spot_img
spot_img

ಖಾನಾಪುರ ತಾಲೂಕು ೮ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಶಿಕ್ಷಕ/ಸಾಹಿತಿ ಈಶ್ವರ ಸಂಪಗಾವಿ

Must Read

- Advertisement -

ಅನುರಕ್ತನಾಗಿ ಅನುಗಾಲ ನಿನ್ನಯ ಆರಾಧಿಸುತಿರುವೆ

ಮುಗ್ಧ ಮನದ ಮೋಹಕತೆಗೆ ತನ್ಮಯ ತಂಪೆರೆದಿರುವೆ

ಹಸಿವು ನೀರಡಿಕೆಯ ಲೆಕ್ಕಿಸದೆ ನೆನಪಿನಲಿ ಮುಳುಗಿದೆ
ಉಸಿರುಗಟ್ಟಿದ ಬವಣೆಗಳಲಿ ಮತ್ತುಗಳ ತೊರೆದಿರುವೆ

- Advertisement -

ಭವ ಬಂಧಗಳ ಬೇಡಿಯ ಜೊತೆಯಲಿ ತೆವಳುತಿರುವೆ
ಮೂಕವೇದನೆಗಳನೆಲ್ಲ ಬಡಬಾಗ್ನಿಯಲಿ ಹುರಿದಿರುವೆ

ಹಲವಾರು ಬಗೆ ಮುಗ್ಧತೆಯ ಮುಖವಾಡವ ಮುರಿದೆ
ಒಲವ ಪೂಜೆಯ ಮನಂಬುಗುವಂತೆ ಕೈಗೊಂಡಿರುವೆ

ಕೊನೆಯುಸಿರು ನಿಲುವ ಮುನ್ನೊಮ್ಮೆ ಮುಖ ತೋರು
ಈಶನ ದಯೆಯ ದೋಣಿ ಸೇರಿಹೋದ ಖುಷಿಪಡುವೆ

- Advertisement -

ಇತ್ತೀಚಿನ ದಿನಗಳಲ್ಲಿ ಗಜಲ್ ಸಾಹಿತ್ಯ ಜನಪ್ರೀಯವಾಗುತ್ತಿರುವ ಸಂದರ್ಭದಲ್ಲಿ ಖಾನಾಪುರದ ಹಿರಿಯ ಶಿಕ್ಷಕರು ಸಾಹಿತಿಗಳಾದ ಶ್ರೀ ಈಶ್ವರ ಸಂಪಗಾವಿಯವರ ಗಜಲ್ ಇದು. ಮಾನವ ತನ್ನ ಬದುಕಿನಲ್ಲಿ ಪ್ರೇಮ ಭಾವವನ್ನು ಒಂದಲ್ಲ ಒಂದು ರೀತಿಯಲ್ಲಿ ಅನುಭವಿಸುತ್ತಲೇ ಇರುತ್ತಾನೆ. ಅಂತಹ ಪ್ರೇಮ ಭಾವನೆಯ ಗಜಲ್ ಹಿರಿಯರು ಬರೆದು ವ್ಯಾಟ್ಸಪ್‌ನಲ್ಲಿ ನನಗೆ ಕಳಿಸಿದಾಗ ಅವರ ಕೊನೆಯ ಸಾಲುಗಳು ಕೊನೆಯುಸಿರು ನಿಲುವ ಮುನ್ನೊಮ್ಮೆ ಮುಖ ತೋರು.ಈಶನ ದಯೆಯ ದೋಣಿ ಸೇರಿಹೋದ ಖುಷಿಪಡುವೆ ಎಂಬ ಅಗಾಧ ಭಾವ ಕಂಡಾಗ ಗುರುಗಳ ಈ ಭಾವ ಅವರ ಗಜಲ್‌ಗೆ ಪ್ರತಿಕ್ರಿಯೆ ತಿಳಿಸಿದಾಗ ಅವರ ಈ ವಯೋಸಹಜ ಬದುಕಿನಲ್ಲಿ ಅಧ್ಯಾತ್ಮದ ವಿಚಾರಧಾರೆಗಳು ನನಗೆ ಪರಿಣಾಮವನ್ನುಂಟು ಮಾಡಿದವು.

ನನ್ನ ಹಾಗೂ ಸಂಪಗಾವಿಯವರ ಪರಿಚಯ ಸುಮಾರು ನಾಲ್ಕೈದು ವರ್ಷಗಳಷ್ಟು ಹಿಂದಿನದು. ಪೋನ್ ಮೂಲಕ ಒಬ್ಬರನ್ನೊಬ್ಬರು ಮಾತುಕತೆಯಲ್ಲಿ ತೊಡಗುತ್ತಿದ್ದೆವು. ಮುಖಾಮುಖಿಯಾಗಿ ಭೇಟಿಯಾಗಿದ್ದು ಅವರು ಧಾರವಾಡದಲ್ಲಿ ಜರುಗಿದ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಂತರ ಅವರ ಮಕ್ಕಳ ಮದುವೆಯ ಆಮಂತ್ರಣ ನೀಡಲು ನಮ್ಮ ಮನೆಗೆ ಆಗಮಿಸಿದಾಗ. ಈ ಸಂಬಂಧ ಎಂತಹದು ಎಂದರೆ ಕೇವಲ ಸಾಹಿತ್ಯದ ಒಲವಿಗಷ್ಟೇ ಇರದೇ ಅವರೂ ನಮ್ಮ ಮನೆಯ ಹಿರಿಯರಲ್ಲೊಬ್ಬರು ಎಂಬ ಭಾವ ಮೂಡುವಷ್ಟರ ಮಟ್ಟಿಗೆ ಬೆಳೆದಿದೆ.

ಮೊನ್ನೆ ವ್ಯಾಟ್ಸಪ್ ಗ್ರುಪ್ ಗಳಲ್ಲಿ ಡಿಸೆಂಬರ್ ೩೦ ರಂದು ಖಾನಾಪುರ ನಗರದಲ್ಲಿ ಜರಗುವ ೮ ನೇ ಖಾನಾಪುರ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸವಾಧ್ಯಕ್ಷ ಸ್ಥಾನಕ್ಕೆ ಇವರ ಆಯ್ಕೆ ಕುರಿತು ಪ್ರಕಟಣೆ ಗಮನಿಸಿದೆ. ಒಂದು ಕ್ಷಣ ಅವರ ನನ್ನ ಒಡನಾಟದ ಕ್ಷಣಗಳು ಕಣ್ಮುಂದೆ ಬಂದು ಹೋದವು. ಒಬ್ಬ ವ್ಯಕ್ತಿ ತನ್ನ ವೃತ್ತಿ ಬದುಕಿನ ಜೊತೆಗೆ ಎಲೆ ಮರೆಯ ಕಾಯಿಯಂತೆ ಸಾಹಿತ್ಯದ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಸಾಹಿತ್ಯ ಸಮ್ಮೇಳನ ಸಮೀತಿಯವರು ಅಧ್ಯಕ್ಷತೆ ನೀಡುವ ಮಟ್ಟಿಗೆ ಅವರ ವ್ಯಕ್ತಿತ್ವ ಬೆಳೆದಿದೆ ಎಂದರೆ ಅದು ಸಾಮಾನ್ಯ ಸಂಗತಿಯಲ್ಲ. ಸಂಪಗಾವಿಯವರು ಕೇವಲ ಸಾಹಿತ್ಯ ಒಡನಾಟ ನನ್ನೊಂದಿಗೆ ಹೊಂದಿರದೇ ನನ್ನ ಪದವಿ ಹಂತದ ಧಾರವಾಡದ ಶ್ರೀ ಮೃತ್ಯುಂಜಯ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಸದ್ಯ ಧಾರವಾಡದ ಬೇಂದ್ರೆ ಟ್ರಸ್ಟ ನ ಅಧ್ಯಕ್ಷರಾಗಿರುವ ಡಾ. ಡಿ.ಎಂ.ಹಿರೇಮಠ ಗುರುಗಳ ಕಾಲೇಜು ವ್ಯಾಸಾಂಗದ ಸಹಪಾಠಿಗಳು ಎಂಬುದು ಕೂಡ ಗಮನಾರ್ಹ. ಹಿರೇಮಠ ಗುರುಗಳು ನನ್ನ ಬದುಕಿನಲ್ಲಿ ಹಲವಾರು ರೀತಿಯಲ್ಲಿ ಪ್ರೋತ್ಸಾಹ ನೀಡಿ ಸಾಹಿತ್ಯ ಕ್ಷೇತ್ರದಲ್ಲಿ ನನ್ನ ಬೆಳವಣಿಗೆಗೆ ಕಾರಣೀಭೂರಾಗಿರುವ ನನ್ನ ಗುರುಗಳು. ಅವರ ಕಾಲೇಜಿನ ದಿನಗಳ ಸಹಪಾಠಿ ಈಶ್ವರ ಸಂಪಗಾವಿಯವರು ಅಂದರೆ ನನ್ನ ಗುರುಗಳ ಸ್ನೇಹಿತರೂ ಕೂಡ. ಹೀಗೆ ನನ್ನ ಅವರ ನಡುವಿನ ಬಾಂಧವ್ಯದ ನಿಕಟತೆಗೆ ಇದೂ ಕೂಡ ಕಾರಣ.ಗುರುಗಳಿಗೆ ಪೋನ್ ಕರೆಯ ಮೂಲಕ ಅಭಿನಂದಿಸಿದೆ ಜೊತೆಗೆ ಅವರ ಬದುಕಿನ ಪುಟಗಳ ಕುರಿತು ಅವಲೋಕಗೈಯುವ ಪ್ರಯತ್ನಕ್ಕೆ ಕೈ ಹಾಕಿದೆ.

ಪರಿಚಯ:

ಕವಿ ಸಾಹಿತಿ ಈಶ್ವರ ಜಿ.ಸಂಪಗಾವಿ ಅವರು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಶರಣ ಕಕ್ಕಯ್ಯನವರ ಐಕ್ಯಸ್ಥಳ ಕಕ್ಕೇರಿ ಗ್ರಾಮದ ಕೃಷಿ ಕುಟುಂಬದಲ್ಲಿ ೧೪-೦೧-೧೯೫೧ ರಲ್ಲಿ ಜನಿಸಿದರು.ಆರು ಮಕ್ಕಳ ತಂದೆಯಾದ ಇವರು ಎಲ್ಲರಿಗೂ ಉನ್ನತ ಶಿಕ್ಷಣ ಒದಗಿಸಿ,ತಮ್ಮ ಕಾಲಮೇಲೆ ತಾವು ನಿಲ್ಲುವಂತೆ ಮಾಡಿದ್ದಾರೆ.ಸಾಹಿತ್ಯ ಸೇವೆಯ ಇವರ ಬದುಕಿನಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಒಲಿದು ಬಂದಿದ್ದು ಇವರಲ್ಲಿನ ಸಾಹಿತ್ಯದ ಪ್ರಭೆಗೆ ಹಿಡಿದ ಕೈಗನ್ನಡಿ ಎನ್ನಬಹುದು. ತಮ್ಮ ೭೧ ನೆಯ ವಯಸ್ಸಿನಲ್ಲಿಯೂ ಕೂಡ ಎಂತವರನ್ನೂ ನಾಚಿಸುವಂತೆ ಪಾದರಸದಂತೆ ಓಡಾಡುವ ಇವರ ಚಟುವಟಿಕೆಗಳು ನಮ್ಮಂತವರಿಗೆ ಮಾದರಿ ಎಂದರೆ ಅತಿಶಯೋಕ್ತಿಯಲ್ಲ.

ಶಿಕ್ಷಣ:

ಶ್ರೀಯುತರ ಪ್ರಾಥಮಿಕ ಶಿಕ್ಷಣ ಹುಟ್ಟೂರಲ್ಲಿ ೧೯೬೪ ರಲ್ಲಿ ಮುಗಿಸಿದರು.ಮಾಧ್ಯಮಿಕ ಶಿಕ್ಷಣ ಬೆಳಗಾವಿಯ ಗಿಲಗಿಂಚಿ ಆರ್ಟಾಳ ಪ್ರೌಢಶಾಲೆಯಲ್ಲಿ ೧೯೬೭ ರಲ್ಲಿ ಪೂರ್ಣಗೊಳಿಸಿದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಮೇಜರ್ ವಿಷಯ ಪಡೆದು ಬಿ.ಎ.ಪದವಿಯನ್ನು ೧೯೭೩-೭೪ ರಲ್ಲಿ ಪಡೆದು,ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯನ್ನು ೧೯೭೫-೭೬ ರಲ್ಲಿ ಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕದೊಂದಿಗೆ ಪದವಿ ಪಡೆದರು.ಇವರ ಸ್ನಾತಕೋತ್ತರ ಪದವಿ ಹಂತದ ದಿನಗಳ ಸಹಪಾಠಿಗಳೂ ಕೂಡ ಇಂದು ವಿವಿಧ ರಂಗಗಳಲ್ಲಿ ಖ್ಯಾತಿ ಪಡೆದಿರುವ ಡಾ.ಸರಜೂ ಕಾಟ್ಕರ್ ,ಡಾ.ರಂಜಾನ ದರ್ಗಾ,ಡಾ.ಡಿ ಎಂ ಹಿರೇಮಠ,ಡಾ.ಸೋಮನಾಥ ಯಾಳವಾರ,ಡಾ.ಪಿಕೆ ಖಂಡೋಬಾ,ಡಾ.ಸಿದ್ದಣ್ಣ ಕೊಪ್ಪ,ಡಾ.ಅನಂತ ವೈದ್ಯ,ಪರಮೆದಶ್ವರ ಹೆಗಡೆ,ಡಾ.ಶಿವಾನಂz ಮೊದಲಾದವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವರು.

ವೃತ್ತಿ ಬದುಕು:

ಇವರು ತಮ್ಮ ಶಿಕ್ಷಣ ಎಂ.ಎ ಪೂರ್ಣಗೊಳಿಸಿದ ನಂತರ ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಸಹಶಿಕ್ಷಕ ಹುದ್ದೆಗೆ ನೇಮಕಗೊಂಡರು.

ಬಳಿಕ ಕರ್ನಾಟಕ ವಿಶ್ವವಿದ್ಯಾಲಯದ ಶಿಕ್ಷಣ ಕಾಲೇಜಿನಲ್ಲಿ ಬಿ.ಇಡಿ. ಪದವಿಯನ್ನು ಪ್ರಥಮ ಶ್ರೇಣಿ ಮತ್ತು ಡಿಸ್ಟಿಂಗ್ಶನ್ ದಲ್ಲಿ ಪದವಿ ಪಡೆದು ೧೯೯೪ ರಲ್ಲಿ ಮೈಸೂರು ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಕರೆಸ್ಪಂಡನ್ಸ್ ಎಂ.ಇಡಿ.ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದರು.ಇವರು ಶಿಕ್ಷಣ ಗಳಿಸುವಲ್ಲಿ ಇವರು ಸದಾ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದವರು.

ಮತ್ತೆ ಇವರು ೧೯೭೮-೭೯ ರಲ್ಲಿ ಕಕ್ಕೇರಿಯ ಶ್ರೀ ಬಿಷ್ಟಾದೇವಿ ಪ್ರೌಢಶಾಲೆಯ ಮುಖ್ಯಾಧ್ಯಾಪಕರ ಹುದ್ದೆ ಅಲಂಕರಿಸಿದರು. ಕೇವಲ ೧೬ ವಿದ್ಯಾರ್ಥಿಗಳ ಸಂಖ್ಯಾಬಲದಿಂದ ಬಿಷ್ಟಾದೇವಿ ಗುಡಿಯ ಪ್ರಾಂಗಣದಲ್ಲಿ ತರಗತಿ ಪ್ರಾರಂಭಿಸಿದರು.೧೯೮೭ ರಲ್ಲಿ ಸ್ವಂತ ಕಟ್ಟಡ ನಿರ್ಮಾಣದ ಬಳಿಕ ೩೫೦ ವಿದ್ಯಾರ್ಥಿಗಳು ಕಲಿಯುತ್ತಿರುವರು. ಹೆಮ್ಮೆಯ ಕಕ್ಕಯ್ಯ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯಲ್ಲಿ ಇವರು ಸತತ ೩೨ ವರ್ಷಗಳ ಕಾಲ ಮುಖ್ಯಾಧ್ಯಾಪಕ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು.ಇವರು ತಮ್ಮ ಅಮೂಲ್ಯ ಸೇವೆಗೆ ಶಿಕ್ಷಣ ಇಲಾಖೆಯಿಂದ ಜನಮೆಚ್ಚಿದ ಆದರ್ಶ ಶಿಕ್ಷಕ ಎಂಬ ಪ್ರಶಸ್ತಿಯನ್ನು ಪಡೆದರು.

ತಮ್ಮ ೬೦ ನೇ ವಯಸ್ಸಿನಲ್ಲಿ ೩೧ ಜನೇವರಿ ೨೦೧೧ ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದರು.

ನಿವೃತ್ತಿ ನಂತರದ ಬದುಕು:

ಪ್ರತಿಭೆ ಮತ್ತು ರಚನೆಯ ತುಡಿತಗಳಿದ್ದರೂ ಸೇವಾ ಅವಧಿಯಲ್ಲಿ ಆಡಳಿತದ ಚುಕ್ಕಾಣಿ ಹಿಡಿದು ನಿಭಾಯಿಸುವ ಗುರುತರ ಹೊಣೆಗಾರಿಕೆಯಲ್ಲಿ ಸಾಹಿತ್ಯ ರಚನೆಯತ್ತ ಅಷ್ಟೊಂದು ಗಮನ ಕೊಡಲಾಗದೆ ಕೊರಗಿದ್ದರು.ನಿವೃತ್ತಿ ಜೀವನದ ಹವ್ಯಾಸವಾಗಿ ಪತ್ರಕರ್ತನಾಗಿ ಸತತ ೫ ವರ್ಷಗಳಕಾಲ ವಿಜಯವಾಣಿ,ವಿಜಯ ಕರ್ನಾಟಕ ದಿನಪತ್ರಿಕೆಗಳಿಗೆ ವರದಿಗಾರರಾಗಿ ಸೇವೆಸಲ್ಲಿಸಿದರು.ಇನ್ನು ಕಿರಿಯ ಪತ್ರಿಕೆಗಳಿಗೆ ವರದಿ ಮಾಡುವುದರ ಜೊತೆಗೆ ನಯನ ಪತ್ರಿಕೆ,ಕರ್ಮವೀರ, ನಿರಂತರ ಪ್ರಗತಿ, ಭಾರತ ವೈಭವ ಪತ್ರಿಕೆ, ಸುವರ್ಣಲೋಕ, ಲೋಕದರ್ಶನ,ಜನಜೀವಾಳ, ಪತ್ರಿಕೆಗಳಿಗೆ ಲೇಖನ,ಕತೆ,ಕವನಗಳನ್ನು ಬರೆಯುತ್ತಿದ್ದಾರೆ.ನಿವೃತ್ತಿಯ ಸಮಯಾವಕಾಶದ ಸದುಪಯೋಗ ಪಡೆದುಕೊಂಡು ಕೊರೋನಾ ಅವಧಿಯಲ್ಲಿ ವಿವಿಧ ಪ್ರಕಾರದ ಸಾಹಿತ್ಯ ರಚನೆಗಳ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಸಾಹಿತ್ಯದ ವಿವಿಧ ಪ್ರಕಾರಗಳಾದ ಲೇಖನ, ನೂರಾರು ಹನಿಗವನ,ಮುಕ್ತಕ-೧೨೧೨, ಚುಟುಕು-೨೦೦, ಭಾವಗೀತೆ-೫೦೦, ಕವನ ೨೦೦, ಕಿರುಗತೆ, ನ್ಯಾನೋಕತೆ,ರುಬಾಯಿ, ಟಂಕಾ,ಹಾಯ್ಕು,ಲಿಮೆರಿಕ್ ಕವನ, ಗಝಲ್-೫೦೦, ಸಾಂಗತ್ಯ,ಛಂದೋಬದ್ಧ ರಚನೆಗಳು-೨೦೦.. ಮುಂತಾದ ಸಾಮಾನ್ಯವಾಗಿ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಸಮರ್ಥವಾಗಿ ಬರೆಯಬಲ್ಲ ಕೌಶಲ್ಯ ಪಡೆದಿದ್ದಾರೆ. ಭಾವಗೀತೆ,ಛಂದೋಬದ್ಧ ಕವನಗಳು,ಗಝಲ್ ಗಳು,ಮುಕ್ತಕಗಳ ರಚನೆ ಇವರ ಆಸಕ್ತಿಯ ಸಾಹಿತ್ಯ ಕ್ಷೇತ್ರ.

ಈಗ ಸಮರ್ಥವಾಗಿ ನೂರಾರು ಗಜಲ್ ಗಳನ್ನು, ಭಾವಗೀತೆಗಳನ್ನು, ಮುಕ್ತಕ ೧೨೦೦ಕ್ಕೂ ಹೆಚ್ಚು ಹಾಗೂ ಬಹಳಷ್ಟು ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ಸದ್ಯ ಅವರ ಎರಡು ಕೃತಿಗಳು ಕವನ ಸಂಕಲನ ಉಕ್ತಕ ಸಂಕಲನ ಮತ್ತು ಗಜಲ್ ಸಂಕಲನಗಳು ಹೊರಬಂದು ಸಾರಸ್ವತ ಲೋಕಕ್ಕೆ ಸೇರುವ ತಯಾರಿಯಲ್ಲಿ ಕೆಲಸ ಸಾಗಿದೆ.

ಬಳಿಕ ಅಕ್ಷರದೀಪ, ಅಕ್ಷರಜ್ಯೋತಿ, ಕುಸುಮ ಕಾವ್ಯ ಸಾಹಿತ್ಯ ಬಳಗ, ತುಳು ಕನ್ನಡ ಸಾಹಿತ್ಯ ಬಳಗ, ಗಜಲ್ ಸಂಭ್ರಮ, ಅಮೃತಸಿಂಚನ ಸಾಹಿತ್ಯ ಬಳಗ, ಖಾನಾಪುರ ಸಾಹಿತ್ಯ ಬಳಗ, ಹೊಂಗಿರಣ ಸಾಹಿತ್ಯ ಬಳಗ ಮುಕ್ತಕ ಕಲಿಯಲು ಬನ್ನಿ,ಸಹಸ್ಪಂದನ ಬಳಗ, ಕಲಿಕಲಿ ಛಂದೋಂಬುದಿ, ಕಲಿಯೋಣ ಬಾರಾ ಛಂದಸ್ಸಿನೊಳಗಣ, ಕರ್ನಾಟಕ ಹೈಕು ಪರಿಷತ್ತು ಹೊಂಗಿರಣ ಸಾಹಿತ್ಯ ಬಳಗ, ನುಡಿತೋರಣ ಸಾಹಿತ್ಯ ಬಳಗ,ಗಜಲ್ ಸಂಭ್ರಮ, ಗಜಲ್ ತೊರೆ, ಗಜಲ್ ಸಂಕಲನ ಮುಂತಾದ ಅನೇಕ ಸಾಹಿತ್ಯಿಕ ಬಳಗಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಸಮರ್ಥವಾಗಿ ಬರೆಯುವಲ್ಲಿ ಯಶಸ್ವಿಯಾಗುತ್ತ ಸಾಹಿತ್ಯದ ಹವ್ಯಾಸ ಬೆಳೆಸಿಕೊಂಡಿದ್ದಾರೆ.

ಇಂಥ ಇಳಿವಯಸ್ಸಿನಲ್ಲಿಯೂ ಜೀವನೋತ್ಸಾಹವನ್ನು ಹೊಂದಿರುವುದು ಹೆಮ್ಮೆ ತರುತ್ತದೆ. ತಮ್ಮ ಕೃಷಿ ಜೀವನದ ಜೊತೆಗೆ ಸಾಹಿತ್ಯ ಕೃಷಿ ಯಥೇಚ್ಛವಾಗಿ ಸಾಗಿದೆ ಎಂಬುದು ಅನುಕರಣೀಯ ಮತ್ತು ಹೆಮ್ಮೆಯ ವಿಷಯವಾಗಿದೆ. ತಮ್ಮ ಈ ೭೧ನೆಯ ವಯಸ್ಸಿನಲ್ಲಿ ಭಾವಭೃಂಗ ಕವನ ಸಂಕಲನ. ಒಲವ ಚೈತ್ರವನ ಗಜಲ್ ಸಂಕಲನ ಪ್ರಕಟಿಸುವ ಮೂಲಕ ತಮ್ಮ ಸಾಹಿತ್ಯ ಸುಧೆ ನಿರಂತರ ಎಂಬುದನ್ನು ಪ್ರಚುರ ಪಡಿಸುತ್ತಿರುವ ಗುರುಗಳ ಅನೇಕ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುತ್ತವೆ.ಚಲನಶೀಲ ಬರಹಗಾರರಾಗಿ ಕಳೆದ ಅಗಸ್ಟ ತಿಂಗಳಲ್ಲಿ ನನ್ನ ಎರಡು ಕೃತಿಗಳಾದ ಅಭಿಪ್ರೇರಣೆ. ಮತ್ತು ವಚನದರ್ಪಣ ಬಿಡುಗಡೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಬಿಡುಗಡೆಗೊಂಡಾಗ ಕಾರ್ಯಕ್ರಮಕ್ಕೆ ಆಗಮಿಸಿ ನನ್ನನ್ನು ಆಶೀರ್ವದಿಸಿದ್ದರು.

ನನ್ನ ಕೃತಿಗಳನ್ನು ಅವರ ಕೈಗಿತ್ತಿದ್ದೆ. ಕೇವಲ ಒಂದು ವಾರದಲ್ಲಿ ಕೃತಿಗಳನ್ನು ಓದಿ ಮುಗಿಸಿ ನಂತರ ಕೃತಿಗಳ ಕುರಿತು ಪೋನ್ ಕರೆ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಸಹೃದಯರು ಶ್ರೀ ಈಶ್ವರ ಸಂಪಗಾವಿ ಗುರುಗಳು ಎಂದರೆ ಅತಿಶಯೋಕ್ತಿಯಲ್ಲ.

ತಮ್ಮ ೭೧ನೆಯ ವಯಸ್ಸಿನಲ್ಲಿ ಖಾನಾಪೂರ ತಾಲೂಕು ೮ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಸುಯೋಗ ಒದಗಿಸಿದ ಖಾನಾಪುರ ತಾಲೂಕಿನ ಕನ್ನಡ ಮನಸುಗಳಿಗೆ ಧನ್ಯವಾದಗಳನ್ನು ತಿಳಿಸುವ ಜೊತೆಗೆ ಗುರುಗಳಿಗೂ ಕೂಡ ಅಭಿಮಾನದ ಅಭಿನಂದನೆಗಳು. ಈ ಕಾರ್ಯಕ್ರಮ ಕನ್ನಡದ ಕಂಪನ್ನು ಗುರುಗಳ ನುಡಿಗಳ ಮೂಲಕ ಹೊಮ್ಮಿಸುವಂತಾಗಲಿ ಎಂದು ಆಶಿಸುವೆನು.


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ.ಸಿಂದೋಗಿ ಕ್ರಾಸ್.ಮುನವಳ್ಳಿ
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
೯೪೪೯೫೧೮೪೦೦ ೮೯೭೧೧೧೭೪೪೨

- Advertisement -
- Advertisement -

Latest News

ಮನುಷ್ಯನಿಗೆ ಹಣ, ಆಸ್ತಿ ಬೇಕಾಗಿಲ್ಲ, ಬದುಕುವ ಛಲ ಇರಬೇಕು – ಬಸವರಾಜ ಮಡಿವಾಳ

ಮೂಡಲಗಿ: ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಮಡಿವಾಳ ಸಮಾಜ ಬಾಂಧವರಿಂದ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group