spot_img
spot_img

ಕನ್ನಡವನ್ನು ಬಹುಮುಖಿಯಾಗಿ ಬೆಳೆಸಿದ ಎಂ.ಆರ್.ಶ್ರೀ : ನಾಡೋಜ ಡಾ.ಮಹೇಶ ಜೋಶಿ

Must Read

- Advertisement -

ಆಧುನಿಕ ಯುಗದಲ್ಲಿ ಕನ್ನಡಕ್ಕಾಗಿ ದುಡಿದ ಹಾಗೂ ಕನ್ನಡವನ್ನು ಬೆಳೆಸಿದ ಮಹನೀಯರಲ್ಲಿ ಮೂವರು ಶ್ರೀಗಳು ಪ್ರಮುಖರು. ಬಿ.ಎಂ.ಶ್ರೀ, ತೀ.ನಂ.ಶ್ರೀ ಮತ್ತು ಎಂ.ಆರ್.ಶ್ರೀ ಇವರಲ್ಲಿ ಎಂ. ಆರ್. ಶ್ರೀನಿವಾಸಮೂರ್ತಿಯವರು ಕನ್ನಡ ಸಾಹಿತ್ಯವನ್ನು ಅಮೂಲಾಗ್ರವಾಗಿ ಓದಿ ಗ್ರಹಿಸಿದ್ದರು. ಅವರು ವಿಜ್ಞಾನದ ವಿದ್ಯಾರ್ಥಿಯಾದರೂ ಕನ್ನಡದ ಆಕರ್ಷಣೆಗೆ ಒಳಗಾಗಿ ಶ್ರಮಪಟ್ಟು ಕನ್ನಡ ಸಾಹಿತ್ಯದಲ್ಲಿ ಪ್ರಭುತ್ವವನ್ನು ಪಡೆದಿದ್ದರು. ವೀರಶೈವ ಸಾಹಿತ್ಯ, ಅದರಲ್ಲೂ ವಚನ ಸಾಹಿತ್ಯಕ್ಕೆ ಎಂ. ಆರ್. ಶ್ರೀ ಅವರದು ಬೆಲೆಯುಳ್ಳ ಕಾಣಿಕೆ.‘ ವಚನ ಧರ್ಮಸಾರ’ ಅವರ ಆಳವಾದ ವ್ಯಾಸಂಗಕ್ಕೆ, ವಿದ್ವತ್ತಿಗೆ, ಹೊಸದಾದ ಆಲೋಚನೆಗಳಿಗೆ ಸಂಕೇತವಾಗಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದರು.

ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿತವಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಎಂ.ಆರ್.ಶ್ರೀನಿವಾಸಮೂರ್ತಿಯವರ 132ನೆಯ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಮೈಸೂರು ವಿಶ್ವವಿದ್ಯಾಲಯದ ಕನ್ನಡ-ಇಂಗ್ಲೀಷ್ ನಿಘಂಟಿಗೆ ಹೊಸ ರೂಪ ನೀಡಿದ ಎಂ.ಆರ್.ಶ್ರೀ ಶಿಕ್ಷಣ ಇಲಾಖೆಯಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿಗಳಾಗಿ ಮಹತ್ವದ ಸೇವೆಯನ್ನು ಸಲ್ಲಿಸಿದರು. ಎಂ. ಆರ್. ಶ್ರೀ ಅವರು ಶ್ರೇಷ್ಠ ವಾಗ್ಮಿಗಳು. ಕನ್ನಡ ಸಾಹಿತ್ಯದ ಬಗೆಗೆ ಅದರಲ್ಲೂ ವೀರಶೈವ ಸಾಹಿತ್ಯದ ಬಗೆಗೆ ಅಧಿಕಾರವಾಣಿಯಿಂದ ಮಾತನಾಡಬಲ್ಲ ವಿದ್ವಾಂಸರಾಗಿದ್ದರು. ಪರಿಷತ್ತಿನ ಎಲ್ಲ ಸಾಹಿತ್ಯಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಗುಪ್ತಗಾಮಿಯಾಗಿ ಎಂ. ಆರ್. ಶ್ರೀ ಅವರ ಪರಿಶ್ರಮ ಹರಿದಿದೆ. ಕನ್ನಡಕ್ಕೆ ಧಕ್ಕೆ ಬಂದಾಗಲೆಲ್ಲಾ, ಅದರ ಸ್ಥಾನಮಾನಕ್ಕೆ ಚ್ಯುತಿ ಬಂದಾಗಲೆಲ್ಲಾ, ಎಂ. ಆರ್. ಶ್ರೀ ಹೋರಾಟ ನಡೆಸಿದವರು. ಎಂ. ಆರ್. ಶ್ರೀ ಅವರು ಅಧ್ಯಕ್ಷರಾಗಿದ್ದಾಗಿನ ಅವಧಿಯಲ್ಲಿ ಸೊಲ್ಲಾಪುರ, ಮುಂಬಯಿ ಮತ್ತು ಬೇಲೂರುಗಳಲ್ಲಿ ಮೂರು ಸಾಹಿತ್ಯ ಸಮ್ಮೇಳನಗಳಾದವು. ಅವರ ಕಾರ್ಯದಲ್ಲಿ ಪ್ರಾಮಾಣಿಕತೆ, ಒಂದು ಒಪ್ಪ, ಓರಣ, ಶಿಸ್ತು ಲೆಕ್ಕಾಚಾರವಿರುತ್ತಿತ್ತು. ನಿಘಂಟಿನ ಕಾರ್ಯದ ಪುನರ್ ವ್ಯವಸ್ಥೆ ಕನ್ನಡ ನುಡಿ ಪತ್ರಿಕೆಯ ಪರಿಷ್ಕರಣ, ಗಮಕ ಕಲೆಗೆ ಪ್ರೋತ್ಸಾಹ, ಪ್ರತಿಭಾನ್ವಿತರನ್ನೂ, ಕಲಾವಿದರನ್ನೂ ಸನ್ಮಾನಿಸುವುದು ಇವೆಲ್ಲಾ ಅವರ ಅಧಿಕಾರಾವಧಿಯಲ್ಲಿ ಆದಂತಹ ಕಾರ್ಯಗಳು. ಅಧಿಕಾರದಲ್ಲಿದ್ದಾಗಲೇ ಅವರು ನಮ್ಮನ್ನು ಅಗಲಿದ್ದು ದುರದೃಷ್ಟಕರ ಸಂಗತಿ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದರು.

- Advertisement -

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್.ಶ್ರೀಧರ ಮೂರ್ತಿಯವರು ಮಾತನಾಡಿ ಎಂ. ಆರ್. ಶ್ರೀ ಅವರ ಸಾಹಿತ್ಯಸೃಷ್ಟಿ ವೈವಿಧ್ಯಮಯವಾದುದು. ‘ಕಂಠೀರವ ವಿಜಯ’, ‘ಧರ್ಮದುರಂತ’, ‘ಯದುವಿಜಯ’ ಮತ್ತು ‘ನಾಗರಿಕ’ – ಇವು ನಾಟಕಗಳು. 1933ರಲ್ಲಿ ‘ಕವಿಯ ಸೋಲು’ ಮತ್ತು ಇತರ ಕವಿತೆಗಳು ಪ್ರಕಟವಾದವು. ‘ಕವಿಯ ಸೋಲು’ ಎಂಬುದು ಸರಳರಗಳೆಯ ಪುಟ್ಟ ನಾಟಕ. ‘ರೋಲ್ಸ್ ಮೇಷ್ಟ್ರು’ ಹಾಗೂ ‘ರಂಗಣ್ಣನ ಕನಸಿನ ದಿನಗಳು’ ಎಂ.ಆರ್. ಶ್ರೀ ಅವರ ವೃತ್ತಿ ಜೀವನದ ಅನುಭವಗಳನ್ನು ಒಳಗೊಂಡಿದೆ. ‘ರಂಗಣ್ಣನ ಕನಸಿನ ದಿನಗಳು’ ಕಥೆಯ ಜಾತಿಗೂ ಸೇರದ, ಕಾದಂಬರಿಯ ಜಾತಿಗೂ ಸೇರದ ಒಂದು ವಿಶಿಷ್ಟವಾದ ಕೃತಿ. ಕುವೆಂಪುರವರು ಇದನ್ನು ‘ಚಿತ್ರಕಾದಂಬರಿ’ ಎಂದು ಕರೆದಿದ್ದಾರೆ. ಕಳೆದ ಶತಮಾನದ ಎರಡನೆಯ ದಶಕದಲ್ಲಿ ಎಂ. ಆರ್. ಶ್ರೀ ಅವರು ‘ಸಾವಿತ್ರಿ’ ಎನ್ನುವ ಸ್ವತಂತ್ರ ಸಾಮಾಜಿಕ ಕಾದಂಬರಿಯನ್ನು ಬರೆದರು. 1916-17ರಲ್ಲಿ ‘ಕಾದಂಬರಿ ಸಂಗ್ರಹ’ ಎನ್ನುವ ಮಾಸ ಪತ್ರಿಕೆಯಲ್ಲಿ ಇದು ಧಾರಾವಾಹಿಯಾಗಿ ಪ್ರಕಟವಾಯಿತು. ಮುಂದೆ ಇದು ಪುಸ್ತಕರೂಪದಲ್ಲಿ ಪ್ರಕಟಗೊಂಡಿತು. ಎಂ.ಆರ್.ಶ್ರೀ ಅವರ ‘ಮಹಾತ್ಯಾಗ’ ಕಾದಂಬರಿ ಚಲನಚಿತ್ರವಾಗಿಯೂ ಮನ್ನಣೆಯನ್ನು ಪಡೆದಿದೆ ಎಂದು ವಿವರಗಳನ್ನು ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗಶೆಟ್ಟಿ , ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಸೇರಿದಂತೆ ಪರಿಷತ್ತಿನ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತು

- Advertisement -
- Advertisement -

Latest News

ಪೌರಕಾರ್ಮಿಕರ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಮುದಾಯ ಸಹಕರಿಸಲಿ- ಬಾಲಚಂದ್ರ ಜಾಬಶೆಟ್ಟಿ.

ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯಲ್ಲಿ ಪರಿಸರ ಸ್ನೇಹಿ ತಂತ್ರಜ್ಞಾನಗಳ ಅಳವಡಿಕೆ ಕುರಿತ ಉಪನ್ಯಾಸ   ಧಾರವಾಡ- ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪದ ವಿಶೇಶ ಉಪನ್ಯಾಸ...
- Advertisement -

More Articles Like This

- Advertisement -
close
error: Content is protected !!
Join WhatsApp Group