spot_img
spot_img

ಸರ್ಕಾರಿ ಪ್ರೌಢಶಾಲೆಗಳಲ್ಲಿ ಕನ್ನಡ ಶಿಕ್ಷಕರು ಹಾಗೂ ಕನ್ನಡ ಬೋಧನೆ ಕುರಿತು ನಿರ್ಲಕ್ಷ್ಯ ತೋರಿಸುತ್ತಿರುವ ಬಗ್ಗೆ ದೂರು ಹಾಗೂ ಸೂಕ್ತ ಕ್ರಮಕ್ಕೆ ಒತ್ತಾಯ

Must Read

ಮೈಸೂರು – ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕನ್ನಡ ಭಾಷಾ ಬೋಧನೆ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರುತ್ತಿದ್ದು, ಇದರಿಂದಾಗಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಪರಿಪೂರ್ಣವಾಗಿ ಕಲಿಯಲಾಗದೇ, ಕೇವಲ ಪರೀಕ್ಷೆಗೋಸ್ಕರವೇ ಕಲಿಯುವಂತಾಗಿದೆ ಎಂದು ಹಿರಿಯ ಸಾಹಿತಿ, ಪತ್ರಕರ್ತರು ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ದೂರು ನೀಡಿದ್ದಾರೆ.

ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರಿಗೆ ದೂರು ನೀಡಿರುವ ಅವರು ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿನ ಹಲವು ಪ್ರೌಢಶಾಲೆಗಳಲ್ಲಿ ಕನ್ನಡ ಭಾಷಾ ಶಿಕ್ಷಕರ ಕೊರತೆಯಿದೆ. ಕಲಾ ವಿಭಾಗದ ಶಿಕ್ಷಕರೇ ಹಲವೆಡೆ ಕನ್ನಡ ಬೋಧನೆ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳು ಛಂದಸ್ಸು, ಅಲಂಕಾರ, ಹಳಗನ್ನಡ ಪಠ್ಯಗಳ ಅಭ್ಯಾಸ ಕಬ್ಬಿಣದ ಕಡಲೆಯಾಗಿದೆ ಎಂದು ವಿವರಿಸಿದ್ದಾರೆ.

ಶಿಕ್ಷಣ ಇಲಾಖೆಯ ನಿರ್ದೇಶಕ ರು ಇತ್ತೀಚೆಗೆ ಹೊರಡಿಸಿರುವ ಆದೇಶ ಸಂಖ್ಯೆ -ಸಿ೪(೧)ಸ.ಪ್ರೌ.ಹೆ.ಶಿ. ೪೭/೨೦೨೧-೨೨ ದಿನಾಂಕ ೨೨-೩-೨೨ರ ಪ್ರಕಾರ ಪ್ರೌಢಶಾಲೆಗಳಲ್ಲಿ ಆರು ವಿಭಾಗ (ಸೆಕ್ಷನ್) ಗಳು ಇರುವ ಕಡೆ ಒಬ್ಬರು ಕನ್ನಡ ಶಿಕ್ಷಕರನ್ನು ನಿಗಧಿಪಡಿಸಲಾಗಿದೆ.ಆರು ವಿಭಾಗಕ್ಕೆ ಕನ್ನಡ ಶಿಕ್ಷಕರು ಒಂದು ವಾರದಲ್ಲಿ ೩೬ ಬೋಧನಾ ಅವಧಿ (ಪೀರಿಯೆಡ್) ಗಳನ್ನು ನಿರ್ವಹಿಸಬೇಕಿದೆ‌. ವಿದ್ಯಾರ್ಥಿಗಳು ಜಾಸ್ತಿ ಇರುವ ಕಡೆ ಎರಡು ಕಲಾ ಶಿಕ್ಷಕರನ್ನು ನಿಗದಿಗೊಳಿಸಿ, ಕಲಾ ಶಿಕ್ಷಕರೂ ಹಾಗೂ ಕನ್ನಡ ಭಾಷಾ ಶಿಕ್ಷಕರೂ ಸರಿಸಮನಾಗಿ ಬೋಧನಾ ಅವಧಿ ಹಂಚಿಕೊಂಡು , ಕಲಾ ಶಿಕ್ಷಕರಿಂದ ಕನ್ನಡ ಭಾಷಾ ಬೋಧನೆ ನಿರ್ವಹಿಸಬೇಕೆಂದು ಸೂಚಿಸಲಾಗಿದೆ.

ಈ ಆದೇಶದಿಂದ ಕನ್ನಡ ಭಾಷಾ ಶಿಕ್ಷಕರ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ವಿದ್ಯಾರ್ಥಿಗಳ ಕನ್ನಡ ಭಾಷಾ ಕಲಿಕೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಕನ್ನಡ ಭಾಷೆಯ ವ್ಯಾಕರಣ,ಛಂದಸ್ಸು, ಅಲಂಕಾರ ಇವುಗಳ ಕಲಿಕೆಗೆ ಹಿನ್ನೆಡೆಯಾಗಿ ಭವಿಷ್ಯದಲ್ಲಿ ಕನ್ನಡ ಭಾಷೆಗೆ ಧಕ್ಕೆಯಾಗುತ್ತದೆ. ಆದ್ದರಿಂದ ಹೆಚ್ಚು ವಿದ್ಯಾರ್ಥಿಗಳು ಇರುವ ಪ್ರೌಢಶಾಲೆಗಳಲ್ಲಿ ಆರು ವಿಭಾಗಗಳಿಗಿಂತ (ಸೆಕ್ಷನ್) ಹೆಚ್ಚು ವಿಭಾಗಗಳಿರುವ ಕಡೆ ಇಬ್ಬರು ಕನ್ನಡ ಶಿಕ್ಷಕರನ್ನು ಹಾಗೂ ಓರ್ವ ಕಲಾ ಶಿಕ್ಷಕರನ್ನು ನೇಮಕಾತಿ ಮಾಡುವುದು ಕನ್ನಡ ಭಾಷೆಯ ಹಿತದೃಷ್ಟಿಯಿಂದ ಒಳ್ಳೆಯದು. ಎಂದವರು ವಿವರಿಸಿದ್ದಾರೆ.

ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಕನ್ನಡ ಭಾಷಾ ಪ್ರಶ್ನೆಪತ್ರಿಕೆಯು ೧೨೫ ಅಂಕಗಳ ಪ್ರಶ್ನೆಯನ್ನು ಹೊಂದಿದೆ.ಹಿಂದಿ ಹೊರತುಪಡಿಸಿ, ಉಳಿದೆಲ್ಲ ವಿಷಯಗಳ ಪ್ರಶ್ನೆಪತ್ರಿಕೆಗಳೂ ತಲಾ ೧೦೦ ಅಂಕಗಳ ಪ್ರಶ್ನೆಗಳನ್ನು ಹೊಂದಿವೆ.ಆದರೆ ೧೨೫ ಅಂಕಗಳಿರುವ ಕನ್ನಡ ಪ್ರಶ್ನೆ ಪತ್ರಿಕೆಗೂ ಸಹ ಉತ್ತರಿಸಲು ಮೂರು ಗಂಟೆ ಕಾಲಾವಧಿ ನೀಡಲಾಗಿದೆ. ಅದೇ ರೀತಿ ೧೦೦ ಅಂಕಗಳ ಸಮಾಜ ಶಾಸ್ತ್ರ, ಸಮಾಜ ವಿಜ್ಞಾನ ಹಾಗೂ ಗಣಿತ ಪ್ರಶ್ನೆ ಪತ್ರಿಕೆಗಳಿಗ ತಲಾ ಮೂರು ಗಂಟೆಯ ಕಾಲಾವಧಿ ನೀಡಲಾಗಿದೆ. ೧೨೫ ಅಂಕಗಳ ಕನ್ನಡ ಭಾಷಾ ಪ್ರಶ್ನೆಪತ್ರಿಕೆಯನ್ನು ಕೇವಲ ಮೂರು ಗಂಟೆ ಅವಧಿಯಲ್ಲಿ ಉತ್ತರಿಸಲು ವಿದ್ಯಾರ್ಥಿಗಳಿಗೆ ತೀವ್ರ ಗೊಂದಲ,ಆತಂಕ ಉಂಟಾಗುತ್ತಿದೆ. ಆದ್ದರಿಂದ ಕನ್ನಡ ಭಾಷಾ ಪರೀಕ್ಷೆಗೆ ಮೂರೂವರೆ ಗಂಟೆ ಅವಧಿ ನೀಡಬೇಕು.ಅಂದರೆ ಪರೀಕ್ಷಾ ಅವಧಿಯನ್ನು ಅರ್ಧ ಗಂಟೆ ಹೆಚ್ಚಿಸಬೇಕು ಎಂದವರು ಒತ್ತಾಯಿಸಿದ್ದಾರೆ.

ಶಿಕ್ಷಣ ಇಲಾಖೆಯ ನಿಯಮಾನುಸಾರ ಎಪ್ಪತ್ತು ಮಕ್ಕಳಿಗೆ ಒಬ್ಬ ಕನ್ನಡ ಶಿಕ್ಷಕರೆಂದು ನಿಗದಿಪಡಿಸಲಾಗಿದೆ ಆದರೆ ಖಾಸಗಿ ಪ್ರೌಢಶಾಲೆಗಳಲ್ಲಿ ನಲವತ್ತರಿಂದ ಐವತ್ತು ಮಕ್ಕಳಿಗೆ ಒಂದು ವಿಭಾಗ ಮಾಡಲಾಗುತ್ತಿದೆ . ಒಂದು ವಿಭಾಗದಲ್ಲಿ ಎಪ್ಪತ್ತು ವಿದ್ಯಾರ್ಥಿಗಳನ್ನು ನಿಗಧಿಪಡಿಸಿರುವುದರಿಂದ ಭವಿಷ್ಯದಲ್ಲಿ ಕನ್ನಡ ಭಾಷಾ ಕಲಿಕೆ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ ಎಂದು ಡಾ.ಭೇರ್ಯ ರಾಮಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.

ಎಂಟು, ಒಂಭತ್ತು ಹಾಗೂ ಹತ್ತನೇ ತರಗತಿಗಳ ತಲಾ ಎರಡು ವಿಭಾಗ ಗಳು ಸಾಮಾನ್ಯವಾಗಿ ಎಲ್ಲಾ ಪ್ರೌಢಶಾಲೆಗಳಲ್ಲಿ ಇವೆ.ಕೆಲವು ಪ್ರೌಢಶಾಲೆಗಳಲ್ಲಿ ಮೂರೂ ತರಗತಿಗಳ ತಲಾ ಮೂರು ವಿಭಾಗ(ಸೆಕ್ಷನ್) ಗಳಿವೆ.ಹೀಗಾಗಿ ಒಬ್ಬ ಕನ್ನಡ ಭಾಷಾ ಶಿಕ್ಷಕರು ಆರು ವಿಭಾಗಗಳಲ್ಲಿ ಪ್ರತಿವಾರವೂ ೩೬ ಪೀರಿಯಡ್ ಕನ್ನಡ ಬೋಧಿಸಬೇಕಾಗುತ್ತದೆ. ಇನ್ನೂ ಹೆಚ್ಚು ವಿದ್ಯಾರ್ಥಿಗಳು ಇರುವ ಪ್ರೌಢಶಾಲೆಗಳಲ್ಲಿ ವಾರವೊಂದಕ್ಕೆ ೪೨ ಪೀರಿಯಡ್ ಕನ್ನಡ ಭಾಷಾ ಬೋಧನೆ ಮಾಡಬೇಕಾದ ಹೊರೆ ಕನ್ನಡ ಭಾಷಾ ಶಿಕ್ಷಕರ ಮೇಲೆ ಇದೆ.ಇದು ಕನ್ನಡ ಭಾಷಾ ಶಿಕ್ಷಕರ ಬೋಧನೆ ಮೇಲೆ ಹಾಗೂ ವಿದ್ಯಾರ್ಥಿಗಳ ಕನ್ನಡ ಭಾಷಾ ಕಲಿಕೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದವರು ವಿವರಿಸಿದ್ದಾರೆ.

ಎಂಟು, ಒಂಭತ್ತು ಹಾಗೂ ಹತ್ತನೇ ತರಗತಿಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ಇರುವ ಪ್ರೌಢಶಾಲೆಗಳಿಗೆ ಹೆಚ್ಚುವರಿಯಾಗಿ ಮತ್ತೊಬ್ಬ ಕನ್ನಡ ಭಾಷಾ ಶಿಕ್ಷಕರನ್ನು ನೇಮಕ ಮಾಡಲು ಕ್ರಮಕೈಗೊಳ್ಳಬೇಕು. ಪ್ರತಿ ವಿಭಾಗದಲ್ಲಿ (ಸೆಕ್ಷನ್) ಗರಿಷ್ಠ ಐವತ್ತು ವಿದ್ಯಾರ್ಥಿಗಳು ಮಾತ್ರ ಇರುವಂತೆ ಸೂಚನೆ ನೀಡಬೇಕು.ಆಗ ಮಾತ್ರ ವಿದ್ಯಾರ್ಥಿಗಳ ಕನ್ನಡ ಭಾಷೆಯ ಕಲಿಕೆಯ ಮಟ್ಟ ಉತ್ತಮಗೊಳ್ಳುತ್ತದೆ. ಕನ್ನಡ ಭಾಷಾ ಶಿಕ್ಷಕರ ಬೋಧನಾ ಸಾಮರ್ಥ್ಯ ಉತ್ತಮಗೊಳ್ಳುತ್ತದೆ.

ಈ ದಿಸೆಯಲ್ಲಿ ತಾವು ರಾಜ್ಯ ಸರ್ಕಾರಕ್ಕೆ ಹಾಗೂ ಪ್ರೌಡಶಿಕ್ಷಣ ಇಲಾಖೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಬೇಕೆಂದು ಡಾ.ಭೇರ್ಯ. ರಾಮಕುಮಾರ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

- Advertisement -
- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!