spot_img
spot_img

ಸ್ಮರಣಶಕ್ತಿ ಹೆಚ್ಚಿಸಲು ಬೇಕು ಗಾಢನಿದ್ರೆ

Must Read

- Advertisement -

ನನ್ನ ಆತ್ಮೀಯ ಹಿರಿಯ ಮಿತ್ರ ಎನ್.ಜಿ.ತೊಪ್ಪಲದ ನನ್ನೊಂದಿಗೆ ಮೈಸೂರು ವಿಶ್ವವಿದ್ಯಾಲಯಕ್ಕೆ ೨೦೧೩-೧೪ ರಲ್ಲಿ ಬಿ.ಈಡಿ ವ್ಯಾಸಂಗಕ್ಕೆ ಬಂದಿದ್ದರು. ನಾವು ಒಂದೇ ರೂಮಿನಲ್ಲಿದ್ದೆವು.ರಾತ್ರಿ ಊಟವಾದ ನಂತರ ಸ್ವಲ್ಪ ಹೊತ್ತು ರೂಮಿನಿಂದ ಹೊರಗೆ ಸುತ್ತಾಡಿ ಬಂದು ಆ ದಿನ ತರಗತಿಯಲ್ಲಿ ನಡೆದ ಸಂಗತಿಯನ್ನು ಮಾತಾಡ್ತಾ ಮಾತಾಡ್ತ ಇರೋವಾಗಲೇ ಇವರ ಗೊರಕೆ ಆರಂಭವಾಗುತ್ತಿತ್ತು.

ಆ ಗೊರಕೆ ಹೇಗಿರುತ್ತಿತ್ತು ಅಂದರೆ ಅಕ್ಕಪಕ್ಕದಲ್ಲಿ ಪ್ರಳಯವಾಗುತ್ತಿತ್ತೇನೋ ಎಂಬುವಷ್ಟರ ಮಟ್ಟಿಗೆ ಸದ್ದು ಕೇಳಿ ಬರುತ್ತಿತ್ತು. ನನಗೆ ಈ ಗೊರಕೆಯಿಂದ ನಿದ್ರೆಯೇ ಬರುತ್ತಿರಲಿಲ್ಲ. ಕಿವಿಯಲ್ಲಿ ವಾಕ್ ಮನ್ ಹಾಕಿಕೊಂಡು ಸಂಗೀತ ಆಲಿಸುತ್ತ ಮಲಗಬೇಕೆಂದರೂ ಕೂಡ ಅದರ ಸವಿದನಿಯನ್ನು ಮೀರಿ ಈ ಗೊರಕೆ ಕೇಳುತ್ತಿತ್ತು.

ಅವರನ್ನು ಎಚ್ಚರಿಸಿ ನಾನು ಮಲಗುವವರೆಗೂ ಸ್ವಲ್ಪ ಎಚ್ಚರವಿರಿ ಎಂದು ಹೇಳುತ್ತಿದ್ದೆ ಅವರು ಕೂಡ ಹೂಂ ಎಂದು ಎಚ್ಚರವಾಗಿ ಸ್ವಲ್ಪ ಹೊತ್ತು ತಮ್ಮ ಮಂಚದಲ್ಲಿ ಎದ್ದು ಕುಳಿತುಕೊಳ್ಳುತ್ತಿದ್ದರು. ಹಾಗೆಯೇ ಕೆಲವೇ ನಿಮಿಷಗಳಲ್ಲಿ ಮತ್ತೆ ಮಲಗಿ ಬಿಡುತ್ತಿದ್ದರು. ಮತ್ತದೇ ಗೊರಕೆಯ ನಿದ್ರೆ.

- Advertisement -

ಇನ್ನೊಬ್ಬ ಹಿರಿಯ ಮಿತ್ರನೊಬ್ಬನಿದ್ದ ಅವನು ಹಗಲು ಹೊತ್ತಿನಲ್ಲಿ ಕೂಡ ಊಟವಾಗೋದೇ ತಡ ಮಾತಾಡ್ತಾ ಮಾತಾಡ್ತಾ ಕುರ್ಚಿ ಯಲ್ಲಿ ಕುಳಿತಲ್ಲೇ ಗೊರಕೆ ಹೊಡೆಯುವ ಮೂಲಕ ನಿದ್ರೆ ಗೆ ಜಾರುತ್ತಿದ್ದ. ನಾವು ನಮ್ಮ ಮಾತುಗಳಲ್ಲಿ ಲೀನವಾಗಿ ಗೊರಕೆ ಸದ್ದು ಕೇಳಿದಾಗಲೇ ಗೊತ್ತಾಗ್ತಿತ್ತು ಇವನಿಗೆ ನಮ್ಮ ಮಾತುಗಳು ಜೋಗುಳ ಹಾಡಿದಂತಾಗಿವೆ ಎಂದು ನಕ್ಕು ಸುಮ್ಮನಾಗುತ್ತಿದ್ದೆವು.

ಚಿಂತೆಯಿಲ್ಲದಿರುವ ಚಿಗಪ್ಪನಿಗೆ ಸಂತೆಯಲ್ಲೂ ನಿದ್ರೆ ಬಂತು ಎನ್ನುವ ಗಾದೆಮಾತು ನಮ್ಮಲ್ಲಿ ಚಾಲ್ತಿಯಲ್ಲಿದೆ. ಹಾಗಾಗಿತ್ತು ಇವರ ಸ್ಥಿತಿ ರಾತ್ರಿಯ ಸಮಯ ಇವರ ನಿದ್ರೆಯ ಆವಾಂತರ ಎಷ್ಟು ಹೇಳಿದರೂ ಮುಗಿಯದು.ಇನ್ನು ಕೆಲವು ಜನರು ನಿದ್ರೆಯೇ ಬರುತ್ತಿಲ್ಲ. ಯಾಕೆ ಹೀಗಾಗುತ್ತಿದೆ ಎಂದು ವೈದ್ಯರ ಬಳಿಗೆ ಹೋಗುವುದನ್ನು ನೋಡಿರಬಹುದು.

ಅವರು ನಿದ್ರಾ ಮಾತ್ರೆ ಸೇವಿಸಿ ಮಲಗುವುದನ್ನು ಕೂಡ ರೂಢಿಸಿರುವರು.ಅಂತಹ ನಿದ್ರೆ ಬರದಿರುವ ಸಮಸ್ಯೆಯ ಬಗ್ಗೆ ಜನಸಾಮಾನ್ಯರಿಂದ ಹಿಡಿದು, ದೊಡ್ಡ-ದೊಡ್ಡ ವಿಜ್ಞಾನಿಗಳು, ವೈದ್ಯರು ಚಿಂತನೆ ಮಾಡಿ-ಮಾಡಿ ಅವರ ನಿದ್ರೆಯೇ ಹಾರಿ ಹೋಗಿದೆ.

- Advertisement -

ನಿದ್ರೆಯ ಕೊರತೆ ಹಾಗೂ ನಿದ್ರೆ ಬರದಿರಲು ಅನೇಕ ಕಾರಣಗಳುಂಟು. ಇದರಿಂದಾಗಿ ಶಾರೀರಿಕ ಹಾಗೂ ಮಾನಸಿಕ ರೋಗಗಳು ಉದ್ಭವಿಸುತ್ತವೆಂದು ದಿನನಿತ್ಯ ಒಂದಿಲ್ಲೊಂದು ಹೊಸ ಶೋಧದ ವರದಿಗಳು ಹೇಳುತ್ತಲೇ ಇರುತ್ತವೆ.

ಓರ್ವ ಆರೋಗ್ಯವಂತ ವ್ಯಕ್ತಿಗೆ ನಿದ್ರೆ ಎಷ್ಟು ಅವಶ್ಯಕ? ಈ ಕುರಿತಂತೆ ಹಲವರಲ್ಲಿ ಹಲವು ಮತಬೇಧಗಳಿವೆ, ವಿವಾದಗಳಿವೆ. ಆದರೆ ಓರ್ವ ವ್ಯಕ್ತಿ ಆರೋಗ್ಯವಂತನಾಗಿರಲು ಹಾಗೂ ಸದಾ ಉಲ್ಲಾಸದಾಯಕವಾಗಿರಲು ಗಾಢನಿದ್ರೆ ಅತ್ಯವಶ್ಯಕ ಎನ್ನುವುದನ್ನು ಮಾತ್ರ ಎಲ್ಲರೂ ಮುಕ್ತ ಮನಸ್ಸಿನಿಂದ ಒಪ್ಪುತ್ತಾರೆ.

ಗಾಢನಿದ್ರೆ ಎಷ್ಟು ತಾಸಿನದಾಗಿರಬೇಕು, ಇದು ಸಹ ಹಲವರ ದೃಷ್ಟಿಯಲ್ಲಿ, ಭಿನ್ನ-ಭಿನ್ನವಾಗಿದೆ.

ಗಾಢನಿದ್ರೆಗೆ ಸಂಜೆಹೊತ್ತು ಅಡ್ಡಾಡುವುದು, ಹಗುರ ವ್ಯಾಯಾಮ, ಮಲಗುವ ಮುನ್ನ ಅರೆಸ್ನಾಹ ಇಲ್ಲವೆ ಪೂರ್ಣಸ್ನಾನ, ಕೈಕಾಲು ಮುಖ ತೊಳೆದುಕೊಳ್ಳುವುದು ಅವಶ್ಯಕ. ಇದರ ಹೊರತಾಗಿ ಮಾಲಿಷ್, ಸದಾ ಹಸನ್ಮುಖರಾಗಿರುವುದು, ಚಿಂತಾಮುಕ್ತರಾಗಿರುವುದು ಗಾಢನಿದ್ರೆಗೆ ಸಹಾಯಕ.

ಹೊಸ ಸಂಶೋಧನೆಯಿಂದ ಬೆಳಕಿಗೆ ಬಂದ ಒಂದು ಸಂಗತಿಯೆಂದರೆ, ಗಾಢನಿದ್ರೆಯಿಂದ ಸ್ಫೂರ್ತಿ, ಉಲ್ಲಾಸ ದೊರೆಯುವಂತೆ ಸ್ಮರಣ ಶಕ್ತಿಯೂ ವರ್ಧಿಸುತ್ತದೆಯಂತೆ ಯಾವುದೇ ಓರ್ವ ವ್ಯಕ್ತಿ ಹೊಸ ಮಾಹಿತಿ ದೊರಕಿಸಿಕೊಂಡು ಅದನ್ನು ತನ್ನ ಮೆದುಳಿಗೆ ಸೇರಿಸಿಕೊಂಡನೆಂದರೆ ಕನಿಷ್ಠ ೬ರಿಂದ ೮ಗಂಟೆಗಳ ಗಾಢನಿದ್ರೆ ಮಾಡಲೇಬೇಕು. ಇದರಿಂದಾಗಿ ಪಡೆದ ಮಾಹಿತಿ ಖಾಯಂ ರೂಪದಲ್ಲಿ ಮಿದುಳಿನಲ್ಲಿ ಸಂಗ್ರಹಗೊಳ್ಳುತ್ತದೆ.

ಗಾಢನಿದ್ರೆ ಹೊಂದದ ವ್ಯಕ್ತಿ ತಾನು ಪಡೆದ ಮಾಹಿತಿಯನ್ನು ಮಿದುಳಿನಲ್ಲಿ ಹೆಚ್ಚುದಿನಗಳ ಕಾಲ ಸಂಗ್ರಹಿಸಿಡಲಾರ. “ದಿ ಜನರಲ್ ಆಫ್ ಕಾಗ್ನಿಟಿವ್ ನ್ಯೂರೋಸೈನ್ಸ್” ನಲ್ಲಿ ಪ್ರಕಟವಾದ ಒಂದು ವರದಿಯ ಪ್ರಕಾರ, ಗ್ರಹಿಸಿದ ಸಂಗತಿಗಳನ್ನು ಸದಾ ಸ್ಮರಣೆಯಲ್ಲಿಟ್ಟುಕೊಳ್ಳಲು ರಾತ್ರಿಯ ಗಾಢನಿದ್ರೆ ಅತ್ಯವಶ್ಯ. ಈ ಸಂಶೋಧನೆಯನ್ನು ಹಾರವರ್ಡ್ ಮೆಡಿಕಲ್ ಸ್ಕೂಲ್‌ನ ಮನೋಚಿಕಿತ್ಸಕ ವಿಭಾಗದ ಸಹಾಯಕ ಪ್ರೊಫೆಸರ್ ಡಾ.ರಾಬರ್ಟ್ ಸ್ಟಿಕ್ ಗಿಲ್ಡ್ ಹಾಗೂ ಬೋಸ್ಟನ್‌ನಲ್ಲಿರುವ ಮೆಸಾಚುಸೆಟ್ಸ ಮೆಂಟಲ್ ಹೆಲ್ತ್ಸೆಂಟರ್‌ನ ಅವರ ಅಪಾರ ಸಹಪಾಟಿಗಳು ಕೈಕೊಂಡಿದ್ದಾರೆ.

ಆ ವೈಜ್ಞಾನಿಕರು ಗಾಢನಿದ್ರೆ ಎರಡು ಹಂತದಲ್ಲಿ ಇರುತ್ತದೆನ್ನುತ್ತಾರೆ. ರಾತ್ರಿಯ ಪ್ರಥಮ ಗಾಢನಿದ್ರೆ ಮೊದಲ ಎರಡು ಗಂಟೆಗಳಲ್ಲಿ ಹಾಗೂ ದ್ವಿತೀಯ ಹಂತದ ಗಾಢನಿದ್ರೆ ಬೆಳಕು ಹರಿಯುವ ಮುಂಚಿನ ಎರಡು ಗಂಟೆಗಳಲ್ಲಿ ಬರುತ್ತದೆ ಎನ್ನುತ್ತಾರೆ. ರಾತ್ರಿ ಬಹಳ ಹೊತ್ತಿನವರೆಗೆ ಓದುವ ವಿದ್ಯಾರ್ಥಿಗಳಿಗೆ ಹಾಗೂ ರಾತ್ರಿಪಾಳಿ ಕೆಲಸ ಮಾಡುವವರಿಗೆ ನಿದ್ರೆ ಮಾಡದೇ ಇದ್ದರೆ ಸ್ಮರಣಶಕ್ತಿ ಕ್ಷೀಣಿಸುತ್ತದೆ ಎಂದು ವಿಜ್ಞಾನಿಗಳು ಹಾಗೂ ಸಂಶೋಧಕರು ಎಚ್ಚರಿಸಿದ್ದಾರೆ.

ನಿದ್ರೆಯ ಕುರಿತಂತೆ ವಿಶೇಷ ಶೋಧನೆ ಕೈಕೊಂಡ ಲಿನ್‌ಫುಲ್ ಅವರು, ಮನುಷ್ಯನಿಗೆ ಗಾಢನಿದ್ರೆ ನಿಧಾನವಾಗಿ ಆವರಿಸಿಕೊಳ್ಳುತ್ತದೆ. ಇದಕ್ಕೆ ಒಂದು ಗಂಟೆ ಸಮಯವೂ ತಗುಲಬಹುದು ಎನ್ನುತ್ತಾರೆ. ನಿದ್ರೆ ಹತ್ತಿದಾಗ ನಮಗೆ ಇದರ ಬಗ್ಗೆ ಅರಿವೂ ಆಗಲಾರದು. ಯಾರು ಎಷ್ಟು ಹೊತ್ತು ಮಲಗಿಕೊಂಡರು ಎನ್ನುವುದಕ್ಕಿಂತ ಯಾರು ಎಷ್ಟು ಗಾಢ ನಿದ್ರೆ ಪಡೆದರು ಹಾಗೂ ಉಲ್ಲಾಸ ಹಾಗೂ ಸ್ಫೂರ್ತಿ ಪಡೆದರು ಎನ್ನವುದು ಮುಖ್ಯ.

ನೀವು ಆರೋಗ್ಯವಂತರಾಗಿರಲು ಉಲ್ಲಾಸ-ಸ್ಫೂರ್ತಿ ಹೊಂದಲು, ಸ್ಮರಣಶಕ್ತಿ ಹೆಚ್ಚಿಸಿಕೊಳ್ಳಲು ಗಾಢನಿದ್ರೆ ಪಡೆಯಲು ಪ್ರಯತ್ನಿಸಿ. ರಾತ್ರಿ ೧೦ಗಂಟೆಯ ಮುಂಚೆಯೇ ಮಲಗಲು ಪ್ರಯತ್ನಿಸಿ. ಗಾಢನಿದ್ರೆಯಿಂದ ಶರೀರಕ್ಕೆ ಪೂರ್ಣ ವಿಶ್ರಾಂತಿ ದೊರೆಯುತ್ತದೆ. ಮನಸ್ಸು ಹೂವಿನಂತೆ ಹಗುರವೆನಿಸಿ ಕೆಲಸ ಮಾಡಲು ಸ್ಫೂರ್ತಿ ಕೊಡುತ್ತದೆ.


ವೈ.ಬಿ.ಕಡಕೋಳ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ರೇವಣಸಿದ್ದಯ್ಯನವರ ಪುಣ್ಯಸ್ತ್ರೀ ರೇಕಮ್ಮ ಹನ್ನೆರಡನೇ ಶತಮಾನ ಎಂಬುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಬಹುಮುಖ್ಯ ಕಾಲಘಟ್ಟ. ಶರಣರು ರಚಿಸಿದ ವಚನಗಳನ್ನು ಕನ್ನಡ ಸಾಹಿತ್ಯದ ಉಪನಿಷತ್ತುಗಳು ಎಂದು...
- Advertisement -

More Articles Like This

- Advertisement -
close
error: Content is protected !!
Join WhatsApp Group