ಅಣ್ಣಾರ ಮೊನ್ನಿ ಕನ್ಯಾ ನೋಡಾಕ್ ಹೋಗಿದ್ರಲ್ಲ ಏನಾಯ್ತು? ಅಯ್ಯೋ ಅದೊಂದ್ ದೊಡ್ಡ ಕಥೆ ಬಿಡ್ರಿಪಾ ಎನ್ ಕೇಳ್ತೀರಿ ನಮ್ಮಂಥೋರಿಗೆಲ್ಲ ಯಾರು ಹೆಣ್ಣು ಕೊಡ್ತಾರು?ಅನ್ನುವ ನಿರಾಶೆಯ ಮಾತುಗಳು ಪಕ್ಕೀರಪ್ಪನ ಬಾಯಲ್ಲಿ ಎಂದಿನಂತೆ ಬಂದವು.
ಅಲ್ಲೋ ಅಣ್ಣಾ ನಿಮ್ ಹುಡುಗ್ಗ ಏನ್ ಕಮ್ಮಿ ಆಗೇತಿ ಡಿಗ್ರಿ ಕಲ್ತಾನು,ಶ್ಯಾಣೆ ಅದಾನು ಏನ್ ರೂಪದಾಗ ಕಡಿಮ್ಯಾ,ಹೈಟ್ ನ್ಯಾಗ್ ಕಡಿಮ್ಯಾ?ಅಂದ ವಿರುಪಾಕ್ಷಿಗೆ, ಇಲ್ಲ ಬಿಡ್ರಿ ಅಣ್ಣಾರ ಜಾತಿ,ಕುಲ,ಕೂಡಾವಳಿ,ಹೊಲಾ,ಮನಿ ಅಂತ ಏನರೇ ಕೇಳಿದ್ರ ಎಲ್ಲಾ ಐತ್ರಿ ಆದ್ರ ಏನ್ ಮಾಡೂದ್ರಿ ಎಲ್ಲಾರೂ ಹೊಲಮನಿ ಬ್ಯಾಡ ಗೌರ್ಮೆಂಟ್ ನೌಕರಿಯಂವ್ನ ಬೇಕ್ ಅಂತಾರು ಅಂದ ಪಕ್ಕೀರಪ್ಪ ತನ್ನ ಮಗನ ಮದುವೆ ಇನ್ನೆಂದೂ ಆಗಲಿಕ್ಕಿಲ್ಲ ಅನ್ನುವಂತೆ ಹೆಗಲ ಮೇಲಿನ ಟವಲ್ಲು ಝಾಡಿಸಿ ನಿಟ್ಟುಸಿರು ಬಿಟ್ಟ.
ಸಂಗವ್ವ ನಿನ್ನಿ ನಿಮ್ಮ ಶಾರದಾನ ನೋಡಾಕ್ ಬಂದಿರಲ್ಲ… ಗಟ್ಟಿ ಆತೇನೂ ಅಕ್ಕಿಕಾಳ ಯಾವಾಗ? ಅಂದ ಶಾಂತವ್ವನಿಗೆ ಇಲ್ಲರಿ ಅಕ್ಕಾ ಅದು ಸುಳ್ಳ ಆತ್ರಿ…ಹುಡುಗ ನಮಗೆಲ್ಲ ಪಸಂದ್ ಇದ್ದಾ… ಚಲೋ ಮನಿತನ ಖರೆ ಹೇಳ ಬೇಕಂದ್ರ ಹುಡಗ ಚೊಕ್ಕ ಬಂಗಾರ ಆದ್ರ ನಮ್ ಪೋರಿನ ನಾ ಏನ್ ವಲ್ಲಿ ಅಂದಳು ಅಂದಾಗ ಶಾಂತವ್ವ ಸಂಗವ್ವನ ಕಡೆ ನೋಡಿ ಐ ಇದರ ಮಾರಿ ಮಣ್ಣಾಗ ಅಡಗಲಿ ಅಂದಾಗ ಶಾರದಾಳ ಅವ್ವ ಸಂಗವ್ವ ತನ್ನ ಸೀರೆಯ ಸೆರಗನ್ನ ಬಾಯಿಗೆ ಅಡ್ಡ ತಂದು ತುಂಬಿ ಬಂದ ಕಣ್ಣಲ್ಲೇ ಮುಖ ಕಿವುಚಿದಳು.
ಹೀಗೆ ಒಂದಲ್ಲ ಒಂದು ಕಾರಣಕ್ಕೆ ಈಗಲೂ ಮದುವೆಯ ಸಂಬಂಧಗಳು ಮುರಿದು ಬೀಳುವ ಘಟನೆಗಳು ಆಗಾಗ ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ.
ಎಷ್ಟೋ ಸಲ ರೂಪ,ಲಾವಣ್ಯ, ವಿದ್ಯೆ ಹಾಗೂ ಬಣ್ಣಗಳಿದ್ದರೂ ಕೂಡ ಹುಡುಗಿ ಕುಳ್ಳಿ ಅಂತಲೋ ಹುಡುಗ ಡುಮ್ಮ ಅಂತಲೋ ಮುರಿದು ಬೀಳುವ ಮಾತುಕತೆಗಳು ಒಂದು ಕಡೆಯಾದರೆ ಭಾರತ್ ಮ್ಯಾಟ್ರಿಮೋನಿ,ಶಾದಿ ಡಾಟ್ ಕಾಂ,ಇಲೈಟ್ ಮ್ಯಾಟ್ರಿಮೋನಿ,ಜೀವನ ಸಾಥಿ,ಇಂಪೀರಿಯಲ್ ಮ್ಯಾಟ್ರಿಮೋನಿ ಮತ್ತು ಯುವರ್ ಚಾಯ್ಸ್,ಲವ್ ಅಡ್ಡಾದಂತಹ ವೆಬ್ ಸೈಟುಗಳಿಂದ ಹಿಡಿದು ಹತ್ತಾರು ಆನ್ ಲೈನ್ ಸರ್ಚಿಂಗ್ ಸೈಟುಗಳ ಮೂಲಕ ಹಣ ಕಟ್ಟಿ ಪೋಟೊ ಮತ್ತು ಬಯೋಡೇಟಾ ಪಡೆದು ಹುಡುಗ ಹುಡುಗಿಯರ ನಡುವೆ ಮಾತುಕತೆ ನಡೆಯುವಾಗಲೂ ಡೇಟಿಂಗ್, ಚಾಟಿಂಗ್ ಮತ್ತು ಪ್ರಿ ವೆಡ್ಡಿಂಗ್ ಶೂಟ್ ಬಳಿಕವೂ ಮದುವೆಗಳು ಮುರಿದು ಬೀಳುವದು ಹೊಂದಾಣಿಕೆಯ ಕೊರತೆಯಿಂದ ಅನ್ನುವದು ಗಮನಿಸಬೇಕಾದ ವಿಷಯ..
ಕನ್ಯೆಯರು ಸಿಗುವದೇ ಕಷ್ಟ ಅನ್ನುವಂತಹ ಕೆಲವು ಮತ ಧರ್ಮ ಪಂಥಗಳೂ ಈಗ ಭಾರತದಲ್ಲಿ ಇವೆ ಅನ್ನುವದಕ್ಕೆ ಅವರು ವಾಸಿಸುವ ವಾತಾವರಣ ದಿಂದ ಹಿಡಿದು ಹೆಣ್ಣು ಭ್ರೂಣ ಹತ್ಯೆ ಅವ್ಯಾಹತವಾಗಿ ನಡೆದದ್ದು ಮತ್ತು ಗಂಡು ಮಗು ಬೇಕು ಅನ್ನುವ ಕಾರಣಕ್ಕೆ ಟೆಸ್ಟ್ಯೂಬ್ (ಪ್ರಣಾಳ ಶಿಶು)ಪಡೆಯುವಷ್ಟರ ಮಟ್ಟಿಗೆ ಹೋದ ಮೇಲಂತೂ ಹವ್ಯಕ ಬ್ರಾಹ್ಮಣ, ಜೈನ,ಮತ್ತು ಮರಾಠಾ,ಮಾರ್ವಾಡಿ,ಹಾಗೂ ಲಿಂಗಾಯತ,ಸೇರಿದಂತೆ ಹಲವು ಕುಟುಂಬ ಮತ್ತು ದೇಶಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕುಸಿತ ಕಂಡಿರುವದು ಇಂದು ಜಾಗತಿಕ ಸಮಸ್ಯೆಯಾಗಿ ಕಾಡುತ್ತಿದೆ.
ಬಹಳಷ್ಟು ಸಲ ಹೆಣ್ಣು ಕಡೆಗಣಿಸಲ್ಪಟ್ಟ ಪರಿಣಾಮವಾಗಿ ಮತ್ತು ಹೆಣ್ಣೆಂದರೆ ಹುಣ್ಣು ಎಂದು ಭಾವಿಸುತ್ತಿದ್ದ ಕಾಲದಲ್ಲಿ ಆರಂಭವಾದ ಪುರುಷ ಮತ್ತು ಮಹಿಳೆಯರ ಸರಾಸರಿ ಸಂಖ್ಯೆಯ ಅನುಪಾತದ ಏರಿಳಿತ ಇಂದಿಗೆ ಬಿರುಕು ಬಿಟ್ಟ ದೊಡ್ಡ ಕಂದಕವಾದ ಪರಿಣಾಮವಾಗಿ ಮದುವೆಯ ವಯಸ್ಸು ಮೀರುತ್ತಿದ್ದರೂ ವಿವಾಹವಾಗದೆ ಉಳಿಯುತ್ತಿರುವ ಯುವಕ ಯುವತಿಯರ ಸಂಖ್ಯೆ ಹೆಚ್ಚುತ್ತಲೇ ಇದೆ.
ಇನ್ನೊಂದು ಕಡೆ ಅಧುನಿಕತೆಯ ಸುಳಿಗೆ ಸಿಲುಕಿ ಗುಣವಂತರಲ್ಲದೆ ಇದ್ದರೂ ಹಣವಂತ ಗಂಡು ಹೆಣ್ಣು ಬೇಕು ಅನ್ನುವ ಮತ್ತು ಬಡವರು ಹಾಗೂ ರೈತರ ಮಕ್ಕಳು ನಗಣ್ಯ ಅನ್ನಿಸುವಂತಹ ವಾತಾವರಣ ಬೆಳೆದು ನಿಂತಿರುವದು ದುರಂತವೇ ಸರಿ.
ಈಗ ಸುಮಾರು ಮೂವತ್ತು ವರ್ಷಗಳ ಹಿಂದಿನವರೆಗೂ ಮನೆಯಲ್ಲಿ ಹಿರಿಯರು ಒಪ್ಪಿದ ಅಥವಾ ಸಂಬಂಧಿಕರು ಕರುಳು ಬಳ್ಳಿ ಇರಲಿ ಅನ್ನುವ ಕಾರಣಕ್ಕೋ, ದೂರದ ನೆಂಟಸ್ತಿಕೆಗಳು ಮುಳುವಾಗಬಹುದು ಅನ್ನುವ ಕಾರಣಕ್ಕೋ,ಆಗಿನ ಕಾಲದಲ್ಲಿ ಸಾರಿಗೆ ವ್ಯವಸ್ಥೆಯ ಕೊರತೆ ಮತ್ತು ಖಾಸಗಿ ವಾಹನಗಳ ಭರಾಟೆ ಇಲ್ಲದ ಕಾಲಕ್ಕೋ ಹತ್ತಿರದ ಊರುಗಳಲ್ಲಿ ಮನೆಯ ಎದುರು ಹಂದರ ಹಾಕಿ ಮಂತ್ರ ಘೋಷದ ಜೊತೆಗೆ ಮಂಗಳ ವಾದ್ಯ ಮೊಳಗಿಸಿ ಹಿರಿಯರೇ ಮುಂದೆ ನಿಂತು ಮಾಡುತ್ತಿದ್ದ ಮದುವೆಗಳೆಲ್ಲ ಸರಳವಾಗಿ ನಡೆದರೂ ಆ ದಿನಗಳಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ನವ ಜೋಡಿಗಳು ಸಹಬಾಳ್ವೆಯಿಂದ ಬಾಳುತ್ತಿದ್ದರು.
ಮದುವಣಗಿತ್ತಿಯಾದರೂ,ಚೊಚ್ಚಲ ಗರ್ಭಿಣಿಯೇ ಆದರೂ ಮೈ ಮುರಿದು ದುಡಿಯಲೇ ಬೇಕಿದ್ದ ದಿನಗಳಾದ್ದರಿಂದ ಎಲ್ಲ ಹೆರಿಗೆಗಳೂ ಸಹಜ ಹೆರಿಗೆಗಳೇ ಆಗಿರುತ್ತಿದ್ದ ದಿನಗಳಲ್ಲಿ ಮನೆಗಳು ಮಕ್ಕಳ ಕಲರವದಿಂದ ತುಂಬಿರುತ್ತಿದ್ದವು.
ಮೂರು ಹೆಣ್ಣು,ನಾಲ್ಕು ಗಂಡು ಮಕ್ಕಳು ಅಂತ ಆರೇಳು ಮಕ್ಕಳನ್ನು ಹೆರುತ್ತಿದ್ದ ಹಿರಿಯ ಜೀವಗಳು ತಾಳಿ ಕಟ್ಟಿದ ಗಂಡ ಅನ್ನುವ ಕಾರಣಕ್ಕೆ ಕುಡುಕನೋ,ಕಪಟಿಯೋ,ಕೆಡುಕನೋ ಆಗಿರುತ್ತಿದ್ದ ಗಂಡನ ಜೊತೆಗೆ ಪತಿಯೇ ಪರದೈವ ಅಂತ ಕೊನೆ ಉಸಿರು ಇರುವತನಕ ಸಂಸಾರದ ನೊಗ ಹೊತ್ತು ನಡೆಯುತ್ತಿದ್ದ ದಿನಗಳವು.
ಅದರೆ ವರ್ಷಗಳು ಕಳೆಯುತ್ತ ಹೋದಂತೆಲ್ಲ ಹಿರಿಯರ ಮಧ್ಯಸ್ಥಿಕೆಯೂ ಇಲ್ಲದೆ, ತಪ್ಪು ಮಾಡಿದರೆ ತಿದ್ದುವವರು ಮತ್ತು ಒಂದಷ್ಟು ಗದರಿಸಿ ತಪ್ಪುವ ಸಂಸಾರಗಳನ್ನ ಸರಿ ದಾರಿಗೆ ತರುವವರೂ ಹಿರಿಯರು ಇಲ್ಲದೆ ಆಗುವ ರಜಿಸ್ಟರ್ ಮ್ಯಾರೇಜುಗಳು ನಾ ಹೆಚ್ಚು ನೀ ಹೆಚ್ಚು ಅನ್ನುವ ಅಹಂಕಾರ ಗಂಡು ಹೆಣ್ಣಿನಲ್ಲಿ ಬೆಳೆಯುತ್ತ ಬಂದ ಬಳಿಕ ಈಗಿನ ದಿನಗಳಲ್ಲಿ ಮದುವೆಯಾದ ಮೂರು ದಿನದಲ್ಲೇ ವಿಚ್ಚೇದನ ಬೇಕು ಅಂತ ಕೋರ್ಟು ಮೆಟ್ಟಿಲು ಹತ್ತುವ ದಿನಗಳಿವು…
ಸಾಲದ್ದಕ್ಕೆ ಲೀವಿಂಗ್ ಟುಗೆದರ್ ಬಟ್ ನಾಟ್ ಹ್ಯಾವ್ ಚಿಲ್ಡ್ರನ್ಸ ಅನ್ನುವಂತಹ, ನಾಟ್ ಲೀಗಲ್ ಮ್ಯಾರೇಜ್, ಡೈವರ್ಸಡ, ಅಥವಾ ಸಿಂಗಲ್ ಮೆನ್ ವುಮೆನ್ ಆಪ್ಟರ್ ಮ್ಯಾರೇಜ್ ಅನ್ನುವಂತಹ ವಿಷಯಗಳನ್ನು ಕೇಳಿದಾಗೆಲ್ಲ ರಾಷ್ಟ್ರ ಕವಿ ಜಿ ಎಸ್ ಶಿವರುದ್ರಪ್ಪ ನವರು ಹೇಳಿದ, ‘ಹತ್ತಿರವಿದ್ದರೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ’, ‘ಹೊಂದಾಣಿಕೆ ಎಂಬುದು ಎಷ್ಟು ಕಷ್ಟವೋ ಮೂರು ದಿನದ ಈ ಬದುಕಿನಲ್ಲಿ’ ಅನ್ನುವ ಸಾಲುಗಳು ನೆನಪಾಗುತ್ತವೆ.
ಇನ್ನು ಯಾರದೋ ಚಾಡಿ ಮಾತು ಕೇಳಿ,ತಂದೆಯಿಲ್ಲದ ಮಗಳೊಬ್ಬಳ ಬಗ್ಗೆ ಹುಟ್ಟಿಕೊಂಡ ಗಾಸಿಪ್ಪು ಕೇಳಿ,ಅಯ್ಯೋ ಕೂಡು ಕುಟುಂಬ ಅನ್ನುವ ನೆಪವೊಡ್ಡಿ,ಮದುವೆಯ ಸಂಬಂಧಗಳನ್ನ ನಿರಾಕರಿಸುವ,ಮತ್ತು ನಿಶ್ಚಯವಾದ ವಿವಾಹವನ್ನೂ ರದ್ದುಗೊಳಿಸುವ ಈ ದಿನಗಳಲ್ಲಿ ಯುವಕ ಯುವತಿಯರನ್ನ ತಿದ್ದುವದು ಬಹಳ ಕಷ್ಟದ ವಿಷಯವೇ ಸರಿ.
ಇನ್ನುಳಿದಂತೆ ಐಶಾರಾಮದ ಬದುಕಿನ ಕನಸು ಹೊತ್ತು ಇಪ್ಪತ್ತರ ಯುವತಿಯೊಬ್ಬಳು ಎಪ್ಪತ್ತರ ಮುದುಕನನ್ನ ವರಿಸುವದು,ಅರವತ್ತರ ಆಸು ಪಾಸಿನ ಅಜ್ಜಿಯೊಬ್ಬಳು ತನ್ನ ಮಗನ ವಯಸ್ಸಿನ ಹುಡುಗನ ಜೊತೆ ಯಾವುದೋ ದೇವಸ್ಥಾನದಲ್ಲಿ ಹಾರಬದಲಾಯಿಸಿಕೊಳ್ಳುವದು ತೀರ ಅಪರೂಪ ಅನ್ನಿಸಿದ್ದ ಘಟನೆಗಳೆಲ್ಲ ಈಗಿನ ದಿನಗಳಲ್ಲಿ ಅಷ್ಟೆನೂ ಅಚ್ಚರಿ ಹುಟ್ಟಿಸದ ಕಾಮನ್ ವಿಷಯಗಳಾಗಿ ಬಿಟ್ಟಿವೆ.
ಕಂಕಣಬಲ ಅನ್ನುವದು ಕೂಡಿ ಬಂದರೆ ಮದುವೆ ನಿಲ್ಲಿಸುವದು ಆ ಬ್ರಹ್ಮನಿಂದಲೂ ಸಾಧ್ಯವಿಲ್ಲ, ಸಾವಿರ ಸುಳ್ಳು ಹೇಳಿ ಆದರೂ ಒಂದು ಮದುವೆ ಮಾಡು,ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಅನ್ನುವ ಮಾತುಗಳು ಈಗಿನ ಹುಡುಗ ಹುಡುಗಿಯರಿಗೆ ಹಳೆಯ ಕಾಲದ ಜೋಕುಗಳಂತೆ ಭಾಸವಾಗುತ್ತ ಬರು ಬರುತ್ತ ದಿನಗಳು ಉರುಳಿ ಬದುಕಿನ ಜೊಕಾಲಿ ಜೀಕುವದು ಕಷ್ಟಸಾಧ್ಯ ಅನ್ನಿಸ ತೊಡಗಿದ ಮೇಲೆ ಪಕ್ಕದ ಮನೆಯ ಆಂಟಿ,ಅಂಕಲ್,ಲೆಕ್ಚರರ್ ಜೊತೆ ಅಥವಾ ತನ್ನ ವಯಸ್ಸಿಗಿಂತ ಕಿರಿಯ ಯುವಕ ಯುವತಿಯರ ನಡುವೆ ಲವ್ವಿ ಡವ್ವಿಯಂತಹ ಕಣ್ಣಾಮುಚ್ಚಾಲೆಗಳು ಆರಂಭವಾಗಿ ಸಮಾಜವನ್ನು ಮತ್ತಷ್ಟು ಅಧೋಗತಿಗೆ ತಳ್ಳುತ್ತಿವೆ.
ಮೊದಲೆಲ್ಲ ಎರಡು ಅಥವಾ ಮೂರು ಕನ್ಯೆ ನೋಡಿ ನಿರ್ಧಾರ ತಿಳಿಸುತ್ತಿದ್ದ ಗಂಡು ಮಕ್ಕಳ ಮನೆಯವರೂ ಕೂಡ ಈಗೀಗ ನೂರರ ಗಡಿ ದಾಟಿದರೂ ವರದಕ್ಷಿಣೆಯ ಆಸೆಗೆ ಬಿದ್ದು ಹಲ್ಲು,ಮೂಗು,ಹೈಟು,ಮೈಕಟ್ಟು,ವಯಸ್ಸು ಅಂತೆಲ್ಲ ನೆಪಗಳನ್ನು ಹೇಳಿ ಮದುವೆ ಮುಂದೂಡುತ್ತ ಹೋಗುವದು ಮತ್ತು ಸರ್ಕಾರಿ ನೌಕರಿ ಇದ್ದರಷ್ಟೇ ಕನ್ಯಾ ಕೋಡವ್ರಿ ನಾವು ಇನ್ ಮುಂದ ಹಿಂತಾ ಮನಿತನ ತರಬ್ಯಾಡ್ರಿ ಹಿರಿಯಾರ ಅಂತ ಕಡ್ಡಿ ಮುರಿದಂತೆ ಹೇಳುವ ಹೆಣ್ಣು ಹೆತ್ತವರ ಮಾತುಗಳು ಅದೆಷ್ಟು ಯುವಕ ಯುವತಿಯರು ಪರಸ್ಪರ ಒಪ್ಪಿದರೂ ಮನೆಯವರು ಸಮ್ಮತಿಸದ ಕಾರಣಕ್ಕೆ ಮುರಿದು ಬಿದ್ದಿವೆಯೋ ಬಲ್ಲವರಾರು??
ಈಗಲೂ ಊರ ಜಾತ್ರೆಗಳಲ್ಲಿ, ಶಾಪಿಂಗ್ ಮಾಲುಗಳಲ್ಲಿ, ಸಿನೆಮಾ ಥಿಯೇಟರ್ ಗಳಲ್ಲಿ, ಪಂಚತಾರಾ ಹೋಟೆಲ್ ಗಳಲ್ಲಿ ಮತ್ತು ಮಲ್ಟಿನ್ಯಾಷನಲ್ ಕಂಪನಿಯ ನೈಟ್ ಶಿಪ್ಟುಗಳಲ್ಲಿ, ಒಂದೇ ಅಪಾರ್ಟ್ಮೆಂಟಿನ ಯಾವುದೋ ಲಿಪ್ಟುಗಳಲ್ಲಿ ಮದುವೆ ಆಗಿದ್ದರೂ ಕಣ್ಣುಗಳು ಮತ್ತೊಬ್ಬರನ್ನ ಹುಡುಕುತ್ತಿರುವದು,ಇನ್ನೊಂದು ಜೀವದ ಆಸರೆಗೆ ಹವಣಿಸುತ್ತಿರುವದು ನೋಡಿದರೆ ನಾಗರಿಕ ಸಮಾಜದ ನಾವೆಲ್ಲ ಅದು ಎಲ್ಲಿಗೆ ತಲುಪುತ್ತಿದ್ದೇವೆ ಅನ್ನಿಸದೆ ಇರುವದಿಲ್ಲ.
ಸಾಧ್ಯವಾದಷ್ಟು ಹುಡುಗ ಅಥವಾ ಹುಡುಗಿಯರು ಇಷ್ಟಪಟ್ಟವರನ್ನೇ ಅವರ ಜೀವನ ಸಂಗಾತಿ ಆಗಿಸುವ ಮೂಲಕ,ಜಾತಿ ಮತ,ಪಂಥಗಳ ಆಚೆಗೂ ಬದುಕು ದೊಡ್ಡದು ಅನ್ನುವದನ್ನ ಮನಗಾಣುವ ಮೂಲಕ ನಾವು ನೀವೆಲ್ಲ ಹಣದಾಹಿಗಳಾಗದೆ ಗುಣದಾಹಿಗಳಾಗಿ ನಮ್ಮ ಮಕ್ಕಳ ಬದುಕು ಕಟ್ಟುವ ಕೆಲಸಕ್ಕೆ ಮುಂದಾಗೋಣ..
ನೀವು ಮರಾಠಾ ಏನ್ರಿ ನಮ್ಮಲ್ಲಿ ಒಂದು ಕನ್ಯಾ ಐತಿ ನಿಮ್ಮಲ್ಲಿ ವರ ಇದ್ರ ಹೇಳ್ರಿ ಅನ್ನುವ ಅಥವಾ ಎಚ್ ಐ ವಿ ಪೀಡಿತ ವರನಿಗೆ ಸ್ವಜಾತಿಯ ವಧು ಬೇಕು, ಮೇಲ್ವರ್ಗದ ವಿಚ್ಚೇದಿತ ಮಹಿಳೆಗೆ ಬ್ರಾಹ್ಮಣ,ವೈಷ್ಣವ ಲಿಂಗಾಯತ ಮನೆ ಅಳಿಯ ಬೇಕು ಅನ್ನುವ ಜಾತೀಯತೆ ತೊಲಗಿ ಪರಸ್ಪರ ಮನುಷ್ಯ ಪ್ರೀತಿ ಬೆಸೆಯಲಿ.
ಮದುವೆ ಆಗುತ್ತಿರುವದು ವಿಧವೆಯೋ- ವಿದುರನೋ, ವಿಚ್ಚೇದಿತೆಯೋ-ವಿಚ್ಚೇದಿತನೋ,
ಬಡವರ ಮಕ್ಕಳೋ-ಸ್ಥಿತಿವಂತರ ಮಕ್ಕಳೋ, ಕುಲಹೀನರೋ,ಅಥವಾ ಮಡಿವಂತರೋ ಎಲ್ಲರಿಗೂ ಒಬ್ಬರಲ್ಲ ಒಬ್ಬರು ಬಾಳ ಸಂಗಾತಿಯಾಗಿ ಸಿಕ್ಕು ಅವರ ಮನೆಯಲ್ಲೂ ಮಕ್ಕಳೆಂಬ ಹೂವುಗಳು ನಳ ನಳಿಸಲಿ..
ರಂಗನಾಯಕಿ ಚಿತ್ರದ ಮಂದಾರ ಪುಷ್ಟವು ನೀನು….ಸಿಂಧೂರ ಪ್ರತಿಮೆಯು ನೀನು… ಗಂಧರ್ವ ಗಾನವಾಣಿ… ರಾಣಿ…ರಾಣಿ..ರಾಣಿ- ರಾಣಿ… ಅನ್ನುವ ಹಾಡು ಗಂಡು ಹೆಣ್ಣಿನ ನಡುವೆ ಕೇಳಿ ಬರಲಿ
ಏನಂತೀರಿ??
ದೀಪಕ ಶಿಂಧೇ
9482766018