ಮೂಡಲಗಿ:- ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜು ಹಾಗೂ ಕರಾವಳಿ ಟೀಚರ್ಸ್ ಹೆಲ್ಪ್ ಲೈನ್, ಧಾರವಾಡ ಇವರ ಸಹಯೋಗದಲ್ಲಿ ಮಂಗಳವಾರ ಜರುಗಿದ ಜಿಲ್ಲಾಮಟ್ಟದ ಉದ್ಯೋಗ ಮೇಳ ಯಶಸ್ವಿಯಾಗಿದೆ. ಸುಮಾರು 600ಕ್ಕೂ ಹೆಚ್ಚು ಜನ ಮೇಳದ ಉಪಯೋಗವನ್ನು ಪಡೆದರು.
ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಚೇರಮನ್ನರಾದ ಬಸಗೌಡ ಪಾಟೀಲ ಅವರು, ನಿರುದ್ಯೋಗಿ ಯುವಕರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಮೇಳದ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.
ಬೆಳಗಾವಿಯ ಉದ್ಯೋಗ ವಿನಿಮಯ ಕೇಂದ್ರದ ವಿಭಾಗಾಧಿಕಾರಿ ಸಂತೋಷ ನಾವಲಗಿ ಅವರು ಮಾತನಾಡಿ, ಉದ್ಯೋಗ ಆಕಾಂಕ್ಷಿಗಳು ಯಾವುದೇ ಕಂಪನಿ ಅಥವಾ ಯಾವುದೇ ಸ್ಥಳದಲ್ಲಿ ಕೆಲಸ ಮಾಡುವ ಮನೋಭಾವವನ್ನು ಹೊಂದಬೇಕು. ಅಂದಾಗ ಮಾತ್ರ ಆರ್ಥಿಕ ಸದೃಢತೆ ಹೊಂದಲು ಸಾಧ್ಯವಾಗುತ್ತದೆ ಎಂದರು. ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಧಾರವಾಡ ಕರಾವಳಿ ಟೀಚರ್ಸ್ ಹೆಲ್ಪ್ ಲೈನ್ ನಿರ್ದೇಶಕ ಪಾಂಡುರಂಗರಾವ್, ಬೆಂಗಳೂರಿನ ಎಕ್ಸಿಸ್, ಐಸಿಐಸಿಐ ಬ್ಯಾಂಕುಗಳ ಮಾನವ ಸಂಪನ್ಮೂಲ ಅಧಿಕಾರಿ ಶಿವಕುಮಾರ ಮಾತನಾಡಿದರು.
ಸಮಾರಂಭದಲ್ಲಿ ಟಾಟಾ ಇಲೆಕ್ಟ್ರಿಕಲ್ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಕು. ಅಶ್ವಿನಿ, ಟೋಯೋಟಾ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಬೇಬಿ ಹುಬ್ಬಳ್ಳಿ, ಪುಕೋಕು ಜಪನೀಸ್ ಎಂ.ಎನ್.ಸಿ. ಕಂಪನಿಯ ಎಚ್.ಆರ್. ಸಿದ್ದಪ್ಪ ರೆಂಟೆ, ಸಂಸ್ಥೆಯ ನಿರ್ದೇಶಕರಾದ ಸಾತಪ್ಪ ಖಾನಾಪೂರ, ಎಂ.ಡಿ.ಕುರಬೇಟ, ಕಾಲೇಜಿನ ಉದ್ಯೋಗ ಮಾಹಿತಿ ಕೇಂದ್ರದ ಕಾರ್ಯದರ್ಶಿಗಳಾದ ಪ್ರೊ.ಸಂತೋಷ ಬಂಡಿ, ಆರ್.ಎಸ್.ಪಂಡಿತ ಇನ್ನಿತರರು ಉಪಸ್ಥಿತರಿದ್ದರು.
ಡಾ. ಕೆ.ಎಸ್. ಪರವ್ವಗೋಳ ನಿರೂಪಿಸಿದರು. ಕು. ರಾಧಿಕಾ ಕರೆಪ್ಪಗೋಳ ಪ್ರಾರ್ಥಿಸಿದರು, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಶಂಕರ ನಿಂಗನೂರ ವಂದಿಸಿದರು.