spot_img
spot_img

ನಾಗ ಪಂಚಮಿ

Must Read

spot_img
- Advertisement -

ನಾಗಾರಾಧನೆ ನಮ್ಮ ದೇಶದ ಚಾರಿತ್ರಿಕ ಇತಿಹಾಸದಲ್ಲಿ ಅಡಕವಾಗಿದೆ. ಮಹಾಭಾರತದಲ್ಲಿ ನಾಗ ಜನಾಂಗದ ಕಥೆ ಬರುತ್ತದೆ. ಅರ್ಜುನ ಉಲೂಪಿ ಎಂಬ ನಾಗಕನ್ಯೆಯನ್ನು ಮದುವೆಯಾಗಿದ್ದ ಮುಂದೆ ಕಾರಣಾಂತರಗಳಿಂದ ಅವರಲ್ಲಿ ವೈಷಮ್ಯ ಬರಲು ನಾಗರಾಜ ಪರೀಕ್ಷಿತನನ್ನು ಕಚ್ಚುತ್ತದೆ.

ಪರೀಕ್ಷಿತನ ಮಗ ಜನಮೇಜಯನು ತನ್ನ ತಂದೆಯನ್ನು ಕೊಂದ ನಾಗ ಸರ್ಪದ ಜನಾಂಗವನ್ನೇ ನಾಶ ಮಾಡಲು ಸರ್ಪಯಾಗ ಮಾಡುತ್ತಾನೆ.ಆಗ ಆಸ್ತಿಕ ಋಷಿಯ ಮಧ್ಯಸ್ಥಿಕೆಯಿಂದಾಗಿ ಜನಮೇಜಯನ ಕೋಪ ಇಳಿಯಿತು. ಈ ರೀತಿ ಮಹಾಭಾರತದ ಕಥೆಯಿಂದ ಮುಂದೆ ನಾಗ ಕುಲವನ್ನು ಪೂಜಿಸುವ ಪರಂಪರೆ ಬಂದಿದ್ದು. ಸರ್ಪವು ಶಿವನ ಕೊರಳಲ್ಲಿ ಆಭರಣವಾಗಿಯೂ. ವಿಷ್ಣುವಿನ ಹಾಸಿಗೆಯಾಗಿಯೂ, ಗಣಪತಿಯ ಹೊಟ್ಟೆಗೆ ಹಗ್ಗವಾಗಿಯೂ, ದೇವಾನುದೇವತೆಗಳಿಗೂ ಅನುಕೂಲಕರವಾಗುವ ಜೊತೆಗೆ ಮಾನವ ಜನಾಂಗಕ್ಕೂ ಪೂಜ್ಯನೀಯವಾದುದು.

ಪಂಚಮಿ ಹಬ್ಬ ಬಂದೀತವ್ವ
ಅಣ್ಣ ಬರಲಿಲ್ಲ ಕರೀಲಾಕ

- Advertisement -

ಎಂದು ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ತಮ್ಮ ಸಹೋದರ ಪಂಚಮಿ ಹಬ್ಬಕ್ಕೆ ಕರೆದುಕೊಂಡು ಹೋಗಲು ಬರುವಿಕೆಯ ನಿರೀಕ್ಷೆಯನ್ನು ನಮ್ಮ ಜನಪದರು ಬಲು ಸೊಗಸಾಗಿ ಹೇಳಿರುವರು. ಅಷ್ಟೇ ಅಲ್ಲ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಜೋಕಾಲಿ ಜೀಕುತ್ತ “ಜೀಕೋಣ ಬನ್ನಿ ಜೋಕಾಲಿ ಜೀವನದ ಅಮರ ಜೋಕಾಲಿ ಜೀಕೋಣ, ಜೀಕೋಣ, ಜೀಕೋಣ ಬನ್ನಿ ಜೋಕಾಲಿ” ಎಂದು ಲಯಬದ್ದವಾಗಿ ಹಾಡುತ್ತ ಮನೆಯಲ್ಲಿ ಮಾಡಿಟ್ಟ ಉಂಡಿ ಅಳ್ಳಿಟ್ಟು.ತಂಬಿಟ್ಟು,ಕೊಬ್ಬರಿ ಮೆಲ್ಲುತ್ತ ಗಂಡನ ಮನೆಯ ಘಳಿಗೆಗಳನ್ನು ತಮ್ಮ ಗೆಳತಿಯರ ಮುಂದೆ ಹೇಳಿಕೊಳ್ಳಲು ಕೂಡ ಈ ಹಬ್ಬ ಒಂದು ನೆಪವಾಗಿಯೂ ಉಳಿದು ಬಂದಿದೆ.ಪಂಚಮಿ ಆಚರಣೆಯ ಹಿಂದೆಯೂ ಎರಡು ಕಥೆಗಳಿವೆ.

ಮೊದಲನೆಯ ಕಥೆಯು ಓರ್ವ ರೈತನದಾಗಿದ್ದು. ಆತ ಹೊಲದಲ್ಲಿ ರೆಂಟೆ ಹೊಡೆಯುವಾಗ ಆತನ ರೆಂಟೆಯ ಕುಳಕ್ಕೆ ಸಿಕ್ಕಿ ಹೊಲದಲ್ಲಿ ವಾಸವಿದ್ದ ಹಾವಿನ ಮರಿಗಳು ಸಾವನ್ನಪ್ಪುತ್ತವೆ. ನೋಡಲಾರದೇ ಅಚಾತರ‍್ಯವಾಗಿ ನಡೆದ ಈ ಘಟನೆ ಕಂಡು ಕೆರಳಿದ ಸರ್ಪ ಆತನ ಮನೆಯವರನ್ನೆಲ್ಲ ಕಚ್ಚಿ ಸಾಯಿಸುತ್ತದೆ. ನಂತರ ಉಳಿದ ಅವನ ಮಗಳನ್ನು ಹುಡುಕಿಕೊಂಡು ಆಕೆಯ ಗಂಡನ ಮನೆಗೆ ಹೋಗುತ್ತದೆ.ಅಲ್ಲಿ ಅವಳು ಮಣ್ಣಿನ ನಾಗಪ್ಪನನ್ನು ಪೂಜಿಸಿ ಹಾಲೆರೆಯುತ್ತಿರುತ್ತಾಳೆ.

- Advertisement -

ಅವಳನ್ನು ಕಂಡು ಹಾವಿನ ಸಿಟ್ಟು ತಣ್ಣಗಾಗಿ ನಡೆದ ಘಟನೆಗೆ ಪಶ್ಚಾತ್ತಾಪ ಪಟ್ಟು ಮತ್ತೆ ರೈತನನ್ನು ಅವನ ಮಕ್ಕಳನ್ನು ಬದುಕಿಸುತ್ತದೆ, ಅಂದಿನಿಂದ ಪ್ರತಿವರ್ಷ ರೈತ ಜನರು ಹೊಲದಲ್ಲಿಯ ಮಣ್ಣನ್ನು ತಂದು ಹಾವಿನ ಆಕಾರ ಮಾಡಿ ಹಾಲೆರೆಯುವ ಮೂಲಕ ನಾಗ ಪಂಚಮಿ ಆಚರಣೆಗೆ ಬಂದಿತೆಂಬುದು ಐತಿಹ್ಯ.

ಇನ್ನೊಂದು ಕಥೆಯಲ್ಲಿ ಓರ್ವ ಸಹೋದರ ತನ್ನ ತಂಗಿಯನ್ನು ಶ್ರೀಮಂತರ ಮನೆಗೆ ಕೊಟ್ಟಿರುತ್ತಾನೆ. ಅವನ ಕೆಟ್ಟ ದಾರಿದ್ರö್ಯದಿಂದ ಅವನಲ್ಲಿ ಕೆಟ್ಟ ಬುಧ್ಧಿ ಬೆಳೆದಿರುತ್ತದೆ. ತನ್ನ ತಂಗಿಯ ಮೇಲೆ ಅವಳ ಗಂಡನ ಮನೆಯವರು ಹಾಕಿರುವ ಬೆಳ್ಳಿ-ಬಂಗಾರದ ಒಡವೆಗಳನ್ನು ಕಂಡು ಅವುಗಳನ್ನು ದೋಚಲು ಸಂಚು ರೂಪಿಸುತ್ತಾನೆ. ತನ್ನ ತಂಗಿಯನ್ನು ನಾಗ ಪಂಚಮಿಗೆ ಕರೆಯಲು ಚಕ್ಕಡಿ ಹೂಡಿಕೊಂಡು ಅವಳ ಗಂಡನ ಮನೆಗೆ ಬರುತ್ತಾನೆ.

ತಂಗಿಯನ್ನು ಕರೆದುಕೊಂಡು ದಾರಿಯಲ್ಲಿ ಬರುವಾಗ ಮಾರ್ಗಮಧ್ಯದಲ್ಲಿ ಚಕ್ಕಡಿ ನಿಲ್ಲಿಸಿ ಅವಳನ್ನು ಕಲ್ಲಿನಿಂದ ಜಜ್ಜಿ ಕೊಲ್ಲಲೆಂದು ಗಿಡದ ಬುಡದಲ್ಲಿಯ ಕಲ್ಲನ್ನು ತಗೆದುಕೊಳ್ಳಲು ಹೋಗುತ್ತಾನೆ ಆ ಕಲ್ಲಿನ ಬುಡದಲ್ಲಿದ್ದ ನಾಗರ ಹಾವು ಅವನನ್ನು ಕಚ್ಚುತ್ತದೆ. ಗಾಬರಿಯಿಂದ ಚೀರುತ್ತಾನೆ.

ಅದನ್ನು ಕಂಡ ಅವನ ತಂಗಿ ಹಾವನ್ನು ಕಂಡು ಮಾರ್ಗ ಮಧ್ಯದಲ್ಲಿ ಯಾರೂ ಸಹಾಯಕ್ಕೆ ಬರದಿರುವುದನ್ನು ಕಂಡು ನಾಗ ದೇವನಲ್ಲಿ ಪ್ರಾರ್ಥನೆ ಮಾಡಿ ತನ್ನ ಸಹೋದರನನ್ನು ಬದುಕಿಲು ಬೇಡಿಕೊಳ್ಳುತ್ತಾಳೆ. ಅವಳ ಭಕ್ತಿ ಕಂಡ ನಾಗದೇವ ಅವನನ್ನು ಬದುಕಿಸುತ್ತಾನೆ. ಹೀಗೆ ಸಹೋದರತೆಯ ವಾತ್ಸಲ್ಯದ ನಾಗ ಪಂಚಮಿ ಇಂದಿಗೂ ಸಹೋದರರು ತಮ್ಮ ಸಹೋದರಿಯರನ್ನು ಕರೆದುಕೊಂಡು ಬಂದು ಹಬ್ಬ ಆಚರಿಸುವುದು ರೂಢಿಯಲ್ಲಿದೆ ಎಂಬುದನ್ನು ಜನಪದ ಕಥೆಗಳು ಈ ಹಬ್ಬದ ಮಹತ್ವವನ್ನು ಸಾರುತ್ತವೆ.

ಮಣ್ಣನ್ನೇ ನಂಬಿ ಮಣ್ಣಿಂದ ಬದುಕೇನ
ಮಣ್ಣೆನಗೆ ಮುಂದೆ ಹೊನ್ನ ಅಣ್ಣಯ್ಯ
ಮಣ್ಣೇ ಲೋಕದಲಿ ಬೆಲೆಯಾದ್ದು

ಎಂದು ಹುಟ್ಟಿನಿಂದ ಚಟ್ಟದವರೆಗೂ ಮಣ್ಣ ಜೊತೆಗೆ ನಮ್ಮ ಬದುಕಿನಲ್ಲಿ ಆ ಮಣ್ಣಿನಿಂದ ಆರಂಭವಾಗುವ ಮಣ್ಣೆತ್ತು ಅಮವಾಸೆಯ ನಂತರ ಶ್ರಾವಣ ಮಾಸದಲ್ಲಿ ಬರುವ ಪ್ರತಿಯೊಂದು ಹಬ್ಬಗಳೂ ಮಣ್ಣಿನ ನಂಟನ್ನು ಹೊಂದಿವೆ. ಮಣ್ಣಿಂದ ಗೌರಿಯ ಮಾಡುವುದಾಗಲಿ. ನಾಗ ಮೂರ್ತಿ ಪೂಜಿಸುವುದಾಗಲಿ. ಗುಳ್ಳವ್ವನ ಪೂಜೆಯೊಳಗೊಂಡು ಭಾದ್ರಪದ ಮಾಸದವರೆಗೂ ಅಂದರೆ ಗಣಪತಿ ಮೂರ್ತಿ ಕೂಡ ಮೊದಲಿನಿಂದಲೂ ಮಣ್ಣಿನಿಂದ ಮಾಡುವ ಮೂಲಕ ಮಣ್ಣ ಪೂಜಿಸುವ ಬದುಕು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮೈದಳೆದಿದೆ.

ಬೆಟಗೇರಿ ಕೃಷ್ಣಶರ್ಮರ ನಲ್ವಾಡುಗಳಲ್ಲಿ “ಶ್ರಾವಣ”ಕುರಿತು ವಿಭಿನ್ನ ಶೈಲಿಯಲ್ಲಿ ವರ್ಣಿಸಲಾಗಿದೆ.ಇದನ್ನು ಗೀತರೂಪಕದಲ್ಲಿ ಬಿಂಬಿಸಲಾಗಿದ್ದು ಆಷಾಢಮಾಸದ ಕೊನೆಯ ದಿನ ರಾತ್ರಿಯ ಕೊನೆಯ ಯಾಮದ ಆರ್ಧ ಭಾಗ ಕಳೆಯುವದರೊಂದಿಗೆ ಮುಂಜಾವಿನ ಕೋಳಿಗಳ ಕೂಗಿನೊಂದಿಗೆ ಆರಂಭವಾಗುವ

ಏಳು ಶ್ರಾವಣ ರಾಜ
ಏಳು ಭೂವನದೋಜ
ಏಳು ಜೀವನತೇಜ
ಕಾಲಸುರಭೂಜ
ಪಡುಹಗಲು ನಿನಗೆಂದೆ ಪಡೆದಿಹುದು ಜಡಿಮೋಡ
ನಡುಬಾನಿಗವನು ಎಳೆತರುವರಾರೋ

ಎನ್ನುವ ಮೂಲಕ ಆರಂಭವಾಗುವ ಶ್ರಾವಣಗೀತೆ ಶ್ರಾವಣದ ಆಗಮನ ಕೃಷಿಕರ ಮನದಲ್ಲಿ, ನದಿದೇವತೆಗಳ ಮನದಲ್ಲಿ,ವಿವಿಧ ಹೂವುಗಳಲ್ಲಿ, ಹೊಸದಾಗಿ ವಿವಾಹವಾದ ಯುವತಿಯು ತನ್ನ ಗೆಳತಿಯೊಡನೆ ತವರು ಮನೆಯ ಹಂಬಲದ ಇಚ್ಛೆ ವ್ಯಕ್ತಪಡಿಸುವ ರೀತಿ,ತನ್ನ ಸಹೋದರಿಯನ್ನು ತವರಿಗೆ ಕರೆತರಲು ಬರುವ ಅಣ್ಣನ ಭಾವನೆಗಳನ್ನು, ನಿರೂಪಕನೊಡನೆ ಶ್ರಾವಣದ ಸಂವಾದರೂಪದಲ್ಲಿ ಮೂಡಿ ಬಂದಿಹುದು ಇದರಲ್ಲಿನ “ಪಂಚಮಿ ಹಬ್ಬಾ ಉಳಿತವ್ವ ನಾಕ ದಿನಾ, ಅಣ್ಣ ಬರಲಿಲ್ಲ ಯಾಕೋ ಕರೀಲಾಕ” ಎಂಬ ಹಾಡು ಇಂದಿಗೂ ಗ್ರಾಮೀನ ಜನರ ನಾಲಿಗೆಯಲ್ಲಿ ನಲಿದಾಡುತ್ತಿದೆ.

ಭಾರತ ಧಾರ್ಮಿಕ ಪರಂಪರೆಯನ್ನು ಹೊಂದಿದ ಸುಸಂಸ್ಕೃತಿಯ ದೇಶ. ಇಲ್ಲಿ ತನ್ನದೇ ಆದ ಧಾರ್ಮಿಕ ಆಚರಣೆಗಳು ವೃತ ನೇಮಾದಿಗಳು ಜರುಗುವ ಮೂಲಕ ದೈವೀ ಆರಾಧನೆ ಜರುಗುತ್ತಿದ್ದು ಇಲ್ಲಿನ ಧರ್ಮಕ್ಕೆ ಮೂರು ನೆಲೆಗಳು

  1. ಮೂಲಭೂತ ತತ್ವಗಳ ಅಥವ ಸಿದ್ದಾಂತದ ನೆಲೆ
  2. ಆ ತತ್ವಗಳನ್ನು ಜನಸಾಮಾನ್ಯಕ್ಕೆ ನಿರೂಪಿಸುವ ಪೌರಾಣಿಕ ನೆಲೆ
  3. ಆ ತತ್ವ ಸಿದ್ದಿಗಾಗಿ ಕಲ್ಪ ಅಂದರೆ ವಿಧಿ=ನಿಷೇಧಗಳನ್ನೊಳಗೊಂಡ ನಿತ್ಯ ನೈಮಿತ್ತಿಕ ಕರ್ಮಗಳ ಶ್ರದ್ದಾಪೂರ್ಣ ಆಚರಣೆ.

ನಾಗ ಚತುರ್ಥಿ

ಪುರಾಣ ಕಾವ್ಯ ಮಹಾಕಾವ್ಯಗಳಲ್ಲಿ ನಾಗ=ಗರುಡರಿಗೆ ಸಂಬಂಧಿಸಿದ ಹಲವಾರು ಉಲ್ಲೇಖಗಳಿವೆ.ತೈತ್ತರೀಯದಲ್ಲಿ ನಾಗಪೂಜೆಗೆ ಸಂಬಂಧಿಸಿದ ಶ್ಲೋಕಗಳಿವೆ.ಭಾರತದ ಇತಿಹಾಸದಲ್ಲಿ ನಾಗಾ ಜನಾಂಗವಿರುವ ಒಂದು ಪ್ರಾಂತವೇ ಇದೆ. ನಾಗವಂಶೀಯರು ಕೇರಳ, ಆಸ್ಸಾಂ, ನಾಗಾಲ್ಯಾಂಡಗಳಲ್ಲಿದ್ದಾರೆ.

ಜನಮೇಜಯ ಮಹಾರಾಜನು ತಾನು ಮಾಡುತ್ತಿದ್ದ ಸರ್ಪಯಜ್ಞವನ್ನು ನಿಲ್ಲಿಸಿ ಮಹಾಭಾರತವನ್ನು ಕೇಳಲು ಪ್ರಾರಂಬಿಸಿದುದು ಈ ಶ್ರಾವಣ ಮಾಸದ ಶುದ್ದಪಂಚಮಿಯ ದಿನ. ಇಂಥ ದಿನವನ್ನು ನಾಗಪಂಚಮಿ ಎಂದು ನಾಗ ಮೂರ್ತಿಗೆ/ಹುತ್ತಕ್ಕೆ ಹಾಲೆರೆಯುವ ಮೂಲಕ ನಾಗ ಪಂಚಮಿಯನ್ನು ಈ ಶ್ರಾವಣ ಮಾಸದಲ್ಲಿ ಆಚರಿಸುವರು.

ಇದನ್ನು ಗ್ರಾಮೀಣ ಪ್ರದೇಶದಲ್ಲಿ ನಾಲ್ಕು ದಿನ ಆಚರಿಸುವರು. ಮೊದಲ ದಿನ ರೊಟ್ಟಿ ಪಂಚಮಿ ಎಂದು. ಮೊದಲ ಸಲ ಗಂಡನ ಮನೆಯಿಂದ ಮರಳಿದ ಯುವತಿಯರು ತಮ್ಮ ತಮ್ಮ ಗೆಳತಿಯರೊಟ್ಟಿಗೆ ಸೇರಿ ಗಂಡನ ಮನೆಯ ಉಭಯ ಕುಶಲೋಪರಿ ಹಂಚಿಕೊಳ್ಳುವರು. ನಂತರ ಸಜ್ಜಿರೊಟ್ಟಿ, ಜೋಳದ ರೊಟ್ಟಿ ಹೀಗೆ ವಿವಿಧ ಬಗೆಯ ರೊಟ್ಟಿ ಪಲ್ಯ ಮಾಡಿಕೊಂಡು ಒಬ್ಬರಿಗೊಬ್ಬರು ಸೇರಿ ತಿನ್ನುವ ಮೂಲಕ ರೊಟ್ಟಿ ಹಬ್ಬ ಮಾಡಿ ಎಲ್ಲರೂ ಒಟ್ಟಾಗಿ ಉಂಡಿ ಕಟ್ಟುವ ಮೂಲಕ ನಾಗಚೌತಿಯ ಸಂಭ್ರಮಕ್ಕೆ ಅಣಿಯಾಗುತ್ತಾರೆ.

ನಾಗಚೌತಿಯಂದು ಎಲ್ಲರೂ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಅಳ್ಳಿಟ್ಟು.ಉಸುಳಿ ಮಾಡಿ ಉಂಡಿಗಳನ್ನು ಇಟ್ಟು ಮಣ್ಣಿನ ನಾಗಪ್ಪನಿಗೆ ಹಾಲು ಎರೆಯುವರು.

ದೇವರ ಪಾಲ
ದಿಂಡರ ಪಾಲ
ಅಪ್ಪನ ಪಾಲ
ಅಮ್ಮನ ಪಾಲ
ಅಕ್ಕನ ಪಾಲ

ಹೀಗೆ ಎಲ್ಲರ ಪಾಲು ಇರಲೆಂದು ನಾಗ ಮೂರ್ತಿಗೆ ಹಾಲು ಹೊಯ್ಯುವರು. ಮೂರನೆಯ ದಿನ ನಾಗ ಪಂಚಮಿ. ಅಂದರೆ ಮನೆಯ ಹೊರಗೆ ದೇವಾಲಯವೋ ಅರಳಿ ಕಟ್ಟೆಯ ಕೆಳಗಿರುವ ನಾಗಪ್ಪನ ಮೂರ್ತಿ ಅಥವ ಅಲ್ಲಿ ಎಲ್ಲಿಯೂ ಅನುಕೂಲ ಇಲ್ಲದವರು ಮನೆಯಲ್ಲಿ ಬೆಳ್ಳಿ ನಾಗಪ್ಪನಿಗೆ ಹಾಲು ಹೊಯುವ ಸಂಸ್ಕೃತಿ. ಅಂದು ಕೊಬ್ಬರಿ ಬಟ್ಟಲ ಹಿಚುಕಿ ಒಡೆದು ಹುತ್ತ ಮುರಿಯುವ ಸಂಪ್ರದಾಯ. ನಾಲ್ಕನೆಯ ದಿನ ವರ್ಷ ತೊಡಕು ಅಂದರೆ ಮಣ್ಣೆತ್ತಿನ ಅಮವಾಸೆ ದಿನ ಮಾಡಿದ್ದ ಮಣ್ಣಿನ ಮೂರ್ತಿಗಳನ್ನು ಈ ದಿನ ಹೊಲಕ್ಕೆ ಒಯ್ದು ಅಲ್ಲಿ ಅಂಬಲಿ ಚೆರಗ ಚೆಲ್ಲುವ ಮೂಲಕ ಅಂದರೆ ಆ ದಿನ ಏನಾದರೊಂದು ಹೊಸ ಕೆಲಸ ಮಾಡುವ ಮೂಲಕ ನಾಗಪಂಚಮಿ ಆಚರಿಸುವರು ಹೀಗೆ ಪಂಚಮಿಯನ್ನು ನಾಲ್ಕು ದಿನ ಆಚರಿಸುವ ಸಂಪ್ರದಾಯ ಉತ್ತರಕರ್ನಾಟಕದಲ್ಲಿದೆ.

ನಾಗ ಪಂಚಮಿಯ ಸಂದರ್ಭದ ಆಟಗಳು:

ನಾಗ ಪಂಚಮಿಯ ಸಂದರ್ಭ ಜೋಕಾಲಿ ಜೀಕುವುದು ಇಂದಿಗೂ ಹಳ್ಳಿಗಳಲ್ಲಿ ಬೆಳೆದು ಬಂದ ಸಂಪ್ರದಾಯ.ಜೀಕೋಣ ಬನ್ನಿ, ಜೋಕಾಲಿ. ಜೀವನದ ಅಮರ ಜೋಕಾಲಿ ಎಂದು ಹಾಡುವ ಹೆಣ್ಣು ಮಕ್ಕಳು ಗಿಡದ ಟೊಂಗೆಗೆ ಮನೆಯಲ್ಲಿ ಮಾಡಿಟ್ಟ ವಿವಿಧ ಉಂಡಿಗಳನ್ನು ದಾರಕ್ಕೆ ಕಟ್ಟಿ ಜೀಕು ಹೊಡೆದು ಅವುಗಳನ್ನು ಬಾಯಲ್ಲಿ ಕಚ್ಚುವ ಸ್ಪರ್ಧೆ ನಡೆಸುವರು. ಯಾರು ಜೋರಾಗಿ ಜೀಕಿ ಉಂಡಿಯನ್ನು ಬಾಯಲ್ಲಿ ಕಚ್ಚಿ ಹಿಡಿಯುವರೋ ಅವರಿಗೆ ವಿವಿಧ ಉಂಡಿಗಳನ್ನು ಕೊಡುವರು. ಇನ್ನು ಗಂಡು ಮಕ್ಕಳು ಗಿಟಕ ಕೊಬ್ಬರಿ ದಾರದಿಂದ ಗಿಡದ ಟೊಂಗೆಗೆ ಕಟ್ಟಿ ಅದನ್ನು ಬಾಯಿಂದ ಕಚ್ಚಿ ತರುವ ಸ್ಪರ್ಧೆ ನಡೆಸುವರು.

ಇಲ್ಲಿ ತಮ್ಮ ತಮ್ಮ ಯೋಗ್ಯತೆಯನುಸಾರ ಹಣ, ಒಡವೆ ಇತ್ಯಾದಿ ಪಣಕ್ಕಿಡುವರು. ಇನ್ನೊಂದು ವಿಶೇಷತೆಯೆಂದರೆ ಪಂಚಮಿ ಸಂದರ್ಭ ಮಳೆರಾಯನ ಆಗಮನ ರೈತರಿಗೆ ತುಸು ಬಿಡುವು ಕೊಟ್ಟಿರುತ್ತದೆ. ಹೀಗಾಗಿ ರೈತರು ಲಿಂಬೆಕಾಯಿಯನ್ನು ತಮ್ಮ ಶಕ್ತಿಯನುಸಾರ ಕೆಲವು ಎಸೆತಗಳಲ್ಲಿ ದೂರ ಎಸೆಯುವ ಸ್ಪರ್ಧೆ ಆಯೋಜಿಸುತ್ತಾರೆ. ಅಂದರೆ ಎರಡು ಮೂರು ಎಸೆತಗಳಲ್ಲಿ ಯಾರು ಹೆಚ್ಚು ದೂರ ಎಸೆಯುವರೋ ಅವರಿಗೆ ಬಹುಮಾನ ನೀಡುವರು.

ಇನ್ನು ಯುವಕರು ಮೊಣಕಾಲು ಮುರಿ ಆಟವಾಡುವರು ಇಲ್ಲಿ. ಮೂರು ಕಂಬಗಳು ಅದು ವಿವಿಧ ಆಕಾರದಲ್ಲಿದ್ದು ಹಗ್ಗ, ಎತ್ತುಗಳಿಗೆ ಕೊರಳಿಗೆ ಬಿಗಿಯುವ ಚರ್ಮದ ಎಳೆ,ಚಕ್ಕಡಿಯ ಬೋರುಗಡೆ,ಗಟ್ಟಿಯಾದ ಕಲ್ಲುಗಳು, ಏಣಿಗೆ ಬಳಸುವ ಬಿದಿರುಗಳು ಹನ್ನೆರಡು ಬಳಸಿಕೊಂಡು ಏಣಿಯಾಕಾರದ ಗಡೆ ನಿರ್ಮಿಸಿರುವರು.

ಈ ಏಣಿಯನ್ನು ಏರುವ ಸಂದರ್ಭದಲ್ಲಿ ಶರೀರದ ಸಮತೂಕ ಕಾಯ್ದುಕೊಂಡು ಏರಲು ಅಣಿಯಾಗಬೇಕು ಕೈ ಹಿಡಿಯುವಾಗಲು ಕೂಡ ಎಚ್ಚರಿಕೆಯಿಂದ ಹಿಡಿದುಕೊಳ್ಳುವ ಜೊತೆಗೆ ಏಣಿಯ ಮೇಲೆ ಕಾಲು ಇಡುವಾಗ ಶರೀರದ ಭಾರ ಸಮಸ್ಥಿತಿಯಲ್ಲಿರುವಂತೆ ಇಟ್ಟುಕೊಳ್ಳಬೇಕು ಸ್ವಲ್ಪ ತಪ್ಪಿದರೂ ಆ ಏಣಿಯು ತಿರುವು ಮುರುವಾಗುತ್ತದೆ ಆಗ ಅದರ ಮೇಲಿದ್ದ ವ್ಯಕ್ತಿ ಕೆಳಗೆ ಬೀಳುವನು.

ನಿಜಕ್ಕೂ ಶಾರೀರಕ, ಹಾಗೂ ಮಾನಸಿಕ ಚಿತ್ತವನ್ನು ಕಾಯ್ದುಕೊಂಡು ಆಡುವ ಈ ಆಟ ಸೋಜಿಗವನ್ನುಂಟು ಮಾಡುತ್ತದೆ. ಇದಕ್ಕೆ ಗ್ರಾಮೀಣರು ಮೊಣಕಾಲು ಮುರಿ ಅಥವ ಮಿಂಡರ ಗಣಿ ಎಂದು ಬಳಸಿದ್ದು ಕೂಡ ಅಷ್ಟೇ ಅರ್ಥಪೂರ್ಣವಾಗಿದೆ. ಈ ಆಟವನ್ನು ಶರ್ಯತ್ತು ಕಟ್ಟುವ ಮೂಲಕ ಆಡುತ್ತಾರಂತೆ ಇಲ್ಲಿ ಗೆದ್ದವರಿಗೆ ಹಣದ ರೂಪದಲ್ಲೊ ವಸ್ತುಗಳ ರೂಪದಲ್ಲಿ ಅಲ್ಲಿ ಕೂಡಿದ ಎಲ್ಲರೂ ನಿರ್ಧರಿಸಿ ಕಣಕ್ಕಿಳಿಸಿ ತಮ್ಮವರು ಗೆಲ್ಲಲಿ ಎಂದು ಚೀರುತ್ತ ಶಿಳ್ಳೆ ಹಾಕುತ್ತ ಇಲ್ಲಿಯ ಮನರಂಜನೆಯನ್ನು ಸವಿಯುತ್ತಾರೆ, ಒಟ್ಟಾರೆ ನಾಗ ಪಂಚಮಿ ಹಬ್ಬ ಮಳೆಗಾಲದಲ್ಲಿ ಮಾನವನ ದೇಹ ಮಳೆಯಿಂದ ರಕ್ಷಿಸಿಕೊಂಡು ಆರೋಗ್ಯವಾಗಿರಲೆಂದು ಇಂತಹ ಸಂದರ್ಭದಲ್ಲಿ ಅಗತ್ಯವಾದ ಆಹಾರ ಸೇವಿಸಲು ಎಣ್ಣೆ ಪದಾರ್ಥಗಳು ಉಷ್ಣ ಪದಾರ್ಥಗಳಿಂದ ಉಂಡೆ.ಉಸುಳಿ,ಇತ್ಯಾದಿಗಳನ್ನು

ಬೆಲ್ಲ.ಎಣ್ಣೆ,ಕೊಬ್ಬರಿ,ಕಡಲೆ,ಮಡಕೆ,ರವೆ,ಎಳ್ಳು,ಗಳಂತಹ ಪದಾರ್ಥಗಳನ್ನು ಬಳಸಿ ಮಾಡಿ ತಿನ್ನುವುದರಿಂದ ದೇಹಕ್ಕೆ ಉಷ್ಣತೆ ಪ್ರಾಪ್ತವಾಗಿ ಚಳಿ ಎದುರಿಸಲು ನಮ್ಮ ದೇಹ ಸನ್ನದ್ಧವಾಗುತ್ತದೆ ಎಂಬ ತತ್ವದಲ್ಲಿ ಪೂಜೆಯ ಜೊತೆಗೆ ಹಬ್ಬದ ಮಹತ್ವವನ್ನು ವೈಜ್ಞಾನಿಕ ಹಿನ್ನಲೆಯೊಂದಿಗೆ ಮಾಡಿರುವರು.


ವೈ.ಬಿ.ಕಡಕೋಳ
ಸಂಪನ್ಮೂಲ ವ್ಯಕ್ತಿಗಳು

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group