“ಮಾಡಿದೆನೆಂದು ಮನದಲಿ ಹೊಳೆದರೆ ಏಡಿಸಿ ಕಾಡಿತ್ತೋ ಶಿವನ ಡಂಗುರ.” ಸಮಾಜವಾದಿ ಬಸವಣ್ಣನವರು ಹೇಳಿರುವಂತೆ. ತಾವು ಮಾಡುವ ಕೆಲಸಗಳು ಪ್ರತಿಷ್ಠೆಗೆ ಪ್ರಚಾರಕ್ಕೆ ಬಳಸುವ ಬದಲು ಬಸವಣ್ಣನವರು ಸ್ಥಾಪಿಸಿದ ಮುಕ್ತ ಸಮಾಜದ ಆಚರಣೆ ನೀತಿ ತತ್ವ ಸಂದೇಶ ತಿಳಿದುಕೊಳ್ಳಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು.
ಜಗತ್ತೇ ನಿಬ್ಬೆರಗಾಗಿ ಬಸವ ಭೂಮಿಯತ್ತ ನೋಡುತ್ತಿರುವಾಗ ನಾವಿನ್ನು ನಾನೇ ಮಾಡಿದೆ ನಾನೇ ಕಟ್ಟಿದೆ ಎಂಬ ಹಮ್ಮು ಬಿಮ್ಮುಗಳಿಂದ ಬೀಗುತ್ತಿರುವುದು ದುರಂತದ ಸಂಗತಿ. ಹನ್ನೆರಡನೆಯ ಶತಮಾನದ ಬಸವ ಪ್ರಮಥರ ಕ್ರಾಂತಿಯ ನಂತರ ಅದರ ಪರ್ವ ಮುಗಿದೇ ಹೋಯಿತು ಎನ್ನುವಷ್ಟು ವಿಪ್ಲವ ಕದನ ಸಮರ ರಕ್ತ ಕ್ರಾಂತಿ ನಡದೇ ಹೋಗಿತ್ತು. ಒಳಗೊಳಗೇ ಖುಷಿಯಾದ ಶೈವ ಭಕ್ತರು ಮತ್ತೆ ಲಿಂಗಾಯತ ಧರ್ಮವನ್ನು ಆಕ್ರಮಿಸಿಕೊಂಡು ಜಾತಿ ಕೇಂದ್ರಿತ ಆಚರಣೆ ಮಾಡಿದರು.
ವೈದಿಕ ವ್ಯವಸ್ಥೆಯನ್ನು ಕ್ರಮೇಣ ಮತ್ತೆ ಮುಂದುವರೆಸಿದರು.
16 ನೇ ಶತಮಾನದಲ್ಲಿ ಹರದನಹಳ್ಳಿಯ ಹುಟ್ಟಿ ಎಡೆಯೂರಿನಲ್ಲಿ ನೆಲೆ ನಿಂತು ನೂರೊಂದು ವಿರಕ್ತರನ್ನು ಸಂಘಟಿಸಿದ ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳು ಅಭಿನವ ಅಲ್ಲಮರು. ವಚನ ಪಾಠಾಂತರ ,ಪರಿಷ್ಕರಣೆ ಮರು ನಕಲು ಮಾಡುವ ಸಂಕಲನದ ಕಾರ್ಯ ನಡೆಯಿತು .
ಹಳ್ಳಿಗೆ ಏಕ ರಾತ್ರಿ ಪಟ್ಟಣಕ್ಕೆ ಪಂಚ ರಾತ್ರಿಯಂತೆ ಊರೂರು ಅಲೆದು ಧರ್ಮ ಜಾಗೃತಿಯ ಜೊತೆಗೆ ಸಂಘಟಿಸಿ ವಚನಗಳನ್ನು ಮೊದಲು ಹೊರ ತಗೆದರು..
ಪ್ರೌಢರಾಯನ ಕಾಲದಲ್ಲಿ ಚಾಮರಸ ಮುಂತಾದವರ ಅನೇಕ ಕೃತಿಗಳು ಬೆಳಕಿಗೆ ಬಂದವು.ಕಲ್ಲು ಮಠದ ಪ್ರಭುದೇವರ ಕೃತಿಗಳು ಮಾರ್ಗ ಸೂಚಿ.
ಕೆರೆ ಪದ್ಮರಸ ಪದ್ಮಣಾಂಕ , ಮುಂತಾದವರ ಕೃತಿಗಳು ಮುಂದೆ ಸರ್ವಜ್ಞ , ನಂತರ ಜೇವರ್ಗಿಯ ಷಣ್ಮುಖ ಶಿವಯೋಗಿಗಳು ಲಿಂಗಾಯತ ಧರ್ಮವನ್ನು ಸಂಘಟಿಸಿದರು.
20 ನೇ ಶತಮಾನದ ಮುಳುಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳು ,ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳು ಮುರುಗೋಡ ಮಹಾಂತಜ್ಜನವರು ಬಸವ ಧರ್ಮದ ಧ್ವಜವನ್ನು ಮತ್ತೆ ಎತ್ತಿ ಹಿಡಿದರು.
ಇಷ್ಟೊತ್ತಿಗಾಗಲೇ ಮಠಗಳು ಜಾತಿಯ ಕರ್ಮಠಗಳಾಗಿ ವ್ಯಾಪಾರ ಉದ್ಯೋಗ ದಂಧೆಗಳಾಗಿ ಕಾರ್ಯ ನಿರ್ವಹಿಸ ಹತ್ತಿದ್ದವು. ಸ್ವಜಾತಿಯವರ ಮಠಗಳಲ್ಲಿ ಸ್ವಾಮಿಗಳ ನೇಮಕ .ಅಧಿಕಾರ ಪೀಠ ಗದ್ದುಗೆ ಅಡ್ಡಪಲ್ಲಕ್ಕಿ ಹೀಗೆ ಲಿಂಗಾಯತ ಬಸವ ಧರ್ಮ ಸ್ವಲ್ಪ ಹಿನ್ನಡೆ ಅನಾಹುತ ಅನುಭವಿಸಿತು.
ಮಹಾತ್ಮಾ ಗಾಂಧಿಗೆ ಬಸವಣ್ಣನವರನ್ನು ಪರಿಚಯಿಸಿದ ಹೆಗ್ಗಳಿಕೆ ಹರ್ಡೇಕರ ಮಂಜಪ್ಪನವರಿಗೆ ಸಲ್ಲಬೇಕು. ಬೆಳಗಾವಿಯ ತರುಣರನ್ನು ಸಂಘಟಿಸಿ ” ಭಾರತ ಬಸವ ದಲ ” ಸ್ವಯಂ ಸೇವಾ ಕಾರ್ಯಕರ್ತರನ್ನು ಗುರುತಿಸಿ ಮಹಾತ್ಮಾ ಗಾಂಧಿ ಅವರು ಬೆಳಗಾವಿಗೆ ಬಂದಾಗ ಅವರೊಂದಿಗೆ ಸಕ್ರಿಯವಾಗಿ ಕೆಲಸ ಮಾಡಿದ್ದನ್ನು ಹುದಲಿ ಯ ಹುಲಿ ಕರ್ನಾಟಕ ಕೇಸರಿ ಗಂಗಾಧರ ದೇಶಪಾಂಡೆ ಅವರು ತಮ್ಮ ಗ್ರಂಥಗಳಲ್ಲಿ ದಾಖಲಿಸಿದ್ದಾರೆ..
ಮುಂದೆ ಡಾ ಫ ಗು ಹಳಕಟ್ಟಿ ಪ್ರೊ ಶಿ ಶಿ ಬಸವನಾಳ ಚೆನ್ನ ಮಲ್ಲಪ್ಪ ಕೋರಿಶೆಟ್ಟರ್ , ಪ್ರೋ .ಕೆ ಜಿ ಕುಂದಣಗಾರ, ಡಾ ಆರ್ ಸಿ ಹಿರೇಮಠ , ಎಂ ಎಸ ಸುಂಕಾಪುರ ಸ ಸ ಮಾಳವಾಡ , ಡಾ ಎಲ್ ಬಸವರಾಜ , ಡಾ ಎಂ ಎಂ ಕಲಬುರ್ಗಿ ಡಾ ವೀರಣ್ಣ ದಂಡೆ ಇನ್ನು ಅನೇಕ ಮುಂತಾದವರು ವಚನ ಸಂಕಲನ ಪರಿಷ್ಕರಣೆಗೆ ದುಡಿದಿದ್ದಾರೆ .
ಘನ ಮಠದ ಶಿವಯೋಗಿಗಳು, ಸರ್ಪ ಭೂಷಣರು ,ಭಾಲ್ಕಿ ಡಾ ಚೆನ್ನ ಬಸವ ಸ್ವಾಮಿಗಳು , ಇಲಕಲ್ಲ ಡಾ. ಮಹಾಂತ ಶಿವಯೋಗಿಗಳು, ಗದಗ ಡಾ ತೋಂಟದ ಸಿದ್ಧಲಿಂಗ ಸ್ವಾಮಿಗಳು ಬಸವ ತತ್ವ ಸಂಘಟನೆಯಲ್ಲಿ ಸಕ್ರಿಯವಾಗಿ ದುಡಿದರು.
ಮಠಗಳ ಪರಂಪರೆಯಿಂದ ಮನೆಯ ಸಂಸ್ಕೃತಿಗೆ ಬಸವ ತತ್ವ ಪ್ರಚಾರ ಮಾಡಿದವರಲ್ಲಿ ಶ್ರೀ ಲಿಂಗಾನಂದ ಸ್ವಾಮಿಗಳು ಅಗ್ರ ಗಣ್ಯರು. ಅದೇ ಹಾದಿಯಲ್ಲಿ ಡಾ ಮಾತೆ ಮಹಾದೇವಿಯವರು ಸ್ವಲ್ಪ ಪ್ರಯತ್ನಿಸಿದರು. ಮುಂದೆ ಅಂಕಿತ ತಿದ್ದುವ ಕಾರ್ಯ ಸಂಘಟನೆಯ ಮೂಲ ಸ್ವರೂಪ ಬದಲಾಗಿ ಬಸವ ಧರ್ಮದ ಆಶಯಗಳು
ಸೋಲ ಹತ್ತಿದವು. ಪೂಜ್ಯ ಲಿಂಗಾನಂದ ಸ್ವಾಮಿಜಿ , ಮಾತಾಜಿ ದೇಶ ಸುತ್ತಿ ಬಸವ ತತ್ವ ಪ್ರಚಾರ ಮಾಡಿದರು . ಅವರ ಬಸವ ಪ್ರೇಮ ಪ್ರಜ್ಞೆಯ ಬಗ್ಗೆ ಎರಡು ಮಾತಿಲ್ಲ. ಆದರೆ ವಚನಾಂಕಿತ ಅನಗತ್ಯ ವಿವಾದಕ್ಕೆ ಎಡೆ ಮಾಡಿ ಇಡೀ ಸಮಾಜವು ಗೊಂದಲದ ಗೂಡಾಗಿ ಸಂಘಟನೆಯಲ್ಲಿ ಬಿರುಕು ಬಿಟ್ಟಿತು.
ಅದೇ ರೀತಿ ಬಸವ ಕೇಂದ್ರ ಸ್ಥಾಪಿಸಿ ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಸವ ತತ್ವ ಪ್ರಚಾರಗೊಳಿಸಲು ಡಾ ಮುರುಘಾ ಶರಣರು ಸಜ್ಜಾದರು.
ಅವರೂ ಬಸವಣ್ಣನವರ ಮೂರ್ತಿ ವಿಷಯದಲ್ಲಿ ಮತ್ತು ಇನ್ನು ಅನೇಕ ತಾತ್ವಿಕ ವಿಚಾರದಲ್ಲಿ ಭಿನ್ನಾಭಿಪ್ರಾಯ ಹೊಂದಿದರು.
ಅನೇಕ ಸಂಶೋಧಕರು ಬಸವಣ್ಣ ಬಸವ ಪೂರ್ವದ ಚರ್ಚೆ ನಡೆಸಿದ್ದಾರೆ. ಸ್ವಂತ ಹಿತಾಸಕ್ತಿ ಹಣ ತೋಳ್ಬಲ ಅಧಿಕಾರ ಆಸ್ತಿ ಈಗ ಮಠಗಳ ಮಾನದಂಡವಾಗಿವೆ.
ಕೆಲ ಸಂಶೋಧಕರು ಬಸವಣ್ಣ ಮತ್ತು ಇತರ ಶರಣರ ಬಗ್ಗೆ ಅನಗತ್ಯ ವಿವಾದ ಹುಟ್ಟಿಸಿದರು. ಇನ್ನು ಅನೇಕರು ಈಗಲೂ ಬಸವ ಧರ್ಮದ ಮೇಲೆ ಮಸಿ ಚೆಲ್ಲುವ ಕೆಲಸ ಮಾಡುತ್ತಿದ್ದಾರೆ.
ವಚನಗಳ ಪರಿಷ್ಕರಣೆ ಧರ್ಮ ಸಂಘಟನೆ ಕಾರ್ಯವಿನ್ನೂ ನಡೆಯಬೇಕಿದೆ. ಬಸವ ಭಕ್ತರು ವ್ಯಕ್ತಿ ನಿಷ್ಠೆಗೆ ಜೋತು ಬಿದ್ದು ತತ್ವ ಸಿದ್ಧಾಂತಗಳ ತೂರಿಕೊಂಡು ಸ್ವಯಂ ಪ್ರತಿಷ್ಠೆಗೆ ಸಂಘಟನೆಯನ್ನು ಅಡವು ಇಡುವುದು ಘೋರ ಪಾಪವು.
ಬೆಳಗಾವಿ ದಾವಣಗೆರೆ ಗದಗ ಹಾವೇರಿ ಕೊಪ್ಪಳ ವಿಜಯಪುರ ಕಲಬುರ್ಗಿ ಚಾಮರಾಜನಗರ ಮೈಸೂರು ನಂಜನಗೂಡು ಮುಂತಾದ ಕಡೆಗಳಲ್ಲ್ಲಿ ಬಸವ ಪ್ರಜ್ಞೆಯ ಪ್ರಕಾಶ ವಿರಾಜಮಾನವಾಗಿದೆ.
ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುವ ಅನೇಕ ಪ್ರಗತಿ ಪರ ಚಿಂತನೆಗಳು ಬಸವ ತತ್ವ ಪ್ರೇಮಿಗಳಾದ ನಮ್ಮನ್ನು ಮತ್ತೆ ಮತ್ತೆ ಪ್ರಬುದ್ಧರನ್ನಾಗಿ ಮಾಡುತ್ತವೆ.
ಬೇಡ ಹಮ್ಮು ಬಿಮ್ಮು ಬೇಡ ಕದನ ಸಮರ. ಸಾರ್ವಜನಿಕವಾಗಿ ನಾವೆಲ್ಲರೂ ಒಗ್ಗಾಟ್ಟಾಗಿ ಬಸವಣ್ಣನವರ ತತ್ವ ವಚನಗಳ ಸಾರಥ್ಯದಲ್ಲಿ ಹೋರಾಟ ಮಾಡುವ ಅನಿವಾರ್ಯತೆ ಬಂದೊದಗಿದೆ.
ಶರಣು ಶರಾಣಾರ್ಥಿ.
————————————–ಡಾ.ಶಶಿಕಾಂತ.ಪಟ್ಟಣ.ರಾಮದುರ್ಗ ಪೂನಾ