ಸಿಂದಗಿ: ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೇ ನಮೋ ಸ್ತುತೆ ಎಂಬಂತೆ ಭಾರತದಲ್ಲಿ ತಾಯಿಗೆ ಪವಿತ್ರವಾದ ಸ್ಥಾನವಿದೆ. ತಾಯಿಯನ್ನು ಭೂತಾಯಿ, ತಾಯಿನಾಡು, ತಾಯಿ ಮನೆ, ತಾಯಿ ಮಾತು, ತಾಯಿನುಡಿ ಈಗೆಲ್ಲ ಹೇಳುವುದು ನಮ್ಮ ಸಂಸ್ಕೃತಿ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ಎಸ್.ತಂಗಡಗಿಯವರ ತಾಯಿಯನ್ನು ಹೀನಾಯ ಪದ ಬಳಸಿ ಹೀಯಾಳಿಸಿ ಅಪಮಾನ ಮಾಡಿರುವ ಬಿಜೆಪಿಯ ಸಿ.ಟಿ.ರವಿ ಯವರು ಈ ಕೂಡಲೇ ತಾಯಿಯಾದ ಭಾರತ ಮಾತೆಗೆ ಹಾಗೂ ಇಡೀ ಹೆಣ್ಣು ಕುಲಕ್ಕೆ ಕೂಡಲೇ ಕ್ಷಮೆ ಕೇಳಬೇಕು, ಇಲ್ಲದೇ ಹೋದರೆ ಉಗ್ರವಾದ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಭೋವಿ ವಡ್ಡರ ಸಮಾಜದ ತಾಲೂಕಾಧ್ಯಕ್ಷ ಪಂಡಿತ ಯಂಪೂರೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜಕೀಯ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಟೀಕೆ ಮಾಡುವುದು ಸರ್ವೇ ಸಾಮಾನ್ಯ, ಟೀಕೆ ಜೊತೆಯಲ್ಲಿ ಆರೋಪ-ಪ್ರತ್ಯಾರೋಪ ಮಾಡುವುದು ನಿರಂತರವಾಗಿ ನಡೆಯುತ್ತಿರುವುದನ್ನು ಗಮನಿಸುತ್ತಿದ್ದೇವೆ. ಆದರೆ ಹೆಣ್ಣು ಸಂಕುಲವನ್ನು ಕೀಳಾಗಿ ಕಂಡು ಅವಮಾನಿಸಿ ಮಾತನಾಡಿರುವುದು ಕಾಣಲು ಸಾಧ್ಯವಿಲ್ಲ. ಶಿಸ್ತಿನ ಪಕ್ಷವೆಂದು ಹೇಳಿಕೊಂಡಿರುವ ಬಿಜೆಪಿಯ ಸಿ.ಟಿ.ರವಿ ಯವರ ಬಾಯಿಯಿಂದ ಇಂತಹ ಕೆಟ್ಟ ಪದಗಳನ್ನು ಬಳಸಿರುವುದು ಇಡೀ ಅವರ ಪಕ್ಷಕ್ಕೆ, ಅವರ ರಾಜಕೀಯ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದ್ದಲ್ಲ. ಭಾರತಾಂಬೆಯನ್ನು ಅವಮಾನಿಸಿರುವ ಹೀನಾಯ ಮನಸ್ಥಿತಿಯ ವಿಕೃತ ಆಲೋಚನೆಯ ಸಿ.ಟಿ.ರವಿ ಯವರನ್ನು ಗಡಿಪಾರು ಮಾಡುವುದಕ್ಕಿಂತ ದೇಶದ ಗಡಿಯನ್ನೇ ದಾಟಿಸುವುದು ಉತ್ತಮ. ಇವರಿಗೆ ಈ ಪಾಠ ಕಲಿಸಿದರೆ ಮುಂದೆ ತಾಯಿಯ, ಭೂತಾಯಿಯ, ಮಾತೆಯ ವಿರುದ್ಧ ಮಾತನಾಡುವ ವ್ಯಕ್ತಿಗಳು ಎಚ್ಚರವಹಿಸುತ್ತಾರೆ ಎಂದರು.
ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರುತ್ತಾರೆ, ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂದು ಶಾಸ್ತ್ರಜ್ಞರು ಹೇಳಿರುವ ಮಾತಿದೆ. ಶ್ರೇಷ್ಠತೆಯೆನ್ನುವುದು ತಾಯಿಯಲ್ಲಿ ನೋಡಲು ಮಾತ್ರ ಸಾಧ್ಯ. ಅಂತಹ ತಾಯಿಯ ಕುರಿತು ಅವಹೇಳನ ಮಾಡಿರುವುದು ಖಂಡನೀಯ ಮತ್ತು ನಮ್ಮ ಸಂಸ್ಕೃತಿಗೆ ಮಾಡಿರುವ ಅಪಮಾನ. ತಾಯಿಯನ್ನು ಶಾರದೆಯ ರೂಪದಲ್ಲಿ ಪೂಜಿಸುವ ಪರಂಪರೆ ಭಾರತೀಯ ಪರಂಪರೆ, ಇಡೀ ಭಾರತದ ಪರಂಪರೆಗೆ ನೋವುಂಟು ಮಾಡುವಂತಹ ಮಾತುಗಳನ್ನಾಡಿದ್ದಾರೆ. ತಾಯಿ ಶಾರದೆಯನ್ನೇ ಅವಮಾನಿಸುವ ಇವರು ಬೇರೆಯ ಸಂಸ್ಕೃತಿಗಳ ಬಗ್ಗೆ ಮತ್ಯಾವ ರೀತಿ ಚಿಂತಿಸುತ್ತಾರೆ ಎಂಬುವುದನ್ನು ಪ್ರಜ್ಞಾವಂತರು ತಿಳಿಯಬೇಕಾಗಿದೆ. ಇವರ ಚಿಂತನೆ ಸಮುದಾಯವನ್ನ ಸಂಘಟಿಸುವ ಚಿಂತನೆಯಾಗಬೇಕು, ರಾಜಕೀಯ ವ್ಯಕ್ತಿಗಳನ್ನ ಟೀಕಿಸುವಾಗ ಕುಟುಂಬದ ತಾಯಂದಿರನ್ನ ಬೀದಿಗೆ ತರುವಂತಹ ಹೊಲಸು ಮನಸ್ಸಿನ ರಾಜಕಾರಣಿಗಳನ್ನ ಖಂಡಿಸುತ್ತೇವೆ.
ತಾಯಿ ದೇವತೆಯಾಗಬಹುದು, ಆದರೆ ದೇವರು ತಾಯಿಯಾಗಲಾರಳು, ಅದಕ್ಕಾಗಿ ತಾಯಿಗಿಂತ ದೊಡ್ಡ ದೇವರಿಲ್ಲ ಎಂಬ ಮಾತನ್ನು ಸಿ.ಟಿ.ರವಿಯವರು ಓದಿದಂತಿಲ್ಲ, ಸಿ.ಟಿ.ರವಿಯವರು ಈ ಕೂಡಲೇ ತಾಯಿಯ ಬಗ್ಗೆ ವಿವೇಕ ಬಳಸಿಕೊಳ್ಳಲಿ ಎಂದು ತಾಲೂಕಾ ಉಪಾಧ್ಯಕ್ಷ ದಿಲೀಪ ಆಲಕುಂಟೆ, ಕೊಳ್ಳಪ್ಪ ಚಾಕರೆ, ತಿರುಪತಿ ಬಂಡಿವಡ್ಡರ, ದಯಾನಂದ ಗೊಳಸಾರ, ರವಿ ಚಾಕರೆ, ರಘುಪತಿ ಬಂಡಿವಡ್ಡರ, ಭೀಮಾಶಂಕರ ಯಂಪೂರೆ, ರಾಜು ಆಲಕುಂಟೆ, ಲಕ್ಷ್ಮಣ ಆಲಕುಂಟೆ, ಕಾಂತಪ್ಪ ಯಂಪೂರೆ ಸೇರಿದಂತೆ ಅನೇಕರು ಎಚ್ಚರಿಸಿದ್ದಾರೆ.