ಬೀದರ- ಗಡಿ ಜಿಲ್ಲೆ ಬೀದರ ಅನಕ್ಷರಸ್ಥ ಮತ್ತು ಬಡವರ ಜಿಲ್ಲೆ ಎಂಬುದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಷಯ. ಇದೇ ಜಿಲ್ಲೆಯಲ್ಲಿರುವ ಹಣಕಾಸು ಸಂಸ್ಥೆಗಳು ಸಾಲದ ರೂಪದಲ್ಲಿ ಜನರ ಶೋಷಣೆ ಮಾಡುತ್ತಿದ್ದು ಸಾಲ ಪಡೆದುಕೊಂಡಿರುವವರ ಜಾತಿ ನಿಂದನೆ ಮಾಡಿರುವ ಪ್ರಕರಣವೊಂದು ವರದಿಯಾಗಿದೆ.
ಜಿಲ್ಲೆಯ ತಳವಾಡ(ಕೆ) ನಿವಾಸಿ ರೇಣುಕಾ ಕನಶೆಟ್ಟಿಯವರು ಸ್ಥಳೀಯ ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು ಪರಮೇಶ್ವರ ರಾಮಣ್ಣ ಶಿಂಧೆ ಎಂಬಾತ ಸಂಘದಿಂದ ಪಡೆದ ಸಾಲವನ್ನು ಮರಳಿಸಲು ತಡ ಮಾಡಿದ್ದಕ್ಕೆ ಜಾತಿಯ ಹೆಸರಿನಲ್ಲಿ ನಿಂದನೆ ಮಾಡಿದ್ದಾರೆಂದು ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಐಪಿಸಿ ಸೆ. ೩೫೨, ೩೫೧/೨ ಹಾಗೂ ಎಸ್ ಸಿ ಎಸ್ ಟಿ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.
ಈ ಪ್ರಕರಣದಿಂದಾಗಿ ಜಿಲ್ಲೆಯಲ್ಲಿರುವ ಸಂಘ ಸಂಸ್ಥೆಗಳ ಸಾಚಾತನವನ್ನೇ ಪ್ರಶ್ನಿಸುವಂತಾಗಿದ್ದು ಈ ವಿಷಯ ಜಿಲ್ಲಾ ಆಡಳಿತ ಹಾಗು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಇಲ್ಲದೇ ಹಣಕಾಸು ಸಂಸ್ಥೆಗಳ ವ್ಯವಹಾರ ನಡೆಯುತ್ತದೆಯಾ ಎಂದು ಪ್ರಶ್ನಿಸುವಂತಾಗಿದೆ. ಜಿಲ್ಲಾದ್ಯಂತ ಎಷ್ಟು ಸಂಘ ಸಂಸ್ಥೆಗಳವರು ಅಧಿಕೃತವಾಗಿ ಹಣಕಾಸು ವ್ಯವಹಾರ ಮಾಡುತ್ತಾರೆ ಎಂಬುದು ಇಲ್ಲಿವರೆಗೆ ಯಾರಿಗೂ ಗೊತ್ತಿಲ್ಲ ಎನ್ನಲಾಗುತ್ತಿದೆ.
ಇಲ್ಲಿನ ಹಣಕಾಸು ಸಂಸ್ಥೆಯಿಂದ ಪಡೆದ ಹಣ ತುಂಬಲಾಗದ ವ್ಯಕ್ತಿಯೊಬ್ಬರ ಜಾತಿ ನಿಂದನೆ ಮಾಡಲಾಗಿದ್ದು ಅದನ್ನು ಸಮರ್ಥಿಸಿಕೊಂಡು ಮಹಿಳಾ ಅಧಿಕಾರಿಯೊಬ್ಬರು ಮಾತನಾಡಿದ ವಿಡಿಯೋ ವೈರಲ್ ಆಗಿದೆ.
ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ತಳವಾಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾಜ್ಯ ಸರ್ಕಾರದ ಕಾಯ್ದೆ ಪ್ರಕಾರ ಯಾರಿಗೂ ಸಾಲ ವಸೂಲಾತಿಗಾಗಿ ತೊಂದರೆ ಕೊಡುವಂತಿಲ್ಲ. ಆದರೆ ಈ ಪ್ರಕರಣದಲ್ಲಿ ಸಾಲ ನೀಡದ ವ್ಯಕ್ತಿಗೆ ತೊಂದರೆ ಕೊಟ್ಟಿದ್ದಲ್ಲದೆ ಜಾತಿ ನಿಂದನೆಯನ್ನೂ ಮಾಡಲಾಗಿದೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರ ತವರೂರಲ್ಲಿಯೇ ದಲಿತ ಕುಟುಂಬಕ್ಕೆ ಹೊಲೆಯ ಎಂದು ಅವಮಾನಿಸಿದ ಘಟನೆ ನಡೆದಿದ್ದು ಜಿಲ್ಲಾಡಳಿತ ಈ ಪ್ರಕರಣದಲ್ಲಿ ಯಾವ ಕ್ರಮ ಕೈಗೊಳ್ಳುವುದೋ ಕಾದು ನೋಡಬೇಕು.
ವರದಿ : ನಂದಕುಮಾರ ಕರಂಜೆ, ಬೀದರ