ಮೂಡಲಗಿ – ಒಂದರಿಂದ ನಾಲ್ಕನೇ ತರಗತಿಯವರೆಗೆ ಕನ್ನಡ ಕಲಿಸದಿದ್ದರೆ ಕನ್ನಡ ಹೇಗೆ ಉಳಿದೀತು ? ಅದಕ್ಕೆ ರಾಜ್ಯ ಸರ್ಕಾರ ಮನಸು ಮಾಡಬೇಕು. ಕನ್ನಡ ಕಡ್ಡಾಯ ಮಾಡಲಿಕ್ಕೆ ಹೈಕೋರ್ಟ್, ಸುಪ್ರೀಮ್ ಕೋರ್ಟಿನಲ್ಲಿ ಕೂಡ ತಡೆ ಉಂಟಾಗಿದೆ. ಈ ನಿರ್ಧಾರಕ್ಕೆ ಹಿನ್ನಡೆಯಾಗಿದೆ ಆದರೂ ಸರ್ಕಾರ ಮನಸು ಮಾಡಿ ಧೈರ್ಯ ಮಾಡಿ ಕನ್ನಡ ಕಡ್ಡಾಯ ಮಾಡಬೇಕು ಎಂದು ಪ್ರೊ. ಚಂದ್ರಶೇಖರ ಅಕ್ಕಿ ಹೇಳಿದರು.
ಮೂಡಲಗಿಯ ಆರ್ ಡಿ ಎಸ್ ಕಾಲೇಜಿನಲ್ಲಿ ನಡೆದ ಬೆಳಗಾವಿ ಜಿಲ್ಲಾ ೧೬ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕದ ಏಕೀಕರಣವಾಗಿ ಇಷ್ಟೊಂದು ವರ್ಷಗಳ ನಂತರವೂ ನಾವು ಕನ್ನಡ ಉಳಿಸಿ ಎಂಬ ಹೋರಾಟ ಮಾಡುತ್ತಿರುವುದು ವಿಷಾದನೀಯ ಆದರೆ ಕನ್ನಡವನ್ನು ನಾವು ಕಡ್ಡಾಯವಾಗಿ ನಮ್ಮ ಮಕ್ಕಳಿಗೆ ಕಲಿಸದಿದ್ದರೆ ಭಾಷೆ, ಬಾಂಧವ್ಯ, ಕನ್ನಡ ಸಂಸ್ಕೃತಿ ಅಳಿಸಿ ಹೋಗುತ್ತದೆ ಎಂದರು.
ಸರ್ಕಾರ ಮನಸು ಮಾಡಬೇಕು. ಸರೋಜಿನಿ ಮಹಿಷಿ ಆಯೋಗ, ಗದ್ದಿಗೌಡರ ಆಯೋಗ ಮುಂತಾದ ಆಯೋಗಗಳು ಕನ್ನಡಿಗರಿಗೆ ಉದ್ಯೋಗ, ಕನ್ನಡ ಭಾಷೆಗೆ ಪ್ರಾಶಸ್ತ್ಯ ಸೇರಿದಂತೆ ಕನ್ನಡಕ್ಕೆ ಮಹತ್ವಕೊಟ್ಟು ಸಲ್ಲಿಸಿದ ವರದಿಗಳೆಲ್ಲ ಮೂಲೆ ಸೇರಿವೆ. ಅವುಗಳನ್ನು ಜಾರಿಗೆ ತರುವ ಇಚ್ಛಾಶಕ್ತಿ ಸರ್ಕಾರಗಳಿಗೆ ಇಲ್ಲವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ವೇದಿಕೆಯ ಮೇಲೆ ಉಪಸ್ಥಿತರಿದ್ದ ಖ್ಯಾತ ಸಾಹಿತಿ ಡಾ. ಲೋಕಾಪೂರ ಅವರು ಮಾತನಾಡಿ, ಕನ್ನಡವನ್ನು ಯಾವ ರೀತಿ ಉಳಿಸಬೇಕೆಂಬುದೇ ದೊಡ್ಡ ಪ್ರಶ್ನೆಯಾಗಿದೆ. ಯಾಕೆಂದರೆ, ಇಂದಿನ ಪೀಳಿಗೆಗೆ ನಾವು ದಿನನಿತ್ಯ ಬಳಸುವ ವಸ್ತುಗಳ, ಕೃಷಿ ವಸ್ತುಗಳ ಕನ್ನಡ ಹೆಸರುಗಳೇ ಗೊತ್ತಿಲ್ಲ. ಎಲ್ಲದರಲ್ಲೂ ಇಂಗ್ಲೀಷ್ ಹೊಕ್ಕಿದೆ ಹೀಗಾದರೆ ಕನ್ನಡ ಹೇಗೆ ಉಳಿದೀತು ಎಂದರು.
ಅತಿಥಿಯಾಗಿ ಆಗಮಿಸಿದ್ದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಸಾಹಿತ್ಯದ ಬೆಳವಣಿಗೆಯಿಂದ ಕನ್ನಡ ಭಾಷೆ ಉಳಿಯುತ್ತದೆ. ಇಂಥ ಸಮ್ಮೇಳನಗಳು ರಾಜ್ಯವ್ಯಾಪಿ ಮೇಲಿಂದ ಮೇಲೆ ನಡೆಯಬೇಕು. ಸಾಹಿತ್ಯ ಸಮ್ಮೇಳನಗಳಿಂದ ರಾಜಕಾರಣ ದೂರವಿರಬೇಕು. ಕನ್ನಡ ಭಾಷಾ ಬೆಳವಣಿಗೆಗೆ ತಾವೂ ಕೂಡ ಎಲ್ಲ ರೀತಿಯ ಸಹಾಯ ಸಹಕಾರ ನೀಡಲು ಸಿದ್ಧ ಎಂದು ಹೇಳಿದರು.
ಸಮಾರಂಭದ ಸಾನ್ನಿಧ್ಯವನ್ನು ಶ್ರೀ ಶಿವಬೋಧರಂಗ ಮಠದ ಶ್ರೀ ಅಮೃತಬೋಧ ಸ್ವಾಮೀಜಿ ಹಾಗೂ ಶಿವಾಪೂರದ ಅಡವಿಸಿದ್ದೇಶ್ವರ ಸ್ವಾಮಿಗಳು ವಹಿಸಿದ್ದರು.
ಕನ್ನಡ ಸಾಹಿತ್ಯ ಸಮ್ಮೇಳನ ಜಾತ್ರೆಯಲ್ಲಿ ಕಲಾ ಪ್ರದರ್ಶನ, ವಿಜ್ಞಾನ ಪ್ರದರ್ಶನ ಏರ್ಪಡಿಸಲಾಗಿತ್ತು. ಪುಸ್ತಕ ಮಳಿಗೆಗಳು ಓದುಗರನ್ನು ಆಕರ್ಷಿಸಿದವು.
ಶ್ರೀಪಾದ ಬೋಧ ದಾಸೋಹ ವೇದಿಕೆಯಲ್ಲಿ ಭೋಜನ ಏರ್ಪಡಿಸಲಾಗಿತ್ತು. ಸಮ್ಮೇಳನದ ಹಿನ್ನೆಲೆಯಲ್ಲಿ ಕೈಗೊಂಡಿದ್ದ ರೊಟ್ಟಿ ಜಾತ್ರೆಯ ಕಡಕ್ ರೊಟ್ಟಿ, ಝುನಕಾ, ಗೋದಿ ಹುಗ್ಗಿಯನ್ನು ಸಾಹಿತ್ಯಾಸಕ್ತರು ಸವಿದರು. ಎರಡನೇ ದಿನದ ಕಾರ್ಯಕ್ರಮದಲ್ಲಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.