spot_img
spot_img

ನಾನು ಹೋದರೆ ಸ್ವರ್ಗ, ನಾನು ಹೆಚ್ಚಾದರೆ ನರಕ

Must Read

- Advertisement -

ಅಕ್ಷರಸ್ಥರು, ಅನಕ್ಷರಸ್ಥರು, ಜ್ಞಾನಿಗಳು ಅಜ್ಞಾನಿಗಳು,ದೇವರು ಅಸುರರು, ವಿದ್ಯಾವಂತರು ಅವಿದ್ಯಾವಂತರು, ದೇಶಭಕ್ತರು, ದೇವರಭಕ್ತರು… ಹೀಗೇ ಎಲ್ಲರಲ್ಲಿಯೂ ಇದ್ದು ನಡೆಸುವ ಪರಾಶಕ್ತಿ ಪರಮಾತ್ಮರ ಅರ್ಥ ಮಾಡಿಕೊಳ್ಳುವ ಜ್ಞಾನ ಮಾನವನಿಗಷ್ಟೆ ಇದೆ.

ಆರನೇ ಅರಿವನ್ನು ಹೆಚ್ಚಿಸಿಕೊಳ್ಳುವ ವಿಶೇಷವಾದ ಜ್ಞಾನ ಮಾನವನಿಗಿದೆ ಎನ್ನುವ ಸತ್ಯ ಎಲ್ಲರೂ ಒಪ್ಪುತ್ತಾರೆ. ಅದ್ವೈತ ತತ್ವದ ಪ್ರಕಾರ ಎಲ್ಲವೂ ಒಂದೇ ಶಕ್ತಿಯ ಪ್ರತಿರೂಪಗಳಷ್ಟೆ. ಇಡೀ ಬ್ರಹ್ಮಾಂಡ ಆವರಿಸಿರುವ ಈ ಶಕ್ತಿಯ ಸಣ್ಣ ಬಿಂದು ಮಾನವನೊಳಗಿದೆ.

ಹೀಗಿರುವಾಗ ದೊಡ್ಡವರು ಯಾರು? ಅದನ್ನರಿತು ಸದ್ಬಳಕೆ ಮಾಡಿಕೊಳ್ಳುವವರನ್ನು ಮಹಾತ್ಮರೆಂದರು. ದೇಶದ ಪ್ರಶ್ನೆ ಬಂದಾಗ ದೇಶದೊಳಗೆ ಇರುವ ಎಲ್ಲಾ ದೇಶದ ಶಕ್ತಿಯನ್ನು ಬೆಳೆಸುವಂತಾಗಲು ಅದರ ಮೂಲ ಜ್ಞಾನವನ್ನು ಬೆಳೆಸುವಂತಿರಬೇಕು. ಯಾವಾಗ ಇದಕ್ಕೆ ವಿರುದ್ದ ನಿಂತು ದೇಶದೊಳಗೆ ರಾಜಕೀಯ ನಡೆಸುವರೋ ಆಗಲೇ  ದೇಶಭ್ರಷ್ಟರು, ದೇಶದ್ರೋಹಿಗಳು ಹೆಚ್ಚಾಗೋದು.

- Advertisement -

ಒಂದು ಸಂಸಾರದ ಪ್ರತಿಸದಸ್ಯರುಗಳು ಅವರ ಮೂಲ ಗುರು ಹಿರಿಯರು ದೇವರನ್ನು ಒಟ್ಟಾಗಿ ನಿಂತು ಆರಾಧಿಸುವರೋ ಅಲ್ಲಿ ಹೊರಗಿನ ಯಾವ ಶತ್ರು ಹತ್ತಿರ ಬರಲಾಗದು.ಇದಕ್ಕೆ ವಿರುದ್ದ  ನಿಂತು ಹೊರ ನಡೆದರೆ ಒಗ್ಗಟ್ಟು ಮರೆಯಾಗಿ ಬಿಕ್ಕಟ್ಟು ಹೆಚ್ಚಾಗಿ  ಮಧ್ಯವರ್ತಿಗಳು ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡು ಆಳುತ್ತಾರೆ.

ಇದನ್ನು ತಿಳಿಯಲು ಯಾವ ಕಥೆ,ಪುರಾಣ,ಇತಿಹಾಸ ಓದುವ ಅಗತ್ಯ ಇಂದು ನಮಗಿಲ್ಲ. ಕಾರಣ ಹಿಂದೆಯೂ ಹೀಗೇ  ಮಧ್ಯವರ್ತಿಗಳು ದೇಶವನ್ನಷ್ಟೇ ಅಲ್ಲ ವಿಶ್ವವನ್ನು ಆಳಲು ಹೋಗಿ  ಈಗಲೂ ಮನುಕುಲಕ್ಕೆ ತಾನೆಲ್ಲಿ ತಪ್ಪಿದ್ದೇನೆನ್ನುವ ಅರಿವು  ಮೂಡದೆ ಸಮಸ್ಯೆಗಳನ್ನು, ಸಾಲವನ್ನು ಹೊತ್ತುಕೊಂಡು ಭೂಮಿಗೆ ಭಾರವಾಗಿ ಬದುಕುವಂತಾಗಿದೆ.

ಇದಕ್ಕೆ ಪರಿಹಾರ ಪ್ರತಿಯೊಬ್ಬರೊಳಗಿದೆ.ಹೊರಗಿಲ್ಲವೆನ್ನುವ ಸತ್ಯಜ್ಞಾನದಿಂದ ಪರಿಹಾರವೂ ಒಳಗಿದ್ದು ಕಾಣಬೇಕು. ವ್ಯವಹಾರದ ಜಗತ್ತಿನಲ್ಲಿ ಹಣದ ಲಾಭಕ್ಕಾಗಿ ಜ್ಞಾನದ ನಷ್ಟ ಹೆಚ್ಚಾಗಿದೆ. ಧರ್ಮ ರಕ್ಷಣೆ ಹಣದಿಂದ ಆಗುವುದಾಗಿದ್ದರೆ ಈಗಿರುವ ಸಂಪತ್ತಿನಿಂದ ಸಾಧ್ಯವಿತ್ತು ಎಷ್ಟೇ ಹಣ  ಪಡೆದರೂ, ಕೊಟ್ಟರೂ ಋಣಮುಕ್ತರಾಗಲು ಸತ್ಯವೇ ದೇವರಾಗಬೇಕು.

- Advertisement -

ಸತ್ಯ ಬಿಟ್ಟು ಮುಂದೆ ನಡೆದು ಧರ್ಮದಿಂದ ಕಷ್ಟ ನಷ್ಟಗಳೇ ಬೆಳೆಯುತ್ತಿರುವಾಗ ಸತ್ಯದ ಕಡೆಗೆ ಮನಸ್ಸು ಹೊರಳಿಸಿದರೆ ಸಮಸ್ಯೆಗೆ ಪರಿಹಾರವಿದೆ. ನಾನು ಹೋದರೆ ಸ್ವರ್ಗ, ನಾನು ಹೆಚ್ಚಾದರೆ ನರಕ. ಪರರೆಲ್ಲಾ ನಮ್ಮವರಾದರೆ ಸ್ವರ್ಗ, ನಮ್ಮವರೆ ಪರರಾದರೆ ನರಕ. ನಮ್ಮತನವನ್ನು ಉಳಿಸಿಕೊಂಡು ಪರರನ್ನು ಗೌರವಿಸುವುದು ಧರ್ಮ. ನಮ್ಮತನವನ್ನು, ನಮ್ಮವರನ್ನು ದ್ವೇಷಿಸಿ ಪರರನ್ನು ಪ್ರೀತಿಸೋದು ಅಧರ್ಮ.

ಹಾಗಾದರೆ ನಾವ್ಯಾರು? ಪರಕೀಯರೆ? ಭಾರತ ದೇಶದ ಆತ್ಮಶಕ್ತಿ ಅದರೊಳಗಿರುವ ಪ್ರಜಾಶಕ್ತಿಯ ಮೇಲಿರುತ್ತದೆ.ಪ್ರಜೆಗಳ ಆಂತರಿಕ ಜ್ಞಾನಕ್ಕೆ ತಕ್ಕಂತೆ ಶಿಕ್ಷಣ ನೀಡುತ್ತಿದ್ದ ಹಿಂದಿನ ರಾಜಕಾಲದಿಂದ ಬಹಳ ದೂರ ಬಂದಿದ್ದರೂ ಅವರ ಇತಿಹಾಸ ಪುರಾಣ ಕಥೆಗಳು ಇಂದಿಗೂ ಹಸಿರಾಗಿರುವುದು ಜ್ಞಾನದ  ಶಾಶ್ವತತೆಯನ್ನು ಎತ್ತಿ ಹಿಡಿಯುತ್ತದೆ.

ಜ್ಞಾನ ವಿಜ್ಞಾನದ ನಡುವಿರುವ ಸಾಮಾನ್ಯಮಾನವನಿಗೆ ಸಾಮಾನ್ಯಜ್ಞಾನ ಅತಿಮುಖ್ಯ. ಮೊದಲು ಮಾನವನಾಗು ಎಂದಿರುವ ಜ್ಞಾನಿಗಳ ಪ್ರಕಾರ ಹೇಳೋದಾದರೆ ಮಗು  ಹುಟ್ಟುವಾಗಲೇ ತನ್ನದೇ ಆದ ಜ್ಞಾನಶಕ್ತಿ ಪಡೆದಿದ್ದು ಅದನ್ನು  ಪೋಷಕರಾದವರು ಗುರುತಿಸಿ ಸರಿಯಾದ ಸಂಸ್ಕಾರದಿಂದ, ಶಿಕ್ಷಣದಿಂದ ಮನೆಯಿಂದಲೇ ಬೆಳೆಸುತ್ತಾ ಭೌತಿಕ ಜಗತ್ತಿನಲ್ಲಿ ಮಹಾತ್ಮನಾಗಲು ಸಹಕಾರ ದೊರೆತಾಗಲೇ ಭಾರತ ಮಹಾತ್ಮರ ದೇಶವಾಗಲು ಸಾಧ್ಯ.

ಮಹಾತ್ಮರೆಂದರೆ ಆತ್ಮಾನುಸಾರ, ಸತ್ಯ ಧರ್ಮದ ಅರಿವಲ್ಲಿದ್ದು ಸಂಸಾರದ ಜೊತೆಗೆ ಸಮಾಜದ ರೀತಿ ನೀತಿ ಸಂಸ್ಕೃತಿ ಯನ್ನು ಬೆಳೆಸಿ ಎಲ್ಲರೊಳಗೊಂದಾಗಿ ಇದ್ದೂ ಇಲ್ಲದಂತಿರೋದು. ‘ಸ್ಥಿತಪ್ರಜ್ಞ’ ಪದಕ್ಕೆ ಈಗ ನಾವು ಸರಳವಾಗಿ ಅರ್ಥ ಹುಡುಕಿದರೆ ಇಂದಿನ ಸ್ಥಿತಿಗೆ ಕಾರಣ ಮತ್ತು ಪರಿಹಾರವನ್ನೂ ನಮ್ಮಲ್ಲಿ ಕಾಣಬಹುದು.

ಸ್ಥಿತಿಗೆ’ ನಾನು’ಎಷ್ಟು ಕಾರಣವೆನ್ನುವ‌ ಪ್ರಶ್ನೆ ಹಾಕಿಕೊಳ್ಳಲು ಸಮಯವಿಲ್ಲದೆ ಭೌತಿಕ ಸತ್ಯದ ಹಿಂದೆ ನಡೆದ ಜೀವಕ್ಕೆ ಒಳಗಿದ್ದ ಸತ್ಯ ಗಮನಕ್ಕೆ ಬರದೆ ಹೊರ ನಡೆದು ದಾರಿ ತಪ್ಪಿ ಹಿಂದಿರುಗಲು  ನಮ್ಮಲ್ಲಿ ಅಡಗಿರುವ ‘ನಾನು’ ಅಡ್ಡನಿಂತರೆ ತತ್ವಜ್ಞಾನ ಕ್ಕೆ  ಬೆಲೆಸಿಗದೆ ತಂತ್ರಜ್ಞಾನ ಮಾನವನನ್ನು ಆಳುತ್ತದೆ. ಶಿಕ್ಷಣವೆಂದರೆ ಮಕ್ಕಳ ಒಳಗಿರುವ ಜ್ಞಾನವನ್ನು ತಿಳಿದು ಬೆಳೆಸುವುದಾಗಿತ್ತು. ಈಗ ಇದಕ್ಕೆ ವಿರುದ್ದದ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ನಾವೇ ಒತ್ತಾಯದಿಂದ ತುಂಬಿ ಒಳಗಿನ ಸತ್ಯ, ಸತ್ವವನ್ನು ಬೆಳೆಸದೆ ನಮ್ಮಿಂದ ದೂರ ಹೋದ ಮಕ್ಕಳ ಮನಸ್ಸನ್ನು ಹಿಡಿಯುವ ಪ್ರಯತ್ನದಲ್ಲಿ ಸೋತರೆ ಇದಕ್ಕೆ ನಾನೇ ಕಾರಣ. ಹೀಗಾಗಿ ಈಗಲಾದರೂ ನಾವು ಭಾರತೀಯ ಸಾಮಾನ್ಯಪ್ರಜೆಗಳಾಗಿ ಸತ್ಯವನ್ನರಿತು ನಮ್ಮ ಸುತ್ತಮುತ್ತಲಿನ ಉತ್ತಮ ವಿಚಾರವನ್ನು ಪಡೆದು ಬೆಳೆಸಿ, ಕಲಿಸುವ ಕಾರ್ಯ ಪೋಷಕರಾದವರು ಮನೆಯ ಒಳಗಿದ್ದೇ ಮಾಡುವುದು ಪ್ರಜಾಧರ್ಮ.

ಅತಿಯಾಗಿ ಪುರಾಣ, ಇತಿಹಾಸದಿಂದ ವಾಸ್ತವ ಸತ್ಯ ಅರ್ಥ ಆಗೋದಿಲ್ಲ. ಹಾಗೆ ಅತಿಯಾದ ಭೌತಿಕ ವಿಜ್ಞಾನ ಭೂಮಿಮೇಲಿರುವ ಸತ್ಯ ತಿಳಿಸುವುದಿಲ್ಲ. ಇವೆರಡರ ಮಧ್ಯೆ ಇರುವ ಮಾನವನಿಗೆ ಸಾಮಾನ್ಯಜ್ಞಾನ ಅಗತ್ಯ. ನಾವೆಲ್ಲರೂ ಪರಮಾತ್ಮನ ಬಿಂದುಗಳಷ್ಟೆ ಎನ್ನುವ ಆಧ್ಯಾತ್ಮ,  ನಾವೆಲ್ಲರೂ ಮಾನವರೆನ್ನುವ ಸಾಮಾನ್ಯಸತ್ಯ ಅರ್ಥ ಮಾಡಿಕೊಳ್ಳುತ್ತಾ ನಮ್ಮ  ನಮ್ಮ ಹಿಂದಿನ ಗುರು ಹಿರಿಯರು ನಡೆದು ಹೋದ ದಾರಿಯನ್ನು ಸ್ವಚ್ಚಮಾಡಿಕೊಂಡರೆ ಇದ್ದಲ್ಲಿಯೇ ಪರಮಾತ್ಮನ ದರ್ಶನ. ಇದನ್ನು ಮಕ್ಕಳಿಗೆ ತಿಳಿಸಿ ಹೇಳುವ ಶಿಕ್ಷಣವನ್ನು ಇಂದು ಕೊಡಬೇಕಾದರೆ ನಾವು ಬದಲಾಗಬೇಕಿದೆ.

ಹಿಂದೂ ಧರ್ಮ ಎಂದರೆ ನಮ್ಮ ಹಿಂದಿನವರ ಧರ್ಮಕಾರ್ಯವಾಗುತ್ತದೆ. ಅದನ್ನು ಹಿಂದಿನ ಶಿಕ್ಷಣದ ಮೂಲಕವೇ ತಿಳಿದು ಬೆಳೆಸಬೇಕಿತ್ತು. ರಾಜಕೀಯ ಎಂದರೆ ಇತರರನ್ನು ಆಳುವುದು.ರಾಜಯೋಗ ಎಂದರೆ ನಮ್ಮನ್ನ ನಾವು ಆಳಿಕೊಳ್ಳುವುದು.

ಇದಕ್ಕೆ ನಮ್ಮೊಳಗಿರುವ ಸಾಮಾನ್ಯ ಜ್ಞಾನಕ್ಕೆ ತಕ್ಕಂತೆ ಶಿಕ್ಷಣವನ್ನು ವಿಶೇಷವಾಗಿ ನೀಡಿದರೆ ವಿಶೇಷಜ್ಞಾನವಾಗುತ್ತದೆ.ದೇಶೀಯ ಶಿಕ್ಷಣ ದೇಶವನ್ನು ಸುಭದ್ರಗೊಳಿಸುತ್ತದೆ. ವಿದೇಶಿ ಶಿಕ್ಷಣ ವಿದೇಶವನ್ನು ಸುಭದ್ರಗೊಳಿಸುತ್ತದೆ. ಇದೊಂದು ಸಾಮಾನ್ಯಜ್ಞಾನ.

ಎಲ್ಲಿಯವರೆಗೆ ನಮ್ಮೊಳಗಿರುವ ಸಾಮಾನ್ಯಜ್ಞಾನ ಅರ್ಥ ಆಗದೆ ಭೌತಿಕ ವಿಜ್ಞಾನ ಬೆಳೆಯುವುದೋ ಅಲ್ಲಿಯವರೆಗೆ ಆಧ್ಯಾತ್ಮ ದ ಪದಕ್ಕೆ ಅರ್ಥ ಕಾಣದು. ಆಧ್ಯಾತ್ಮ ಎಂದರೆ ಆದಿ ಆತ್ಮವಾಗುತ್ತದೆ. ಆತ್ಮನ ಬಗ್ಗೆ ತಿಳಿಯುವುದೆ ಆಧ್ಯಾತ್ಮ. ಆತ್ಮ ಒಳಗಿದೆ. ಆದಿ ಆತ್ಮವೆ ನಮ್ಮ ಜನ್ಮ ಭೂಮಿ, ಜನ್ಮಕೊಟ್ಟ ತಾಯಿ ತಂದೆ, ಮೂಲ ಧರ್ಮ ಕರ್ಮ,ಶಿಕ್ಷಣವಷ್ಟೆ. ಹೀಗಾಗಿ ಪುಸ್ತಕದ ವಿಚಾರ ಮಸ್ತಕದೊಳಗೆ ಹಾಕಿಕೊಂಡು ನಿಧಾನವಾಗಿ ಅದನ್ನು ತಮ್ಮ ಅನುಭವದಿಂದ ಸತ್ಯ ತಿಳಿಯುವುದಕ್ಕೆ ನಮಗೆ ಸ್ವಾತಂತ್ರ್ಯ ವಿತ್ತು. ಮಕ್ಕಳಿಗೂ ಅವರದೇ ಆದ ವಿಶೇಷ ಆಸಕ್ತಿ, ಪ್ರತಿಭೆ,ಜ್ಞಾನ ಹುಟ್ಟುವಾಗಲೇ ಇರೋವಾಗ ಅದನ್ನು ಗುರುತಿಸುವ ಕೆಲಸ ನಮ್ಮ ಭಾರತೀಯ ಶಿಕ್ಷಣ ಮಾಡಿದರೆ, ಎಲ್ಲರಲ್ಲಿಯೂ ಅಡಗಿರುವ ಆ ಮಹಾತ್ಮರ ದರ್ಶನ ವಾಗುತ್ತದೆ. “ಅಣುರೇಣುತೃಣಕಾಷ್ಟ ಪರಿಪೂರ್ಣ ಗೋವಿಂದ” ಎಂದರೆ ಮಾನವನೊಳಗೆ ಒಂದು ಅಣು ಗಾತ್ರದಲ್ಲಿ ಅಡಗಿರುವ ಪರಮಾತ್ಮನು ಎಲ್ಲೆಡೆಯೂ ಆವರಿಸಿರುವಾಗ ಒಳಗಿರುವ ಅಣುವನ್ನು ಅರ್ಥ ಮಾಡಿಕೊಳ್ಳಲು ಒಳಗಿನ ಜ್ಞಾನ ಬೆಳೆಸಬೇಕು.

ಅದಕ್ಕೆ ವಿರುದ್ದದ ಹೊರಗಿನ ಜ್ಞಾನ ಬೆಳೆದಂತೆಲ್ಲಾ ದೇಹ ಕೇವಲ ಭೌತಿಕ ವಿಜ್ಞಾನದ ಹಿಂದೆ ನಡೆದು ಮೂಲ ಶಕ್ತಿ ಹಿಂದುಳಿಯುತ್ತದೆ. ಹಿಂದುಳಿದವರಿಂದ ದೇಶೋದ್ದಾರ ಅಸಾಧ್ಯ. ನಮ್ಮ ಉದ್ಧಾರಕ್ಕಾಗಿ ನಮ್ಮ ಹಿಂದಿನವರ ಸತ್ಯ ಸತ್ವಯುತ  ಶಿಕ್ಷಣದ ಕಡೆ ನಡೆಯುವುದು ಅಗತ್ಯವಿದೆ. ಜ್ಞಾನದ ನಂತರವೇ ವಿಜ್ಞಾನ. ಇದಕ್ಕೆ ಬೇಕಿದೆ ಸಾಮಾನ್ಯ ಜ್ಞಾನ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

Shahid Kapoor Birthday: ಈ ಬಾಲಿವುಡ್ ಹೀರೊ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಶಾಹಿದ್ ಕಪೂರ್ ಬಾಲಿವುಡ್ ನ ಬಹು ಬೇಡಿಕೆಯ ನಟರಲ್ಲಿ ಒಬ್ಬರು. ಇಂದು (ಫೆಬ್ರವರಿ 25) ಅವರ ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಎರಡು ದಶಕಗಳಿಂದ...
- Advertisement -

More Articles Like This

- Advertisement -
error: Content is protected !!
Join WhatsApp Group