ಉಣುವಾಸೆ ತಿನುವಾಸೆ ಉಡುವಾಸೆ ಇಡುವಾಸೆ
ಧನಕನಕಮನೆಮಾರು ಗಳಿಸುವಾಸೆ
ಸಾಗರದ ತೆರೆಯಂತೆ ಸಾಲುಸಾಲಿಕ್ಕುವವು
ನರನಾಸೆಗಿಲ್ಲ ಕೊನೆ ಎಮ್ಮೆತಮ್ಮ
ಶಬ್ಧಾರ್ಥ
ಧನಕನಕ = ಹಣ ಬಂಗಾರ ಮನೆಮಾರು = ಮನೆ ಹೊಲ
ತಾತ್ಪರ್ಯ
ಮನುಷ್ಯನಿಗೆ ಆಸೆಗಳು ಹಲವಾರು. ಮೊದಲನೆಯದು ಹಸಿವು ಹಿಂಗಿಸಲು ಅನ್ನವನ್ನು ಉಣ್ಣುವ ಆಸೆ. ಮತ್ತೆ ನಾಲಿಗೆ ರುಚಿಗೆ ತಿಂಡಿತಿನಿಸಿಗಳನ್ನು ತಿನ್ನುವ ಆಸೆ. ಹೊಟ್ಟೆ ತುಂಬಿದ ಮೇಲೆ ಅಲಂಕಾರಕ್ಕಾಗಿ ಬಣ್ಣಬಣ್ಣದ ಬಟ್ಟೆ ಧರಿಸುವ ಆಸೆ. ಮತ್ತೆ ಆಡಂಬರಕ್ಕಾಗಿ ಒಡವೆಗಳನ್ನು ಇಡುವ ಆಸೆ. ಇವೆಲ್ಲಗಳನ್ನು ಕೊಳ್ಳಲಿಕ್ಕೆ ಹಣವನ್ನು ಗಳಿಸುವ ಆಸೆ. ಹಣ ಗಳಿಸಿದ ಮೇಲೆ ಮನೆಮಹಡಿಯನ್ನು ಕಟ್ಟಿಸುವ ಆಸೆ. ಹೀಗೆ ಒಂದು ಆಸೆ ಪೂರೈಸಿದರೆ ಮತ್ತೊಂದು ಆಸೆ ಉಂಟಾಗುತ್ತದೆ. ಮಾನವನ ಆಸೆಗಳು ಸಮುದ್ರದ ತೆರಗಳಂತೆ ಒಂದಾದ ಮೇಲೊಂದು ಸಾಲುಸಾಲಾಗಿ ತಲೆದೋರುವವು. ಮಾನವನ ಆಸೆಗೆ ಕೊನೆಯೆಂಬುವುದಿಲ್ಲ. ಈ ಆಸೆ ಪೂರೈಸಲಿಕ್ಕೆ ಮಾನವ ಜೀವನವಿಡೀ ಹೆಣಗಾಡುತ್ತಾನೆ.ಅಂಬಿಗರ ಚೌಡಯ್ಯ ಹೀಗೆ ಹೇಳಿದ್ದಾನೆ.
ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ, ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ, ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ, ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ, ಇಂತೀ ಹಲವು ಚಿಂತೆಯಲ್ಲಿ ಇಪ್ಪವರ ಕಂಡೆನು. ಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತ ನಮ್ಮ ಅಂಬಿಗರ ಚೌಡಯ್ಯ [ನಿಜ]ಶರಣನು.
ರಚನೆ ಮತ್ತ ವಿವರಣೆ
ಎನ್ .ಶರಣಪ್ಪ ಮೆಟ್ರಿ
ಮೊ: 9449030990