ಸಂತ್ರಸ್ತರ ಸಂಕಷ್ಟಗಳು ತೀರುವುದ್ಯಾವಾಗ ?
ಮೂಡಲಗಿ – ಬೆಳಗಾವಿ ಜಿಲ್ಲೆಯ ವಿವಿಧ ಪಕ್ಷಗಳ ಶಾಸಕರು, ಸಂಸದರು ಅಲ್ಲದೆ ಉಸ್ತುವಾರಿ ಸಚಿವರು ಕೂಡ ಅದೆಂಥ ಘನಂದಾರಿ ಜನಸೇವೆಯಲ್ಲಿ ತೊಡಗಿದ್ದಾರೋ ಏನೋ ಆದರೆ ಮಹಾ ಪ್ರವಾಹದಿಂದ ತೊಂದರೆಗೊಳಗಾದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನತ್ತ ತಿರುಗಿ ನೋಡಲೂ ಅವರಲ್ಲಿ ಸಮಯವಿಲ್ಲದಾಗಿದೆ.
ಪ್ರತಿಸಲ ಹೆಚ್ಚು ಕಡಿಮೆ ಇದೇ ತಿಂಗಳಲ್ಲಿ ವರ್ಷಾಧಾರೆಯಿಂದ ಜಿಲ್ಲೆಯ ಘಟಪ್ರಭಾ, ಮಲಪ್ರಭಾ, ಕೃಷ್ಣಾ ನದಿಗಳು ತುಂಬಿ ಹರಿಯುತ್ತವೆ. ನದಿಪಾತ್ರದ ಜನ ಜಾನುವಾರುಗಳು ತೊಂದರೆಗೆ ಸಿಲುಕುತ್ತಾರೆ. ಇದೇನು ಗೊತ್ತಿಲ್ಲದ ಸಂಗತಿಯಲ್ಲ. ಆದರೂ ಜನನಾಯಕರಿಗೆ ಜಾಣ ಕುರುಡು ಮತ್ತು ಜಾಣ ಕಿವುಡು !
ಪ್ರತಿಸಲ ಮಹಾಪೂರಕ್ಕೆ ತುತ್ತಾದ ಜನರನ್ನು ಆಶ್ರಯ ತಾಣಗಳಿಗೆ ಸಾಗಿಸುವುದು. ದಾನದ ರೂಪದಲ್ಲಿ ನಾಲ್ಕು ಜೊತೆ ಬಟ್ಟೆ, ಕಂಬಳಿ, ಜಮಖಾನೆ, ಊಟಕ್ಕಾಗಿ ರೇಷನ್ ಕೊಟ್ಟು ಸಮಾಧಾನ ಮಾಡುವುದು. ಜಾನುವಾರುಗಳಿಗೆ ಮೇವು ಪೂರೈಸಿ ತಾವೇ ಧನ್ಯತೆ ಪಡೆದಂತೆ ವರ್ತಿಸುವುದು ಮಾಡುತ್ತಾರೆ. ಆದರೆ ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಯಾವ ನಾಯಕರೂ ಚಿಂತೆ ಚಿಂತನೆ ಮಾಡದೇ ಇರುವುದು ನಿಜವಾಗಲೂ ಖೇದಕರ.
ಸಂಸದ ಜಗದೀಶ ಶೆಟ್ಟರ್, ಸಚಿವರಾದ ಲಕ್ಷ್ಮೀ ಹೆಬ್ಬಾಳಕರ, ಸತೀಶ ಜಾರಕಿಹೊಳಿ ಮುಂತಾದವರೆಲ್ಲ ಎಲ್ಲಿ ?
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಬೆಳಗಾವಿಯ ಸಂಸದರು. ಮೇಲಾಗಿ ಈ ಹಿಂದಿನ ಸಂಸದ ದಿ. ಸುರೇಶ ಅಂಗಡಿಯವರ ಸಂಬಂಧಿಕರು. ಜಿಲ್ಲೆಯಲ್ಲಿ ಜನರೊಂದಿಗೆ ಬೆರೆಯುತ್ತಿದ್ದ ಅಂಗಡಿಯವರ ಧೋರಣೆಯನ್ನೇ ಅವರೂ ಮುಂದುವರೆಸಬಹುದಿತ್ತು. ಅಂಗಡಿಯವರ ಪತ್ನಿ ಮಂಗಳಾ ಅಂಗಡಿಯವರು ಯಾವಾಗ ಸಂಸದರಾದರೋ, ಯಾವಾಗ ಹೋದರೋ ಎಂಬುದೂ ಕೂಡ ಜನತೆಗೆ ತಿಳಿಯಲಾರದಂತೆ ಇದ್ದರು. ಆ ಸಂಪ್ರದಾಯವನ್ನೇ ಶೆಟ್ಟರ ಅವರು ಮುಂದುವರೆಸಿದರೆ ಜಿಲ್ಲೆಯ ಜನರನ್ನು ದೇವರೇ ಕಾಪಾಡಬೇಕು. ಯಾಕೆಂದರೆ, ಬೆಳಗಾವಿ ಜಿಲ್ಲೆಗೆ ಇಷ್ಟೊಂದು ಪ್ರವಾಹ ಬಂದು ಜನರು ಸಂಕಷ್ಟಕ್ಕೆ ಸಿಲುಕಿದ್ದರೂ ಸ್ಥಳ ಪರಿಶೀಲನೆಗೆ ಬರುವುದು ಹೋಗಲಿ ಜನತೆಗೆ ಧೈರ್ಯ ತುಂಬುವ ಒಂದು ಸಾಂತ್ವನದ ಮಾತನ್ನೂ ಕೂಡ ಆಡಿದ ಸುದ್ದಿ ಇಲ್ಲ. ಸಂಸದರು ಇತ್ತಕಡೆಗೆ ತಿರುಗಿ ಕೂಡ ನೋಡಿಲ್ಲ. ಇದ್ದುದರಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರು ಸಂಸತ್ತಿನಲ್ಲಿ ಬೆಳಗಾವಿ ಮಹಾಪೂರದ ಬಗ್ಗೆ ಗಮನಸೆಳೆದು ತಮ್ಮ ಕಳಕಳಿ ವ್ಯಕ್ತಪಡಿಸಿದ್ದಾರೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವರು ಕೂಡ ತಮ್ಮದೇ ಆದ ರಾಜಕಾರಣದಲ್ಲಿ ಬಿಸಿಯಾಗಿದ್ದಾರೆ. ಅತ್ತ ತಮ್ಮ ಪುತ್ರಿಯನ್ನು ಅವರ ಕ್ಷೇತ್ರದಲ್ಲಿ ಶಾಶ್ವತವಾಗಿ ಇರಿಸುವಂಥ ಯೋಜನೆಗಳನ್ನು ರೂಪಿಸುವಲ್ಲಿ ಅವರು ಮಗ್ನರಾಗಿರಬಹುದು ಗೋಕಾಕದ ಶಾಸಕರು ಎಲ್ಲಿದ್ದಾರೆ ? ಅರಭಾವಿ ಶಾಸಕರು ತಮ್ಮ ಸಹಾಯಕರನ್ನು ಕಳಿಸಿ ಸಂತ್ರಸ್ತರಿಗೆ ಸಹಾಯ ಮಾಡುತ್ತಿದ್ದಾರೆ ಖುದ್ದು ಅವರಿಗೇ ಬರಲಾಗಿಲ್ಲ.
ಇನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ತಮ್ಮ ಶಾಸಕೀಯ ಕ್ಷೇತ್ರದಲ್ಲಿ ಅಷ್ಟೇ ಪ್ರವಾಹ ಸಂತ್ರಸ್ತರನ್ನು ಭೇಟಿಯಾಗಿರಬಹುದು. ಆದರೆ ಅವರು ಸಚಿವರು ಅಲ್ಲದೆ ಬೆಳಗಾವಿ ಜಿಲ್ಲೆಯವರು ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ಮೃಣಾಲ್ ಪರವಾಗಿ ಪ್ರಚಾರಕ್ಕಾಗಿ ತಿರುಗಾಡುವಾಗ ಮೃಣಾಲ್ ಮನೆ ಮಗನಂತೆ ಕೆಲಸ ಮಾಡುತ್ತಾನೆಂಬುದಾಗಿ ಭರವಸೆ ಕೊಟ್ಟರು. ಅವರು ಚುನಾವಣೆಯಲ್ಲಿ ಸೋಲನ್ನಪ್ಪಿದ್ದರೂ ಇತ್ತೀಚೆಗೆ ಗೋಕಾಕದ ಕಾರ್ಯಕರ್ತರಿಗೆ ಕೃತಜ್ಞತಾ ಸಭೆಯಲ್ಲಿ ಮೃಣಾಲ್ ಅವರು ಮಾತನಾಡುತ್ತ, ತಾನು ಸೋತಿದ್ದರೂ ಪರವಾಗಿಲ್ಲ ಬೆಳಗಾವಿ ಜನರ ಸಲುವಾಗಿ ಮನೆಮಗನಾಗಿ ಕೆಲಸ ಮಾಡುವುದಾಗಿ ಹೇಳಿದ್ದರು ಆದರೆ ಈಗ ಜಿಲ್ಲೆಯಾದ್ಯಂತ ಜನರು ಪ್ರವಾಹಕ್ಕೆ ತುತ್ತಾಗಿ ಕಷ್ಟದಲ್ಲಿದ್ದರೂ ಸಚಿವರು ಸೇರಿದಂತೆ ಯಾರಿಗೂ ಗೋಕಾಕ, ಮೂಡಲಗಿ, ಅಥಣಿ ಭಾಗಗಳಿಗೆ ಬರುವುದಕ್ಕೆ ಸಮಯ ಸಿಕ್ಕಿಲ್ಲ.
ಇನ್ನು ವಿಧಾನ ಪರಿಷತ್ ಸದಸ್ಯರಾದ ಲಖನ್ ಜಾರಕಿಹೊಳಿ, ಚನ್ನರಾಜ ಹಟ್ಟಿಕೊಳಿ ಅವರಿಗೆಲ್ಲ ಜಿಲ್ಲೆಯ ಜನರ ಸಂಕಷ್ಟಗಳ ಅರಿವಾಗುವುದು ಯಾವಾಗ ?
ಜಿಲ್ಲೆಯಲ್ಲಿ ಮಹಾಪೂರಕ್ಕೆ ಹೆಚ್ಚು ತುತ್ತಾಗುವ ಬೆಳಗಾವಿ, ಗೋಕಾಕ, ಮೂಡಲಗಿ, ಅಥಣಿ ತಾಲೂಕುಗಳಿಗೆ ಸಂಬಂಧಿಸಿದ ಶಾಸಕರು, ಸಂಸದರಿಗೆ ಈ ಮಹಾಪೂರವೆನ್ನುವುದು ಸಾಮಾನ್ಯ ವಿಷಯವಾಗಿದೆಯೇನೋ ಎಂಬ ಸಂದೇಹ ಮೂಡುತ್ತಿದೆ ಆದರೆ ಜನತೆಯ ಗೋಳು ಕೇಳುವವರಾರು ? ಮನೆ ಮಠಗಳು ನೀರಲ್ಲಿ ಮುಳುಗಿದ್ದನ್ನು ನೋಡಿ ದುಃಖದ ಹೃದಯದಿಂದ ಸಂತ್ರಸ್ತರ ಕ್ಯಾಂಪ್ ಗಳಿಗೆ ಬರಬೇಕು. ಅದರಲ್ಲಿ ವಯಸ್ಸಾದವರು, ರೋಗಿಗಳು, ಗರ್ಭಿಣಿ ಸ್ತ್ರೀಯರು, ಚಿಕ್ಕ ಮಕ್ಕಳ ಕಷ್ಟ ಕಾರ್ಪಣ್ಯಗಳು ವರ್ಣನೆಗೇ ಸಿಲುಕಲಾರವು ಆದರೆ ಏಸಿ ರೂಮಿನಲ್ಲಿ ಕುಳಿತು ಜನಸೇವೆ ಮಾಡುವ ಜನನಾಯಕರಿಗೆ ಈ ಯಾವ ಕಷ್ಟ ಕಾರ್ಪಣ್ಯಗಳು ಅರ್ಥವಾಗಲಾರವು.
ಸಂತ್ರಸ್ತ ಜನತೆ ಅಳಲು ತೋಡಿಕೊಂಡ ಪ್ರಕಾರ ೨೦೧೯ ರಲ್ಲಿ ಘಟಪ್ರಭಾ ನದಿಗೆ ಬಂದ ಪ್ರವಾಹದಲ್ಲಿ ಕಳೆದುಕೊಂಡ ಮನೆ ಮಠಗಳು, ಪರಿಹಾರಗಳೇ ಕೆಲವರಿಗೆ ಇನ್ನೂ ದೊರೆತಿಲ್ಲ ಗಾಯದ ಮೇಲೆ ಬರೆ ಎಳೆದಂತೆ ಮತ್ತೊಮ್ಮೆ ಪ್ರವಾಹ ಬಂದು ಹೊಕ್ಕಿದೆ. ಇನ್ನು ಈ ಸಲದ ಪರಿಹಾರ ಯಾವ ವರ್ಷ ಬರುತ್ತದೆ, ಯಾವ ರಾಜಕಾರಣಿಗಳು ಇದರಲ್ಲಿಯೇ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಎಂಬುದೇ ಒಂದು ಪ್ರಶ್ನೆಯಾಗಿದೆ.
ಈ ಸಲ ಆರಂಭಿಕ ಮಳೆಗಳು ಸುರಿಯದೇ ಬೆಳೆ ಹಾನಿಗೊಳಗಾದ ರೈತ ಈಗ ಹೆಚ್ಚು ಮಳೆಗೆ ಮತ್ತೆ ಬೆಳೆಯನ್ನು ಕಳೆದುಕೊಂಡು ಗೋಳಾಡುವಂತಾಗಿದೆ. ಯಾರೂ ಗಮನಿಸದ ಇನ್ನೊಂದು ಸಂಗತಿಯೆಂದರೆ, ಜಿಟಜಿಟಿ ಮಳೆಗೆ ಕಬ್ಬಿನ ಬೆಳೆಯಲ್ಲಿ ರಾಕ್ಷಸ ಪ್ರಮಾಣದಲ್ಲಿ ಡೊಣ್ಣೆ ಹುಳುವಿನ ಕಾಟ. ಡೊಣ್ಣೆ ಹುಳು ಬೇರನ್ನೇ ಕತ್ತರಿಸುವುದರಿಂದ ಎಕರೆಗಟ್ಟಲೆ ಕಬ್ಬು ನಿಂತಲ್ಲೇ ಬೀಳುತ್ತಿದ್ದು ರೈತನ ಜೀವನ ಕುಸಿಯುತ್ತಿದೆ. ರೈತರ ಉದ್ಧಾರ ಮಾಡುತ್ತೇವೆ ಎಂದು ಹೊರಡುವ ಯಾವ ಜನಪ್ರತಿನಿಧಿಗಳೂ, ರೈತ ಮುಖಂಡರೂ, ಕೃಷಿ ಅಧಿಕಾರಿಗಳೂ ಈ ಬಗ್ಗೆ ಗಮನಹರಿಸಿಲ್ಲ.
ಒಟ್ಟಿನಲ್ಲಿ ಮಹಾಪೂರದ ಕರಾಳ ಪರಿಸ್ಥಿತಿಯನ್ನು ಎದುರಿಸುತ್ತಿರುವ ಜಿಲ್ಲೆಯ ನದಿಪಾತ್ರದ ಜನರಿಗೆ ಯಾವುದೇ ಜನಪ್ರತಿನಿಧಿಗಳ ಕಾಳಜಿ ಸಿಗದೇ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜನಸೇವೆಯ ಹೆಸರಿನಲ್ಲಿ ಚುನಾವಣೆಯಲ್ಲಿ ಬಣ್ಣಬಣ್ಣದ ಮಾತನಾಡುವವರು ಜನರ ಕಷ್ಟದ ಸಮಯದಲ್ಲಿಯೇ ದಿವ್ಯ ನಿರ್ಲಕ್ಷ್ಯ ತಾಳಿದ್ದು ಅತ್ಯಂತ ಖಂಡನೀಯ.
ಉಮೇಶ ಬೆಳಕೂಡ, ಮೂಡಲಗಿ