ಮೂಡಲಗಿ – ಬೆಳಗಾವಿ ಜಿಲ್ಲಾ ವಿಭಜನೆಗೆ ಸಂಬಂಧಿಸಿದಂತೆ ಬೆಳಗಾವಿಯ ರಾಜಕಾರಣಿಗಳ ಕುಟಿಲತೆ ಕೆಲಸ ಮಾಡಿದೆ. ಪ್ರತಿ ಸಲ ಮಗುವನ್ನು ಚಿವುಟಿ ತೊಟ್ಟಿಲು ತೂಗುತ್ತಿದ್ದ ಇವರು ಈ ಬಾರಿ ತೊಟ್ಟಿಲು ಮಾತ್ರ ತೂಗಿ ಮಗು ಅಳದಿರುವಂತೆ ನೋಡಿ ಕೊಂಡಿದ್ದಾರೆ ಎಂದು ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಚೌಕಾಶಿ ವ್ಯಂಗ್ಯ ಮಾಡಿದ್ದಾರೆ.
ಪತ್ರಿಕೆಗೆ ಹೇಳಿಕೆಯೊಂದನ್ನು ನೀಡಿರುವ ಅವರು, ಪ್ರತಿ ಬಾರಿ ಬಜೆಟ್ ಬರುತ್ತಿದ್ದಂತೆ ಬೆಳಗಾವಿ ಜಿಲ್ಲಾ ವಿಭಜನೆ ಕುರಿತು ಸದ್ದು ಆಗುತಿತ್ತು. ಈ ಬಾರಿ ಚುನಾವಣೆ ಮೇಲೆ ಹೋರಾಟ ಪ್ರತಿಭಟನೆಗಳು ಪ್ರಭಾವ ಬೀರಬಾರದು ಎಂಬ ಕಾರಣಕ್ಕೆ ಜನರನ್ನ ಮಾನಸಿಕವಾಗಿ ಸೋಮಾರಿಗಳನ್ನಾಗಿಸಲು ಪ್ರಾದೇಶಿಕ ಆಯುಕ್ತರ ಮೂಲಕ ಸರ್ಕಾರಕ್ಕೆ ವರದಿ ಕೇಳಿ ಜಿಲ್ಲೆ ರಚನೆಗೆ ಚಾಲನೆ ದೊರೆತಿದೆ ಎಂಬ ಭಾವನೆ ಮೂಡಿಸಿದರು. ನಂತರ ನೋಂದಣಿ ಇಲಾಖೆಯ ಕಾಯ್ದೆಗೆ ಸಂಬಂಧಪಟ್ಟಂತೆ ಜಿಲ್ಲಾ ವ್ಯಾಪ್ತಿ ನಿಗದಿ ಕುರಿತಾದ ನಿಯಮಗಳೊಂದಿಗೆ ಜಿಲ್ಲೆ ರಚನೆ ಘೋಷಣೆಯೊಂದೆ ಉಳಿದಿದೆ ಎಂಬ ವಿಶ್ವಾಸ ಮೂಡಿಸಿ ಈಗ ಕೈ ಎತ್ತಿದರು ಎಂದು ಆರೋಪಿಸಿದ್ದಾರೆ.
ಈ ಸಲದ ಬಜೆಟ್ ನಲ್ಲಿ ಜಿಲ್ಲಾ ವಿಭಜನೆ ಕುರಿತ ಯಾವ ವಿಷಯವೂ ಪ್ರಸ್ತಾಪವಾಗದ ಹಿನ್ನೆಲೆಯಲ್ಲಿ ಚೌಕಾಶಿಯವರು ಈ ಆಕ್ರೋಶ ಹೊರಹಾಕಿದ್ದು, ಇಂಥ ಲಜ್ಜೆಗೆಟ್ಟವರಿಗೆ ಧಿಕ್ಕಾರ ಎಂದು ನುಡಿದಿದ್ದಾರೆ