ಮೂಡಲಗಿ: 75ನೇ ಅಮೃತಮಹೋತ್ಸವ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ತ್ರಿಕೋನ ಕ್ರಿಕೆಟ್ ಟೂರ್ನಿಯಲ್ಲಿ ಮೂಡಲಗಿಯ ಸ್ಟಾರ್ ಕ್ರಿಕೆಟ್ ಕ್ಲಬ್ ತಂಡವು ಚಾಂಪಿಯನ್‍ಷಿಪ್ ಪಡೆದುಕೊಂಡು ಟ್ರೋಪಿಯನ್ನು ತನ್ನದಾಗಿಸಿಕೊಂಡಿತು.
ಹಳ್ಳೂರಿನ ಬಿಸಿಸಿ ತಂಡವು ರನ್ನರ್ ಶಿಪ್ ಪಡೆದುಕೊಂಡಿತು.
ಸರ್ವೋತ್ತಮ ಆಟಗಾರರಾಗಿ ಶಿವು ಹುಬಳಿ, ಅತ್ಯುತ್ತಮ ಸರಣಿ ಆಟಗಾರರಾಗಿ ಬಾಳು ಸಣ್ಣಕ್ಕಿ ಆಯ್ಕೆಯಾಗಿ ವಯಕ್ತಿಕ ಬಹುಮಾನಗಳನ್ನು ಪಡೆದುಕೊಂಡರು.
ಬಹುಮಾನ ಪ್ರಾಯೋಜಕ ಪುರಸಭೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಬಿ. ಢವಳೇಶ್ವರ ವಿಜೇತ ತಂಡಗಳಿಗೆ ಟ್ರೋಪಿಗಳನ್ನು ವಿತರಿಸಿ ಮಾತನಾಡಿ ‘ಕ್ರೀಡೆಗಳು ಯುವಕರಲ್ಲಿ ಸಂಘಟನೆ ಜೊತೆಗೆ ಉತ್ಸಾಹವನ್ನು ಹೆಚ್ಚಿಸುತ್ತವೆ. ಸಂಘ, ಸಂಸ್ಥೆಗಳು ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿ ಬೆಳೆಸಬೇಕು’ ಎಂದರು.
ಪಂಚಮಸಾಲಿ ಸಮಾಜದ ಬೆಳಗಾವಿ ಜಿಲ್ಲಾ ಕಾರ್ಯಾಧ್ಯಕ್ಷ ಎನ್.ಟಿ. ಪಿರೋಜಿ ಬೆಳಿಗ್ಗೆ ಟೂರ್ನಿಯನ್ನು ಉದ್ಘಾಟಿಸಿ ಮಾತನಾಡಿ ಬರುವ ವಾರದಲ್ಲಿ ಏರ್ಪಡಿಸುವ ಕ್ರಿಕೆಟ್ ಟೂರ್ನಿಯ ಬಹುಮಾನ ಪ್ರಾಯೋಜಕತ್ವವನ್ನು ವಹಿಸಿಕೊಳ್ಳುವೆ ಎಂದರು.
ಟೂರ್ನಿಯನ್ನು ಸಂಘಟಿಸಿದ ಶಿವಾನಂದ ಗಾಡವಿ ಪ್ರಾಸ್ತಾವಿಕ ಮಾತನಾಡಿ ಕ್ರಿಕೆಟ್, ಬ್ಯಾಡ್ಮಿಂಟನ್ ಟೂರ್ನಿಗಳನ್ನು ಮೇಲಿಂದ ಮೇಲೆ ಸಂಘಟಿಸಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಕ್ರೀಡಾ ಪ್ರೇಮಿಗಳು ಕ್ರೀಡೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಕ್ರಿಕೆಟ್ ತಂಡಗಳ ವಿಜೇತ ನಾಯಕರಾದ ಸೋಮು ಮಠಪತಿ, ಯಾಶೀನ ಮುಜಾವರ ಅವರು ಟ್ರೋಪಿಗಳನ್ನು ಪಡೆದುಕೊಂಡರು.