ಇದ್ದದ್ದನ್ನು ಇದ್ದ ಹಾಗೆ ಹೇಳಿದರೂ ಅದನ್ನು ಯಾವಾಗ ಹೇಗೆ ಎಲ್ಲಿ ಹೇಳಬೇಕು ಅಂತ ನಿನಗೆ ಗೊತ್ತಾಗುವುದಿಲ್ಲ ಎಂದು ಬೈಸಿಕೊಳ್ತಿನಿ. ಯಾವಾಗಲೂ ಶಾಂತ ಸಾಗರದಂತಿರುವ ನಾನು ಒಮ್ಮೊಮ್ಮೆ ನನಗೆ ಅರಿವಿಲ್ಲದಂತೆ ಸಿಟ್ಟಿಗೆದ್ದು ಬಿಡ್ತಿನಿ. ಮತ್ತೊಬ್ಬರ ಮನಸ್ಸಿಗೆ ನೋವು ಮಾಡುವ ಉದ್ದೇಶ ಇರುವುದಿಲ್ಲವಾದರೂ ಬಾಯಿ ತಪ್ಪಿ ಏನೋ ಹೇಳಿ ನಂತರ ನಾನೂ ನೊಂದುಕೊಳ್ತಿನಿ. ಹೊಸಬರ ಜೊತೆ ಮಾತನಾಡಲು ಭಯ ಆಗುತ್ತದೆ. ಎಷ್ಟೆಲ್ಲ ಓದಿಕೊಂಡು ತಯಾರಿ ಮಾಡಿದ್ದರೂ ವೇದಿಕೆ ಹತ್ತಿದ ಮೇಲೆ ಮಾತೇ ಹೊರಡಲ್ಲ.ಹೀಗೆ ನಮ್ಮಲ್ಲಿರುವ ದೌರ್ಬಲ್ಯಗಳ ಪಟ್ಟಿ ಮಾಡುತ್ತಾ ಹೋದರೆ ಹನುಮನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ‘ಮೇಣದ ತಲೆಯವರು ಬಿಸಿಲಲ್ಲಿ ಅಲೆಯಬಾರದು.’ ಎಂಬ ಆಂಗ್ಲಗಾದೆಯಂತೆ ಹೋದಲ್ಲಿ ಬಂದಲ್ಲಿ ಈ ದೌರ್ಬಲ್ಯಗಳು ನಮ್ಮ ಜೀವ ತಿನ್ನುತ್ತವೆ.ನಮ್ಮನ್ನು ಹಿಂಡಿ ಹಿಪ್ಪಿ ಮಾಡುತ್ತವೆ. ನಮ್ಮ ಬೆಳವಣಿಗೆಗೆ ಅಡ್ಡಗಾಲು ಹಾಕುತ್ತವೆ. ಇವುಗಳಿಂದ ತಪ್ಪಿಸಿಕೊಳ್ಳುವುದು ಹೇಗೆ?ಇವುಗಳನ್ನು ಮೀರಿಸುವುದು ಹೇಗೆ ಎಂಬ ಪ್ರಶ್ನೆ ನಮ್ಮ ತಲೆಯನ್ನು ಕೊರೆಯುತ್ತಿರುತ್ತದೆ. ಕೃಷ್ಣಮೂರ್ತಿ ಪುರಾಣಿಕರು ಹೇಳಿದಂತೆ,’ಮಾನವನಲ್ಲಿರುವ ದುರ್ಬಲತೆಯು ತಪ್ಪು ಕೆಲಸಗಳನ್ನು ಮಾಡಲು ಹಚ್ಚುತ್ತದೆ.’ ‘ಮನದ ದುರ್ಬಲತೆಗಿಂತ ಭಯಂಕರವಾದ ಪಾಪವು ಇನ್ನೊಂದಿಲ್ಲ.’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು.ಇದಕ್ಕೆ ಪುಷ್ಟಿ ನೀಡುವಂತೆ ‘ದುರ್ಬಲವಾದ ದೇಹವು ಬುದ್ಧಿಯನ್ನು ದುರ್ಬಲಗೊಳಿಸುತ್ತದೆ.’ಎಂದಿದ್ದಾನೆ ರೂಸೋ.
ದೌರ್ಬಲ್ಯ ಎಂದರೆ…?
ದೌರ್ಬಲ್ಯವು ಮನಸ್ಸಿನ ಒಂದು ಸ್ಥಿತಿ. ನಮ್ಮ ಶಕ್ತಿಯನ್ನು ಮಿತಿಗೊಳಿಸುವ ಸ್ಥಿತಿ. ಅನಪೇಕ್ಷಿತ ವರ್ತನೆ. ನಮ್ಮ ಅಮೂಲ್ಯ ಶಕ್ತಿಯನ್ನು ಅನಗತ್ಯವಾಗಿ ಅಪವ್ಯಯಗೊಳಿಸುವಂಥದು.ನಕಾರಾತ್ಮಕವಾದುದು. ಹಾನಿಗೆ ಕಾರಣವಾಗುವಂಥದು..ನಮ್ಮನ್ನು ಹಿಂದಕ್ಕೆಳೆಯುವ ನಕಾರಾತ್ಮಕ ಶಕ್ತಿ.
ದೌರ್ಬಲ್ಯಗಳನ್ನು ಶಕ್ತಿ ತುಂಬುವ ಬಲಗಳಾಗಿ ಪರಿವತಿಸಲು ಈ ಅಂಶಗಳನ್ನು ಅನುಸರಿಸಿ.
ದೌರ್ಬಲ್ಯವನ್ನು ಅರಿಯಿರಿ
ನಿಮ್ಮಲ್ಲಿರುವ ದೌರ್ಬಲ್ಯ ಯಾವುದು ಎನ್ನುವುದನ್ನು ಅರಿಯುವುದು ಅದನ್ನು ತೊಡೆದು ಹಾಕಲು ಮೊದಲ ಹೆಜ್ಜೆ. ದೌರ್ಬಲ್ಯದ ಬಗ್ಗೆ ಅರಿಯುವುದು ಅಂದರೆ ಅದರ ಕುರಿತು ಗಮನ ಹರಿಸುವುದು.ಮುನ್ನೆಲೆಗೆ ಹೋಗಬೇಕೆಂದಿರುವ ನಿಮ್ಮನ್ನು ಹಿಂದಕ್ಕೆ ಜಗ್ಗುತ್ತಿರುವುದು ಯಾವುದÉಂಬುದು ನಿಮಗೆ ತಿಳಿಯದಿದ್ದರೆ ಕಲಿಸುವ ಶಿಕ್ಷಕರನ್ನು ಬೇಟಿಯಾಗಿ. ನಿಮ್ಮ ಆಪ್ತ ಗೆಳೆಯರನ್ನು ಕೇಳಿ.ಇಲ್ಲವೇ ಕುಟುಂಬದ ಸದಸ್ಯರನ್ನು ಕೇಳಿ. ಅವರು ನಿಮ್ಮ ದೌರ್ಬಲ್ಯಗಳ ಪಟ್ಟಿಯನ್ನೇ ಬಿಚ್ಚಿಡುತ್ತಾರೆ ನಂತರ ಆ ದೌರ್ಬಲ್ಯಗಳ ಬಗ್ಗೆ ಯೋಚಿಸಿ.ಹೊರ ಬರಲು
ಯೋಜನೆ ಹಾಕಿಕೊಳ್ಳಿ
ಭರವಸೆಯ ಭಾವ ತುಂಬಿಕೊಳ್ಳಿ
ಇದು ನನ್ನ ದೌರ್ಬಲ್ಯ ಎಂದು ಗೊತ್ತಾದ ಮೇಲೆ ಇದರಿಂದಾಚೆ ನಾನು ಬಂದೆ ತೀರುತ್ತೇನೆ ಎಂಬ ಭರವಸೆಯನ್ನು ತುಂಬಿಕೊಳ್ಳಿ. ಭಯ ಗೆಲ್ಲುವ ಛಲ ತುಂಬಿಕೊಳ್ಳಿ.ದೌರ್ಬಲ್ಯವನ್ನು ಮೀರುವ ಪ್ರತಿಜ್ಞೆ ತೊಡಿ. ವೈಯುಕ್ತಿಕ ಸಾಮಥ್ರ್ಯಗಳ ಮೇಲೆ ಹೆಚ್ಚಿನ ಗಮನ ಹರಿಸಿ. ಇದು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಾನು ನನ್ನಲ್ಲಿರುವ ದೌರ್¨ಲ್ಯವನ್ನು ಗೆಲ್ಲಬಲ್ಲೆ ಎಂಬ ಉತ್ಸಾಹ ಮೂಡಿಸುತ್ತದೆ. ದೌರ್ಬಲ್ಯದ ನಿಯಂತ್ರಣ ಸಾಧಿಸುವ ನೈಜ ರಹಸ್ಯವೆಂದರೆ ದೌರ್ಬಲ್ಯದತ್ತ ಮಾತ್ರ ಗಮನ ಹರಿಸುವುದು. ಮತ್ತು ಅದರಾಚೆ ಬರುವ ಕಾರ್ಯಗಳತ್ತ ಕೇಂದ್ರೀಕರಿಸುವುದು. ಆದ್ಯ ವಿಷಯಗಳತ್ತ ಮಾತ್ರ ಸಮಯವನ್ನು ಕಳೆಯಲಾರಂಭಿಸಿ. ರಸೆಲ್ ನುಡಿದಂತೆ’ಭಾವನೆಗಳೇ ಮನುಷ್ಯನನ್ನು ಉಚ್ಛ ಇಲ್ಲವೇ ನೀಚ ಮಟ್ಟಕ್ಕೆ ಒಯ್ಯುತ್ತವೆ.’ಹೀಗಾಗಿ ಭರವಸೆಯ ಭಾವ ತುಂಬಿಕೊಂಡು ಮುನ್ನುಗ್ಗಿ.
ಹೆದರದಿರಿ ವಿಘ್ನಗಳಿಗೆ
ಮಾನವ ಪ್ರಾಬಲ್ಯ ಮತ್ತು ದೌರ್¨ಲ್ಯಗಳ ಒಟ್ಟು ಮೊತ್ತವಾಗಿದ್ದಾನೆ. ದೌರ್ಬಲ್ಯವಿಲ್ಲದ ವ್ಯಕ್ತಿಗಳು ಇಲ್ಲವೇ ಇಲ್ಲ. ದುರ್ಬಲತೆಗಳು ವಿಶೇಷವಾಗಿ ಎಲ್ಲರ ಗಮನ ಸೆಳೆಯುತ್ತವೆ. ನಮಗೆ ತಿಳಿಯಲಾರದೇ ಇರುವ ದೌರ್ಬಲ್ಯವನ್ನು ನಾವೆಂದೂ ತೊಡೆದು ಹಾಕಲಾರೆವು. ದೌರ್ಬಲ್ಯವನ್ನು ಮೀರಿಸಬೇಕೆಂದರೆ ಅದರ ಕುರಿತು ನಾವು ತಿಳಿಯುವುದು ಮುಖ್ಯ. ನಾವು ಬದಲಿಸಬೇಕೆಂದು ಬಯಸಿದ ವರ್ತನೆಯ ಬಗೆಗೆ ತಿಳುವಳಿಕೆ ಹೊಂದಿದರೆ ಮಾತ್ರ ನಾವು ಅದನ್ನು ಬದಲಿಸುವ ನಿಟ್ಟಿನಲ್ಲಿ ಪ್ರಯತ್ನಿಸಲು ಸಾಧ್ಯ. ಬುದ್ಧನು ಹೇಳಿದಂತೆ ‘ನಾವು ಯೋಚಿಸುವುದು ಆಗುತ್ತೇವೆ.’ ಎನ್ನುವುದು ನಿಜ.ಸಾಧಕರೆಲ್ಲ ತಮ್ಮ ದೌರ್ಬಲ್ಯಗಳನ್ನು ಮೆಟ್ಟಿ ನಿಂತವರು. ಮೆಟ್ಟಿ ನಿಲ್ಲಬೇಕೆನ್ನುವ ದಾರಿಯಲ್ಲಿ ಅನೇಕ ವಿಘ್ನಗಳು ಬರುವುದು ಖಚಿತ. ಅವುಗಳಿಗೆ ಹೆದರದಿರಿ.ಸಕಾರಾತ್ಮಕ ನಂಬಿಕೆಯಿಂದ ಮುನ್ನಡೆಯಿರಿ.
ಇರಲಿ ಸ್ವಯಂ ಪ್ರೇರಣೆ
ಜಾಕಿ ಚಾನ್ ಒಂದು ಮಾತನ್ನು ಹೇಳುತ್ತಾನೆ. ’ಬುದ್ಧಿವಂತರು ಯಾವಾಗಲೂ ತಮ್ಮೊಳಗೆ ಶಕ್ತಿಯನ್ನು ಅನ್ವೇಷಿಸುತ್ತಾರೆ. ಮೂರ್ಖರು ಇತರರಿಂದ ಅದನ್ನು ಬಯಸುತ್ತಾರೆ.’ ದೌರ್ಬಲ್ಯಕ್ಕೆ ವಿದಾಯ ಹೇಳಬೇಕಾದರೆ ಅದರ ಮೂಲವನ್ನು ಕೆದಕಿ ತನಿಖೆ ಮಾಡಬೇಕು.ಕ್ರಿಯಾಶೀಲ ಚಿಂತನೆ ನಡೆಸಬೇಕು. ದೌರ್ಬಲ್ಯವನ್ನು ಯಾರೋ ಬಂದು ಬದಲಿಸುತ್ತಾರೆ ಎಂದು ಕಾದು ಕುಳಿತುಕೊಳ್ಳುವುದು ಮೂರ್ಖತನ.ನಿಮಗೆ ನೀವೇ ಸ್ವಯಂ ಪ್ರೇರಣೆ ಕೊಟ್ಟುಕೊಂಡು ನಿಮ್ಮ ಒಳಗೆ ನೀವು ಏನನ್ನು ತುಂಬಿಕೊಳ್ಳುತ್ತಿರೋ ಅದುವೇ ಹೊರಗೂ ಆಗುತ್ತದೆ. ಮತ್ತು ಪರಿಣಾಮ ಬೀರುತ್ತದೆ. ಹೀಗಾಗಿ ಮನಸ್ಸಿಗೆ ಉತ್ತಮ ಆಲೋಚನೆಗಳನ್ನು ತುಂಬಿರಿ.
ಪ್ರಾಮಾಣಿಕವಾಗಿರಿ
ದೌರ್ಬಲ್ಯವು ನಿಮ್ಮ ಜೀವನದಲ್ಲಿ ನೀವು ಆಗಬೇಕೆಂದು ಬಯಸುದುದೆಲ್ಲವನ್ನೂ ತಡೆಯುತ್ತಿರತ್ತದೆ.ಅವಮಾನಗಳಿಂದ ಕಲಿತ ಪಾಠಗಳನ್ನು ತಿಳುವಳಿಕೆ ಮತ್ತು ಜ್ಞಾನದ ಒಟ್ಟಾರೆ ದೌರ್ಬಲ್ಯದಾಚೆ ಬರಲು ಬಳಸಿಕೊಳ್ಳಿ. ದೊಡ್ಡ ಸೋಲುಗಳೂ ದೊಡ್ಡ ಅವಕಾಶಗಳನ್ನು ಹೊತ್ತು ತಂದಿರುತ್ತವೆ..ಎಂಬುದು ನೆನಪಿರಲಿ. ಪ್ರಾಚೀನ ಚಿಂತಕ ಯುರಿಪಿಡಿಸ್ ಹೀಗೆ ನುಡಿದಿದ್ದಾರೆ.’ಅತ್ಯಂತ ದುರಾದೃಷ್ಟ ಕಾಲದಲ್ಲೂ ಒಂದು ಸಂತೋಷದ ಬದಲಾವಣೆಗೆ ಅತ್ಯತ್ತುಮ ಅವಕಾಶವಿದೆ.’ ನಿಮಗೆ ನೀವು ಪ್ರಾಮಾಣಿಕವಾಗಿ ದೌರ್ಬಲ್ಯದಿಂದ ಮುಕ್ತರಾಗಲು ಪ್ರಯತ್ನಿಸಿ. ಇಲ್ಲವಾದರೆ ಬಲಹೀನರಾಗುವ ಅಭ್ಯಾಸಕ್ಕೆ ನೀರೆರೆಯುತ್ತೀರಿ. ನಿಮ್ಮ ನಂಬಿಕೆಯ ಸೇತುವೆಯನನ್ನು ನೀವೇ ಮುರಿಯುತ್ತೀರಿ.
ದಿನಚರಿ ಬರೆಯಿರಿ
ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲಲು ಜೀವನವು ಯಾವುದೇ ನೈಜ ಉದ್ದೇಶವನ್ನು ಹೊತ್ತು ಅವಕಾಶಗಳನ್ನು ನೀಡುವುದಿಲ್ಲ.ನಾವೇ ಕಾಯಾ ವಾಚಾ ಮನಸಾ ಸಿದ್ಧರಾಗಿ ಬದುಕಿನ ಹಾದಿಯಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಳ್ಳಬೇಕು.ದೈನಂದಿನ ಅನುಭವಗಳನ್ನು ದಾಖಲಿಸಲು ದಿನಚರಿ ಬರೆಯುವ ರೂಢಿ ಮಾಡಿಕೊಳ್ಳಿ ಇದು ದೌರ್ಬಲ್ಯಗಳ ನಿರ್ಮೂಲನೆಯ ಪ್ರಾರಂಭಿಕ ಹಂತವಾಗಿದೆ. ದಿನಚರಿ ಪುಸ್ತಕದಿಂದ ನಿಮ್ಮ ಇಂಗಿತಗಳು ಸ್ಪಷ್ಟವಾಗುಇತ್ತವೆ. ಪ್ರತಿ ದಿನ ಆತ್ಮದ ಅರಿವಿನ ಜ್ಞಾನ ಮೂಡಿಸಿ ನಿಮ್ಮನ್ನು ಶಕ್ತಿವಂತರನ್ನಾಗಿಸುತ್ತದೆ.ಹೀಗಾಗಿ ನೀವು ನಿಜಕ್ಕೂ ಬಲಹೀನತೆಗಳನ್ನು ಕಳೆದುಕೊಳ್ಳುವುದರ ಬಗೆಗೆ ಕೇಂದ್ರೀಕರಿಸುತ್ತೀರಿ.
ಸಹಮತ ಹೊಂದದಿರಿ
ಮನಸ್ಸು ಭೀತಿಯಲ್ಲಿರುವುದರಿಂದ ನಾನಷ್ಟೇ ದುರ್ಬಲನಾಗಿದ್ದೇನೆ ಎಂದೆನಿಸುತ್ತದೆ. ಹೀಗಾಗಿ ಬಹಳಷ್ಟು ಸಲ ನಿಮಗೆ ಅದನ್ನು ಮೀರಿ ನಡೆಯಲು ಸಾಧ್ಯವಾಗುವುದಿಲ್ಲ. ದೌರ್ಬಲ್ಯಕ್ಕೆ ನಂಬಿಕೆಯ ವ್ಯವಸ್ಥೆಯೇ ಕಾರಣವೇ ಹೊರತು ಮತ್ತೇನಿಲ್ಲ. ತನ್ನನ್ನು ತಾನು ಗೆಲ್ಲುವ ಶಕ್ತಿಯನ್ನು ಹೊಂದಿರುವವರನ್ನು ತಡೆಯುವಂಥದ್ದು ಯಾವುದೂ ಇಲ್ಲ. ದೌರ್ಬಲ್ಯದೊಂದಿಗೆ ಸಹಮತ ಹೊಂದಬೇಡಿ. ಅದನ್ನು ತೊರೆದು ಬರಲು ಇನ್ನಿಲ್ಲದಂತೆ ಪ್ರಯತ್ನಿಸಿ. ಆಗ ನಿಮ್ಮ ಜೀವನ ಸರಳವೂ ಸಂತೋಷಯುಕ್ತವೂ ಆಗಿರುತ್ತದೆ.
ನೆನಪಿಸಿಕೊಳ್ಳಿ
ಅನೈಟ್ರೊಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ನಿಂದ ಸಂಪೂರ್ಣವಾಗಿ ಪಾಶ್ರ್ವವಾಯುವಿಗೆ ಒಳಗಾದ ಬ್ರಿಟಿಷ್ ಭೌತವಿಜ್ಞಾನಿ ಸ್ಟಿಫನ್ ಹಾಕಿಂಗ್,’ಅ ಬ್ರೀಫ್ ಹಿಸ್ಟರಿ ಆಫ್ ಟೈಮ್’ ಎಂಬ ಸಿದ್ದಾಂತಗಳಿಗೆ ಹೆಸರುವಾಸಿಯಾಗಿದ್ದಾರೆ. ಅಮೇರಿಕದ ಮಹಾನ್ ಅಧ್ಯಕ್ಷರಲ್ಲೊಬ್ಬರಾದ ಫ್ರಾಂಕ್ಲಿನ್ ಡಿ ರೂಸ್ವೆಲ್ಟ್ ಪೋಲಿಯೋ ಪೀಡಿತರಾಗಿದ್ದರು.ನೋಬೆಲ್ ಪ್ರಶಸ್ತಿ ವಿಜೇತ ಅಲ್ಬರ್ಟ್ ಐನ್ ಸ್ಟೀನ್ ಅಪ್ಸರ್ಜರ್ ಸಿಂಡ್ರೋಮ್‍ನಿಂದ ಬಳಲುತ್ತಿದ್ದರು. ಕಡು ಕಷ್ಟಗಳಲ್ಲೂ ಅರಳಿ ನಿಂತ ಸೂಪರ್ ಸ್ಟಾರ್ ರಜನಿಕಾಂತ್,ಧೀರೂ ಬಾಯಿ ಅಂಬಾನಿ, ಅಬ್ದುಲ್ ಕಲಾಂ, ಅಮಿತಾ ಬಚ್ಚನ್ ನಾರಾಯಣ ಮೂರ್ತಿ ಕಿರಣ ಮಜುಂದಾರ್, ಷಾರಂಥವರನ್ನು ನೆನೆಯಿರಿ. ನಮ್ಮೊಳಗಿನ ಅಂತಃಶಕ್ತಿಯನ್ನು ನಂಬಿದರೆ ದೌರ್ಬಲ್ಯಗಳನ್ನು ಶಕ್ತಿ ತುಂಬುವ ಬಲಗಳನ್ನಾಗಿಸಲು ಖಂಡಿತ ಸಾಧ್ಯ.
ಜಯಶ್ರೀ.ಜೆ. ಅಬ್ಬಿಗೇರಿ
ಬೆಳಗಾವಿ