ಬೆಳಗಾವಿ – ಬೆಳಗಾವಿ ತಾಲ್ಲೂಕಿನ ಕಡೋಲಿ ಗ್ರಾಮದ ಗ್ರಾಮ ಪಂಚಾಯಿತಿಯ ನರೇಗಾ ಯೋಜನೆಯ ಅನುದಾನದಡಿಯಲ್ಲಿ ಕಡೋಲಿ ಗ್ರಾಮದ ಪ್ರಾಥಮಿಕ ಶಾಲೆಗಳ ಪ್ರಾಂಗಣದಲ್ಲಿ ನೆಲಹಾಸಿನ ಪೇವರ್ಸ್ ಹಾಕುವಿಕೆ, ಶಾಲಾ ಆವರಣ ಗೋಡೆ ನಿರ್ಮಾಣ, ಕ್ರೀಡಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ವಾಲಿಬಾಲ್, ಕಬಡ್ಡಿ ಮತ್ತು ಬಾಸ್ಕೆಟ್ ಬಾಲ್ ಸಂಬಂಧಿಸಿದಂತೆ ಇತರ ಅಂಕಣಗಳ ನಿರ್ಮಾಣ ಮುಂತಾದ ಕಾರ್ಯಗಳಿಗೆ ಪೂಜೆ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕಡೋಲಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಾದ ವಾಸುದೇವ ಆಯಕರೇತ ಅವರು ಮಾತನಾಡಿ, ನರೇಗಾ ಯೋಜನೆ ಅಡಿಯಲ್ಲಿ ಬೆಳಗಾವಿ ತಾಲೂಕಿನಲ್ಲಿ ಕಡೋಲಿ ಪಂಚಾಯಿತಿ ವತಿಯಿಂದ ಜಾಫರವಾಡಿ, ಗುಂಜೇನಟ್ಟಿ,ದೇವಗಿರಿ ಗ್ರಾಮಗಳಲ್ಲಿ ಶಾಲೆಗಳ ಆಟದ ಬಯಲುಗಳ ಲೆವೆಲಿಂಗ್, ಪೆವರ್ಸ್ ಅಳವಡಿಸುವಿಕೆ, ಆವರಣ ಗೋಡೆ ನಿರ್ಮಾಣ ಸೇರಿದಂತೆ ಅನೇಕ ಕಾರ್ಯಗಳು ಚಾಲನೆಯಲ್ಲಿವೆ ಅದರ ಮುಂದುವರೆದ ಭಾಗವಾಗಿ ಕಡೋಲಿ ಗ್ರಾಮದ ಪ್ರಾಥಮಿಕ ಶಾಲೆಗಳ ಪ್ರಾಂಗಣದಲ್ಲಿ ಸಹ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮಸ್ಥರು ಮಕ್ಕಳು ಸೇರಿದಂತೆ ಎಲ್ಲರೂ ಸರ್ಕಾರಿ ಸೌಲಭ್ಯಗಳ ಪ್ರಯೋಜನವನ್ನು ಪಡೆದು ಅವುಗಳನ್ನು ವ್ಯವಸ್ಥಿತವಾಗಿ ಸದ್ಬಳಕೆ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ಪಾಟೀಲ್, ಉಪಾಧ್ಯಕ್ಷೆ ಪ್ರೇಮಾ ನರೋಟಿ, ಸದಸ್ಯರುಗಳಾದ ಸಿದ್ದಪ್ಪ ಶಹಾಪುರಕರ , ರಾಜು ಮಾಯಣ್ಣ, ವೈಶಾಲಿ ಕಲ್ಲಪ್ಪ ಬಿಚಗತ್ತಿ, ಗುತ್ತಿಗೆದಾರರಾದ ರಾಹುಲ್ ಶಹಪುರಕರ, ಕಲ್ಲಪ್ಪ ಬಿಚಗತ್ತಿ ಸೇರಿದಂತೆ ಎಲ್ಲಾ ಶಾಲೆಗಳ ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು, ಗ್ರಾಮದ ಹಿರಿಯರು,ಮೂರು ಶಾಲೆಗಳ ಶಿಕ್ಷಕ ಬಳಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.