ಗೋಕಾಕ – ಕವಿ ಬಾಳೇಶ ಬಸವರಾಜ ಫಕೀರಪ್ಪನವರ ಅವರಿಗೆ ಉಜ್ವಲ ಭವಿಷ್ಯವಿದೆ. ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕಿತ್ತೂರು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಬೇಕು ಎಂದು ಕಸಾಪ ಜಿಲ್ಲಾ ಅಧ್ಯಕ್ಷೆ ಮಂಗಳಾ ಮೆಟಗುಡ್ಡ ಹೇಳಿದರು.
ಕಿತ್ತೂರ ಚೆನ್ನಮ್ಮನವರ ೨೦೦ ನೇ ವಿಜಯೋತ್ಸವದ ನಿಮಿತ್ತ ಏರ್ಪಡಿಸಲಾದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಫಕೀರಪ್ಪನವರ ಅವರು ಅತ್ಯುತ್ತಮ ಸ್ಥಾನ ಗಳಿಸಿದ ನಿಮಿತ್ತ ಅವರನ್ನು ಸನ್ಮಾನಿಸಿ ಮಾತನಾಡಿದರು.
ಕವಿಗೆ ಶಾಲು ಹೊದಿಸಿ ಸ್ಮರಣಿಕೆ, ಪ್ರಪಂಚದ ಬೆಳಕು ಪ್ರಾತಿನಿಧಿಕ ಕವನ ಸಂಕಲನ ನೀಡಿ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕಸಾಪ ಬೆಳಗಾವಿ ಮಾಜಿ ಅಧ್ಯಕ್ಷ ಮೋಹನ ಪಾಟೀಲ ಅವರು, ಬಾಳೇಶರು ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಬಸವ ಸಮಿತಿಯ ಬಸವ ಪಥ ಸದಸ್ಯರಾಗಿ ಗ್ರಾಮೀಣ ಪ್ರದೇಶದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆ ಇನ್ನೂ ಸಾಹಿತ್ಯಕ್ಕೆ ಸಲ್ಲಬೇಕು ಎಂದರು.
ಧಾರವಾಡ ಜಿಲ್ಲೆಯ ತಡಕೋಡ ಗ್ರಾಮದವರಾದ ಫಕೀರಪ್ಪನವರ ಅವರು ಸದ್ಯ ಗೋಕಾಕ ತಾಲೂಕಿನ ಗೋಸಬಾಳ ಕನ್ನಡ ಪ್ರಾಥಮಿಕ ಶಾಲೆಯ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.