spot_img
spot_img

ವೈಕಲ್ಯತೆಯಲ್ಲೂ ಬೆಂಕಿಯಲ್ಲಿ ಅರಳಿದ ಹೂ; ನಂದಕುಮಾರ ದ್ಯಾಂಪುರ್

Must Read

- Advertisement -

ಯ್ಯೂಟ್ಯೂಬ್ ಚಾನೆಲ್‍ದಲ್ಲಿ “ಬಾಗಿನ” ಎಂಬ ಕಿರು ಚಿತ್ರ ಸಿ.ಬಾಬಾಜಾನ್ ಕತೆ ಚಿತ್ರಕತೆ ನಿರ್ದೇಶನದಲ್ಲಿ  ಮೂಡಿಬಂದಿರುವುದನ್ನು ಅದರಲ್ಲಿ ಕುಡುಕನ ಪಾತ್ರ ಮಾಡಿದ ನಂದಕುಮಾರ್ ಅಭಿನಯ ಮತ್ತು 5ನೆಯ ತರಗತಿಯ ಒಟ್ಟಿಗೆ ಬಾಳುವ ಆನಂದ ಗದ್ಯಪಾಠದ ಕಿರುಚಿತ್ರದ ಶಾಲಾಮೇಷ್ಟ್ರು ಪಾತ್ರ.

ದೀಪಾ ಎಂಬ ಕಿರುಚಿತ್ರದ ಮಕ್ಕಳಿಲ್ಲದ ದಂಪತಿಯ ತಂದೆಯ ಪಾತ್ರ. ಇವುಗಳನ್ನೆಲ್ಲ ನೋಡುತ್ತಿದ್ದ ನನಗೆ ನನ್ನ ಕತೆಯಾಧಾರಿತ “ಕತೆಯಲ್ಲ ಜೀವನ” ಚಲನಚಿತ್ರದಲ್ಲಿ ಕೂಡ ತಮ್ಮ ಪಾತ್ರ ನಿರ್ವಹಿಸುವ ಜೊತೆಗೆ ನನ್ನ ಚಿತ್ರೀಕರಣ ಸಂದರ್ಭದಲ್ಲಿ ಸಂಭಾಷಣೆ ಶೈಲಿ.ಜೊತೆಗೆ ವೇಷಭೂಷಣ ಕುರಿತು ಚರ್ಚಿಸಿದ್ದ ನಂದಕುಮಾರ್ ಅವರ ಪ್ರತಿಭೆಯ ಕುರಿತು ಒಂದು ಪುಟ್ಟ ಬರಹ ರೂಪಿಸಬೇಕೆನಿಸಿತು.

ಕೋರೋನಾ ಲಾಕ್ ಡೌನ್ ಸಂದರ್ಭದಲ್ಲಿ ಪೋನ್‍ನಲ್ಲಿ ಅವರ ಬದುಕಿನ ಕುರಿತು ಸಂದರ್ಶನ ಮೂಲಕ ಮಾಹಿತಿ ಕಲೆ ಹಾಕಿದೆ. ಅವರ ವಿಕಲತೆಯನ್ನೂ ಮರೆಮಾಚಿ ಬದುಕಿನಲ್ಲಿ ನಲಿವಿಗಿಂತ ನೋವೇ ಹೆಚ್ಚು ಹೊಂದಿ. ಅದನ್ನು ಯಾರಿಗೂ ತೋರ್ಪಡಿಸದೇ ನಗುನಗುತ್ತ ಬಾಳುತ್ತಿರುವ ಇಂದಿನ ರೀತಿಯು ಕಣ್ಮುಂದೆ ಬಂದು ಹೋಯಿತು.

- Advertisement -

ಕಿತ್ತು ತಿನ್ನುವ ಬಡತನ.ಶಿಕ್ಷಕನಾಗಬೇಕು ಅದಕ್ಕಾಗಿ ಓದಬೇಕು.ಎಂಬೆಲ್ಲ ಕನಸುಗಳು.ಹುಟ್ಟಿನಿಂದ ಬಂದ ವಿಕಲತೆ.ಬಾಗಲಕೋಟೆಯ ಕೂಡಲಸಂಗಮ ಗ್ರಾಮದ ನಂದನಗೌಡ ದ್ಯಾಂಪುರ್ ಎಂಬ ಕಲಾವಿದ ಶಿಕ್ಷಕನ ಕತೆಯಿದು.1-6-1981 ಬಸನಗೌಡ ಕಸ್ತೂರಿಬಾಯಿ ದಂಪತಿಗಳ ಚೊಚ್ಚಲ ಮಗು ಗಂಡು ಅದು ನಂದಕುಮಾರ. ಹುಟ್ಟುತ್ತಲೇ ಕಾಲಿನ ವಿಕಲತೆ.

ನೋಡಲು ತುಂಬಾ ಸುಂದರ ಮಗು. ತಂದೆ ತಾಯಿ ಚೊಚ್ಚಲು ಹೆರಿಗೆ ಗಂಡಾದರೂ ವಿಕಲತೆಯನ್ನು ಮರೆಮಾಚಿ ಸುಂದರ ಮಗುವನ್ನು ಖುಷಿಯಿಂದ ಲಾಲನೆ ಪಾಲನೆ ಮಾಡತೊಡಗಿದರು. ಕಿತ್ತು ತಿನ್ನುವ ಬಡತನ ಮನೆತನ ಸಾಗುವುದು ದುಸ್ತರವೆನಿಸಿದಂತೆ ಮಗುವನ್ನು ಅಜ್ಜಿಯ ಆಸರೆಯಲ್ಲಿ ಬೆಳೆಯಲಿ ಎಂದು ಕುಟುಂಬ ದುಡಿಮೆಗೆಂದು ಮಹಾರಾಷ್ಟ್ರದತ್ತ ಪಯಣ.

- Advertisement -

ಅಜ್ಜಿಯೇ ತಂದೆ ತಾಯಿ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬಂತೆ ಇರುವ ಆದಾಯದಲ್ಲಿ ಮೊಮ್ಮಗನಿಗೆ ಎಲ್ಲ ರೀತಿಯಿಂದಲೂ ಪೋಷಣೆ ಮಾಡುತ್ತಿದ್ದಳು. ಮೊಮ್ಮಗನಿಗೆ ಆರು ವರ್ಷ ತುಂಬುತ್ತ ಬಂದಿತು. ಮೊಮ್ಮಗನನ್ನು ತಮ್ಮ ಊರಿನ ಶಾಲೆಯಲ್ಲಿ ಒಂದನೇ ತರಗತಿಗೆ ಸೇರಿಸಿದಳು. ಆ ಊರಿನ ಶಾಲೆಗೆ ಬರುವ ಶಿಕ್ಷಕರು ದೂರದ ಊರುಗಳಿಂದ ಬರುತ್ತಿದ್ದರು.

ಅವರಲ್ಲಿ ಇಬ್ಬರು ಶಿಕ್ಷಕರು ಶಾಲೆಯಲ್ಲಿ ವಾಸ್ತವ್ಯ ಮಾಡಿಕೊಂಡಿದ್ದರು. ಕನ್ನೂರ ಸರ್ ಎಂ.ಎಚ್.ಹೆಬ್ಬಾಳ ಮತ್ತು ಬೇರೆ ಊರಿನಿಂದ ಬಂದು ಹೋಗುತ್ತಿದ್ದ ಶ್ರೀಮತಿ ಜಯಶ್ರೀ ಬೆಣ್ಣಿ. ಅಜ್ಜಿ ಅವರಿಗೆ ರೊಟ್ಟಿ ಪಲ್ಯ ಮಾಡಿ ಕೊಡುತ್ತ ತನ್ನ ಮೊಮ್ಮಗನಿಗೆ ಉತ್ತಮ ಶಿಕ್ಷಣ ನೀಡಿ ಎಂದು ಅಂಗಲಾಚುತ್ತಿದ್ದಳು.

ಜೊತೆಗೆ ಶಿಕ್ಷಕರ ಕೊರತೆ ಇರುವ ಸಂದರ್ಭದಲ್ಲಿ ಹಿರೇಮಣಿಯ ರೂಪದಲ್ಲಿ ನಂದಕುಮಾರನಿಗೆ ಜವಾಬ್ದಾರಿ ನೀಡುತ್ತಿದ್ದರು. ಅದು ನಂದಕುಮಾರನ ಕಲಿಕೆಯಲ್ಲಿ ಹೆಚ್ಚಿನ ಮಟ್ಟದ ವಿದ್ಯೆಗೆ ಆಸರೆಯಾಯಿತು. ಅಜ್ಜಿಯ ದುಡಿಮೆಯನ್ನು ಹತ್ತಿರದಿಂದ ಕಂಡ ನಂದಕುಮಾರ ತಾನೂ ಬದುಕು ಕಟ್ಟಿಕೊಂಡು ಅಜ್ಜಿಯನ್ನು ಕೆಲಸದಿಂದ ಬಿಡಿಸಬೇಕೆಂಬ ಉತ್ಕಟ ಕನಸು ಕಾಣುತ್ತಿದ್ದ.

ಹೊಸಗೌಡರ ಮತ್ತು ಕುಂಟೋಜಿ ಎಂಬ ಎಬ್ಬರು ಶಿಕ್ಷಕರು ನಂದಕುಮಾರನಿಗೆ ಜ್ಞಾನಧಾರೆ ಎರೆಯುತ್ತಿದ್ದರು. ಅಜ್ಜಿ ಸಿದ್ರಾಮವ್ವ ಗೌಡತಿ ಅದಕ್ಕೆ ನೀರೆರೆದು ಪೋಷಣೆಗೈಯುತ್ತಿದ್ದಳು. ಸಿದ್ರಾಮವ್ವ ಗೌಡತಿ ಎಂಬ ಅಜ್ಜಿಗೆ ತನ್ನ ಇಳಿ ವಯಸ್ಸಿನಲ್ಲಿ ದುಡಿಯುವ ಮೂಲಕ ಮೊಮ್ಮಗನನ್ನು ಓದಿಸತೊಡಗಿದ್ದಳು.

ಪ್ರಾಥಮಿಕ ಶಿಕ್ಷಣ, ಪ್ರೌಢಶಿಕ್ಷಣ ಅದೇ ಊರಲ್ಲಿ. ಶಿಕ್ಷಣದ ಜೊತೆಗೆ ಶಾಲೆಯಲ್ಲಿ ಜರುಗುತ್ತಿದ್ದ ಹಾಡು ಭಾಷಣ ನಾಟಕಗಳಲ್ಲಿ ಕೂಡ ನಂದಕುಮಾರ ತನ್ನದೇ ಛಾಪನ್ನು ಮೂಡಿಸಿದ್ದ. ಓದು ಬರಹ ಆಟಪಾಟ ಎಲ್ಲದರಲ್ಲೂ ನಂದಕುಮಾರನೇ ಮುಂದು.

ಊರವರ ಆಸರೆ

ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯಿತು. ಫಲಿತಾಂಶ ಬಂದಾಗ ತಮ್ಮ ತಮ್ಮೂರಿನ ಪ್ರೌಢಶಾಲೆಗೆ ಮೊದಲಿಗರಾಗಿ ನಂದಕುಮಾರ್ ಉತ್ತೀರ್ಣರಾಗಿದ್ದರು. ಊರವರಿಗೆಲ್ಲ ಬಡತನದಲ್ಲಿ ನಂದಕುಮಾರ್ ಸಾಧನೆ ಮೆಚ್ಚುಗೆ ತರಿಸಿತ್ತು.

ಅಜ್ಜಿಗಂತೂ ಹೇಳತೀರದ ಆನಂದ. ಹಾಗಾದರೆ ಮುಂದೇನು.? ಎಂಬ ಪ್ರಶ್ನೆ ಮೂಡತೊಡಗಿತು. ಕಲಿಸಿದ ಗುರುಗಳು ತಮಗಾದ ಸಹಾಯ ಮಾಡುವುದಾಗಿ ಹೇಳಿದಾಗ ಊರಿನ ಹಿರಿಯರಾದ ಸಂಗಯ್ಯ ಹಿರೇಮಠರು ಮತ್ತು ಶ್ರೀ ಮಡಿವಾಳಪ್ಪ ಬ್ಯಾಲ್ಯಾಳ ಕೂಡ ಊರಿನ ಹಲವು ಪ್ರಮುಖರೊಡನೆ ಚರ್ಚಿಸಿ ಬಡತನದ ಈ ವಿದ್ಯಾರ್ಥಿಯ ಮುಂದಿನ ಶಿಕ್ಷಣಕ್ಕೆ ನೆರವಾಗುವ ಯೋಜನೆ ರೂಪಿಸಿದರು. ಊರಿ ಹಿರಿಯರ ನೆರವೂ ಸಿಕ್ಕಿತು.ಇದು ಹನಿ ಹನಿ ಕೂಡಿದರೆ ಹಳ್ಳ ಎಂಬಂತಾಗಿ ಪಿ.ಯು.ಸಿ ವಿಜ್ಞಾನ ಓದಬೇಕೆಂಬ ವಿದ್ಯಾರ್ಥಿಗೆ ಕಲಾ ವಿಭಾಗದಲ್ಲಿ ದಾಖಲಾಗುವಂತಾಯಿತು.

ಕಾಲೇಜು ಶಿಕ್ಷಣದಿಂದ ನೌಕರಿಯವರೆಗೆ   ಎಸ್.ಎಸ್.ಎಲ್.ಸಿ ಬಿ.ಬಿ.ಇಂಗಳಗಿಯ ಪ್ರೌಢಶಾಲೆಗೆ ಮೊದಲ ಸ್ಥಾನ ಪಡೆದು ಉತ್ತೀರ್ಣರಾದ ನಂದಕುಮಾರ್ ಮುಂದೆ ಊರಿನ ಹಿರಿಯರ ಮತ್ತು ತಮಗೆ ಕಲಿಸಿದ ಶಿಕ್ಷಕರ ಸಹಾಯ ಸಹಕಾರದಿಂದ ಸಿಂದಗಿಯ ಪಿ.ಯು.ಕಾಲೇಜಿನಲ್ಲಿ ಕಲಾ ವಿಭಾಗಕ್ಕೆ ದಾಖಲಾದರು. ಅಲ್ಲಿ ಓದಿನ ಜೊತೆಗೆ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತ ಕಾಲೇಜು ವಿದ್ಯಾಭ್ಯಾಸ ಸಾಗತೊಡಗಿತು.

ಪಿ.ಯು.ಸಿ ಪ್ರಥಮ ವರ್ಷ ಉತ್ತೀರ್ಣವಾಗುವಷ್ಟರಲ್ಲಿ ಅದೇ ಕಾಲೇಜಿನ ಎ.ಆರ್.ಹೆಗ್ಗನದೊಡ್ಡಿ ಎಂಬ ಶಿಕ್ಷಕರು ನಂದಕುಮಾರನ ಪ್ರತಿಭೆ ಕಂಡು ಈ ಬಡ ಹುಡುಗನು ಬೇರೆ ಕಡೆ ಕೆಲಸ ಮಾಡುತ್ತ ಅಭ್ಯಾಸ ಮಾಡುತ್ತಿರುವನು. ಇವನ ಶಿಕ್ಷಣಕ್ಕೆ ತಾವು ಸಹಾಯ ಮಾಡುವ ಆಲೋಚನೆ ಮಾಡಿದರು. ಈ ವಯಸ್ಸಿನಲ್ಲಿ ಕೂಲಿ ಮಾಡುತ್ತ ಓದುವುದು ಕಷ್ಟ ಸಾಧ್ಯವಾಗಿತ್ತು.ಹೀಗಾಗಿ ತಮ್ಮ ಊರಿಗೆ ಮರಳಿದನು. ಎರಡನೇ ವರ್ಷದ ಪಿ.ಯು.ಸಿಯನ್ನು ಪ್ರತಿಶತ 80 ಅಂಕಗಳೊಂದಿಗೆ ಉತ್ತೀರ್ಣರಾದರು.

ಶಿಕ್ಷಕರ ತರಬೇತಿಯಲ್ಲಿ

ಪಿ.ಯು.ಸಿ ಕಲಿಯುವಾಗಲೇ ಅವರಿವರ ಬಳಿ ಸಹಾಯಕ್ಕಾಗಿ ಅಂಗಲಾಚಿದ್ದಾಗಿದೆ.ಮುಂದೆ ಇನ್ನೂ ಹಣ ಬೇಕು.ಕಿತ್ತು ತಿನ್ನುವ ಬಡತನದ ಮಧ್ಯೆ ಕನಸನ್ನು ಸಾಕಾರಗೊಳಿಸಲು ಹೆಣಗುವುದಿದೆಯಲ್ಲ. ಭಗವಂತ ನನ್ನ ಕಷ್ಟ ಇನ್ನಾರಿಗೂ ಬರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತ ಸುಮ್ಮನೆ ಕುಳಿತುಕೊಳ್ಳದೇ ಕತೆ, ಕವನ, ನಾಟಕ ರಚನೆಯನ್ನು ಮಾಡುತ್ತ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತ ತನ್ನ ಬದುಕಿನ ಕನಸು ಕಾಣತೊಡಗಿದ.

ಅದರ ಫಲವೇನೋ ಗುಲ್ಬರ್ಗ ಜಿಲ್ಲೆಯ ಅಫಜಲ್‍ಪುರಕ್ಕೆ ಆಗಮಿಸಿ ಶಿಕ್ಷಕರ ತರಬೇತಿಗೆ ನೋಂದಾಯಿಸಿಕೊಂಡು ಅಲ್ಲಿಯೇ ಒಂದು ಪುಟ್ಟ ಕೆಲಸವನ್ನು ಅರಸಿಕೊಂಡು ತನ್ನ ಬಟ್ಟೆ ಬರೆ ಇರಲು ಸ್ಥಳಾವಕಾಶವನ್ನು ಒಂಟಿಯಾಗಿ ಮಾಡಿಕೊಂಡ.

ಇದನ್ನು ವರ್ಷವಿಡೀ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಟಿ.ಸಿ.ಎಚ್.ಕಾಲೇಜಿನ ಪ್ರಾಚಾರ್ಯರು  ಮಲ್ಲಯ್ಯ ಎಸ್ ಕರಮಂಟನಾಳ ಇವರ ಒಳ್ಳೆಯ ಗುಣವನ್ನು ಕಂಡು ವಿಕಲಚೇತನನಾಗಿ ಶಿಕ್ಷಣಕ್ಕಾಗಿ ಪಡುತ್ತಿರುವ ಕಷ್ಟವನ್ನು ಕಂಡು ಹತ್ತಿರ ಕರೆದು ಇನ್ಮುಂದೆ ಈ ರೀತಿ ದುಡಿಯುವ ಗೋಜಿಗೆ ಹೋಗದೇ ಚನ್ನಾಗಿ ಓದು ನಿನ್ನ ಬಟ್ಟೆ ಬರೆ ಫೀ ಊಟದ ಖರ್ಚು ಎಲ್ಲ ನನ್ನದು ಎಂದು ಹೇಳಿದರು. ಅವರನ್ನು ತನ್ನ ದತ್ತು ತಂದೆಯೆಂದೇ ಗೌರವಿಸಿದ ನಂದಕುಮಾರ ಅವರು ನೀಡಿದ ಊಟೋಪಚಾರ ಎಂದಿಗೂ ಮರೆಯಲಾಗದು ಎಂದು ನೆನಪಿಸಿಕೊಳ್ಳುತ್ತಾರೆ.

ಈ ನಡುವೆ ಎನ್.ಎಸ್.ಎಸ್ ಕ್ಯಾಂಪಿನಲ್ಲಿ ತಾನು ರಚಿಸಿದ ಕತೆ ಕವನ ನಾಟಕಗಳನ್ನು ಪ್ರಚುರ ಪಡಿಸುವ ಮೂಲಕ ತನ್ನಲ್ಲಿರುವ ಕಲಾವಿದರನನ್ನು ತೋರ್ಪಡಿಸಿದ. ಇವರ ಮುಖ ಮತ್ತು ಮಾತುಗಳು ಹೆಣ್ಣುತನದಿಂದ ಕೂಡಿದ್ದರಿಂದ ಬರೀ ಸ್ತ್ರೀ ಪಾತ್ರಗಳನ್ನು ಮಾಡತೊಡಗಿದರು.

ಜಂಬಕೊಚ್ಚಿದ ಉತ್ತರಕುಮಾರ ನಾಟಕದಲ್ಲಿ ಉತ್ತರಕುಮಾರನಾಗಿ, ಹಾಸ್ಯ ನಾಟಕ ಯೋಧನ ಪರೇಡ್‍ದಲ್ಲಿ ಯೋಧನ ಪತ್ನಿಯ ಪಾತ್ರ. ದುತ್ತರಗಿ ಬಾಗಮ್ಮ ನಾಟಕದಲ್ಲಿ ಸ್ವಾಮೀಜಿಯ ಪಾತ್ರದಲ್ಲಿ ನಟಿಸುವ ಮೂಲಕ ತಮ್ಮಲ್ಲಿ ಒಬ್ಬ ಕಲಾವಿದ ಇದ್ದಾನೆ ಎಂಬುದನ್ನು ದೃಢಪಡಿಸಿದರು.  ಟಿ.ಸಿ.ಎಚ್ ಪ್ರತಿಶತ 74 ಅಂಕ ಗಳಿಸುವ ಮೂಲಕ ಉತ್ತೀರ್ಣನಾದನು.

ನೌಕರಿಯತ್ತ ಬದುಕು

ಶಿಕ್ಷಣ ಮುಗಿಸಿದ್ದಾಯಿತು. ಸರ್ಕಾರ ಅರ್ಜಿ ಕರೆಯುವವರೆಗೂ ಮೊದಲಿನಿಂದಲೂ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿ ಗೊತ್ತಿದ್ದ ನಂದಕುಮಾರ್ ಅಲ್ಲಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತ ಮಕ್ಕಳಿಗೆ ಟ್ಯೂಷನ್ ಹೇಳುತ್ತ ತನ್ನ ಬದುಕನ್ನು ಕಳೆಯತೊಡಗಿದ.ಇತ್ತ ಅಜ್ಜಿಗೆ ವಯಸ್ಸಾಗಿತ್ತು.

ಅವಳನ್ನು ಸಲುಹಬೇಕು ಎಂಬ ಮಹದಾಸೆ ಹೊಂದಿದ್ದ ನಂದಕುಮಾರನಿಗೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನಾಗುವ ಯೋಗಾಯೋಗ ಕೂಡಿ ಬಂದಿತು. ಅದು ಕೂಡ ತನ್ನ ಸ್ವಂತ ಊರಾದ ಕೂಡಲಸಂಗಮದ ಹಿರಿಯ ಪ್ರಾಥಮಿಕ ಶಾಲೆಯನ್ನೇ ಕೌನ್ಸಿಲಿಂಗ್‍ನಲ್ಲಿ ಆಯ್ದುಕೊಂಡಿದ್ದ.

2005 ರಲ್ಲಿ ಶಿಕ್ಷಕ ವೃತ್ತಿಗೆ ಹಾಜರಾದ ಕೂಡ. ಯಾವುದೇ ನೌಕರಿಗೆ ಹಾಜರಾದರೂ ಕೂಡ ಮೊದಲ ವೇತನ ಕೈಗೆ ಸಿಗಲು ಕನಿಷ್ಟ ನಾಲ್ಕೈದು ತಿಂಗಳು ಬೇಕೇ ಬೇಕು. ಆದರೂ ಅಜ್ಜಿಗೆ ಭೇಟಿಯಾಗಿ ಅಜ್ಜಿ ಇನ್ನು ನಿನ್ನ ಕಷ್ಟ ಕಳೆಯಿತು.ನಾನು ಶಿಕ್ಷಕನಾದೆ. ನನ್ನ ಮೊದಲವೇತನದಲ್ಲಿ ನಿನಗೊಂದು ಚಲೋ ಸೀರೆ ತರುವೆ.ಎಂದೆಲ್ಲ ಅಜ್ಜಿಯ ಮುಂದೆ ತನ್ನ ಕನಸುಗಳನ್ನು ಹೆಣೆದಿದ್ದ.

ದೇವರು ಈ ಕನಸನ್ನು ನನಸು ಮಾಡುವ ಸಮಯವನ್ನು ಒದಗಿಸಿ ಕೊಡಲಿಲ್ಲ. ಸಂತಸವನ್ನು ಕೇಳಿದ್ದ ಅಜ್ಜಿ ಮೊಮ್ಮಗ ನೌಕರಿಗೆ ಸೇರಿದನಲ್ಲ ಎಂದು ಸಂತಸ ಪಟ್ಟಿದ್ದಳು.ಅದಾದ ಕೆಲವೇ ದಿನಗಳಲ್ಲಿ ಅಜ್ಜಿಯು ತೀರಿಹೋದಳು.

ಒಮ್ಮಲೇ ಬರಸಿಡಿಲಿನಂತೆ ಈ ಸುದ್ದಿ ನಂದಕುಮಾರನಿಗೆ ಅಪ್ಪಳಿಸಿತ್ತು. ತನ್ನ ಬದುಕಿಗೆ ಆಸರೆಯಾಗಿ ಬದುಕಿಗೆ ಬೆಳಕನ್ನು ಕೊಟ್ಟ ಹೆತ್ತ ತಂದೆತಾಯಿಯರ ಪ್ರೀತಿಯನ್ನು ತೋರಿಸಿದ್ದ ಅಜ್ಜಿಗೆ ನನ್ನ ಮೊದಲ ಸಂಬಳದಲ್ಲಿ ತರಬೇಕೆಂದಿದ್ದ ಸೀರೆ ತರಲಾಗಲಿಲ್ಲ. ಅವಳನ್ನು ಸಲಹುವ ಕನಸನ್ನು ದೇವರು ನನಸು ಮಾಡಲಿಲ್ಲ ಎಂದೆಲ್ಲ ವೇದನೆ ಪಡತೊಡಗಿದ.

ಅದೇ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಬಡಕನ್ನವರ ಗುರುಗಳು ಮತ್ತು ಘಂಟಿ ಗುರುಗಳು ತನ್ನ ಸಹೋದ್ಯೋಗಿ ಶಿಕ್ಷಕನ ಅಳಲನ್ನು ಕಂಡರು.ಅಜ್ಜಿಯ ಅಂತ್ಯ ಸಂಸ್ಕಾರಕ್ಕೆ ನೆರವಾದರು. ಈ ಸುದ್ದಿ ತಿಳಿದು ದೂರದ ಮಹಾರಾಷ್ಟ್ರದಲ್ಲಿ ದುಡಿಯಲು ಹೋಗಿದ್ದ ತಂದೆ ತಾಯಿ ಸಹೋದರ ಸಹೋದರಿಯರೂ ಊರಿಗೆ ಮರಳಿದರು.

ಮಗ ನೌಕರಿ ಹಿಡಿದಿರುವನು.ಇನ್ನು ನಮ್ಮ ಕಷ್ಟ ತೀರುವುದು ಎಂದುಕೊಂಡು ತಾಯಿ ಮಗನಿಗೆ ತನ್ನ ತಂದೆ ವಿಪರೀತ ಕುಡಿತಕ್ಕೆ ದಾಸನಾಗಿರುವ ಸಂಗತಿಯನ್ನು ತಿಳಿಸಿದಳು. ಮತ್ತೆ ಮಹಾರಾಷ್ಟ್ರಕ್ಕೆ ದುಡಿಯಲು ಹೋದರೆ ತಮ್ಮ ಕುಟುಂಬ ನಿರ್ಗತಿಕವಾಗುವುದು ಎಂಬ ವಿಷಯವನ್ನ ಮಗನ ಮುಂದೆ ಹೇಳಿಕೊಂಡಳು. ಕೂಡಲಸಂಗಮದಲ್ಲಿ ಎಲ್ಲರೂ ಒಟ್ಟಿಗೆ ಇರತೊಡಗಿದರು.

ಅಜ್ಜಿಯ ಸಾವಿನ ನಂತರ ವಿಪರೀತ ಕುಡಿತಕ್ಕೆ ಶರಣಾಗಿದ್ದ ತಂದೆಯೂ ಕೂಡ ಬಹಳ ದಿನಗಳು ಬದುಕಲಿಲ್ಲ.ಅವರ ಸಾವು ಕೂಡ ಮತ್ತಷ್ಟು ಮಾನಸಿಕ ದುಗುಡತೆಯನ್ನು ತಂದೊಡ್ಡಿತು. ಹೆತ್ತ ತಾಯಿಯ ಪೋಷಣೆ ತಮ್ಮ ತಂಗಿಯರ ಶಿಕ್ಷಣ  ಸಾಗತೊಡಗಿತು.

ಕೌಟುಂಬಿಕ ಜವಾಬ್ದಾರಿಯ ಜೊತೆ ವೈವಾಹಿಕ ಬದುಕು

ವಯಸ್ಸಾದ ತಾಯಿ, ಚಿಕ್ಕ ಸಹೋದರ ಸಹೋದರಿಯರ ಶಿಕ್ಷಣ ಹೀಗೆ ಎಲ್ಲ ಜವಾಬ್ದಾರಿ ಹೊತ್ತ ನಂದಕುಮಾರನಿಗೆ ವಿವಾಹ ಮಾಡುವುದು ಸೂಕ್ತ ಎಂದು ಇವರ ಜೊತೆಗೆ ತಮ್ಮ ಮನೆಯವರಂತೆ ನಡೆದುಕೊಂಡಿದ್ದ ಶಿಕ್ಷಕರು ಬೆನ್ನೂರು ಗ್ರಾಮದ ಗೌಡರ ಏಕೈಕ ಸುಪುತ್ರಿ ಸುಜಾತಾ ಗೌಡರ ಎಂಬ ಕನ್ಯೆಯೊಡನೆ ವಿವಾಹ ನಿಶ್ಚಯ ಮಾಡಿದರು.

ಸುಜಾತಾ ಕೂಡ ಸಿ.ಪಿಈ.ಡಿ ಮುಗಿಸಿ ಪದವಿ ಶಿಕ್ಷಣ ಪೂರೈಸಿಕೊಂಡ ವಿದ್ಯಾವಂತೆ. ನಂದಕುಮಾರ ಕೂಡ ತಮ್ಮ ಸಹೋದ್ಯೋಗಿ ಗುರುಗಳ ಮಾತಿಗೆ ಒಪ್ಪಿಗೆ ಸೂಚಿಸಿದ.ಅಂದುಕೊಂಡಂತೆ ವಿವಾಹ ನೆರವೇರಿತು. ಮಗ ಸೊಸೆ ಮಕ್ಕಳೊಂದಿಗೆ ತಾಯಿ ಸಂತಸದಿಂದ ಕಾಲ ಕಳೆಯತೊಡಗಿದಳು.

ಇಂತಹ ಸಂದರ್ಭದಲ್ಲಿ ಸಹೋದರನ ಓದು.ಸಹೋದರಿಯರಿಗೆ ಕಂಕಣ ಬಲ ಕೂಡಿ ಬರಲು ಅವರಿಗೂ ವಿವಾಹ ಮಾಡುತ್ತ ತನ್ನ ಬದುಕನ್ನು ಕಟ್ಟಿಕೊಳ್ಳತೊಡಗಿದ ನಂದಕುಮಾರನಿಗೆ ತನ್ನಲ್ಲಿನ ಕಲಾವಿದನ ತುಡಿತ ದೂರದ ಧಾರವಾಡದ ಕಡೆಗೆ ವರ್ಗಾವಣೆಗೊಂಡರೆ ತನ್ನ ಮಕ್ಕಳ ಶಿಕ್ಷಣದ ಜೊತೆಗೆ ತನ್ನಲ್ಲಿನ ಕಲಾವಿದನನ್ನು ಪ್ರಕಟಪಡಿಸಬಹುದು ಎಂದುಕೊಂಡು ತನ್ನ ಪತ್ನಿಗೆ ವರ್ಗಾವಣೆ ಹೊಂದುವ ಕುರಿತು ಚರ್ಚಿಸಿದ. ಅದಕ್ಕೆ ಅವರೂ ಸಹಮತ ವ್ಯಕ್ತಪಡಿಸಿದರು.

ಇದ ಪರಿಣಾಮ 2012 ರಲ್ಲಿ ಹೊನ್ನಾಪುರ ಗ್ರಾಮದ ಶಾಲೆಗೆ ವರ್ಗಾವಣೆ ದೊರಕಿತು.   ಕುಟುಂಬದೊಂದಿಗೆ ಹೊನ್ನಾಪುರ ಶಾಲೆಗೆ ಹಾಜರಾಗಿ ಧಾರವಾಡದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತ ತನ್ನ ಶಾಲೆಯ ಕೆಲಸದ ಜೊತೆಗೆ ಶಿಕ್ಷಕ ನಟ ನಿರ್ದೇಶಕ ನಿರ್ಮಾಪಕ ಸಿ.ಬಾಬಾಜಾನ್‍ರ ಪರಿಚಯ ತನ್ನ ಕನಸಿಗೆ ನೀರೆರೆಯತೊಡಗಿತು.

ಇಬ್ಬರ ಆಸೆಯೂ ಒಂದೇ ಆಗಿರುವುದರಿಂದ ಬಾಬಾಜಾನ್ ತಮ್ಮ ನವರಸ ವೇದಿಕೆಯಲ್ಲಿ ಸದಸ್ಯತ್ವವನ್ನು ಒದಗಿಸಿದರು. ಮುಂದಿನ ದಿನಗಳು ಇಬ್ಬರೂ ಸೇರಿ ಕಿರುಚಿತ್ರಗಳ ನಿರ್ಮಾಣದಲ್ಲಿ ತೊಡಗಿದರು. ಜೊತೆಗೆ ಬಾಬಾಜಾನ್ ತಮ್ಮ ಸಹನಿರ್ದೇಶಕನ ಸ್ಥಾನವನ್ನು ಕೂಡ ನಂದಕುಮಾರನಿಗೆ ನೀಡುವ ಜೊತೆಗೆ ಹಲವಾರು ಕಿರುಚಿತ್ರಗಳಲ್ಲಿ ಅಭಿನಯಿಸಲು ಅನುಕೂಲ ಕಲ್ಪಿಸಿದರು.

ಹೀಗೆ ಪಠ್ಯಾಧಾರಿತ ಕಿರು ಚಿತ್ರಗಳು ಮೂಡಿ ಬರತೊಡಗಿದವು. ಧಾರವಾಡ ದುರ್ಗಾಕಾಲನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಯ ಭಾಗ್ಯ ದೊರೆಯಿತು. 2019 ರಲ್ಲಿ ಧಾರವಾಡಕ್ಕೆ ವರ್ಗಗೊಂಡು ಧಾರವಾಡದಲ್ಲಿ ನೆಲೆನಿಲ್ಲಲು ಅವಕಾಶ ಸಿಕ್ಕಿತು.ಇದು ಇವರಲ್ಲಿನ ಕಲಾವಿದನಿಗೆ ಇನ್ನಷ್ಟು ಅವಕಾಶ ಒದಗಿಸಿತು.

ಮಕ್ಕಳು ಕೂಡ ಜಾಣವಂತರಾದರು. ತಮ್ಮ ಮಗ ವಿನೋದಗೌಡ ಭೂತಾನ್ ದೇಶಕ್ಕೆ ಟ್ವಿಕಾಂಡೋ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಂಗಾರದ ಪದಕದೊಂದಿಗೆ ಭಾರತಕ್ಕೆ ಬಂದಾಗ ದಂಪತಿಗಳಿಗೆ ಸಂತೋಷ ಹೇಳತೀರದ್ದಾಗಿತ್ತು.

ಅಭಿನಯಿಸಿದ ನಾಟಕಗಳು

  • ಜಂಭಕೊಚ್ಚಿದ ಉತ್ತರ ಕುಮಾರ
  • ಸೈನಿಕನ ಪರೇಡ್ ನಾಟಕದಲ್ಲಿ ಸುಮಂಗಲಾಳ ಪಾತ್ರ
  • ದೇಶಭಕ್ತ ನಾಟಕ
  • ದುಡುಕಿನ ಫಲ ನಾಟಕದಲ್ಲಿ ರೈತನ ಹೆಂಡತಿ ಸುಬ್ಬಿಯ ಪಾತ್ರ
  • ಕೊನೆ ಭೇಟಿ ನಾಟಕದಲ್ಲಿ ಸೈನಿಕನ ಹೆಂಡತಿ ಸಾವಿತ್ರಿಯ ಪಾತ್ರ
  • ನರಗುಂದ ಬಾಬಾಸಾಹೇಬ ನಾಟಕದಲ್ಲಿ ಬಾಬಾಸಾಹೇಬನ ಪಾತ್ರ
  • ಹೋಂಡಾ ತಗೊಂಡ ಬಾರ ಎಂಬ ಹಾಸ್ಯಭರಿತ ನಾಟಕದಲ್ಲಿ ಚೆನ್ನಿ ಎಂಬ ಸ್ತ್ರೀ ಪಾತ್ರ
  • ಆಧುನಿಕ ಹುಡುಗಿ ನಾಟಕದಲ್ಲಿ ಕಾವ್ಯಾ ಎಂಬ ತರುಣಿಯ ಪಾತ್ರ
  • ಘತ್ತರಗಿ ಬಾಗಮ್ಮ ನಾಟಕದಲ್ಲಿ ಸ್ವಾಮೀಜಿಯ ಪಾತ್ರ,
  • ಲಾಲಿ ಲಾಲಿ ಸುವ್ವಾಲಿ ನಾಟಕದಲ್ಲಿ ಮಲ್ಲಿ ಎಂಬ ಸ್ತ್ರೀ ಪಾತ್ರ.
  • ತಾವು ನೌಕರಿ ಮಾಡುತ್ತಿದ್ದ ಹೊನ್ನಾಪುರ ಗ್ರಾಮದಲ್ಲಿ ರೈತನ ಕತ್ತು ಭೂಮಿಗೆ ಬಿತ್ತು ಎಂಬ ಸಾಮಾಜಿಕ ನಾಟಕದಲ್ಲಿ ಕಥಾನಾಯಕ ಮಲ್ಲಣ್ಣನ ಪಾತ್ರ.
  • ನಿಜಗುಣ ಶಿವಯೋಗಿ ನಾಟಕದಲ್ಲಿ ನಿಜಗುಣ ಶಿವಯೋಗಿಯವರ ಪಾತ್ರ.
  • ಬಿ.ಆರ್.ಜಕಾತಿಯವರ ನಿರ್ದೇಶನದ ಚಿಗುರಿದ ಕನಸು ಕಿರು ಚಿತ್ರದಲ್ಲಿ ರೈತ ಮಲ್ಲಣ್ಣನ ಪಾತ್ರ.
  • ಕೊನೆ ನಮಸ್ಕಾರ ನಾಟಕದಲ್ಲಿ ದ್ರೌಪದಿ ಮತ್ತು ಸಹದೇವ ಎರಡು ಪಾತ್ರಗಳನ್ನು ಅಭಿನಯಿಸಿರುವರು.

ಬಾಬಾಜಾನ್ ಮುಲ್ಲಾ ನಿರ್ದೇಶನದಲ್ಲಿ

  • ಒಟ್ಟಿಗೆ ಬಾಳುವ ಆನಂದ ಕಿರುಚಿತ್ರದಲ್ಲಿ ಆನಂದ ಪಾತ್ರ
  • ಬಾಗಿನ ಕಿರು ಚಿತ್ರದಲ್ಲಿ ಕುಡುಕ ಬಸಪ್ಪನ ಪಾತ್ರ
  • ದೀಪಾ ಕಿರು ಚಿತ್ರದಲ್ಲಿ ಹುಡುಗಿಯ ತಂದೆಯ ಪಾತ್ರ
  • ಬದುಕು ಬಂಡಿ ಚಲನಚಿತ್ರದಲ್ಲಿ ಲೂಸಿ ಸಾಲ್ಡಾನಾರವರ ಗಂಡನ ಆತ್ಮೀಯ ಸ್ನೇಹಿತ ಮಾಧವನ ಪಾತ್ರ ಮತ್ತು ಸಹ ನಿರ್ದೇಶಕನಾಗಿ ಕಾರ್ಯ
  • ನಾಶಿಪುಡಿ ನಿಂಗ್ಯಾ ಎಂಬ ಹಾಸ್ಯಭರಿತ ಕಿರು ಚಿತ್ರದಲ್ಲಿ ಕಲೆ,ವಿನ್ಯಾಸ ,ಪ್ರಸಾದನ
  • ಬೆಳಕು ಎಂಬ ಕಿರುಚಿತ್ರಕ್ಕೆ ಪ್ರಸಾದನ
  • ಹೊನ್ನಾಪುರದಲ್ಲಿ ಕೊರೋನಾ ಜಾಗೃತಿ ಎಂಬ ಸುದ್ದಿವಾಹಿನಿಯ ವರದಿಗಾರ
  • ಲೆ.ಜ.ಸರದೇಶಪಾಂಡೆಯವರ ಸಂದರ್ಶನದಲ್ಲಿ ನೆರವನ್ನು ನೀಡಿದ್ದು
  • ಭೀತಿ ತೊರೆಯುವಾ ಸಾಕ್ಷ್ಯಚಿತ್ರದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ದತೆಯ ಕುರಿತು. ಸಹಕಾರ ನೀಡಿರುವರು
  • ಪ್ರಜಾನಿಷ್ಠೆ ಎಂಬ ನಾಟಕಕ್ಕೆ ಪ್ರಸಾದನ
  • ಶಿವಕಳೆಯ ಜೋಡುಗಳು ಎಂಬ ಆಧ್ಯಾತ್ಮಿಕ ನಾಟಕಕ್ಕೆ ಪ್ರಸಾದನ
  • ಸಾಹಿತ್ಯ ಕ್ಷೇತ್ರದಲ್ಲಿ
  • ಜ್ಞಾನ ದೀಪ್ತಿ 7ನೇ ತರಗತಿಯ ವಿಜ್ಞಾನ ಪ್ರಶ್ನೋತ್ತರ ಮಾಲಿಕೆ ಕೃತಿ
  • ಜ್ಞಾನ ಗಾನ ಸಂಗಮ ಎಂಬ ವಿಡಿಯೋ ಡಿ.ವ್ಹಿ.ಡಿ.ಯನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪಠ್ಯಪುಸ್ತಕಗಳಲ್ಲಿ ಪ್ರಕಟಿತ ನಾಡಿನ ಖ್ಯಾತ ಕವಿಗಳ ಕವನಗಳ ಗುಚ್ಚವನ್ನು ತಯಾರಿಸಿರುವರು.

ಹೀಗೆ ಹತ್ತು ಹಲವು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಂದನಕುಮಾರ ದ್ಯಾಂಪುರ ಇತ್ತೀಚಿಗೆ ಧಾರವಾಡ ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದಿಂದ ಶಿಕ್ಷಕರಿಗಾಗಿ ಜರುಗಿದ ಕೋರೋನಾ ಕಾಲಘಟ್ಟದಲ್ಲಿ ವಿಶೇಷ ಉಪನ್ಯಾಸ ಸರಣಿ ಕಾರ್ಯಕ್ರಮದ ಪೂರ್ವಭಾವಿ ಪೋಸ್ಟರ ರಚನೆಯಿಂದ ಹಿಡಿದು ಪ್ರಸಾದನವನ್ನು ಕೈಗೊಂಡಿರುವರು.

ಶಿಕ್ಷಣ ಇಲಾಖೆಗೆ ತಮ್ಮದೇ ಆದ ವಿಶಿಷ್ಟ ಕಲೆಯನ್ನು ಕೊಡುಗೆಯಾಗಿ ನೀಡುತ್ತ ತಾವೂ ಕೂಡ ಅವುಗಳಲ್ಲಿ ಪಾಲ್ಗೊಳ್ಳುತ್ತ ಮಕ್ಕಳಿಗೆ ವಿದ್ಯೆಯನ್ನು ಧಾರೆಯರೆಯುತ್ತಿರುವರು. ಇವರ ಬದುಕು ಕಷ್ಟಗಳಿಂದ ಕೂಡಿದ್ದು ನೌಕರಿ ನಂತರದ ಬದುಕನ್ನು ಮಕ್ಕಳಿಗೆ ಜ್ಞಾನ ನೀಡುವ ಗುರುವಿನ ಸ್ಥಾನದಲ್ಲಿ ಇದ್ದು ಕುಟುಂಬದ ಜವಾಬ್ದಾರಿಹೊತ್ತು ತಮ್ಮ ಮಕ್ಕಳಿಗೂ ಕೂಡ ಉತ್ತಮ ಶಿಕ್ಷಣ ನೀಡುವ ದೆಸೆಯಲ್ಲಿ ತೊಡಗಿಸಿಕೊಂಡಿರುವ ಇವರು ಇನ್ನೂ ಉತ್ತರೋತ್ತರ ಅಭಿವೃದ್ಧಿಯನ್ನು ಹೊಂದಲಿ ಎಂಬುದು ನಮ್ಮ ಆಶಯ.

ಅನೇಕ ಸಂಘ ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಗೌರವಿಸಿದ್ದು. ಇವರನ್ನು ಅಭಿನಂದಿಸಲು ಇವರ ಜಂಗಮವಾಣಿಗೆ ಕರೆ ಮಾಡಬಹುದು. 8197919856


ವೈ.ಬಿ.ಕಡಕೋಳ

- Advertisement -
- Advertisement -

Latest News

ಉಚಿತ ಕಣ್ಣು ತಪಾಸನೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ

ಸಿಂದಗಿ; ಪೂಜ್ಯ ಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ, ಸಿಂದಗಿ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವಿಜಯಪುರ ಹಾಗೂ ಅನುಗ್ರಹ ವಿಜನ್ ಫೌಂಡೇಶನ್ ಟ್ರಸ್ಟ್, ವಿಜಯಪುರ, ಜಿ.ಪಿ. ಪೋರವಾಲ...
- Advertisement -

More Articles Like This

- Advertisement -
close
error: Content is protected !!
Join WhatsApp Group