ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಬೇಕು, ಹೆಚ್ಚುವರಿ ಶುಲ್ಕ ತೆಗೆದುಕೊಳ್ಳಬಾರದು
ಮೂಡಲಗಿ – ವಲಯದ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಶುಲ್ಕದ ಮಾಹಿತಿ ಪ್ರಕಟಿಸಬೇಕು, ಹೆಚ್ಚುವರಿಯಾಗಿ ಶುಲ್ಕ ತೆಗೆದುಕೊಳ್ಳಬಾರದು ಹಾಗೂ ನಿಗದಿತ ಪಠ್ಯ ಪುಸ್ತಕಗಳನ್ನು ಬಿಟ್ಟು ಅನಗತ್ಯ ಪಠ್ಯಪುಸ್ತಕಗಳ ಹೊರೆಯನ್ನು ವಿದ್ಯಾರ್ಥಿಗಳಿಗೆ ಹಾಕಬಾರದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿಯವರು ಖಾಸಗಿ ಶಾಲೆಗಳಿಗೆ ಸುತ್ತೋಲೆ ಕಳಿಸಿದ್ದಾರೆ.
ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕರು ಚಿಕ್ಕೋಡಿ ಇವರ ನಿರ್ದೇಶನದಂತೆ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಂಡಳಿಯವರು ನೂತನ ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ನಿಗದಿತ ಶುಲ್ಕವನ್ನು ಶಾಲೆಯಲ್ಲಿ ಪ್ರದರ್ಶಿಸಬೇಕು. ನಿಗದಿತ ಶುಲ್ಕವಲ್ಲದೆ ಹೆಚ್ಚಿನ ಶುಲ್ಕವನ್ನು ವಸೂಲು ಮಾಡಬಾರದು ಎಂದು ಅವರು ಸೂಚಿಸಿದ್ದಾರೆ.
ಕೆಲವು ಖಾಸಗಿ ಸಿಬಿಎಸ್ಈ ಶಾಲೆಗಳು ನಿಗದಿತ ಪಠ್ಯಪುಸ್ತಕಗಳನ್ನಲ್ಲದೆ ಖಾಸಗಿ ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿಸಿ ಅತಿ ಹೆಚ್ಚು ಬೆಲೆಯನ್ನು ವಿದ್ಯಾರ್ಥಿಗಳಿಂದ ವಸೂಲು ಮಾಡುತ್ತಿದ್ದಾರೆಂಬ ದೂರು ಬಂದ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ನಿಗದಿತ ಪಠ್ಯವಲ್ಲದೆ ಬೇರೆ ಹೆಚ್ಚುವರಿ ಪುಸ್ತಕಗಳ ಹೊರೆಯನ್ನು ವಿದ್ಯಾರ್ಥಿಗಳ ಮೇಲೆ ಹಾಕಬಾರದು ಎಂದೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಒಂದು ವೇಳೆ ಈ ಕುರಿತಂತೆ ಪಾಲಕರಿಂದ ದೂರು ಬಂದಲ್ಲಿ ಶಾಲೆಯ ಮಾನ್ಯತೆ ರದ್ದುಪಡಿಸಲು ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಗುವುದು ಆದ್ದರಿಂದ ಶಾಲಾ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಶಾಲೆ ನಡೆಸಬೇಕು, ವಿದ್ಯಾರ್ಥಿಗಳಿಗೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು, ಶಾಲಾ ವಾಹನಗಳಲ್ಲಿ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡ ಬಗ್ಗೆ ಮಾಹಿತಿ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಸುತ್ತೋಲೆ ಹೊರಡಿಸಿದ್ದಾರೆ.