ಅಂಜದಿರು ಅಳುಕದಿರು ಕುಂದದಿರು ಕುಸಿಯದಿರು
ಮುಂದೇನು ಗತಿಯೆಂದು ಚಿಂತಿಸದಿರು
ಲೋಕದೊಳಗಿರುವೆಲ್ಲ ಜೀವಿಗಳ ಸಾಕುವವ
ನಿನ್ನ ಕೈಬಿಡಲಾರ – ಎಮ್ಮೆತಮ್ಮ
ಶಬ್ಧಾರ್ಥ
ಕುಂದದಿರು = ಕುಗ್ಗದಿರು. ಕುಸಿಯದಿರು = ಹಿಂಜರಿಯದಿರು
ತಾತ್ಪರ್ಯ
ಮುಂದಿನ ಜೀವನ ಹೇಗೋ ಏನೋ ಎಂದು ಆತಂಕಪಡದಿರು. ಎಂಥ ಕಷ್ಟ ಬರುವುದೋ ಏನೋ ಎಂದು ಹೆದರಿಕೊಳ್ಳದಿರು. ಕಷ್ಟಗಳು ಬಂದವೆಂದು ನಡುಗಿ ಮುದುಡಿಕೊಳ್ಳದಿರು. ಆ ಕಷ್ಟಕಾರ್ಪಣ್ಯಗಳಿಗೆ ಕುಗ್ಗಿಹೋಗದಿರು ಮತ್ತು ಹಿಂಜರಿಯದಿರು
ಪ್ರಪಂಚದ ಎಲ್ಲ ಜೀವಿಗಳಿಗೆ ಸರಿಯಾದ ಸಮಯಕ್ಕೆ ಆಹಾರ
ನೀರು ಒದಗಿಸಿ ಕಾಪಾಡುವಂಥ ದೇವನಿದ್ದಾನೆ. ಆ ದೇವರು ನಿನ್ನನ್ನು ಎಂದಿಗೂ ಕೈಬಿಡುವುದಿಲ್ಲ. ಆ ಪರಮಾತ್ಮನಿಗೆ
ನಿನ್ನ ಮೇಲೆ ಅತಿಯಾದ ಪ್ರೀತಿ ಮತ್ತು ಕರುಣೆ ಇದೆ. ಅವನು
ಒಂದು ಕ್ಷಣ ನಿನ್ನ ಮೇಲಿನ ದೃಷ್ಟಿ ಬೀರದೆ ಹೋದರೆ ತಕ್ಷಣ
ನೀನು ಇಲ್ಲವಾಗುವೆ. ಆದಕಾರಣ ದೇವರ ಮೇಲೆ ಸಂದೇಹ
ಪಡದೆ ಅವನನ್ನು ಸದಾ ನಂಬಿ ಧೈರ್ಯವಾಗಿ ಬದುಕಬೇಕು.
ಸಂಶಯಾತ್ಮಂ ವಿನಶ್ಯತಿ. ಸಂಶಯಪಟ್ಟು ಭಯದಿಂದ
ಬದುಕುವುದಕಿಂತ ಅವನಲ್ಲಿ ವಿಶ್ವಾಸವಿಟ್ಟು ಬದುಕುವುದು
ಲೇಸು. ವಿಶ್ವಾಸ ನಂಬುಗೆಯಿದ್ದರೆ ಅಸಾಧ್ಯವಾದುದೆಲ್ಲವು
ಸಾಧ್ಯವಾಗುತ್ತವೆ. ನಂಬು ನಂಬೆಲೆ ಮನವೆ, ಹಂಬಲಿಸದಿರು ಬರಿದೆ, ಎಂದು ಅನುಭಾವಿಗಳು ಹೇಳಿದ್ದಾರೆ. ನಂಬರು, ನೆಚ್ಚರು; ಬರಿದೆ ಕರೆವರು;ನಂಬಲರಿಯರೀ ಲೋಕದ ಮನುಜರು! ನಂಬಿ ಕರೆದಡೆ, ಓ ಎನ್ನನೇ ಶಿವನು ? ಎಂದು ಬಸವಣ್ಣನವರು ಕೂಡ ನಂಬುಗೆಯ ಮಹತ್ವವನ್ನು ಸಾರಿದ್ದಾರೆ. ಆದಕಾರಣ ಎಲ್ಲಚಿಂತೆ ಬಿಟ್ಟು ಭಗವಂತನ ಮೇಲೆ ಭಾರ ಹಾಕಿ ಸಂತಸದಿಂದ ಬದುಕುವುದನ್ನು ಕಲಿಯಬೇಕು
ರಚನೆ ಮತ್ತ ವಿವರಣೆ
ಎನ್ .ಶರಣಪ್ಪ ಮೆಟ್ರಿ
ಮೊ: 9449030990