spot_img
spot_img

ಬೆಳಗಾವಿ ಜಿಲ್ಲೆ : ಐತಿಹಾಸಿಕ ಹಿನ್ನೆಲೆ

Must Read

- Advertisement -

ಹಿಂದೆ ಯಾವುದೋ ಒಂದು ಸಂದರ್ಭದಲ್ಲಿ ನಾನು ಬರೆದಿದ್ದ ಬೆಳಗಾವಿ ಜಿಲ್ಲೆಯ ಕುರಿತಾದ ಲೇಖನ ಇಂದು ಮತ್ತೆ ಕಂಡಿತು. ಅದನ್ನೇ ಇಲ್ಲಿ ಎರಡು ಮೂರು ಕಂತುಗಳಲ್ಲಿ ನೀಡುತ್ತಿದ್ದೇನೆ. ಆಸಕ್ತರ ಓದಿಗಾಗಿ.

ಬೆಳಗಾವಿ ಜಿಲ್ಲೆ: ಐತಿಹಾಸಿಕ ಹಿನ್ನೆಲೆ
******************************”
ಇಂದಿನ ಬೆಳಗಾವಿ ಜಿಲ್ಲೆ ರೂಪುಗೊಳ್ಳಲು ಪ್ರಾರಂಭವಾದದ್ದು ಬ್ರಿಟಿಷರ ಆಳ್ವಿಕೆಯಲ್ಲಿ. ಎರಡನೆಯ ಬಾಜೀರಾವ್ ಪೇಶ್ವೆಯ ಆಧೀನದಲ್ಲಿದ್ದ ದಕ್ಷಿಣ ಮಹಾರಾಷ್ಟ್ರದ “ದುವಾಬ” ಎಂಬ ಪ್ರದೇಶವನ್ನು ವಶಪಡಿಸಿಕೊಂಡು ೧೮೩೮ ರಲ್ಲಿ ಅದನ್ನು ಎರಡು ಭಾಗ ಮಾಡಿ ಒಂದನ್ನು ಧಾರವಾಡ ಜಿಲ್ಲೆ ಎಂದು ಮತ್ತು ಇನ್ನೊಂದನ್ನು ಬೆಳಗಾವಿ ಜಿಲ್ಲೆ ಎಂದು ಹೆಸರಿಸಲಾಯಿತು. ಆಗಿನ ಬೆಳಗಾವಿ ಜಿಲ್ಲೆಯಲ್ಲೂ ಹತ್ತು ತಾಲೂಕುಗಳೇ ಇದ್ದವು. ಆದರೆ ಅವು ಈಗ ಇರುವ ತಾಲೂಕುಗಳಾಗಿರಲಿಲ್ಲ. ಪಾಚ್ಛಾಪುರ, ಸಂಪಗಾವಿ, ಬೀಡಿ, ಚಿಕ್ಕೋಡಿ, ಪರಸಗಡಗಳೊಂದಿಗೆ ಬಾಗಲಕೋಟ, ಬಾದಾಮಿ, ಹುನಗುಂದ, ಇಂಡಿ ಮತ್ತು ಮುದ್ದೇಬಿಹಾಳಗಳು ಸೇರಿಕೊಂಡಿದ್ದವು. ಮುಂದೆ ಹಲವು ಬದಲಾವಣೆಗಳನ್ನು ಕಾಣುತ್ತ ಸ್ವಾತಂತ್ರ್ಯಾನಂತರದಲ್ಲಿಯೂ ಕೆಲವು ಬದಲಾವಣೆಯಾಗಿ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ ನವೀನ ಬೆಳಗಾವಿಯಲ್ಲಿ ಈಗ ಇರುವ ಹತ್ತು ತಾಲೂಕುಗಳನ್ನೊಳಗೊಂಡ ಜಿಲ್ಲೆ ರೂಪುಗೊಂಡಿತು. ( ಈಚೆಗೆ ಮತ್ತೆ ಕೆಲ ಹೊಸ ತಾಲೂಕುಗಳು ರಚನೆಯಾಗಿವೆ).

ಆದರೆ ವಾಸ್ತವವಾಗಿ ಬೆಳಗಾವಿ ಪ್ರದೇಶದ ಇತಿಹಾಸ ಸಾಕಷ್ಟು ದೀರ್ಘವಾದದ್ದೂ , ಅನೇಕ ಸ್ವಾರಸ್ಯಕರ ಅಂಶಗಳಿಂದಲೂ ಕೂಡಿದೆ. ಬೇರೆ ಬೇರೆ ಹೆಸರುಗಳನ್ನು ಪಡೆದುಕೊಳ್ಳುತ್ತ ಬಂದ ಈ ಪ್ರದೇಶ ಪ್ರಾಗೈತಿಹಾಸ ಕಾಲದ ನಂಟನ್ನೂ ಹೊಂದಿರುವದು ಹಲವು ಉತ್ಖನನಗಳಿಂದ ಸ್ಪಷ್ಟವಾಗಿದೆ. ಇಲ್ಲಿಯ ಘಟಪ್ರಭಾ ಮತ್ತು ಮಲಪ್ರಭಾ ನದೀತೀರದಲ್ಲಿ ಹಳೆಯ ಶಿಲಾಯುಗದ ಶಿಲಾಯುಧಗಳು, ಪ್ರಾಣಿಗಳ ಪಳೆಯುಳಿಕೆಗಳು ದೊರಕಿವೆ. ಪೌರಾಣಿಕ ಹಿನ್ನೆಲೆಯಲ್ಲೂ ಕಾಣಿಸಿಕೊಳ್ಳುವ ಬೆಳಗಾವಿಯಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಐದು ರಾಮತೀರ್ಥಗಳು, ರಾಮದುರ್ಗ, ಶಬರಿಕೊಳ್ಳ,, ರೇಣುಕಾದೇವಿಗೆ ಸಂಬಂಧಿಸಿದ ಯಲ್ಲಮ್ಮನಗುಡ್ಡ, ಜಾಂಬವಂತೆಯ ಕತೆಗೆ ಸಂಬಂಧಿಸಿದ ಜಾಂಬೋಟಿ ಮೊದಲಾದವುಗಳನ್ನಿದಕ್ಕೆ ಉದಾಹರಿಸಬಹುದು.

- Advertisement -

ಬೆಳಗಾವಿಯ ವಡಗಾಂವ- ಮಾಧವಪುರಗಳು ಎರಡು ಸಾವಿರ ವರ್ಷಗಳ ಹಿಂದೆಯೇ ಬಹು ದೊಡ್ಡ ವ್ಯಾಪಾರಕೇಂದ್ರವಾಗಿತ್ತೆನ್ನುವುದು ಅಲ್ಲಿ ದೊರಕಿದ ಪ್ರಾಕೃತ ಶಾಸನದಿಂದ ತಿಳಿದುಬರುತ್ತದೆ. ಇದು ಕ್ರಿ. ಶಕ. ೧ ನೆಯ ಶತಮಾನದ ಶಾಸನ. ಇಲ್ಲಿಯ ಶಹಾಪುರ ಪುರಾತನ ಕಾಲದಲ್ಲೇ ದಕ್ಷಿಣ ಭಾರತದ ಬೆಳ್ಳಿ ಬಂಗಾರದ ವ್ಯಾಪಾರ ಕೇಂದ್ರವೆನಿಸಿತ್ತು.‌ ಇದೇ ಶಹಾಪುರದ ಸುತ್ತ ೧೫೫೦ ರ ಸುಮಾರಿಗೆ ಸರದಾರ ಶೇರಖಾನ್ ಎಂಬಾತ ನಗರ ಗೋಡೆ ಕಟ್ಟಿದ್ದನೆಂದು ಮುಂಬೈ ಗೆಜೆಟ್ (೧೮೯೩) ಹೇಳಿದೆ.
ಬೆಳಗಾವಿ ಹಲವು ರಾಜಮನೆತನಗಳ ಆಳ್ವಿಕೆಯನ್ನು ಕಂಡಿದೆ. ಇದಕ್ಕೆ ಕುಂತಳನಾಡು ಎಂಬ ಹೆಸರೂ ಇತ್ತು.‌ ಕುಂತಳಾಧೀಶ್ವರರಾದ ಶಾತವಾಹನರ ಆಡಳಿತಕ್ಕೆ ಒಳಪಟ್ಟ ಈ ಪ್ರದೇಶವನ್ನು ಐದನೇ ಶತಮಾನದಿಂದೀಚೆ ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಕಳಚೂರ್ಯರು, ದೇವಗಿರಿ ಯಾದವರು, ರಟ್ಟರು, ವಿಜಯನಗರದರಸರು ಇವರೆಲ್ಲ ಆಳಿದ್ದಾರೆ. ೧೪೨೨ ರ ನಂತದ ಬಹಮನಿ ಸುಲ್ತಾನರು, ವಿಜಾಪುರ ಆದಿಲಶಾಹಿಗಳು, ಮರಾಠಾ ಪೇಶ್ವೆಗಳು ಇವರೆಲ್ಲ ಬೆಳಗಾವಿಯ ಮೇಲೆ ಆಧಿಪತ್ಯ ಸ್ಥಾಪಿಸಿದರು. ಖಾನಾಪುರದ ಹತ್ತಿರವಿರುವ ಹಲಸಿ ( ಪಲಶಿ/ ಪಲಾಶಿಕಾ) ಕದಂಬರ ಎರಡನೆ ರಾಜಧಾನಿಯೂ ಆಗಿತ್ತು. ಈಗ ಬೆಳಗಾವಿ ನಗರದ ನಡುವೆ ಕಾಣಸಿಗುವ ಕಲ್ಲಿನ ಕೋಟೆ ಸುಗಂಧವರ್ತಿ ರಟ್ಟರ ಕಾಲದಲ್ಲಿ ನಿರ್ಮಾಣಗೊಂಡಿದ್ದು ರಟ್ಟ ರಾಜ ಗೋವಾ ಕದಂಬರನ್ನು ಸೋಲಿಸಿ ವೇಣುಗ್ರಾಮ-೭೦ ನ್ನು ತನ್ನ ರಾಜಧಾನಿಯನ್ನಾಗಿಸಿಕೊಂಡ. ೧೨೦೪ ರ ರಟ್ಟರ ಶಾಸನ ಬೆಳಗಾವಿ ಅವರ ವಾಣಿಜ್ಯ ರಾಜಧಾನಿಯಾಗಿತ್ತೆಂದು ತಿಳಿಸುತ್ತದೆ. ಬಹಮನಿ ಆಡಳಿತ ಕಾಲದಲ್ಲಿ ಮುಸ್ತಫಾ ಎಂಬ ಸರದಾರನು ಕೋಟೆಯ ರಕ್ಷಕನಾಗಿದ್ದಾಗ ಬೆಳಗಾವಿಯನ್ನು ಮುಸ್ತಫಾಬಾದ ಎಂದು ಮತ್ತು ಔರಂಗಜೇಬನ ಎರಡನೆಯ ಮಗ ಆಜಂ ಕಾಲದಲ್ಲಿ ಅಜಂನಗರ ಎಂದು ಕರೆಯಲಾಗುತ್ತಿತ್ತೆನ್ನಲಾಗಿದೆ.

ಬೆಳಗಾವಿ ಬೇರೆ ಬೇರೆ ಕಾಲಘಟ್ಟದಲ್ಲಿ ಬೇರೆಬೇರೆ ಹೆಸರುಗಳಿಂದ ಕರೆಯಲ್ಪಡುತ್ತಬಂದು ಕೊನೆಗೆ ಬೆಳಗಾವಿ ಎಂಬ ಹೆಸರು ಪಡೆದುಕೊಂಡಿತು. ದಟ್ಟ ಕಾಡಿನಿಂದ ಕೂಡಿದ್ದ ಈ ಭಾಗದಲ್ಲಿ ಬಿದಿರು ಮೆಳೆಗಳು ಬಹಳ ದೊಡ್ಡ ಪ್ರಮಾಣದಲ್ಲಿದ್ದುದರಿಂದ ಇದಕ್ಕೆ ವೇಣು ( ಕೊಳಲು ಮಾಡುವ ಬಿದಿರು)ಗ್ರಾಮ/ವೇಳುಗ್ರಾಮ/ ವೇಳುಗಾಮೆ/ಬೆಳಗುಗ್ರಾಮ/ ಬೆಳುಗಾಮ/ ಬೆಳಗಾವಿ ಈ ರೀತಿ ಹೆಸರಿನ ಬೆಳವಣಿಗೆ- ಬದಲಾವಣೆ ಕಂಡಿದೆಯೆನ್ನಬಹುದು.

೧೮ ನೆಯ ಶತಮಾನದ ಉತ್ತರಾರ್ಧದಲ್ಲಿ ಬೆಳಗಾವಿಯ ರಾಜಕೀಯ ಇತಿಹಾಸ ಸಂಕೀರ್ಣ ಸ್ವರೂಪ ಪಡೆಯುತ್ತ ಪೇಶ್ವೆ, ಸಾಂಗ್ಲಿ ಪಟವರ್ಧನರು, ಕೊಲ್ಲಾಪುರದ ಛತ್ರಪತಿಗಳು, ಸವಣೂರಿನ ನವಾಬರು,ಹೈದರಾಲಿ, ಟಿಪ್ಪು ಮೊದಲಾದವರ ಕೈಯಿಂದ ಕೈಗೆ ಬದಲಾಗಿ ನಂತರ ಸಂಸ್ಥಾನಿಕರ , ವತನದಾರರ, ದೇಶಪಾಂಡೆ/ ದೇಸಾಯಿಗಳ ಪ್ರಾಬಲ್ಯವನ್ನೂ ಕಂಡಿತು. ಕಿತ್ತೂರು, ನಿಪ್ಪಾಣಿ, ವಂಟಮೂರಿ, ಚಚಡಿ, ನನದಿ, ತಲ್ಲೂರು, ಸಿರಸಂಗಿ, ಬೆಳವಡಿ, ರಾಮದುರ್ಗ ಮೊದಲಾದ ದೇಸಗತಿ ಮನೆತನಗಳು ಕಾಣಿಸಿಕೊಂಡವು. ಸಣ್ಣಸಣ್ಣ ಸಂಸ್ಥಾನಗಳು ತಲೆಯೆತ್ತಿದವು. ಅಂದಿನ ಹಲವು ವಾಡೆಗಳು ಇಂದಿಗೂ ಬೆಳಗಾವಿ ಜಿಲ್ಲೆಯ ವೈಶಿಷ್ಟ್ಯಗಳಾಗಿ ಆಕರ್ಷಣೆ ಹೊಂದಿವೆ.

- Advertisement -

೧೮೧೮ ರಿಂದ ಬೆಳಗಾವಿ ಬ್ರಿಟಿಷರ ಆಡಳಿತಕ್ಕೊಳಗಾಯಿತು. ೧೮೫೯ ರಲ್ಲಿ ಬೆಳಗಾವಿ ಮುನಸಿಪಾಲಿಟಿ ರಚನೆಯಾಗಿ ೧೮೭೭ ರಲ್ಲಿ ಇದರ ಮೊದಲ ಚುನಾವಣೆ ನಡೆಯಿತು. ೧೯೭೭ ರಲ್ಲಿ ಬೆಳಗಾವಿ ಮಹಾನಗರಸಭೆ ರಚನೆಯಾಯಿತು. ಸ್ವಾತಂತ್ರ್ಯದ ನಂತರ ಮೊದಲು ಬೆಳಗಾವಿ ಮುಂಬಯಿ ಪ್ರಾಂತದ ಭಾಗವೇ ಆಗಿತ್ತು. ೧೯೫೬ ರಲ್ಲಿ ಭಾಷಾವಾರು ಪ್ರಾಂತಗಳು ರಚನೆಗೊಂಡ ನಂತರ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿ ಉಳಿದುಕೊಂಡಿತು.
(ಸಶೇಷ)

ಎಲ್. ಎಸ್. ಶಾಸ್ತ್ರಿ

- Advertisement -
- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group