spot_img
spot_img

ಎಲ್ಲರಿಗೂ ಎಲ್ಲ ಕಾಲಕ್ಕೂ ಒಳ್ಳೆಯವರಾಗುವದು ನಮ್ಮ ಭ್ರಮೆಯಷ್ಟೇ

Must Read

- Advertisement -

ಏ ಹಂಗಲ್ಲೋ ಸಂತ್ಯಾ ನಾ ಎನ್ ಬ್ಯಾರೇ ಉದ್ದೇಶ್ ಇಟ್ಕೊಂಡ್ ಹೇಳಿಲ್ಲೋ ನಿಮ್ ಅಣ್ಣಾರಿಗೆ.. ನೀ ಯಾವತ್ತೂ ನಮ್ ಜೋಡಿನ ಇರ್ತಿಪಾ ಮತ್ ನಾಳೆ ನಮ್ ತಮ್ಮ ಕೆಡಲಾಕ್ ಇವ್ರ ಕಾರಣ ಅಂತ ನಮ್ ಮ್ಯಾಲ ಬರ್ಬಾರ್ದ್ ನೋಡು ಯಾವಾಗರೆ ಒಮ್ಮಿ ಟಿನ್ ಬೀರ್ ಕುಡಿತಾನು ಅಂದಿನಿ ಅಷ್ಟಲೇ ಆದ್ರ ದಿನಾ ದಮ್ ಹೊಡಿತಾನ ಅಂತೇನೂ ಹೇಳಿಲ್ಲೋಲೇ… ಅಂತ ಕುಲಕರ್ಣಿ ರವ್ಯಾ ಸಂತೋಷ ಪಾಟೀಲನನ್ನ ರಮಿಸುವ ಪ್ರಯತ್ನ ಮಾಡುತ್ತಿದ್ದ…

ಹೌದ್ ಬಿಡ್ಲೆ ಮಬ್ಬ. ನಿನ್ನೆ ನಿಮ್ಮ ಅಪ್ಪಾರ ಸಿಕ್ಕಿದ್ರಲ್ಲ ತಮ್ಮಾ ನೀವರೇ ಹೇಳ್ರೋ ನಮ್ಮ ರವೀಗಿ ಈಗೀಗ ರೊಕ್ಕಾ ದುಂದ್ ಖರ್ಚ ಮಾಡಾಕ್ ಹತ್ಯಾನು ಅಂದಾಗ ಹೌದ್ರಿ ಅಂಕಲ್ ರಮ್ಮಿ ಆಡಾತಾನ್ರಿ ನಿಮ್ ರವಿ ಅಂತ ನಾ ಹೇಳಿದ್ರ ಹೆಂಗಿತ್ತು ಅಂದ ಸಂತ್ಯಾನ ಮುಖ ನೋಡಿದ ರವಿ ಕುಲಕರ್ಣಿ ಕಣ್ಣುಗಳು ನೀರಾಡತೊಡಗಿದ್ದವು.

ಬಸ್ ಚಾರ್ಜಿಗೆ ಹತ್ತು ರೂಪಾಯಿ ಕಡಿಮೆ ಇದ್ದ ಕಾರಣಕ್ಕೆ ಬೆಳಗಾವಿ ಇಂದ ಟ್ರಕ್ಕೊಂದಕ್ಕೆ ಕೈ ಹಾಯಿಸಿ ಹತ್ತಿಕೊಂಡು ಬರುವಾಗ ತೂ ಲಾಕ್ ಹಿಪಾಜತ್‌ ಕರಲೇ ಲಾಖ್ ಕರೆ ಮನಮಾನಿ ಎಕ್ ದಿನ್ ಉಡ್ ಜಾಯೆಗಾ ಪಂಚಿ ಔರ್ ಪಿಂಜರಾ ರಹೇಗಾ ಖಾಲಿ ಅನ್ನುವ ಗಜಲ್ ತೇಲಿ ಬರುತ್ತಿರುವಾಗಲೇ ಯಾಕೊ ಇದೆಲ್ಲ ನೆನಪಾಯಿತು

- Advertisement -

ಅದು ಎಷ್ಟೋ ಸಲ ಇನ್ನೊಬ್ಬರನ್ನು ಮೆಚ್ಚಿಸಲು ಮಾಡುವ ನಮ್ಮ ಶತಪ್ರಯತ್ನಗಳೆಲ್ಲ ಸೋತು ಸುಣ್ಣವಾದಾಗ  ಮತ್ತು ಎಲ್ಲರೂ ಎಲ್ಲ ಕಾಲಕ್ಕೂ ಎಲ್ಲರನ್ನೂ ಮೆಚ್ಚಿಸುವದು ಕಷ್ಟ ಸಾಧ್ಯ ಅನ್ನುವ ಜ್ಞಾನೋದಯ ನಮಗೆ ಆಗುವ ವೇಳೆಗಾಗಲೇ ನಮ್ಮ ಬದುಕಿನ ಅರ್ಧ ಆಯುಷ್ಯವೇ ಕಳೆದು ಹೋಗಿರುತ್ತದೆ.

ಅದು ಯಾರನ್ನೋ ಮೆಚ್ಚಿಸುವದಕ್ಕಾಗಿ, ಇನ್ಯಾರನ್ನೋ ಉರಿಸುವದಕ್ಕಾಗಿ, ಮತ್ಯಾರನ್ನೋ ಹೀಗಳೆಯುವದಕ್ಕಾಗಿ ನಾವು ಮಾಡುವ ಯಡವಟ್ಟುಗಳು ನಮ್ಮ ಬದುಕಿನ ಹೆಜ್ಜೆ ಹೆಜ್ಜೆಗೂ ನಾವು ಎಡವುತ್ತ ಏಳುತ್ತ ಬೀಳುತ್ತ ಸಾಗುವಂತೆ ಮಾಡುವದು ವಿಪರ್ಯಾಸವೇ ಸರಿ.

ಊರ ಸಾಹುಕಾರನ ಮಗ ಅಂತಲೋ ಅಥವಾ ಗೌಡ್ರ ಹುಡುಗ ಅಂತಲೋ ಬಿಲ್ಡಪ್ಪು ಕೊಡುವದಕ್ಕಾಗಿಯೇ ತನ್ನ ಸುತ್ತಲೂ ನಾಲ್ಕಾರು ಹುಡುಗರು ಸದಾ ಗಿರಕಿ ಹೊಡೆಯುತ್ತ ಇರುವಂತೆ ಮಾಡುವುದಕ್ಕಾಗಿ ಅವರು ಕೇಳಿದಾಗೆಲ್ಲ ಮಿರ್ಚಿ ಭಜ್ಜಿ ಮಂಡಕ್ಕಿ ಮತ್ತು ಗಿರಮಿಟ್ಟು ತಿನ್ನಿಸುತ್ತಲೋ,ಅಥವಾ ತಿಂಗಳಿಗೊಂದು ಪಾರ್ಟಿ ಕೊಡುತ್ತ ಅದಕ್ಕಾಗಿ ಅಜ್ಜನ ತಿಥಿಯಿಂದ ಹಿಡಿದು ಮನೆಯಲ್ಲಿ ಸಾಕಿದ ಜಾತಿ ನಾಯಿಯೊಂದು ಮರಿ ಹಾಕಿದೆ ಅನ್ನುವ ನೆಪಗಳನ್ನ ಇಟ್ಟುಕೊಂಡು ಹತ್ತಾರು ಸಾವಿರ ಹಣವನ್ನು ಉಡಾಯಿಸುವ ಎಷ್ಟೋ ಹುಡುಗರು ಡಿಗ್ರಿ ಅಥವಾ ಕಾಲೇಜು ಕಲಿಯುವ ಸಮಯದಲ್ಲಿ ವಿನಾಕಾರಣ ತಮ್ಮ ಗೆಳೆಯರನ್ನ ಮೆಚ್ಚಿಸುವ ಪ್ರಯತ್ನವೊಂದನ್ನ ಮಾಡುತ್ತಲೇ ಇರುತ್ತಾರೆ.

- Advertisement -

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೋಡಿದರೆ ಕ್ಯಾಡ್ಬರಿಯೋ,ಡೈರಿ ಮಿಲ್ಕೋ ತನ್ನ ಹುಡುಗಿಗೆ ಇಷ್ಟ ಅಂತ ತಾನು ಪೆನ್ನು ಮತ್ತು ಪುಸ್ತಕ ಖರೀದಿಸಬೇಕಿದ್ದ ಹಣದಲ್ಲೇ ಗಿಪ್ಟು ಕೊಡುವ ಹುಡುಗರಿಂದ ಹಿಡಿದು ಪಿಂಕ್ ಡ್ರೆಸ್ ಅಲ್ಲಿ ತುಂಬಾ ಮುದ್ದಾಗಿ ಕಾಣಸ್ತೀಯಾ ಕಣೆ ಅಂತ ಬಾಯ್ ಫ್ರೆಂಡ್ ಒಬ್ಬ ಹೇಳಿದ ಅಂತ ಹಾಸ್ಟೇಲು ಗೆಳತಿಯ ಪಿಂಕ್ ಟಾಪ್ ಅನ್ನೇ ಕಾಡಿ ಬೇಡಿ ಇಸಿದುಕೊಂಡು ತೊಟ್ಟುಕೊಳ್ಳುವ ಮದ್ಯಮ ವರ್ಗದ ಹುಡುಗಿಯೊಬ್ಬಳತನಕ ಎಲ್ಲರೂ ಒಂದಲ್ಲ ಒಂದು ಕಾರಣದಿಂದ ತಮಗೆ ಬೇಕಾದವರನ್ನ ಮೆಚ್ಚಿಸುವ ಪ್ರಯತ್ನ ಮಾಡುತ್ತಲೇ ಇರುತ್ತೇವೆ.

ದುರಂತವೆಂದರೆ ಎರಡು ಮೂರು ಟಿಪಾಯಿಗಳ ಮೇಲೆ ಇರುವ ಒಂದೇ ಮುಚ್ಚಳವನ್ನು ಮುಚ್ಚಬೇಕಾಗಿದೆ ಮತ್ತು ಇದು ಅಸಾಧ್ಯವಾದ ಮಾತು ಎಲ್ಲ ಟಿಪಾಯಿಗಳನ್ನೂ ಏಕಕಾಲಕ್ಕೆ ಮುಚ್ಚಲು ಯಾರಿಂದಲೂ ಆಗುವದಿಲ್ಲ ಹಾಗೆಯೇ ಎಲ್ಲರ ಮನಸನ್ನೂ ಏಕಕಾಲಕ್ಕೆ ಮೆಚ್ಚಿಸಲು ಆಗುವದಿಲ್ಲ ಅನ್ನುವದನ್ನೇ ಬಹುತೇಕ ನಾವು ನೀವೆಲ್ಲ ಮರೆತುಬಿಡುತ್ತೇವೆ.

ಅಪರೂಪಕ್ಕೆ ಮನೆಯಿಂದ ಪರ ಊರಿಗೆ ಹೋದ ತಂದೆಯೊಬ್ಬ ಮನೆಯಲ್ಲಿ ಇರುವ ಮಕ್ಕಳಿಗೆ ಅಂತ ಒಂದಷ್ಟು ಸ್ವೀಟುಗಳನ್ನ ಕೊಂಡು ತಂದರೆ ಅದರಲ್ಲೇ ಒಂದು ಮಗು ಬಹಳ ಇಷ್ಟಪಟ್ಟು ತಿಂದರೆ ಇನ್ನೊಂದು ಮಗು ನಂಗಿದು ಬೇಡ ಅಂತ ರಚ್ಚೆ ಹಿಡಿಯುತ್ತದೆ ಅನ್ನುವದರಿಂದ ಹಿಡಿದು ಮಗ ಅಥವಾ ಮಗಳನ್ನ ಮೆಚ್ಚಿಸುವದಕ್ಕಾಗಿ ಸಾಲ ಮಾಡಿ ಕೊಡಿಸುವ ಬೈಕು ಮತ್ತು ಸ್ಕೂಟಿ, ಮಡದಿಯನ್ನ ಮೆಚ್ಚಿಸುವದಕ್ಕಾಗಿ ಇಎಮ್ ಐ ಹಾಕಿ ತರುವ ಫ್ರಿಡ್ಜು ಅಥವಾ ಎಲ್ ಇ ಡೀ ಟೀವಿಯ ಕಂತುಗಳು ಮತ್ತು ದೋಸ್ತ ಇವತ್ ಸಂಜೆಳೆ ಸಣ್ಣದೊಂದು ಪಾರ್ಟಿ ಇಟಕೊಂಡಿವ್ ಪಾ ತಪ್ಪಸಬ್ಯಾಡ ಬರಲಾಕ್ ಅನ್ನುವ ರೈತಮಿತ್ರನ ತನಕ ಎಲ್ಲವೂ ಪ್ಯೂರ್ ಯಾಂಡ್ ಪ್ಯೂಅರ್ಲಿ ಡ್ರಾಮ್ಯಾಟಿಕ್ ಆಗಿಯೇ  ನಡೆಯುತ್ತಿರುವ ದಿನಗಳಿವು.

ತನ್ನ ಹಳೆಯ ಗರ್ಲ್ ಪ್ರೆಂಡ್ ಗೆ ಪಲ್ಸರ್ ಇಷ್ಟಾ ಇತ್ತು ಅಂತ ಅವಳೀಗ ಯಾವುದೋ ಹುಡುಗನ ಆರ್ ಎಕ್ಸ ಹಂಡ್ರೆಡ್ ಬೈಕಿನಲ್ಲಿ ಊರು ಸುತ್ತುವಾಗಲೇ ಅವಳಿಗೆ ಕಾಣಿಸಲಿ ಅಂತ ಸೆಕೆಂಡ್ ಹ್ಯಾಂಡ್ ಪಲ್ಸರ್ ಬೈಕಿನಲ್ಲಿ ಅವಳಿರುವ  ಪಿ.ಜಿಯ ರಸ್ತೆಯಲ್ಲಿ ತಾನು ಈಗ ಬಹಳ ಬ್ಯೂಜಿ ಇರುವಂತೆ ಫೋಜು ಕೊಡುವ ಪೋಲಿ ಹುಡುಗನಿಂದ ಹಿಡಿದು ಅಕ್ಕ ಪಕ್ಕದ ಮನೆಯವರು ನಾನ್ ವೆಜ್ ತಿನ್ನುವದಿಲ್ಲ ಅನ್ನುವ ಕಾರಣಕ್ಕೆ ತಮ್ಮ ಮನೆಯಲ್ಲಿ ಮೊಟ್ಟೆ ಬೇಯಿಸಿದರೂ ಸಿಪ್ಪೆಯನ್ನು ಯಾರಿಗೂ ಕಾಣಿಸದಂತೆ ಪುರಸಭೆಯ ಕಸದ ಗಾಡಿಗೆ ಕಪ್ಪಗಿನ ಕ್ಯಾರಿ ಬ್ಯಾಗೊಂದನ್ನ ಜತನವಾಗಿ ಎತ್ತಿ ಹಾಕುವ ಗೃಹಿಣಿಯೊಬ್ಬಳ ತನಕ ಒಬ್ಬರನ್ನೊಬ್ಬರು ಮೆಚ್ಚಿಸುವ ಪರಮ ಪವಿತ್ರ ಕೆಲಸಕ್ಕೆ ಕೈ ಹಾಕಿ ನಮ್ಮ ಮನಸ್ಸು ನೋಯಿಸಿಕೊಳ್ಳುತ್ತಲೇ ಇರುತ್ತೇವೆ.

ಮತ್ತೊಬ್ಬರನ್ನ ಮೆಚ್ಚಿಸುವ ಧಾವಂತದಲ್ಲಿ ಅದು ಯಾವುದೋ ಉಮೇದಿನಲ್ಲಿ ನಮಗೆ ಇಷ್ಟವೇ ಇಲ್ಲದ ಕೆಲಸಗಳನ್ನು ಮಾಡುತ್ತ, ಯಾರನ್ನೋ ಮೆಚ್ಚಿಸುವದಕ್ಕಾಗಿ ಒಂದಷ್ಟು ಹೊಗಳಿಕೆಯ ಮಾತುಗಳನ್ನ ಆಡುತ್ತ ಅಥವಾ ಅವರ ಹೆಸರಿನದೊಂದು ಟ್ಯಾಟೂ ಮೈಮೇಲೆ ಹಾಕಿಸಿಕೊಂಡೋ ಅಥವಾ ಅವರ ಮುಖದ ಹೋಲಿಕೆಯ ಒಂದಷ್ಟು ಕ್ಯಾರೀಕೇಚರ್ ನಂತಹ ಚಿತ್ರಗಳನ್ನೋ ತೆಗೆದು ವಿಚಿತ್ರವಾಗಿ ವರ್ತಿಸುತ್ತ ನಾನು ನಿಮ್ಮ ಬಿಗ್ ಫ್ಯಾನ್ ಸರ್ ಅಂತ ಹಲ್ಲು ಕಿರಿದು ಪಕ್ಕದಲ್ಲಿ ನಿಂತು ಏದುಸಿರುವ ಬಿಡುತ್ತ ಪೋಟೋ ಕ್ಲಿಕ್ಕಿಸಿಕಿಳ್ಳುವ ಎಷ್ಟೋ ಜನ ತಮ್ಮ ಸ್ವಚ್ಚಂದದ ಬದುಕಿಗೆ ತಾವೇ ಬರೆ ಎಳೆದುಕೊಳ್ಳುತ್ತಾರೆ.

ಮುಂದೊಮ್ಮೆ ಅರೇ ಇವರೇನಾ ಅವರು??  ನಾನು ಕಾಲೇಜು ಕಲಿಯುವಾಗ ರಂಗೋಲಿ ಬಿಡಸ್ತಾ ತುಂಟ ನಗೆ ಬೀಸಾಕುತ್ತಿದ್ದ ಆಂಟಿ ಅಂತ ವಯಸ್ಸಾದ ಅಜ್ಜಿಯನ್ನೋ ಅಥವಾ ಅಯ್ಯೋ ಇವರೇನಾ ನಂಗೆ ಕಾಳ್ ಹಾಕ್ತಿದ್ದ ಆ ಸ್ಲಿಮ್ ಯಾಂಡ್ ಟ್ರಿಮ್ ಆಗಿದ್ದ ಅಂಕಲ್ ಅಂತಲೋ ಪರಿತಪಿಸುವ ಅದೆಷ್ಟೋ ಜೀವಗಳು ಇನ್ಯಾರನ್ನೋ ಮೆಚ್ಚಿಸುವ ಭರದಲ್ಲಿ ಕಾಲೇಜು ದಿನಗಳಲ್ಲಿ ಸರಿಯಾಗಿ ತಮ್ಮ ಶಿಕ್ಷಣವನ್ನೂ ಪೂರೈಸದೇ ಬದುಕಿನ ಬುನಾದಿಯಿಂದ ಅದೆಷ್ಟೋ ಫರ್ಲಾಂಗು ದೂರ ಬಂದು ಮತ್ತೆಗುರಿಯತ್ತ  ಮರಳಲಾಗದೆ ನಿಂತ ಎಷ್ಟೋ ಜನರ ನಡುವೆ ನನಗೆ ಅನ್ನಿಸುವದು ಇಷ್ಟೇ…

ಯಾರೊ ನಮ್ಮನ್ನು ಮೆಚ್ಚಿಕೊಳ್ಳಲಿ ಅಥವಾ ಬಿಡಲಿ ಯಾರು ನಮ್ಮನ್ನು ಅಪ್ಪಿಕೊಳ್ಳಲಿ ಅಥವಾ ಬಿಡಲಿ ನಮ್ಮ ಬಗೆಗೆ ಮತ್ಯಾರದೋ ಮನಸ್ಸಿನಲ್ಲಿ ಒಂದಷ್ಟು ಒಳ್ಳೆಯ ಭಾವನೆ ಇರಲಿ ಅಥವಾ ಇಲ್ಲದೆ ಇರಲಿ ಸಾಧ್ಯವಾದಷ್ಟು ನಾವೂ ನಾವಾಗೆ ಇರೋಣ ಯಾಕೆಂದರೆ, ತನ್ನ ಮಕ್ಕಳು ತನಗೆ ಆಸರೆಯಾಗುತ್ತಾರೆ ಎಂಬ ಆಸೆಯಲ್ಲಿ ಇದ್ದ ಬಿದ್ದ ಹಣವನ್ನೆಲ್ಲ ಅವರಿಗಾಗಿ ವ್ಯಯಿಸಿ ಮುಂದೆ ತನ್ನ ಮಕ್ಕಳು ಸ್ವತಂತ್ರ ವಾಗಿ ಹಾರುವ ರೆಕ್ಕೆ ಬಲಿತ ಗುಬ್ಬಚ್ಚಿಗಳಾದಾಗ ಮನೆ ಎಂಬ ಗೂಡಿನಲ್ಲಿ ಒಬ್ಬಂಟಿಯಾದ ಅಪ್ಪ ಅಮ್ಮನಿಂದ ಹಿಡಿದು,ಮೊದಲು ನನ್ನ ತಂಗಿಯ ಮದುವೆ ಆಗಲಿ ಅಂತ ಅವರ ಒಳಿತನ್ನು ಬಯಸಿ ವಯಸ್ಸಾಯಿತು ಅನ್ನುವ ಕಾರಣಕ್ಕೆ ಮದುವೆ ಆಗದೆ ಉಳಿದ ಅಕ್ಕ ಅಥವಾ ಅಣ್ಣಂದಿರ ಹತ್ತಿರ ಆಸ್ತಿಯಲ್ಲಿ ಪಾಲು ಕೇಳಿದ ತಂಗಿಯರತನಕ ಮತ್ತು ತೀರ ಇತ್ತೀಚೆಗೆ ತನ್ನ ಮಡದಿಯ ರೀಲ್ಸ್ ಗೆ ವ್ಯೂವ್ಸ ಬಹಳ ಬರ್ತಿದೆ ಅನ್ನುವ ಕಾರಣಕ್ಕೆ ಅವಳು ಕೇಳಿದ ಮ್ಯಾಚಿಂಗ್ ಬಳೆ, ಮ್ಯಾಚಿಂಗ್ ಓಲೆ, ಯೂನಿಕ್ ಡ್ರೆಸ್ ಅಂತೆಲ್ಲ ಕೊಡಿಸುತ್ತ ತಳ್ಳುವ ಗಾಡಿಯಲ್ಲೇ ಕಷ್ಟಬಿದ್ದು ತರಕಾರಿ ಮಾರಿದ ಅಥವಾ ಹಗಲು ರಾತ್ರಿ ಅನ್ನದೆ ಬಾಡಿಗೆಯ ಆಟೋ ಚಲಾಯಿಸಿ ಬದುಕು ಕಟ್ಟಿಕೊಳ್ಳಲು ಹೊರಟವನ ಹೆಂಡತಿಯೊಬ್ಬಳು ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಮತ್ತೊಬ್ಬನೊಂದಿಗೆ ಅಫೇರು ಇಟ್ಟುಕೊಂಡು ಸಿಕ್ಕಿಬಿದ್ದಾಗ ಆಕಾಶವೇ ಕಳಚಿ ಬಿದ್ದಂತೆ ಬೋರಾಡಿ ಅತ್ತ ಘಟನೆಗಳ ತನಕ ಎಲ್ಲವೂ ಕಣ್ಣಮುಂದೆ ಹಾಯ್ದು ಹೋಗುತ್ತವೆ.

ಯಾರನ್ನೋ ಓಲೈಸುವ ವಿನಾಕಾರಣದ ಪ್ರಯತ್ನಗಳನ್ನ ಇಂದಿನಿಂದಲೇ ನಿಲ್ಲಿಸಿ ಒಲಿದಂತೆ ಬದುಕುವದೇ ಜೀವನ ಅನ್ನುವ ಸತ್ಯವನ್ನ ಮನಸ್ಸಿನಲ್ಲಿ ಇಟ್ಟುಕೊಂಡು ನೀರ ಮೇಲಿನ ಗುಳ್ಳೆ ಶಾಶ್ವತವಲ್ಲ ಹರಿಯೇ ಅಂತ ಭಜನೆಯ ಸಾಲೊಂದನ್ನ ಬದುಕಿನುದ್ದಕ್ಕೂ ಮರೆಯದೇ ಇದ್ದರಾಯಿತು.

ಯಾಕೆಂದರೆ ಕನಿಷ್ಟ ಪಕ್ಷ ಎಷ್ಟೇ ಆದ್ರೂ ಅವರೆಲ್ಲ ನಮ್ಮವರಲ್ಲವಾ? ಅನ್ನುತ್ತ ನಾವು ಯಾರನ್ನೋ ಮೆಚ್ಚಿಸಲು ಮಾಡುವ ಸ್ವಜನಪಾತ,ಪಕ್ಷಪಾತ,ಜಾತೀಯತೆ ಮತ್ತು ನಮ್ಮವರು ಅಂತ ಮಾಡಲು ಹೊರಟ ಉಪಕಾರ ಅಥವಾ ಮಾಡಿದ ಸಹಾಯವೊಂದು ನಮಗೆ ಮುಳುವಾಗಿಯೋ ಅಥವಾ ಅವರ ಮನಸ್ಸಿನಲ್ಲಿ ನಾವಿಲ್ಲ ಅನ್ನುವ ಸತ್ಯದ ಅರಿವಾಗಿ ಆಗಬಹುದಾದ ಭ್ರಮನಿರಸನವೋ ಮುಂದೊಮ್ಮೆ ನಮ್ಮ ಮನಸ್ಸನ್ನು ಶಾಸ್ವತವಾಗಿ ನೋಯಿಸಿ ನಮ್ಮನ್ನು ಸಾಯಿಸದಿರಲಿ ಅಲ್ಲವಾ??


ದೀಪಕ ಶಿಂಧೇ

9482766018

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group