ಕಾಂತ ಕ್ಷೇತ್ರಜ ಬಿಟ್ಟು ಹರಿದಾಸ ಪಥ ಹಿಡಿದ ಮಹಿಪತಿ ಸುತ ದೇವರಾಯರು

0
1303

ಮಹಿಪತಿ ದಾಸರಿಗೆ ಇಬ್ಬರು ಮಕ್ಕಳು. ಒಬ್ಬರು ದೇವರಾಯರು, ಎರಡನೆಯವರು ಕೃಷ್ಣರಾಯರು.

ಮಹಿಪತಿದಾಸರು ಪಂಚ ಭಾಷೆ ಬಲ್ಲವರಾಗಿದ್ದು , ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಹಾಗೆಯೇ ತ್ರಿ ಭಾಷೆಗಳ ಸಮಿಶ್ರದ ಕೃತಿಯು ರಚನೆ ಮಾಡಿದ್ದಾರೆ. ಇವರ ಎಲ್ಲ ಕೃತಿಗಳು ವಿಶಿಷ್ಟ ರೀತಿಯಿಂದ ಕೂಡಿದೆ. ಹಾಗೆಯೇ ಕೃಷ್ಣ ದಾಸರು ಸಹ ತಂದೆ ಯನ್ನೇ ಗುರುವನ್ನಾಗಿ ಮಾಡಿಕೊಂಡು ತಂದೆಗಿಂತ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಇವರ ಇನ್ನೊಬ್ಬ ಮಗ ದೇವರಾಯರ ಪುಣ್ಯಾರಾಧನೆ ಇಂದು ಪದಗಳ ಕುಸುಮದರ್ಪಣೆ ಮಹಿಪತಿ ರಾಯರ ಮಡದಿ, ತಿರುಮಲಾಬಾಯಿ, ಕಲಬುರ್ಗಿಯ ಅಣ್ಣಾರಾವ ಮತ್ತು ಭವಾನಿ ದೇವಿಯ ಮಗಳು. ಇವರಿಗೆ ಸಾರವಾಡದ ಭಾಸ್ಕರ ಸ್ವಾಮಿಗಳ ಆಶೀರ್ವಾದದ ಬಲದಿಂದ ಮುಂದೆ ದೇವರಾಯರು, ಕೃಷ್ಣರಾಯರು ಹುಟ್ಟಿದರು.

ಮುಂದೆ ಎರಡು ಮಕ್ಕಳ ಉಪನಯನ, ವಿದ್ಯಾಭ್ಯಾಸ ಮನೆ, ಮಕ್ಕಳು ಅಂತಾ ದೇವರ ಧ್ಯಾನ, ಸೇವೆಯಲ್ಲಿ ಕಾಲ ಕಳೆಯುತ್ತಿರಬೇಕಾದರೆ, ಒಂದು ದಿನ ವಿಷಮ ಜ್ವರಕ್ಕೆ ಬಲಿಯಾಗಿ ಮಹಿಪತಿರಾಯರ ಹೆಂಡತಿ ತಿರುಮಲಾಬಾಯಿ ತೀರಿಹೋಗುತ್ತಾರೆ.      

ಮಹಿಪತಿದಾಸರು ಸಂಸಾರ ವ್ಯಾಮೋಹಕ್ಕೂ ಒಳಗಾಗದೆ, ದೇವರು ಇಟ್ಟ ಹಾಗೆ ಇರಲಿ ಅಂತಾ ಸುಮ್ಮನಿರುತ್ತಾರೆ. ಮಕ್ಕಳೆರಡು ದೊಡ್ಡಮ್ಮಳಾದ ತುಕ್ಕವ್ವಳ (ಅಣ್ಣ ತೀರಿಹೋದಮೇಲೆ ಮಹಿಪತಿರಾಯರೆ ಇವಳನ್ನು ನೋಡಿಕೊಳ್ಳುತ್ತಿರುತ್ತಾರೆ.) ದೇವರಾಯ ಮತ್ತು ಕೃಷ್ಣ ರಾಯರಿಬ್ಬರು ತಂದೆಯಾದ ಮಹಿಪತಿರಾಯರ ಹತ್ತಿರ ವಿದ್ಯಾಭ್ಯಾಸ ಮಾಡ್ತಾ ದೊಡ್ಡಮ್ಮ ತುಕ್ಕವ್ವಳ ಆರೈಕೆಯಲ್ಲಿ ಬೆಳೆಯುತ್ತಾರೆ. ಆದರೆ ದೇವರಾಯರು ಬಲು ತುಂಟ ಸ್ವಭಾವದವರು, ಸಾಹಸಿ ಪ್ರವೃತ್ತಿವುಳ್ಳವರು. ಕಿರಿಯವನಾದ ಕೃಷ್ಣರಾಯರು ಸ್ವಲ್ಪ ಮೃದು.

ಒಂದು ದಿನ ಮಹಿಪತಿರಾಯರು ಇಬ್ಬರು ಮಕ್ಕಳನ್ನು  ಕರೆದು, ದೊಡ್ಡವರಾಗಿ ಏನು ಆಗಬೇಕೆಂದಿರುವಿರಿ ಅಂತಾ ಕೇಳಿದಾಗ, ದೇವರಾಯರು ಕತ್ತಿ , ಗುರಾಣಿ ಹಿಡಿದು ದೇಶ ಆಳಬೇಕೆಂದು ಹೇಳಿದರೆ, ಹಾಗೆಯೇ ಕಿರಿಯವನಾದ  ಕೃಷ್ಣರಾಯರು ತಾಳ, ತಂಬೂರಿ ಹಿಡಿದು ನಾನು ನಿಮ್ಮ ಹಾಗೆ ಸಾಧನೆಯಲ್ಲಿ ತೊಡುಗುವೆ ಅಂತ ಹೇಳಿದರು.

ತಮ್ಮ ವರದ ಹಸ್ತವನ್ನು ಶಿರದ ಮೇಲಿಡಲು ಮಕ್ಕಳಿಬ್ಬರು ಆಗಾಧವಾದ ರೀತಿಯಲ್ಲಿ ಬದಲಾವಣೆ ಆಗುತ್ತಾರೆ.

ಒಂದು ದಿನ ತಾತ ಕಲಬುರ್ಗಿಯ ಅಣ್ಣಾರಾವ ಮತ್ತು ಭವಾನಿ, ಮಗಳು ತಿರುಮಲಾಬಾಯಿ ತೀರಿಹೋದ ಮೇಲೆ ಮೊಮ್ಮಕ್ಕಳನ್ನು ನೋಡಿಕೊಂಡು ಹೋಗಲು ಆಗಾಗ ಬರುತ್ತಿದ್ದರು. ಒಮ್ಮೆ ದೇವರಾಯನ ಬಾಲ್ಯದಲ್ಲಿಯೇ ಅವನ  ಸಾಹಸ ಆಟಗಳನ್ನು ನೋಡಿ, ಅಳಿಯರಾದ ಮಹಿಪತಿರಾಯರ ಮುಂದೆ ದೇವರಾಯರನ್ನು ಕರೆದುಕೊಂಡು ಹೋಗಿ ಸಾಹಸ  ತರಬೇತಿ ಕೊಡಿಸಿ ಅವನ ಇಚ್ಛೆಯಂತೆ ಮುಂದೆ ದೇಶ ಆಳುವ ನಾಯಕ ಮಾಡಲು ಸಾಧ್ಯವಾಗುತ್ತೆ  ಎಂದು ಹೇಳಿ ಒಪ್ಪಿಗೆ ಪಡೆದು, ತಮ್ಮ ಜೊತೆ ಬಾಲಕ ದೇವರಾಯನನ್ನು ಕರೆದುಕೊಂಡು ಹೋದರು.

ಹೀಗೆ ಕಾಲ ತಕ್ಕಂತೆ ತಾತಾ, ದೇವರಾಯನಿಗೆ ಸಾಹಸ , ದೈಹಿಕ ಬಲದಲ್ಲಿ ಗಟ್ಟಿಗೊಳಿಸಿ ,ಡಾಲು ಕತ್ತಿ ಹಿಡಿದು ಯುದ್ಧ ಮಾಡುವ ತರಬೇತಿ, ಮಲ್ಲಯುದ್ಧ , ಕುದುರೆ ಸವಾರಿ , ಅವಶ್ಯಕ ಇರುವ ಎಲ್ಲ  ತರಹ ತರಬೇತಿ ಕೊಡಿಸಿ ದೇವರಾಯರನ್ನು ಒಳ್ಳೆಯ ಸೇನಾಧಿಪತಿ ತರಹ ಸಿದ್ಧಗೊಳಿಸಿದ್ದರು.

ತಾತಾ ದೇಶಮುಖರಾವ ಅವರಿಗೆ ಆಗ ಬೀದರಿನ ಬಾದಶಾಹ ಗೊತ್ತಿದ್ದ ಕಾರಣ, ಆಗ ಅವರ ಹತ್ತಿರ ದೇವರಾಯನನ್ನು ಪರಿಚಯಿಸಿದರು . ರಾಜ ದೇವರಾಯರನ್ನು ಪರೀಕ್ಷಿಸಿ, ದೇವರಾಯರನ್ನು ಹತ್ತು ಸಾವಿರ ಸೈನಿಕರ ಮೇಲೆ ಸೇನಾಧಿಪತಿ ಎಂದು ಮಾಡಿದರು. ಮನೆಯಲ್ಲಿ ಇದೆಲ್ಲ ನೋಡಿ ಎಲ್ಲರಿಗೂ ಆನಂದವಾಯಿತು. ಇತ್ತ ಈ ವಿಷಯ ಕಾಖಂಡಕಿ ಯಲ್ಲಿರುವ ತಂದೆ ಮಹಿಪತಿರಾಯರಿಗೆ ವಿಷಯ ತಲುಪಿತು, ಅಲ್ಲಿಯೂ ಈ ವಿಷಯವನ್ನು ಕೇಳಿ ಖುಷಿಪಟ್ಟರು.

ಮಹಿಪತಿರಾಯ್ರು ಗುರು ಭಾಸ್ಕರ ಸ್ವಾಮಿಗಳನ್ನು ಮನದಲ್ಲಿ ಸ್ಮರಿಸಿದರು. ಅವರು ಹೇಳಿದಂತೆ ದೇವರಾಯನು ದೇಶ ಆಳುವ ಕಾಂತಕ್ಷೇತ್ರಜನಾದನು. ಮುಂದೆ ಇವರು  ಸೋದರಮಾವನ ಮಗಳಾದ , ಬಾಲ್ಯದ ಗೆಳತಿಯಾದ ಲಕ್ಷ್ಮಿಯನ್ನೇ ಸತಿಯಾಗಿ ವರಿಸಿದರು. ಇವರಿಗೆ ನಾಲ್ಕು ಜನ ಮಕ್ಕಳು .ಧರ್ಮ , ರಂಗ , ಮಧ್ವ , ವೆಂಕಟ ಎಂದು.   ಹೀಗೆ ಒಂದು ದಿನ ಬೀದರ ಬಾದಶಾಹ ದೇವರಾಯರನ್ನು ನೋಡಿ , ಪುಣೆಯ ಪೇಶ್ವೆ ನಮ್ಮ ರಾಜ್ಯದ ಮೇಲೆ ದಾಳಿ ಮಾಡುವರೆಂದು ಗೂಢಚಾರರ ಮೂಲಕ ವಿಷಯ ತಿಳಿದಿದೆ, ನೀವು ನಿಮ್ಮ ಸೈನಿಕರೊಂದಿಗೆ ಹೋರಾಡಲು ಸಜ್ಜಾಗಬೇಕೆಂದು ಹೇಳಿದನು. ಅದಕ್ಕೆ ದೇವರಾಯರು ಬಾದಶಾಹನಿಗೆ ನಿಶ್ಚಿಂತೆಯಿಂದ ಇರಲು ಹೇಳಿ , ಐದು ಸಾವಿರ ಸೈನಿಕರೊಂದಿಗೆ ಹೋಗಿ ದಾರಿ ಮಧ್ಯದಲ್ಲಿಯೇ ಅವರ ಜೊತೆ ಹೋರಾಡಿ ಸೋಲಿಸಿ ಬಂದರು.

ಬಾದಶಾಹನು ಖುಷಿಯಿಂದ ಆಲಂಗಿಸಿ, ರಾಜ ಮರ್ಯಾದೆ ಮಾಡಿ, ದೇವರಾಯರ ಶೌರ್ಯ , ಸಾಹಸ , ಪರಾಕ್ರಮಗಳನ್ನು ನೋಡಿ ವಿಜಾಪುರ ಜಿಲ್ಲೆಯಲ್ಲಿರುವ ಜಾಲವಾದಿ ಸುತ್ತಮುತ್ತಲಿನ ಹನ್ನೊಂದು ಹಳ್ಳಿಗಳನ್ನು  ಜಹಗೀರು ಹಾಕಿ ಕೊಟ್ಟನು ಈ ಹಳ್ಳಿಯನ್ನು ಉಳಿಸಿಕೊಳ್ಳಲು ಮೇಲಿಂದ ಮೇಲೆ ಸುತ್ತಲಿನ ಜಹಗೀರದಾರೊಂದಿಗೆ ಕಾದಾಡ ಬೇಕಾಗುತ್ತಿತ್ತು. ಕಾದಾಡ್ತಾ ದೋಣಿ ನದಿಯ ದಂಡೆಯ ಮೇಲಿನ ಹಳ್ಳಿಗಳನ್ನು ಪೂರ್ತಿಯಾಗಿ ವಶಕ್ಕೆ ತಗೆದುಕೊಂಡರು. ಆದ್ದರಿಂದ ಇವರಿಗೆ “ದೋಣಿ ಶಿವಾಜಿ” ಎಂಬ ಬಿರುದು ಬಂತು. ಮುಂದೆ ಬರುಬರುತ್ತಾ ಇವರು ವೈರಾಗ್ಯದ  ಹಾದಿಯನ್ನು ತುಳಿದಿದ್ದರು.

ಒಮ್ಮೆ ಪುಣೆಯ ಪೇಶ್ವೆ  ದಕ್ಷಿಣ ಸಂಸ್ಥಾನಗಳಿಂದ ಕುದರೆ ಮೇಲೆ ಬಂಗಾರ, ಹಣ ಸಾಗಿಸುತ್ತಿರುವಾಗ, ವಿಜಾಪುರ ಹತ್ತಿರ ದರೋಡೆಕೊರರು ಲೂಟಿ ಮಾಡಿದರು , ಆಗ ಇತರ ಜಾಹಗೀರದಾರರು ಈ ಅಪವಾದ ದೇವರಾಯರ ಮೇಲೆ ಹೊರಿಸಿ ಪೇಶ್ವೆ ಯಿಂದ ಬಂಧನ ಮಾಡಿಸಿದರು. ಆಗ ವಿರಕ್ತಿ ಭಾವದಲ್ಲಿದ್ದ ಅವರು ತಮ್ಮ ತಂದೆಯಾದ ಗುರುವಾದ ಮಹಿಪತಿರಾಯರನ್ನು ದುಃಖದಿಂದ ಸ್ತುತಿಸಿ ಗೋಗರೆಯುತ್ತಾ” ಬಂದ ದುರಿತ ಪರಿಹಾರ ಮಾಡಯ್ಯ ತಂದೆ ಗುರು ಮಹಿಪತಿರಾಯ” ಎಂದು ಸ್ತೋತ್ರ ರಚಿಸಿ , ಕಣ್ಣೀರಿನಿಂದ ನೆನೆದರು. ಪೇಶ್ವೆ ಮತ್ತು ಮಂತ್ರಿಯ ಕನಸಿನಲ್ಲಿ ಮಹಿಪತಿರಾಯರು ಕಾಣಿಸಿ ದೇವರಾಯ ನಿರ್ದೋಷಿ ಅವರನ್ನು ಬಿಡಬೇಕೆಂದು ಹೇಳಿದರು.

ಮರುದಿನ ರಾಜ ಮತ್ತು ಮಂತ್ರಿ ತಮ್ಮ ಕನಸಿನ ಬಗ್ಗೆ ಹೇಳಿಕೊಂಡಾಗ ಇಬ್ಬರಿಗೂ ಬಿದ್ದ ಕನಸು ಒಂದೇ ಆಗಿತ್ತು. ಇಬ್ಬರು ವಿಚಾರ ಮಾಡುತ್ತಾ ಕುಳಿತಿರುವಾಗ, ರಾಜ ಗೂಢಚಾರರಿಂದ ವಿಜಾಪುರ ಹತ್ತಿರ  ಕಳವು ಆಗಿದ್ದ ನಮ್ಮ ಬಂಗಾರ , ಒಡವೆ ದರೋಡೆಕೋರರ ಸಹಿತ ಸಿಕ್ಕಿತು ಎಂದು ಹೇಳಿದರು. ಕೂಡಲೇ ತಮ್ಮ ತಪ್ಪಿನ ಅರಿವಾಗಿ  ದೇವರಾಯರನ್ನು ಬಿಡುಗಡೆ ಗೊಳಿಸಿದರು.

ದೇವರಾಯರಿಗೂ ತಂದೆಯಂತೆ, ತಮ್ಮನ0ತೆ ಸಾಹಿತ್ಯ ಅಭಿರುಚಿ ಇತ್ತು. ಆದರೆ ತಂದೆ ಮತ್ತು ತಮ್ಮನಂತೆ ಇಲ್ಲ : ಅವಾಗಾವಾಗ ಸಾಹಿತ್ಯ ರಚಿಸುತ್ತಿದ್ದರು (ಹಿರಿಯರು ಹೇಳಿದ ಪ್ರಕಾರ) ಆದರೆ ಇವರ ಸಾಹಿತ್ಯ ಕೆಲವೇ ಲಭ್ಯವಿದೆ.

ಇವರ ಕೊನೆಯ ಕಾಲದಲ್ಲಿ ತಮ್ಮನಾದ ಜ್ಞಾನಿ ಕೃಷ್ಣ ರಾಯರನ್ನು ಜಾಲವಾದಿಗೆ ಕರೆಯಿಸಿ 

ಭಾಗವತ ಸಪ್ತಾಹ ಓದಿಸಿದರು. ಅಂದು ಕ್ರಿ .ಶ.೧೭೧೪ ಜ್ಯೇಷ್ಠ ಶುಧ್ಧ ನವಮಿ ಅಂದು ತಮ್ಮ ಮನೆಯಲ್ಲಿ ಪ್ರಾಣ ಬಿಟ್ಟರು. 

ಆಗ ಊರಿನ ಜನ ತಮ್ಮ ದೇವತಾಸ್ವರೂಪರಾದ , ಬಡವರ ಬಂಧು ದೇವರಾಯರನ್ನು ನೆನೆದು ದುಃಖಸಾಗರದಲ್ಲಿ ಮುಳುಗಿತು.      

ಜಾಲವಾದಿಯ ಹಳ್ಳದ ದಂಡೆಯ ತೋಟದಲ್ಲಿ  ಕುಲಪುರೋಹಿತರ ಗುರುಹಿರಿಯರ ಸಮ್ಮುಖದಲ್ಲಿ ಒಂದುನೂರಾ ಎಂಟು ಸಾಲಿಗ್ರಾಮಗಳನ್ನು ಹಾಕಿ  ಬೃಂದಾವನ ಶಾಸ್ತ್ರೋಕ್ತವಾಗಿ ಪತಿಷ್ಠಾಪಿಸಿದರು. ಜಾಲವಾದಿಯ ದೇಸಾಯಿ ಬಂಧು ಬಳಗ ದವರು ಸೇರಿ ಈಗಲೂ ಅವರ ಆರಾಧನೆ ಆಚರಿಸುತ್ತಾರೆ.

ಭಾರತೀರಮಣ ಮುಖಪ್ರಾಣಾಂತರ್ಗತ ಅಂತರ್ಗತ  ದೇವರಾಯರಿಗೆ ಈ ಬರಹ ಸಮರ್ಪಿಸುತ್ತಿದ್ದೇನೆ.



ಪ್ರಿಯಾ ಪ್ರಾಣೇಶಹರಿದಾಸ

(ಕವಿಯತ್ರಿ, ಲೇಖಕಿ,  ವಿಜಯಪುರ )