆ ಮಲ್ಲಮ್ಮಳ ಪತಿವೃತೆ ಧರ್ಮವನ್ನು ಮೂರೂ ಚಲನಚಿತ್ರಗಳು ವಿಭಿನ್ನವಾಗಿ ತೋರಿಸುವ ಮೂಲಕ ಮಲ್ಲಮ್ಮಳ ಬದುಕಿನ ಮೇಲೆ ಬೆಳಕು ಚಲ್ಲುವ ಪ್ರಯತ್ನ ಮಾಡಿವೆ.

ಹೇಮರೆಡ್ಡಿ ಮಲ್ಲಮ್ಮ ಮತ್ತು ಜನಪದ ಸಾಹಿತ್ಯ

ಹೇಮರೆಡ್ಡಿ ಮಲ್ಲಮ್ಮನ ಕುರಿತು ಕವಿ-ಕವಯಿತ್ರಿಯರು ಮತ್ತು ಜನಪದರು ತಮ್ಮ ವಿಚಾರಗಳನ್ನು ತ್ರಿಪದಿ ರೂಪದ ಹಾಡುಗಳಲ್ಲಿ ಅಭಿವ್ಯಕ್ತಿಸಿದ್ದಾರೆ. ಹೇಮರೆಡ್ಡಿ ಮಲ್ಲಮ್ಮಳ ಜನನ, ಬಾಲ್ಯ, ಕುರಿತು ಈ ರೀತಿ ತ್ರಿಪದಿಗಳಿವೆ.

ಮಲ್ಲಮ್ಮ ಹುಟ್ಟಲು ಬಂಜೆತನ ಅಳದಾದ
ಭವಿತನ ಕಳೆದು ಜಗದಾಗ! ಭಕ್ತಿಯರ
ತುಂಬಿ-ತುಂಬಿ ಹೊರಗ ಚೆಲ್ಯಾದ”.

ಶ್ರೀಗಿರಿ ಊರಾಗ ರಾಂಪುರ ಮೆರದಾದ
ಶಿರಿಯಾಗಿ ಹೊಳೆದು ಜಗದಾಗ! ಮಲ್ಲಮ್ಮ
ಆ ಊರಾಗ ಜನಿಸಿ ಬಂದಾಳ”!!

ಬೆಳದಾಳ ಮಲ್ಲಮ್ಮ ಬೆಳದಿಂಗಳ ಬೆಳದಂಗ
ಹಡೆದವರ ಮನ ತಂಪಾಗಿ ಮನಿಯಗ
ಹಾಲುಕ್ಕಿ ಹರಿದು ಚೆಲ್ಯಾದ”!!

ಲಾವಣಿ:

ಲಾವಣಿಗಳು ಗೀತ ಪ್ರದಾನವಾಗಿದ್ದು ಉತ್ತರ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಲಾವಣಿ ಸಂಪ್ರದಾಯವಿದ್ದು. ಗೀಗೀಪದಗಳು ಕೂಡ ಈ ಸಾಲಿಗೆ ಸೇರುತ್ತವೆ.ಹೇಮರಡ್ಡಿ ಮಲ್ಲಮ್ಮಳ ಬದುಕಿನ ಕುರಿತು ಅನೇಕ ಲಾವಣಿ ಪದಗಳು ಲಭ್ತವಾಗಿದ್ದು ಅವುಗಳಲ್ಲಿ ಈ ಕೆಳಗಿನ ಸಾಲುಗಳನ್ನು ಉದಾಹರಿಸಬಹುದಾಗಿದೆ.

ದಪ್ಪ ಹಿಡಿದು ಖಣ ಖಣ ಬಡಿದು
ಕುಣಿ-ಕುಣಿದು ಹೇಳುವೆ ಕತಿಯಾ
ನೇಮ ನಿಷ್ಠೆಯಿಂದ ನಡೆದು ಗೆದ್ದಳು
ಮೂರು ಲೋಕ ಮಾಯಾ, ಹೇಮರೆಡ್ಡಿ ಸೊಸೆಯಾ”.

ಹಂತಿಯ ಹಾಡು:

ರೈತಾಪಿ ಜನರು ತಮ್ಮ ಕೃಷಿ ಕಾರ್ಯಗಳಲ್ಲಿ ತೊಡಗಿದಾಗ ಹಾಡುವ ಹಾಡುಗಳು ಹಂತಿಯ ಹಾಡುಗಳು.ಇವುಗಳಲ್ಲಿಯೂ ಕೂಡ ಮಲ್ಲಮ್ಮಳ ಸ್ಮರಣೆಯ ಚರಿತೆಯನ್ನು ಹೇಳುವ ಗೀತೆಗಳು ಲಭ್ಯವಾಗಿವೆ.

ಹೊತ್ತ ಹೊಂಡುತ್ತಲೆದ್ದು ಶಿವಪೂಜೆ ಮುಗಸ್ಯಾಳ
ದನ ಹೊಡೆದು ಹೊಲಕ ಹೊಂಟಾಳ ಮಲ್ಲಮ್ಮ
ಭಕುತಲಿ ಮಲ್ಲಯ್ಯಗ ನೆನಿತಾಳ
“ ಹೊತ್ತ ಏರುವ ತನಕ ದನಗಳು ಕಾಯ್ತಾಳ
ಸಂಜೆ ಮನಿಕಡಿ ನಡಿತಾಳ ಮಲ್ಲಮ್ಮ
ಪತಿ ಬರುವಿಗಾಗಿ ಕಾಯ್ತಾಳ!

ಈ ರೀತಿ ಜನಪದದ ವಿವಿಧ ಪ್ರಕಾರಗಳ ಸಾಹಿತ್ಯದಲ್ಲಿ ಮಲ್ಲಮ್ಮಳ ಬದುಕಿನ ಚಿತ್ರಣವನ್ನು ನಾವು ಕಾಣಬಹುದು.

ಪುರಾಣಗಳಲ್ಲಿ ಹೇಮರಡ್ಡಿ ಮಲ್ಲಮ್ಮ:

ಮೊದಲಿನಿಂದಲೂ ಹಬ್ಬ ಹರಿದಿನಗಳಲ್ಲಿ ಹೆಚ್ಚಾಗಿ ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನಗಳನ್ನು ನೀಡುವುದನ್ನು ನಾವು ಕಾಣುತ್ತೇವೆ. ಓರ್ವ ವ್ಯಕ್ತಿಯ ಬದುಕಿನ ಚಿತ್ರಣವನ್ನು ಪುರಾಣಗಳ ಮೂಲಕ ಕಟ್ಟಿಕೊಡುವುದು ಸಂಪ್ರದಾಯ.ಅಂಥಹ ಸಂಪ್ರದಾಯದಲ್ಲಿ ಹೇಮರಡ್ಡಿ ಮಲ್ಲಮ್ಮಳ ಬದುಕನ್ನು ಕುರಿತು ಪುರಾಣಗಳನ್ನು ರಚಿಸಿದ್ದು ಕ್ರಿ.ಶ. ೧೯೨೨ ರಲ್ಲಿ ದ್ಯಾಮಪುರದ ಚನ್ನಕವಿ ಬರೆದ “ಶ್ರೀ ಹೇಮರಡ್ಡಿ ಮಲ್ಲಮ್ಮಳ ಚರಿತಾ ಪುರಾಣ” ಈ ಕೃತಿಯು ಹದಿನೆಂಟು ಸಂಧಿ ವಾರ್ಧಕ ಷಟ್ಪದಿಯ ೬೨೬ ಪದ್ಯಗಳಿಂದ ಕೂಡಿದ್ದು ಇಲ್ಲಿ ರಾಘವಾಂಕನ ಸೋಮನಾಥನ ಚರಿತೆ ಮಾದರಿಯಲ್ಲಿ ಪದ್ಯಗಳಿವೆ.

ಪಂಡಿತ ಡಾ.ಪುಟ್ಟರಾಜ ಗವಾಯಿಗಳು “ಹೇಮರಡ್ಡಿ ಮಲ್ಲಮ್ಮ ಪುರಾಣ” ೧೯೯೬ ರಲ್ಲಿ ರಚಿತವಾಗಿದೆ. ಇದು ಕೂಡ ವಾರ್ದಕ ಷಟ್ಪದಿಯಲ್ಲಿದ್ದು ೧೭ ಸಂಧಿಗಳಿದ್ದು ೬೪೨ ಪದ್ಯಗಳಿವೆ.

ಬಾಗಲಕೋಟ ಜಿಲ್ಲೆಯ ಚನ್ನಮಲ್ಲ ಶಿವಶರಣಶಾಸ್ತ್ರಿಗಳು “ ಹೇಮರಡ್ಡಿ ಮಲ್ಲಮ್ಮ” ಪುರಾಣ ರಚಿಸಿದ್ದು ೧೨ ಅಧ್ಯಾಯಗಳಿಂದ ಭಾಮಿನಿ ಷಟ್ಪದಿ ಹೊಂದಿದೆ.

ಈ ರೀತಿ ಪುರಾಣ, ಜನಪದ ಸಾಹಿತ್ಯ,ನಾಟಕ ಸಾಹಿತ್ಯ,ಚಲನಚಿತ್ರ ಎಲ್ಲ ರೀತಿಯಲ್ಲಿಯೂ ಮಹಾಸಾದ್ವಿ ಮಲ್ಲಮ್ಮಳ ಬದುಕಿನ ಚಿತ್ರಣವನ್ನು ಸಾಹಿತಿಗಳು ನಾಟಕಕಾರರು ಜನಪದರು ಕಟ್ಟಿಕೊಟ್ಟಿದ್ದು ಅವುಗಳ ದಾಖಲೆಗಳು ನಮಗೆ ಇಂದು ಮಲ್ಲಮ್ಮಳ ಬದುಕಿನ ಚಿತ್ರಣವನ್ನು ಅರಿಯಲು ಸಹಾಯಕವಾಗಿವೆ. ಲೌಕಿಕದಲ್ಲಿ ಅಲೌಕಿಕದಲ್ಲಿ ಜೀವನ ಸಾಧಿಸುತ್ತ ಉತ್ತಮ ಸತಿಯಾಗಿ ಸೊಸೆಯಾಗಿ ಪತಿ ಮತ್ತು ಅತ್ತೆ ಮಾವರನ್ನು ಅನನ್ಯ ಭಕ್ತಿಯಿಂದ ಸೇವೆ ಮಾಡಿದ ಸಾದ್ವಿ ಮಲ್ಲಮ್ಮ.

ಸುಪ್ರಭಾತ ಸಮಯದಲಿ ಅತ್ರಿಯಲಿ:

ಲಿಂಗವ ನೆನೆದರೆ ತಪ್ಪುವವು ಅಪಮೃತ್ಯು ಕಾಲಕರ್ಮಗಳು ಎಂಬಂತೆ ಜೀವನದಲ್ಲಿ ಬರುವ ವಿಪತ್ತುಗಳಿಂದಲೂ ಕರ್ಮಗಳಿಂದಲೂ ಜೀವನವನ್ನು ಜಯಿಸಿದ ಹೇಮರಡ್ಡಿ ಮಲ್ಲಮ್ಮಳ ಬದುಕಿನ ಆದರ್ಶಗಳು ಎಂದಿಗೂ ಅಜರಾಮರ ಹಾಗೂ ಆದರ್ಶಪ್ರಾಯ.


ವೈ.ಬಿ.ಕಡಕೋಳ(ಶಿಕ್ಷಕರು)
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ-೫೯೧೧೧೭

- Advertisement -
- Advertisement -

Latest News

ಮನೋಜ್ಞ ಅನುಭೂತಿಯ ವಿಶ್ವ ಧ್ಯಾನದ ದಿನಾಚರಣೆ 

      ಮೈಸೂರಿನ ಮಾನಸಗಂಗೋತ್ರಿಯು ಇಂದು ಮನಸ್ಸನ್ನು ಮುದಗೊಳಿಸುವ ಅಪರೂಪದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ವಿಶ್ವ ಸಂಸ್ಥೆಯು 21 ಡಿಸೆಂಬರ್ ವಿಶ್ವ ಧ್ಯಾನದ ದಿನವನ್ನಾಗಿ ಆಚರಿಸಲು...
- Advertisement -

More Articles Like This

- Advertisement -
close
error: Content is protected !!
Join WhatsApp Group