ವಿಶ್ವ ರೇಬೀಸ್ ದಿನಾಚರಣೆ
ಕೂಡ್ಲಿಗಿ: ರೇಬೀಸ್ ಕಾಯಿಲೆ ಮಾರಣಾಂತಿಕವಾಗಿದ್ದು, ಸಮಯಕ್ಕೆ ಸರಿಯಾಗಿ ಲಸಿಕೆಯನ್ನು ಹಾಕಿಸಿಕೊಳ್ಳುವುದರ ಮೂಲಕ ಸಾವು ತಡೆಯಬಹುದು ಎಂದು ಟಿಎಚ್ಒ ಡಾ.ಎಸ್.ಪಿ.ಪ್ರದೀಪ್ ಕುಮಾರ್ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶನಿವಾರ ತಾಲೂಕು ಸಾರ್ವಜನಿಕ ಆಸ್ಪತ್ರೆ ವತಿಯಿಂದ ಏರ್ಪಡಿಸಿದ್ದ ವಿಶ್ವ ರೇಬೀಸ್ ದಿನಾಚರಣೆ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೇಬೀಸ್ ರೋಗವು ನಾಯಿ, ನರಿ, ತೋಳ, ಕರಡಿ, ಬೆಕ್ಕು ಕಡಿತದಿಂದ ಅವುಗಳ ಬಾಯಲ್ಲಿನ ಲಾಲಾರಸ ದಿಂದ ಈ ವೈರಸ್ ಉತ್ಪತ್ತಿಯಾಗುತ್ತದೆ. ಈ ಪ್ರಾಣಿಗಳು ಕಡಿತ ಹೊಂದಿರುವ ವ್ಯಕ್ತಿ ತಕ್ಷಣ ಆ ಗಾಯವನ್ನು ಸ್ವಚ್ಚ ನೀರಿನಿಂದ 15 ನಿಮಿಷ ತೊಳೆಯಬೇಕು. ನಂತರ ಸಾರ್ವಜನಿಕ ಆಸ್ಪತ್ರೆಗೆ ಧಾವಿಸಿ ಲಸಿಕೆ ಪಡೆಯಬೇಕು. ಯಾವುದೇ ಕಾರಣಕ್ಕೂ ಅಲಕ್ಷ್ಯ ಮಾಡಬೇಡಿ. ಈ ವೈರಸ್ ಪ್ರಾಣಿಗಳು ಕಚ್ಚಿದ ನಂತರ ಮಾಂಸಖಂಡಗಳ ಮೂಲಕ ದ್ವಿಗುಣವಾಗುತ್ತ,ಅತೀ ಬೇಗವಾಗಿ ಮನುಷ್ಯನ ದೇಹದಲ್ಲಿ ಬೆಳೆಯಲು ಪ್ರಾರಂಭಿಸುತ್ತವೆ.ನಂತರ ಆ ವೈರಸ್ ನರವ್ಯೂಹಕ್ಕೆ ಸೇರಿ ಹಾನಿಮಾಡಿ ದೇಹದ ಮೆದಳು, ಹೃದಯ ಸೇರಿದಂತೆ ಇತರೆ ಭಾಗಗಳಲ್ಲಿ ಸೇರಿ ಮನುಷ್ಯನ ಜೀವವನ್ನೆ ತೆಗೆಯುತ್ತದೆ. ಆದ್ದರಿಂದ ಈ ರೋಗದ ಬಗ್ಗೆ ಅಸಡ್ಡೆ ಮಾಡದೇ ಸಾರ್ವಜನಿಕರು ಪ್ರಾಣಿಗಳು ಕಚ್ಚಿದ 24 ಗಂಟೆಯ ಒಳಗಡೆ ಲಸಿಕೆ ಪಡೆದರೆ ಈ ಮಾರಣಾಂತಿಕ ಖಾಯಿಲೆಯನ್ನು ತಡೆಗಟ್ಟಬಹುದು ಎಂದು ತಿಳಿಸಿದರು. ಸಾಕು ಪ್ರಾಣಿಗಳಾದ ಬೆಕ್ಕು, ನಾಯಿಗಳು ಮನೆಯಲ್ಲಿನ ಜನರಿಗೆ ಕಚ್ಚಿದರೆ ಅಥವ ಪರಚಿದರೂ ಸಹ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಪಡೆಯಲು ತಿಳಿಸಿದರು.
ಪಪಂ ಸದಸ್ಯೆ ಲಕ್ಷ್ಮೀದೇವಿ ಬಸವರಾಜ, ಸ್ತ್ರೀ ರೋಗ ತಜ್ಞ ಡಾ.ನಾಗರಾಜ, ಐಸಿಟಿಸಿ ಆಪ್ತ ಸಮಾಲೋಚಕರಾದ ಕೆ.ಪ್ರಶಾಂತ ಕುಮಾರ್, ನಾಗರತ್ನ ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದ್ದರು.