ಮೈಸೂರು, -ನಗರದ ಲಕ್ಷ್ಮಿಪುರಂನಲ್ಲಿರುವ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿಂದು (ಸೆ.೨೭) ಮಧ್ಯಾಹ್ನ ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳು ಮತ್ತು ಅಪರಾಧ ತಡೆಗಟ್ಟುವ ಬಗ್ಗೆ ಕಾನೂನು ಅರಿವು ಕುರಿತು ವಿಶೇಷ ಉಪನ್ಯಾಸ ಮಾಲೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪೊಲೀಸ್ ಇಲಾಖೆಯ ಮೈಸೂರು ಜಿಲ್ಲಾ ಪಿಎಸ್‌ಐ ಬೆರಳು ಮುದ್ರೆ ಘಟಕದ ತಜ್ಞರಾದ ಎಂ.ಎನ್.ಬಾಲಸುಬ್ರಹ್ಮಣ್ಯ ಅವರು ಮಾತನಾಡಿ, ವಿದ್ಯಾರ್ಥಿಗಳು ಇಂದು ಹೆಚ್ಚು ಹೆಚ್ಚು ಓದಿಗಿಂತ ಮೊಬೈಲ್ ಬಳಸುತ್ತಿರುವುದು ಅಪಾಯಕಾರಿ ಸಂಗತಿಯಾಗಿದ್ದು, ಇದರಿಂದ ಓದಿಗೆ ಹಿನ್ನಡೆಯಾದಂತಾಗಿದೆ. ಮೊಬೈಲ್ ಅನ್ನು ಎಷ್ಟು ಬೇಕೋ ಅಷ್ಟು ಬಳಸಿದಾಗ ಮಾತ್ರ ಅದರ ಮಹತ್ವ ಗೊತ್ತಾಗುತ್ತದೆ. ಅದನ್ನು ಬಿಟ್ಟು ಇಂದಿನ ವಿದ್ಯಾರ್ಥಿಗಳು ಮನಬಂದಂತೆ ಮೊಬೈಲ್ ಅನ್ನು ಬಳಸಿಕೊಂಡು ಅಡ್ಡದಾರಿ ಹಿಡಿದು, ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಿರುವುದು ಬೇಸರದ ಸಂಗತಿ ಎಂದು ತಿಳಿಸಿದರು.
ಓದಿನ ಜೊತೆಗೆ ಹೆಚ್ಚು ಯೋಗ, ಧ್ಯಾನ, ಕ್ರೀಡಾ, ಕ್ಷೇತ್ರಗಳಲ್ಲಿ ಅಳವಡಿಸಿಕೊಂಡಾಗ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು, ಚಂಚಲತೆಯನ್ನು ನಿಯಂತ್ರಿಸಬಹುದೆಂದು ಹೇಳಿ, ಅಪರಾಧ ಮಾಡುವುದಾಗಲೀ, ಅಪರಾಧ ಮಾಡುವ ಕೆಲಸಕ್ಕೆ ಉತ್ತೇಜನ ನೀಡುವುದಾಗಲೀ ಎರಡೂ ಕೂಡ ತಪ್ಪೇ. ಆದ್ದರಿಂದ ಇಂದಿನ ವಿದ್ಯಾರ್ಥಿಗಳು ಹೆಚ್ಚು ಓದಿನ ಕಡೆ ಗಮನ ಹರಿಸಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಹಿರಿಯ ಉಪನ್ಯಾಸಕ ಎನ್.ಎಸ್.ಪಶುಪತಿಯವರು ಮಾತನಾಡಿ, ಸದಾ ಮೊಬೈಲ್ ನೋಡುತ್ತಿದ್ದರೆ ಅದು ನಮ್ಮನ್ನು ಕತ್ತು ಮೇಲೆದ್ದಂತೆ ಮಾಡುತ್ತದೆ. ಅದೇ ಪುಸ್ತಕವನ್ನು ಏಕಾಗ್ರತೆಯಿಂದ ತಲೆ ತಗ್ಗಿಸಿ ಓದಿದರೆ ಜೀವನ ಪೂರ್ತಿ ತಲೆ ಎತ್ತಿ ನಡೆಯುವಂತೆ ಮಾಡುತ್ತದೆಂದು ಅಭಿಪ್ರಾಯಿಸಿದರು. ವೇದಿಕೆಯಲ್ಲಿ ಉಪನ್ಯಾಸಕರಾದ ಮಹದೇವ ನಾಯಕ, ಕನ್ನಡ ಉಪನ್ಯಾಸಕಿ ಪುಷ್ಪ, ಡಾ.ಜಯಾನಂದ ಪ್ರಸಾದ್, ನಂದೀಶ್ ಮತ್ತಿತರರು ಉಪಸ್ಥಿತರಿದ್ದರು.