ಪುಸ್ತಕದ ಹೆಸರು : ಸಂಕೀರ್ಣ ಬಳ್ಳಾರಿ
ಲೇಖಕರು : ಡಾ. ಮೃತ್ಯುಂಜಯ ರುಮಾಲೆ
ಪ್ರಕಾಶಕರು : ದಾಸೋಹಿ ಪ್ರಕಾಶನ, ಶ್ರೀ ಶರಣ ಬಸವೇಶ್ವರ ದಾಸೋಹ ಮಠ, ಕಾನಾಮಡಗು (ಕೂಡ್ಲಿಗಿ ತಾಲೂಕು) ೨೦೨೩
ಪುಟ : ೪೨೪ ಬೆಲೆ : ರೂ. ೪೫೦
(ಸಂಪರ್ಕವಾಣಿ : ೮೬೧೮೨೮೮೨೯೯)
ಡಾ. ಮೃತ್ಯುಂಜಯ ರುಮಾಲೆ ಅವರು ನಮ್ಮ ನಾಡು ಕಂಡ ಬಹುಶ್ರುತ ವಿದ್ವಾಂಸರಲ್ಲಿ ಒಬ್ಬರು. ಸಂಶೋಧನೆ, ವಿಮರ್ಶೆ, ಜೀವನ ಚರಿತ್ರೆ, ಸಂಪಾದನೆ ಮೊದಲಾದ ಕ್ಷೇತ್ರಗಳಲ್ಲಿ ಅವರು ಪ್ರಕಟಿಸಿದ ಬೃಹತ್ ಗಾತ್ರದ ಕೃತಿಗಳು ಕನ್ನಡ ಸಾರಸ್ವತ ಪ್ರಪಂಚವನ್ನು ಸಿರಿವಂತಗೊಳಿಸಿವೆ. ವಿಜಯ ನಗರ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ರುಮಾಲೆ ಅವರು ತಮ್ಮ ಸಂಶೋಧನಾತ್ಮಕ ಬರಹಗಳ ಮೂಲಕ ಪ್ರಾಧ್ಯಾಪಕ ಸ್ಥಾನಕ್ಕೆ ನಿಜವಾದ ಗೌರವವನ್ನು ತಂದುಕೊಟ್ಟವರು. ತಮ್ಮ ನಿತ್ಯ ನಿರಂತರ ಬರವಣಿಗೆಯ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪರೂಪದ ಕಾಣಿಕೆಗಳನ್ನು ನೀಡುತ್ತ ಬಂದ ಅವರು, ಪ್ರಸ್ತುತ ತಮ್ಮ ಪ್ರೀತಿಯ ‘ಬಳ್ಳಾರಿ’ ಜಿಲ್ಲೆಯನ್ನು ಕುರಿತು ‘ಸಂಕೀರ್ಣ ಬಳ್ಳಾರಿ’ ಎಂಬ ವಿಶ್ವಕೋಶ ಸದೃಶ್ಯ ಕೃತಿಯನ್ನು ಪ್ರಕಟಿಸಿ ಒಂದು ಹೊಸದಾರಿಯನ್ನೇ ತೋರಿದ್ದಾರೆ. ಬಳ್ಳಾರಿ ಜಿಲ್ಲೆಯನ್ನು ಯಾರೇ ಅಧ್ಯಯನ ಮಾಡಬೇಕಾದರೂ ಡಾ. ರುಮಾಲೆ ಅವರ ‘ಸಂಕೀರ್ಣ ಬಳ್ಳಾರಿ’ ಕೃತಿಯನ್ನು ಗಮನಿಸಿಯೇ ಮುಂದೆ ಸಾಗಬೇಕು, ಅಷ್ಟರ ಮಟ್ಟಿಗೆ ಅಧಿಕೃತವೂ ಸಮೃದ್ಧವೂ ಆದ ಮಾಹಿತಿಗಳ ದಾಖಲೀಕರಣ ಪ್ರಸ್ತುತ ಕೃತಿಯಲ್ಲಿದೆ.
‘ಸಂಕೀರ್ಣ ಬಳ್ಳಾರಿ’ ಒಂದು ಮಿನಿ ವಿಶ್ವಕೋಶವಾಗಿದೆ. ಬಳ್ಳಾರಿ ಜಿಲ್ಲೆಯ ಇತಿಹಾಸ, ಚರಿತ್ರೆ, ರಂಗಭೂಮಿ, ವ್ಯಕ್ತಿ ಸಾಧನೆ ಮತ್ತು ಸಂಸ್ಕೃತಿಗಳ ಕುರಿತು ಒಟ್ಟು ೩೫ ಬೆಲೆಯುಳ್ಳ ಲೇಖನಗಳು ಇಲ್ಲಿವೆ. ಒಂದೊಂದು ಲೇಖನವೂ ಬಳ್ಳಾರಿ ಮಹತ್ವವನ್ನು ಕುರಿತು ಅನೇಕ ಚೇತೋಹಾರಿ ಮಾಹಿತಿಗಳನ್ನು ನೀಡುತ್ತಲೇ ಸಾಗುತ್ತವೆ. ಪ್ರಾಯಶಃ ಒಂದು ಸಂಶೋಧನಾತ್ಮಕ ಕೃತಿ ಸೃಜನಶೀಲ ಕತೆ-ಕಾದಂಬರಿಗಳಂತೆ ಓದಿಸಿಕೊಂಡು ಹೋಗುವುದಿಲ್ಲ; ಆದರೆ ಡಾ. ರುಮಾಲೆ ಅವರ ಕೃತಿಯನ್ನು ಒಮ್ಮೆ ಓದಲು ಕೈಗೆತ್ತಿಕೊಂಡರೆ, ಕತೆ-ಕಾದಂಬರಿಗಿಂತಲೂ ವೇಗವಾಗಿ ಓದಿಸಿಕೊಂಡು ಹೋಗುವ ಒಂದು ಅಪೂರ್ವ ಚಲನಶೀಲ ಶೈಲಿ ಇಲ್ಲಿರುವುದು ಮುಖ್ಯವಾಗಿ ಗಮನಿಸಬೇಕಾದ ಅಂಶ. ೧೮ನೇ ಶತಮಾನದಿಂದ ೨೧ನೇ ಶತಮಾನದವರೆಗಿನ ಬಳ್ಳಾರಿಯ ಒಂದು ಸಮಗ್ರವಾದ ಇತಿಹಾಸ ನಮ್ಮ ಕಣ್ಣೆದುರು ಒಂದು ಚಲನಚಿತ್ರದಂತೆ ಹಾದು ಹೋಗುತ್ತದೆ. ಅಷ್ಟೊಂದು ಆಪ್ಯಾಯಮಾನವಾದ ಶೈಲಿಯಿಂದ ಈ ಕೃತಿಯನ್ನು ರಚಿಸಿರುವುದು ಡಾ. ಮೃತ್ಯುಂಜಯ ರುಮಾಲೆ ಅವರಿಗೆ ಬಳ್ಳಾರಿ ಬಗ್ಗೆ ಇರುವ ಅನನ್ಯವಾದ ಪ್ರೀತಿ ಮತ್ತು ಗೌರವಕ್ಕೆ ಉಜ್ವಲ ನಿದರ್ಶನವಾಗಿದೆ.
ಬಳ್ಳಾರಿ ಇಂದು ಅಚ್ಚಗನ್ನಡದ ಭಾಗವೇ ಆಗದ್ದರೂ ಸ್ವಾತಂತ್ರ್ಯ ಪೂರ್ವದಲ್ಲಿ ಬಳ್ಳಾರಿ ಒಂದು ಕಡೆ ಹೈದರಾಬಾದ ನಿಜಾಮನ ಉರ್ದು ಪ್ರಾಬಲ್ಯ, ಮತ್ತೊಂದು ಕಡೆ ಮಹಾರಾಷ್ಟçದ ಪೇಶ್ವೆಗಳ ಮರಾಠಿ ಪ್ರಾಬಲ್ಯ, ಮಗದೊಂದು ಕಡೆ ಬ್ರಿಟಿಷರ ಇಂಗ್ಲಿಷ್ ಪ್ರಾಬಲ್ಯ, ಇಷ್ಟೇ ಅಲ್ಲದೆ ನೆರೆಯ ಆಂಧ್ರ ಪ್ರದೇಶದ ತೆಲಗು ಪಾರಮ್ಯದ ಸಂದಿಗ್ಧತೆಯಲ್ಲಿ ಸಿಕ್ಕು ಅನುಭವಿಸಿದ ಆತಂಕ, ರಾಜಕೀಯ ಬದಲಾವಣೆ, ಎದುರಿಸಿದ ಆಡಳಿತಾತ್ಮಕ ಬಿಕ್ಕಟ್ಟುಗಳು, ಕಲಿಕೆಯ ಮಾಧ್ಯಮದ ಬಗೆಗಿನ ದ್ವಂದ್ವಗಳು, ಸಾಮಾಜಿಕ ಬಿಕ್ಕಟ್ಟುಗಳು ಮತ್ತು ಸಾಂಸ್ಕೃತಿಕ ಸಂದಿಗ್ಧತೆಗಳು ಇಲ್ಲಿಯ ಜನರ ಮೇಲೆ ಎಂತಹ ಪರಿಣಾಮವನ್ನು ಬೀರಿದವು ಎಂಬುದನ್ನು ಡಾ. ಮೃತ್ಯುಂಜಯ ರುಮಾಲೆ ಅವರು ತುಂಬ ಸೂಕ್ಷ್ಮಗ್ರಹಿಕೆಯಿಂದ ವಿಶ್ಲೇಷಣೆ ಮಾಡಿದ್ದಾರೆ.
‘ಕಂಪಲಿ, ಹಂಪಿ, ಬಳ್ಳಾರಿ ಮತ್ತು ಶಹಾಜಿ-ಶಿವಾಜಿ’ ಲೇಖನದಲ್ಲಿ ಶಿವಾಜಿ ಮಹಾರಾಜರಿಗೂ ಈ ಪ್ರದೇಶಕ್ಕೂ ಇರುವ ಅವಿನಾಭಾವ ಸಂಬಂಧದ ಎಳೆಗಳನ್ನು ಶೋಧಿಸುವ ಪ್ರಯತ್ನ ಮಾಡಿದ್ದಾರೆ. ಶಿವಾಜಿ ಮೂಲ ಕನ್ನಡ ನೆಲವೇ ಆಗಿತ್ತು ಎಂಬ ರಾಮಚಂದ್ರ ಚಿಂತಾಮಣ ಢೇರೆ ಅವರ ಸಂಶೋಧನೆಗೆ ಪೂರಕ ಪುರಾವೆಗಳನ್ನು ಇಲ್ಲಿ ಡಾ. ರುಮಾಲೆ ಅವರು ಒದಗಿಸಿಕೊಟ್ಟಿರುವುದು ನಿಜಕ್ಕೂ ಕನ್ನಡಿಗರು ಹೆಮ್ಮೆ ಮತ್ತು ಅಭಿಮಾನ ಪಡುವ ಸಂಗತಿಯಾಗಿದೆ.
‘ಬಳ್ಳಾರಿ ಮಿಲನಕ್ಕೆ ಐವತ್ತು ವರ್ಷ’ ಲೇಖನ ೨೦೦೩ರಲ್ಲಿ ಬರೆದದ್ದು. ಬಳ್ಳಾರಿಯು ಏಕೀಕರಣ ಪೂರ್ವದಲ್ಲಿಯೇ ಕರ್ನಾಟಕವನ್ನು ಸೇರಿದ ಒಂದು ಅದ್ಭುತ ಇತಿಹಾಸವನ್ನು ರಸವತ್ತಾಗಿ ಕಟ್ಟಿಕೊಟ್ಟಿದ್ದಾರೆ. ಸರ್ ಥಾಮಸ್ ಮನ್ರೋ ಕಾಲದಿಂದಲೂ ಬಳ್ಳಾರಿ ಜಿಲ್ಲಾ ಕೇಂದ್ರವಾಗಿ ಎಷ್ಟೆಲ್ಲ ಬೆಳವಣಿಗೆಯ ಹಂತಗಳನ್ನು ದಾಟಿ ಮದ್ರಾಸ್ ಪ್ರಾವೆನ್ಸಿಯಿಂದ ಕರ್ನಾಟಕದ ನೆಲೆಯಾಗಿ ರೂಪಗೊಂಡ ಪರಿಯನ್ನು ಲೇಖನ ಓದಿಯೇ ಅನುಭವಿಸಬೇಕು. ಎಷ್ಟೊಂದು ಸೂಕ್ಷ್ಮ ವಿಷಯಗಳು ಅಲ್ಲಿ ಅಡಕವಾಗಿವೆ ಎಂಬುದರ ಅರಿವು ನಮ್ಮ ಗಮನಕ್ಕೆ ಬರುತ್ತದೆ.
ಬಳ್ಳಾರಿ ಜಿಲ್ಲೆ ರಂಗಭೂಮಿಗೆ ಕೊಟ್ಟ ಕಾಣಿಕೆಯೂ ಅನನ್ಯ ಅನುಪಮ. ‘ಬಳ್ಳಾರಿ : ಗ್ರಾಮೀಣ ಹವ್ಯಾಸಿ ರಂಗಭೂಮಿ’, ‘ಸಭಾ’ಗಳ ಸಾಮ್ರಾಜ್ಯದ ಬಳ್ಳಾರಿ ನಗರ’, ‘ಬಳ್ಳಾರಿ ಜಿಲ್ಲೆ ಮತ್ತು ಸಂಗೀತ’ ಮೊದಲಾದ ಲೇಖನಗಳು ರಂಗಭೂಮಿ ಮತ್ತು ಸಂಗೀತ ಪರಂಪರೆಗೆ ಬಳ್ಳಾರಿ ಜಿಲ್ಲೆಯ ಕೊಡುಗೆಯನ್ನು ಅತ್ಯಂತ ವಸ್ತುನಿಷ್ಠವಾಗಿ ದಾಖಲಿಸುತ್ತವೆ.
ಒಂದು ನಾಡಿನ ಇತಿಹಾಸವನ್ನು ಅರಿತುಕೊಳ್ಳಲು ನಮಗೆ ಅವಶ್ಯವಾಗಿ ನೆರವಾಗುವ ಆಕರ ಸಾಮಗ್ರಿಗಳಲ್ಲಿ ಹಸ್ತಪ್ರತಿ ಮುಖ್ಯವಾದವು. ‘ಬಳ್ಳಾರಿ ಜಿಲ್ಲೆಯ ಹಸ್ತಪ್ರತಿ ಸಂಪತ್ತು’, ‘ಸಂಡೂರು ಸಂಸ್ಥಾನಕ್ಕೆ ಸಂಬಂಧಿಸಿದ ಒಂದು ಅಪ್ರಕಟಿತ ಕೃತಿ’ ‘ಸಂಡೂರು ಸಂಸ್ಥಾನದ ಆಸ್ಥಾನ ಕೃತಿ : ಶ್ರೀ ಯಶವಂತರಾಯ ಯಶೋವಿಲಾಸಂ’ ಮೊದಲಾದ ಲೇಖನಗಳು ಬಳ್ಳಾರಿ ಜಿಲ್ಲೆಯ ಪ್ರಾಚೀನ ಸಾಹಿತ್ಯ ಪರಂಪರೆಯ ಒಳನೋಟಗಳನ್ನು ತಿಳಿಸುತ್ತವೆ. ಅದರಲ್ಲೂ ಸಂಡೂರು ಸಂಸ್ಥಾನದ ಆಸ್ಥಾನ ವಿದ್ವಾನ್‌ರಾಗಿದ್ದ ವೈ. ನಾಗೇಶ ಶಾಸ್ತ್ರಿಗಳು ಬರೆದ ಶ್ರೀ ಯಶವಂತರಾಯ ಯಶೋವಿಲಾಸಂ ಕೃತಿಯ ರಚನೆಯ ಇತಿಹಾಸವನ್ನು ಡಾ. ರುಮಾಲೆ ಅವರು ತುಂಬ ಅರ್ಥಪೂರ್ಣವಾಗಿ ವಿವರಿಸುತ್ತ ಹೋಗುತ್ತಾರೆ. ನಾಗೇಶ ಶಾಸ್ತ್ರಿಗಳು ರಚಿಸಿದ ಈ ಕೃತಿಯನ್ನು ಜೋಳದರಾಶಿ ದೊಡ್ಡನಗೌಡರು ಗಮಕ ವಾಚನ ಮಾಡಿದ್ದು, ಈ ಕೃತಿಯ ಕೆಲವು ಪುಟಗಳು ಕಣ್ಮರೆಯಾದುದು, ಅಳಿದುಳಿದ ಹಸ್ತಪ್ರತಿಯನ್ನು ಡಾ.
೧೯೫೬ರಲ್ಲಿ ಜರುಗಿದ ಒಂದು ಚುನಾವಣೆಯಂತೂ ಕನ್ನಡ-ತೆಲುಗು ಭಾಷಿಕರ ಜಿದ್ದಾಜಿದ್ದಿಯಂತೆ ನಡೆದ ಘಟನೆಯನ್ನು ಇಲ್ಲಿ ಅತ್ಯಂತ ರೋಚಕವಾಗಿ ನಿರೂಪಿಸಿದ್ದಾರೆ. ಇಂತಹ ಚುನಾವಣೆ ‘ಬಹುಶಃ ದೇಶದ ಚರಿತ್ರೆಯಲ್ಲಿಯೇ ನಡೆದಂತಿಲ್ಲ. ಕನ್ನಡ ಪರವಾದ ಹರಗಿನಡೋಣಿ ಸಣ್ಣ ಬಸವನಗೌಡ, ತೆಲುಗು ಪರವಾದ ಮುಂಡ್ಲೂರು ಗಂಗಪ್ಪನವರ ನಡುವೆ ನಾಡು, ನುಡಿ ಮತ್ತು ಭಾಷಿಕರ ಅಸ್ತಿತ್ವವೇ ವಿಷಯವಾಗಿ ನಡೆದ ಉಪಚುನಾವಣೆಯಿದು’ ಎಂದು ವಿವರಿಸುತ್ತ, ಕನ್ನಡಿಗರು ಬಸವನಗೌಡರನ್ನು ಗೆಲ್ಲಿಸಿದ ಘಟನೆಯನ್ನು ಇಲ್ಲಿ ವಿವರಿಸಿದ ರೀತಿ ಅತ್ಯಂತ ಪರಿಣಾಮಕಾರಿಯಾಗಿದೆ.
‘ಹುತಾತ್ಮ ರಮಜಾನ್ ಸಾಹೇಬ ಕುರಿತ ಕವಿತೆ’ ಲೇಖನದಲ್ಲಿ ಏಕೀಕರಣ ಹೋರಾಟದಲ್ಲಿ ಮೊಟ್ಟಮೊದಲು ಪ್ರಾಣಾರ್ಪಣೆ ಮಾಡಿದ ರಮಜಾನ್ ಸಾಹೇಬನ ಕುರಿತು ವಿವರಿಸಿದ್ದಾರೆ. ‘ಬಳ್ಳಾರಿ : ನಾಲ್ಕು ಸಾಂಸ್ಕೃತಿಕ ಘಟ್ಟಗಳು’ ಎಂಬ ಕೊನೆಯ ಲೇಖನ ಬಳ್ಳಾರಿ ಜಿಲ್ಲೆಗೆ ಒಂದು ಅಸ್ತಿತ್ವ-ಅಸ್ಮಿತೆಯನ್ನು ತಂದುಕೊಟ್ಟ ನಾಲ್ಕು ಜನರ ಕೊಡುಗೆಗಳನ್ನು ಸ್ಮರಿಸುವ ಲೇಖನ. ೧. ರೇವರೆಂಡ್ ಡಾ. ಜಾನ್ ಹ್ಯಾಂಡ್ಸ್ ಕನ್ನಡ ಸೇವೆ-ಸಾಧನೆ, ೨. ಸಕ್ಕರಿ ಕರಡೆಪ್ಪನವರ ಸಮಾಜೋಧಾರ್ಮಿಕ ಕಾರ್ಯ, ೩. ಧರ್ಮಾವರಂ ಕೋಲಾಚಲಂ ಮನೆತನಗಳ ರಂಗ ಸಾಧನೆ, ೪. ವೈ. ನಾಗೇಶ ಶಾಸ್ತ್ರಿಗಳ ಸಾಹಿತ್ಯ ಸಂದರ್ಭ. ಈ ನಾಲ್ವರು ಬಳ್ಳಾರಿ ಜಿಲ್ಲೆಗೆ ಕೊಟ್ಟ ಕೊಡುಗೆ, ನೀಡಿದ ಕಾಣಿಕೆಗಳ ಸಮಗ್ರ ಸಮೃದ್ಧ ಇತಿಹಾಸವನ್ನು ಕಟ್ಟಿಕೊಟ್ಟಿದ್ದಾರೆ.
‘ಬಳ್ಳಾರಿ ರಾಘವ’ ಎಂಬ ಅವರ ಇನ್ನೊಂದು ಬೃಹತ್ ಕೃತಿ ಇಷ್ಟರಲ್ಲಿಯೇ ಹೊರಬರುತ್ತಿರುವುದರಿಂದ ಅವರ ಕುರಿತು ಇಲ್ಲಿ ಹೆಚ್ಚು ಪ್ರಸ್ತಾಪವಾಗಿಲ್ಲ. ಕೋಲಾಚಲಂ ವೆಂಕಟರಾವ್ ಅವರ ಮರಿಮೊಮ್ಮಗ ಕೋಲಾಚಲಂ ಅನಂತ ಪ್ರಕಾಶ ಅವರು ಡಾ. ರುಮಾಲೆ ಅವರಿಗೆ ಅನೇಕ ಮಹತ್ವದ ದಾಖಲೆಗಳನ್ನು ನೀಡಿದ್ದಾರೆ. ಹೀಗಾಗಿ ಇದರ ಮುಂದುವರಿದ ‘ಸಂಕೀರ್ಣ ಬಳ್ಳಾರಿ ಭಾಗ-೨’ ಕೃತಿಯೂ ಬರಬಹುದು ಎಂಬ ಸೂಚನೆಯನ್ನೂ ಡಾ. ರುಮಾಲೆ ಅವರು ಪ್ರಸ್ತುತ ಕೃತಿಯಲ್ಲಿ ನೀಡಿದ್ದಾರೆ.
‘ನನ್ನೊಳಗಿನ ಕುತೂಹಲವನ್ನು ಸಾಧಿಸಿದ ತನ್ನ ಬಗ್ಗೆಯೇ ಬರೆಸಿಕೊಂಡ ಬಳ್ಳಾರಿಗೆ ಈ ಕೃತಿ ಅರ್ಪಿತ’ ಎಂದು ಬರೆಯುವ ಮೂಲಕ ಕೃತಿಯನ್ನು ಅರ್ಪಿಸಿದ ರೀತಿಯೂ ವಿನೂತನವಾಗಿದೆ. ಇನ್ನೂ ವಿಶೇಷವೆಂದರೆ ಕಾನಾಮಡುಗು ಶ್ರೀ ಶರಣಬಸವೇಶ್ವರ ದಾಸೋಹಮಠದ ಪೂಜ್ಯ ಶ್ರೀ ಐಮಡಿ ಶರಣಾರ್ಯರು ತಮ್ಮ ದಾಸೋಹ ಪ್ರಕಾಶನದ ಮೊದಲ ಮಾಲೆಯಾಗಿ ಈ ಕೃತಿಯನ್ನು ಪ್ರಕಾಶನ ಮಾಡಿದ್ದಾರೆ.
ಒಟ್ಟಾರೆ, ಬಳ್ಳಾರಿ ಜಿಲ್ಲೆಯ ಸಾಹಿತ್ಯ-ರಂಗಭೂಮಿ-ಧಾರ್ಮಿಕ-ಶೈಕ್ಷಣಿಕ-ರಾಜಕೀಯ-ಸಾಂಸ್ಕೃತಿಕ ಹಿನ್ನಲೆಯನ್ನು ಅರಿತುಕೊಳ್ಳ ಬೇಕೆನ್ನುವವರಿಗೆ ಇದೊಂದು ಅತ್ಯಂತ ಮಹತ್ವದ ಆಕರ ಗ್ರಂಥವಾಗಿದೆ. ಎಷ್ಟೊಂದು ಸಮೃದ್ಧ ಮಾಹಿತಿ ಇಲ್ಲಿ ದೊರೆಯುತ್ತದೆ. ನನ್ನ ದೃಷ್ಟಿಯಲ್ಲಿ ಇದೊಂದು ಪಿಎಚ್.ಡಿ. ಮಹಾಪ್ರಬಂಧಕ್ಕಿಂತಲೂ ಹೆಚ್ಚು. ಅಷ್ಟೊಂದು ಮಹತ್ವದ ವಿಷಯ ಸಂಗ್ರಹ ಇಲ್ಲಿದೆ. ಸಮಸ್ತ ವಿಷಯಗಳನ್ನು ಕ್ರೋಢೀಕರಿಸಿ, ಅವುಗಳನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಿಂದ ಮುತ್ತಿನಹಾರದಂತೆ ಪೋಣಿಸಿಕೊಡುವ ಡಾ. ರುಮಾಲೆ ಅವರ ಬರಹದ ಶೈಲಿಯೂ ಅತ್ಯಂತ ಸರಳವೂ ಸಾಲಂಕೃತವೂ ಬಂಧುರವೂ ಆಗಿದೆ. ಓದಿಸಿಕೊಂಡು ಹೋಗುವ ಒಂದು ವಿಶಿಷ್ಟ ಶೈಲಿ ಅವರ ಬರಹಗಳಿಗಿದೆ. ಬಳ್ಳಾರಿ ಜಿಲ್ಲೆಯ ಕುರಿತಾದ ಅವರ ಅಧ್ಯಯನ-ಶೋಧ ಬರಹಗಳು ಇನ್ನೂ ಬೃಹತ್ ಪ್ರಮಾಣದಲ್ಲಿ ಕೃತಿ ರೂಪದಲ್ಲಿ ಪ್ರಕಟವಾಗಲಿ, ಆ ಮೂಲಕ ಕನ್ನಡ ಸಾಹಿತ್ಯ ಸಂಶೋಧನ ಕ್ಷಿತಿಜವೂ ವಿಸ್ತಾರೋನ್ನತವಾಗಿ ಬೆಳೆಯಲಿ ಎಂದು ಆಶಿಸುವೆ. ಈ ಮಾದರಿಯ ಕೃತಿಗಳು ಉಳಿದ ಜಿಲ್ಲೆಗಳಿಗೂ ಬಂದರೆ, ಕರ್ನಾಟಕದ ಸಮೃದ್ಧ ಇತಿಹಾಸದ ಮತ್ತೊಂದು ಹೆಬ್ಬಾಗಿಲು ತೆರೆದಂತಾಗುತ್ತದೆ. ಉಳಿದ ಜಿಲ್ಲೆಯ ಬರಹಗಾರರಿಗೂ ಇದು ಒಂದು ಅತ್ಯುತ್ತಮ ಮಾದರಿಯಾಗಿದೆ. ಇಂತಹ ಅಮೂಲ್ಯ ಕೃತಿಯನ್ನು ಪ್ರೀತಿಯಿಂದ ಓದಲು ಕಳಿಸಿಕೊಟ್ಟ ಡಾ. ಮೃತ್ಯುಂಜಯ ರುಮಾಲೆ ಅವರಿಗೆ ಕೃತಜ್ಞತಾಪೂರ್ವಕ ಶರಣುಗಳನ್ನು ಸಲ್ಲಿಸುವೆ.
ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧