ಸಿಂದಗಿ: ಭಾರತದಲ್ಲಿ ಒಬ್ಬ ವ್ಯಕ್ತಿಗೆ ಒಂದು ಮತ ಎಂಬ ನೀತಿಯಂತೆ ಸಮಾನತೆಯ ತತ್ವಕ್ಕನುಗುಣವಾಗಿ ಮತದಾನ ಮಾಡುವುದರಿಂದ ವ್ಯಕ್ತಿ ಗೌರವವನ್ನು ಹೆಚ್ಚಿಸಿ ರಾಜಕೀಯ ಪ್ರಜ್ಞೆಯನ್ನು ಮೂಡಿಸುತ್ತದೆ. ಜವಾಬ್ದಾರಿಯುತ ನಾಯಕರನ್ನು ಆಯ್ಕೆ ಮಾಡುವುದು ಮತದಾರರ ಜವಾಬ್ದಾರಿಯಾಗಿದೆ ಎಂದು ಆರ್.ಡಿ.ಪಾಟೀಲ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಎನ್.ಬಿ. ಪೂಜಾರಿ ಹೇಳಿದರು.
ಪಟ್ಟಣದ ಸಾರಂಗಮಠದಲ್ಲಿ ಜರುಗಿದ ಸದ್ವಿಚಾರಗೋಷ್ಠಿಯಲ್ಲಿ ಅವರು ಉಪನ್ಯಾಸ ನೀಡಿ ಮಾತನಾಡಿ, ಮತದಾರರು ಚುನಾವಣೆಯ ಪಾವಿತ್ರ್ಯ ಕಾಪಾಡಿಕೊಂಡು ಪ್ರಜಾಸತ್ತಾತ್ಮಕ ಮೌಲ್ಯವನ್ನು ಎತ್ತಿ ಹಿಡಿದು ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರವನ್ನು ಸಾಧ್ಯವಾದಷ್ಟು ತಡೆಗಟ್ಟಿ ಯೋಗ್ಯ, ಸಮರ್ಥ ವ್ಯಕ್ತಿಗೆ ಆಯ್ಕೆ ಮಾಡುವ ಸಲುವಾಗಿ ಕೇಂದ್ರ ಚುನಾವಣಾ ಆಯೋಗ 2011 ರಿಂದ ಪ್ರತಿವರ್ಷ ಜನವರಿ 25 ನೇ ದಿನದಂದು ರಾಷ್ಟ್ರೀಯ ಮತದಾರರ ದಿನವೆಂದು ಆಚರಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಸಾಮಾನ್ಯನಿಗೂ ದೇಶದ ಭವಿಷ್ಯವನ್ನು ಬದಲಾಯಿಸಬಲ್ಲ ಮಹಾನ್ ಶಕ್ತಿ ಇದೆ ಅದುವೇ ಮತದಾನ ಪ್ರಕ್ರಿಯೆ ಮತದಾನ ಎಂಬುದು ಬಹಳ ಪವಿತ್ರವಾದ ಮತ್ತು ಹೊಣೆಗಾರಿಕೆಗಳ ಪ್ರಕ್ರಿಯೆ ಆಗಿರುವುದರಿಂದ ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯು ಇದರಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯಬೇಕು ಎಂದರು.
ಪರಮಪೂಜ್ಯ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಉಪನ್ಯಾಸಕರಾದ ಡಾ. ರವಿ ಲಮಾಣಿ, ಡಾ. ಪ್ರಕಾಶ ರಾಠೋಡ, ಡಾ. ಸುಮಾ ನಿರಣಿ, ಕುಮಾರಿ ಅಶ್ವಿನಿ ಭಾವಿಕಟ್ಟಿ ಸನ್ಮಾನಿಸಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಪ್ರಾಚಾರ್ಯರಾದ ಡಿ.ಎಂ.ಪಾಟೀಲ, ವಿಮಲಕಾಂತ ಪಾಟೀಲ, ಚನ್ನಪ್ಪ ಕತ್ತಿ, ಉಮೇಶ ಮರ್ತೂರ, ಶಿವಪ್ಪ ಗೌಸಾನಿ, ಆರ್.ಎಂ.ಮೇಟಿ, ಶಕುಂತಲಾ ಹಿರೇಮಠ, ಪಿ.ವ್ಹಿ.ಮಹಲಿನಮಠ, ಎಸ್.ಎಚ್.ಜಾಧವ, ಸಿ.ಎಂ.ಪೂಜಾರಿ, ವ್ಹಿ.ಪಿ.ನಂದಿಕೋಲ, ಡಾ. ಶರಣು ಜೋಗೂರ ಸೇರಿದಂತೆ ಇನ್ನಿತರರು ಇದ್ದರು. ಕುಮಾರಿ ವಿಜಯಲಕ್ಷ್ಮೀ ಹಿರೇಮಠ ನಿರೂಪಿಸಿ ವಂದಿಸಿದರು.