ಬಾಗಲಕೋಟೆ : ಗುರುಸ್ವಾಮಿ ಗಣಾಚಾರಿ ಅಭಿನಂದನ ಸಮಿತಿ ಮುಚಖಂಡಿ ಇವರಿಂದ ಶ್ರೀ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ದಿ. ೨೭ ರಂದು ಗುರುಸ್ವಾಮಿ ಗಣಾಚಾರಿಯವರಿಗೆ ಸಹಸ್ರ ಚಂದ್ರದರ್ಶನ ಅಭಿನಂದನ ಕಾರ್ಯಕ್ರಮ ಹೃದಯಸ್ಪರ್ಶಿಯಾಗಿ, ಅದ್ದೂರಿಯಾಗಿ ನೆರವೇರಿತು.
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಚಿತ್ತರಗಿ ಸಂಸ್ಥಾನ ಮಠ ಇಲಕಲ್ಲದ ಶ್ರೀ ಮ.ನಿ.ಪ್ರ ಗುರುಮಹಾಂತ ಸ್ವಾಮಿಗಳು ವಹಿಸಿದ್ದರು. ಅವರು ಆಶೀರ್ವಚನ ನೀಡಿ ಬಸವಾದಿ ಶರಣರ ತತ್ವಗಳನ್ನು ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದ ಗಣಾಚಾರಿಯವರು ಅಪರೂಪದ ಸಾಧಕರು ಎಂದು ವಿವರಿಸಿದರು.
ಶ್ರೀ ಮ.ನಿ.ಪ್ರ ಡಾ. ಬಸವಲಿಂಗ ಸ್ವಾಮೀಜಿ ಮಾತನಾಡಿ, ನಡೆ ನುಡಿ ಒಂದಾಗಿ ಬದುಕಿದ ಗುರುಸ್ವಾಮಿಯವರು ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಉದ್ಘಾಟನೆ ಮಾಡಿದ ಬ.ವ್ಹಿ.ವ್ಹಿ ಸಂಘದ ಕಾರ್ಯಾಧ್ಯಕ್ಷರಾದ ವೀರಣ್ಣ ಚರಂತಿಮಠ ಅವರು ಮಾತನಾಡಿ ಸಾತ್ವಿಕ ಜೀವನವನ್ನು ರೂಢಿಸಿಕೊಂಡು ಬಂದ ಗಣಾಚಾರಿಯವರು ಶತಮಾನೋತ್ಸವ ಆಚರಿಸುವಂತೆ ದೇವರು ಅವರಿಗೆ ಆಯಸ್ಸು ಆರೋಗ್ಯ ಕೊಡಲಿ ಎಂದು ಹಾರೈಸಿದರು.
ಗುರುಪಥ ಅಭಿನಂದನ ಗ್ರಂಥ ಲೋಕಾರ್ಪಣೆ ಮಾಡಿದ ಹಿರಿಯ ಸಾಹಿತಿ ಡಾ. ಗುರುದೇವಿ ಹುಲ್ಲೆಪ್ಪನವರಮಠ ಮಾತನಾಡಿ, ಗುರುಸ್ವಾಮಿಯವರು ಬಹುಮುಖ ಪ್ರತಿಭಾವಂತರು, ಬಹುಮುಖ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಅವರು ೧೧೦ ಕ್ಕಿಂತ ಹೆಚ್ಚು ಅಮೂಲ್ಯ ಗ್ರಂಥಗಳನ್ನು ರಚಿಸಿದ ಗುರುಸ್ವಾಮಿಯವರ ಸಾಧನೆ ಅಪಾರವಾದುದು ಅವರು ಸಂತೆಯೊಳಗಿನ ಸಂತರಿದ್ದಂತೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆಯನ್ನು ಎಪಿಎಂಸಿ ಮಾಜಿ ಅಧ್ಯಕ್ಷರಾದ ಪ್ರಭುಸ್ವಾಮಿ ಸರಗಣಾಚಾರಿ ವಹಿಸಿದ್ದರು, ಅವರು ಮಾತನಾಡಿ ಗುರುಸ್ವಾಮಿಯವರ ತ್ಯಾಗ ಮತ್ತು ಸೇವೆ ಅಪೂರ್ವವಾದವುಗಳು, ಅವರಿಗೆ ಅಪಾರವಾದ ಶಿಷ್ಯ ಬಳಗವಿದೆ. ಅವರ ಸಾತ್ವಿಕ ಜೀವನ ಇತರರಿಗೆ ಮಾದರಿಯಾಗಿದೆ ಎಂದು ವಿವರಿಸಿದರು.
ಅಭಿನಂದನ ನುಡಿಗಳನ್ನು ಹೇಳಲು ಆಗಮಿಸಿದ ಶಿಕ್ಷಣ ಇಲಾಖೆಯ ವಿಶ್ರಾಂತ ನಿರ್ದೇಶಕರಾದ ಸಿದ್ಧರಾಮ ಮನಹಳ್ಳಿಯವರು ಮಾತನಾಡಿ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸಕಲ ಸದ್ಗುಣಗಳ ಆಗರವಾಗಿರುವ ಗುರುಸ್ವಾಮಿಯವರನ್ನು ಸನ್ಮಾನಿಸುವುದೆಂದರೆ ಸಾಕ್ಷಾತ್ ಗೌರಿಶಂಕರನನ್ನೇ ಸನ್ಮಾನಿಸಿದಂತೆ ಎಂದು ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗುರುಸ್ವಾಮಿ ಗಣಾಚಾರಿಯವರು ಅದ್ದೂರಿ ಸಮಾರಂಭವನ್ನು ಆಯೋಜಿಸಿ ಯಶಸ್ವಿಗೊಳಿಸಿದ ಎಲ್ಲ ಅಭಿಮಾನಿ ಬಳಗಕ್ಕೆ ಕೃತಜ್ಞತೆ ಸಲ್ಲಿಸಿದರು. ಬ.ವ್ಹಿ.ವ್ಹಿ ಸಂಘದ ಕಾಲೇಜು ಮಂಡಳಿ ಕಾರ್ಯಾಧ್ಯಕ್ಷರಾದ ಗುರುಬಸವ ಸೂಳಿಭಾವಿ ಹಾಗೂ ಖ್ಯಾತ ವಕೀಲರಾದ ಎಸ್.ಕೆ ಯಡಹಳ್ಳಿಯರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಬಸಯ್ಯ ಹಿರೇಮಠ ಪ್ರಾರ್ಥನೆ ಹಾಡಿದರು, ಎಸ್.ಎಸ್.ಹಳ್ಳೂರ ಸ್ವಾಗತಿಸಿ ಪರಿಚಯಿಸಿದರು, ಡಾ. ವಿಜಯಕುಮಾರ ಕಟಗಿಹಳ್ಳಿಮಠ ಪ್ರಾಸ್ತವಿಕ ಮಾತುಗಳನ್ನು ಹೇಳಿದರು, ಎಚ್.ಎಸ್.ಕಾಳೆ, ರಮೇಶ ಬಳ್ಳಾ, ಶಿವಾನಂದ ಆದಾಪೂರರವರು ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಸರಗಣಾಚಾರಿಯವರು ವಂದನಾರ್ಪಣೆ ನೆರವೇರಿಸಿದರು. ಅಭಿನಂದನ ಸಮಿತಿಯ ಕಾರ್ಯದರ್ಶಿ ರಾಜು ಬಲಮಿ, ಗುರುಪಥ ಗ್ರಂಥದ ಸಂಪಾದಕರಾದ ಜಿ.ಕೆ.ತಳವಾರ, ಮೀನಾಕ್ಷಿ ಮುಂಡಗನೂರ, ಎಸ್.ಬಿ.ಹಿರೇಮಠ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗುರುಸ್ವಾಮಿ ಗಣಾಚಾರಿಯವರಿಗೆ ಹಲವಾರು ಜನ ಅಭಿಮಾನಿಗಳು, ಸಾಹಿತಿಗಳು, ಶಿಕ್ಷಕ ವರ್ಗ ಹಾಗೂ ಕುಟುಂಬದವರು ಸನ್ಮಾನಿಸಿದರು.