ವಚನಗಳ ಮೌಲ್ಯಗಳಿಗಾಗಿ ಅಸ್ಮಿತೆಗಾಗಿ, ಬದುಕಿನ ಸಿದ್ಧಾಂತಕ್ಕಾಗಿ ಶರಣರು ಜೀವ ಜೀವತೆತ್ತು ವಚನ ಕಟ್ಟುಗಳನ್ನು ಕಾಪಾಡಿದರು. ಅದೇ ಶರಣ ವಿಜಯೋತ್ಸವ, ಮರಣವೇ ಮಹಾನವಮಿ ಎಂದು 12 ನೆಯ ಶತಮಾನದ ಶಿವಶರಣರನ್ನು ನೆನೆಯುತ್ತಾ ಡಾ. ಶಶಿಕಾಂತ ಪಟ್ಟಣ ಅವರು ತಮ್ಮ ಉಪನ್ಯಾಸ ಪ್ರಾರಂಭ ಮಾಡಿದರು.
ಅವರು ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಡಾ. ವೀಣಾ ಎಲಿಗಾರ ಇವರ ಮಾರ್ಗದರ್ಶಕರಾದ ಚೆನ್ನಕ್ಕ ಪಾವಟೆ ಅವರ ಸ್ಮರಣಾರ್ಥ ವಿಶೇಷ ದತ್ತಿ ಉಪನ್ಯಾಸ ನೀಡಿದರು
ತಾವು ಚಿಕ್ಕವರಿದ್ದಾಗಲೇ ಬಿಜಾಪುರದ ಸೈನಿಕ ಶಾಲೆಯಲ್ಲಿ ಕಲಿಯುವಾಗಿನಿಂದ ಹೇಗೆ ತಾವು ಜಯಪ್ರಕಾಶ ನಾರಾಯಣರ ಪ್ರಭಾವಕ್ಕೆ ಒಳಗಾಗಿದ್ದರು, ಲೈಬ್ರರಿ ಪಿರಿಯಡ್ ನಲ್ಲಿ ಹಿಂದೂ ಪೇಪರ್ ನಲ್ಲಿನ ಭಾಷಣಗಳನ್ನು ಓದಿ ತಾವು ಬರೆದುಕೊಳ್ಳುತ್ತಿದ್ದುದು, ಅವು ಹೇಗೆ ತಮ್ಮ ಮೇಲೆ ಪರಿಣಾಮ ಬೀರಿದವು,ತಮ್ಮ ಹೈಸ್ಕೂಲ್ ನ ಹೆಲಿಪ್ಯಾಡನಲ್ಲಿ ಜೆಪಿ ಅವರನ್ನು ನೋಡಿದ್ದು, ಅವರ ಪೂರ್ಣಪ್ರಮಾಣದ ಅಭಿಮಾನಿಯಾಗಿದ್ದು, ಸುಧಾ ವಾರಪತ್ರಿಕೆಯಲ್ಲಿ ತಾವು ಮಾಡಿದ ಜೆಪಿ ಅವರ ಪೇಂಟಿಂಗ್ ಪ್ರಕಟಣೆಗೊಂಡಿದ್ದು, ಜೆಪಿ ಅವರು ಬರೆದ ಪುಸ್ತಕಗಳನ್ನು ಓದಿದ್ದು, ಹೀಗೆ ಪ್ರತಿಯೊಂದರ ನೆನಪಿನ ಬುತ್ತಿಯನ್ನು ಹಂಚುತ್ತಾ ಹೋದರು.
ಜಯಪ್ರಕಾಶ್ ನಾರಾಯಣ ಅವರು ಭಾರತದ ಜನನಾಯಕ ದೇಶಪ್ರೇಮಿ ಅನ್ಯಾಯದ ವಿರುದ್ಧ ಸತತವಾಗಿ ಹೋರಾಟ ನಡೆಸಿದವರು. ಅವರನ್ನು ಭಾರತದ ಜನತೆ ಪ್ರೀತಿಯಿಂದ ಜೆಪಿ ಎಂದು ಕರೆದರು. ಚಳವಳಿಯಲ್ಲಿ ಪಾತ್ರವಹಿಸಿದ ಇವರು ಮಹಾತ್ಮ ಗಾಂಧಿ ಮತ್ತು ಎಂ ಎನ್ ರಾಯ್ ಅವರ ವಿಚಾರಗಳಿಂದ ಪ್ರಭಾವಿತರಾಗಿದ್ದರು ಗಾಂಧಿಯವರ ಹಾದಿಯಲ್ಲಿ ಮುನ್ನಡೆದ ಮಹಾನಿಷ್ಟಾವಂತ ಎನ್ನುವುದನ್ನು ಸ್ಮರಿಸಿದರು.
1902ರ ಅಕ್ಟೋಬರ್ 11ರಂದು ಬಿಹಾರ್ ಪ್ರಾಂತ್ಯದ ಸರನ್ ಜಿಲ್ಲೆಯ ಸಿತಾಬ್ ದಿಯಾರಾದಲ್ಲಿ ಜಯಪ್ರಕಾಶ್ ರ ಜನನವಾಯಿತು. ಇಲಾಖೆಯಲ್ಲಿ ಚಿಕ್ಕ ಅಧಿಕಾರಿಯಾಗಿದ್ದ ಹರಸೂ ದಯಾಳ್ ಇವರ ತಂದೆ, ಧಾರ್ಮಿಕ ಪ್ರವೃತ್ತಿಯ ಸರಳ ಸ್ವಭಾವದ ಗೃಹಿಣಿ ಪೂಲ್ ರಾಣಿ ಇವರ ತಾಯಿ. ಪ್ರಕಾಶ್ ಅವರ ಅಜ್ಜ ದೇವಕಿ ನಂದನ್ ಲಾಲ್ ಪೊಲೀಸ್ ಅಧಿಕಾರಿ ತಮ್ಮ ಬ್ರಿಟಿಷ್ ಮೇಲಾಧಿಕಾರಿಯನ್ನೇ ಹೊಡೆದ ಪ್ರಸಿದ್ಧಿ ಅವರದು. ಜಯಪ್ರಕಾಶ್ ನಾರಾಯಣ ರಘು ಬಿಹಾರದ ಮಧ್ಯಮವರ್ಗದ ಕಾಯಸ್ತ ಕುಟುಂಬ. ಬಾಲ್ಯವೆಲ್ಲ ಹಳ್ಳಿಯಲ್ಲೇ ಕಳೆಯಿತು ಅವರು ಅಲ್ಲೇ ಆರಂಭದ ವಿದ್ಯಾಭ್ಯಾಸನ ಪಡೆದರು ನಂತರ ಪಟ್ನಾದ ಕೊಲಿಜಿಯೇಟ್ ಶಾಲೆ ಸೇರಿದರು, ಮೆಟ್ರಿಕ್ ಪರೀಕ್ಷೆ ಮುಗಿಸಿದ ನಂತರ ಪಟ್ಟಣ ವಿಶ್ವವಿದ್ಯಾನಿಲಯದಲ್ಲಿ ವಿಜ್ಞಾನ ವಿಭಾಗದಲ್ಲಿ ಇಂಟರ್ ತರಗತಿ ಸೇರಿದರು. ಆಗ ಇವರು ಅಸಹಕಾರ ಚಳವಳಿಯಿಂದ ಪ್ರಭಾವಿತರಾಗಿ ಕಾಲೇಜನ್ನು ತೊರೆದು, ವಿದ್ಯಾ ಪೀಠವನ್ನು ಸೇರಿ ವಿದ್ಯಾಭ್ಯಾಸ ಮುಂದುವರಿಸಿ ಆ ಪರೀಕ್ಷೆಯಲ್ಲಿ ಸೇರ್ಪಡೆ ಹೊಂದಿದ್ದರು. ಅಮೆರಿಕಕ್ಕೆ ತೆರಳಿ ಎಂಟು ವರ್ಷಗಳವರೆಗೆ ಅಲ್ಲಿ ಇದ್ದು ಕ್ಯಾಲಿಫೋರ್ನಿಯ, ಐಯೋವಾ, ವಿಸ್ಕಾನ್ಸಿನ್ ಹಾಗೂ ಒಹೈಯೋ ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನ ಮತ್ತು ಸಮಾಜವಿಜ್ಞಾನ ಅಧ್ಯಯನ ಮಾಡಿ ಎಂ. ಎ. ಪದವಿ ಪಡೆದರು. ಪ್ರತಿಭಾ ಶಾಲಿ ವಿದ್ಯಾರ್ಥಿಯಾಗಿದ್ದ ಜಯಪ್ರಕಾಶರು ಅಮೆರಿಕಾದಲ್ಲಿ ಕಾರ್ಖಾನೆಗಳಲ್ಲಿ ಹೋಟೆಲ್ಗಳಲ್ಲಿ ಹೊಲಗಳಲ್ಲಿ ದುಡಿದು, ಹಣ ಗಳಿಸಿ ತಮ್ಮ ಜೀವನ ಮತ್ತು ಶಿಕ್ಷಣ ವೆಚ್ಚವನ್ನು ನಿರ್ವಹಿಸಿಕೊಂಡರು. ಅಮೇರಿಕವನ್ನು ಬಿಡುವ ಹೊತ್ತಿಗೆ ಜಯಪ್ರಕಾಶ ಅವರು ಮಾರ್ಕ್ಸ್ ವಾದಿಯಾಗಿದ್ದರು. ಎಂ ಎನ್ ರಾಯರ ವಿಚಾರಧಾರೆ ಇವರ ರಾಜಕೀಯ ಪ್ರಜ್ಞೆಯ ಮೇಲೆ ಪ್ರಭಾವ ಬೀರಿತು. ಅಮೆರಿಕಕ್ಕೆ ತೆರಳುವ ಮುನ್ನ ಬ್ರಿಜ್ ಕಿಶೋರ್ ಪ್ರಸಾದರ ಮಗಳು ಪ್ರಭಾವತಿ ದೇವಿಯವರು ಗಾಂಧಿಯವರ ಆಶ್ರಮ ಆಶ್ರಮದಲ್ಲಿದ್ದು ಗಾಂಧಿ ಮಾರ್ಗದಲ್ಲಿ ನಿಷ್ಠೆಗಳಿದ್ದರು ಬ್ರಹ್ಮಚರ್ಯ ದೀಕ್ಷೆ ತಳೆದಿದ್ದ ಪ್ರಭಾವತಿ ಅವರ ಭಾವನೆಗಳನ್ನು ಜಯಪ್ರಕಾಶ್ ಅವರು ಪುರಸ್ಕರಿಸಿ ತಾವೂ ಸಹ ಅದನ್ನು ಪಾಲಿಸಿದರು. ಹೀಗೆ ಅವರ ಬಾಲ್ಯ ಮತ್ತು ಶಿಕ್ಷಣವನ್ನು ನಮ್ಮೊಂದಿಗೆ ಹಂಚಿಕೊಂಡರು.
ಅಮೆರಿಕದಿಂದ ಮರಳಿದ ಜಯಪ್ರಕಾಶ ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದ ಅಧ್ಯಾಪಕರಾಗಬೇಕೆಂದು ಯೋಚಿಸಿದ್ದರು. ಆದರೆ ನೆಹರು ಅವರೊಂದಿಗೆ ಇವರ ಪರಿಚಯ ಬೆಳೆಯಿತು ನೆಹರು ಸೂಚಿಸಿದಂತೆ ಕಾಂಗ್ರೆಸ್ಸಿನ ಕಾರ್ಮಿಕ ಶಾಖೆಯ ನೇತೃತ್ವ ವಹಿಸಲು ಒಪ್ಪಿಕೊಂಡರು ಆಗ ಗಾಂಧೀಜಿಯವರೊಂದಿಗೆ ಇವರ ಸಂಪರ್ಕ ಹೆಚ್ಚಾಯಿತು ಸ್ವಾತಂತ್ರ್ಯ ಚಳುವಳಿಯಲ್ಲಿ ಇವರು ಭಾಗವಹಿಸಿ ದಸ್ತಗಿರಿಯಾದರು, ಸರ್ಕಾರಿ ಇವರನ್ನು ನಾಸಿಕದಲ್ಲಿ ಸೆರೆ ಇ ಟ್ಟಿತು. ಅಲ್ಲಿ ಅಚ್ಚುತ ಪಟವರ್ಧನ್, ಮೀನೂ ಮಸಾನಿ ಮುಂತಾದವರ ಸಂಪರ್ಕ ಪಡೆದರು. ಮುಂದೆ ಆಚಾರ್ಯ ನರೇಂದ್ರ ದೇವರ ಸಹಾಯ ಪಡೆದು ಜಯಪ್ರಕಾಶ್ ನಾರಾಯಣರು ಅಖಿಲ ಭಾರತೀಯ ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು ತಮ್ಮ ಧೋರಣೆಯ ಸಮರ್ಥನೆ ಗೆಂದು 1936 ರಲ್ಲಿ ಸಮಾಜವಾದವೇ ಏಕೆ ಎಂಬ ಗ್ರಂಥವನ್ನು ಬರೆದರು.
ಎರಡನೆಯ ಮಹಾಯುದ್ಧ ಪ್ರಾರಂಭವಾದಾಗ ತಮಗೆ ಬೇಡದ ಯುದ್ಧದಲ್ಲಿ ಬ್ರಿಟಿಷ್ ರೊಂದಿಗೆ ಭಾರತ ಸಹಕರಿಸ ಸಬಾರದೆಂಬುದು ಇವರ ಅಭಿಪ್ರಾಯವಾಗಿತ್ತು . ಸಮಾಜವಾದಿ ಬಂಡಾಯ ಆಗಬೇಕೆಂದು ಪ್ರಚಾರ ಮಾಡುತ್ತ ಇವರು ದೇಶದ ಹಲವೆಡೆ ಸಂಚರಿಸಿದರು. ಇವರನ್ನು 1940ರಲ್ಲಿ ದಸ್ತಗಿರಿ ಮಾಡಿ 1941 ರಲ್ಲಿ ಬಿಡುಗಡೆ ಮಾಡಿತು ಮತ್ತೆ 1941 ರಲ್ಲಿ ಇವರು ದಸ್ತಗಿರಿಯಾದರು ಇವರನ್ನು ಬಂಧಿಗಳ ಶಿಬಿರದಲ್ಲಿ ಅತ್ಯಂತ ಕಟ್ಟುನಿಟ್ಟಾದ ಸೆರೆಯಲ್ಲಿ ಇಡಲಾಗಿತ್ತು. ಇವರ ಕ್ರಾಂತಿಕಾರಿ ಭಾವನೆಗಳಿಂದಾಗಿ ಬ್ರಿಟಿಷ್ ಸರ್ಕಾರ ತುಂಬಾ ಬೆದರಿತ್ತು. ಬ್ರಿಟಿಷರು ಭಾರತ ಬಿಟ್ಟು ತೊಲಗಬೇಕೆಂದು ಚಳವಳಿ ಕೂಡಲು 1942 ರಲ್ಲಿ ಕಾಂಗ್ರೆಸ್ ನಿರ್ಣಯ ಮಾಡಿದಾಗ ಜಯಪ್ರಕಾಶರು ಇನ್ನೂ ಬಂಧನದಲ್ಲಿ ಇದ್ದರು. ರಾಷ್ಟ್ರದ ಮುಖಂಡರನ್ನೆಲ್ಲಾ ಸರ್ಕಾರ ದಸ್ತಗಿರಿ ಮಾಡಿತು. ನಾಯಕರಿಲ್ಲದ ಆ ಸಮಯದಲ್ಲಿ ತಾವು ಹೇಗಾದರೂ ಮಾಡಿ ಸೆರೆಮನೆಯಿಂದ ಹೊರ ಬಿದ್ದು ಜನತೆಯ ಹೋರಾಟವನ್ನು ನಿರ್ದೇಶಿಸಬೇಕೆಂದು ಜಯ ಪ್ರಕಾಶ್ ನಾರಾಯಣರು ನಿರ್ಧರಿಸಿದರು. ಗೆಳೆಯರೊಂದಿಗೆ ಕೂಡಿ ಯೋಜನೆ ಹಾಕಿಕೊಂಡು ಕಾರಾ ಗೃಹದ ಗೋಡೆಯನ್ನು ಹಾರಿ ಕಾಡಿನಲ್ಲಿ ನುಸುಳಿ ಅಗಾಧ ಕಷ್ಟ ಅನುಭವಿಸಿ ಪಾರಾದರು. ಆಡಳಿತಕ್ಕೆ ಕಿರುಕುಳ ನೀಡುವ ನಾನ ಕಾರ್ಯಗಳಲ್ಲಿ ತೊಡಗಿದ್ದವರಿಗೆ ಸೂಚನೆ ನೀಡುವ ಹೊಣೆ ಹೊತ್ತರು. ತಂತಿ ಕತ್ತರಿಸುವುದು, ಬ್ರಿಟಿಷ್ ಸರ್ಕಾರದ ಆಡಳಿತ ವ್ಯವಸ್ಥೆಗಳನ್ನು ತುಂಡರಿಸುವುದು ಇಂಥ ಯಾವ ಕಾರ್ಯವೂ ತಪ್ಪಲ್ಲ ಎಂಬುದು ಇವರ ನಂಬಿಕೆಯಾಗಿತ್ತು. ಭೂಗತರಾದ ಜಯಪ್ರಕಾಶರನ್ನು ಹಿಡಿದು ಕೊಟ್ಟವರಿಗೆ ಅಥವಾ ಇವರ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಸರ್ಕಾರ ಘೋಷಿಸಿತು ಆದರೆ ಜಯಪ್ರಕಾಶ ಅವರು ಸರ್ಕಾರದ ಕಣ್ಣು ತಪ್ಪಿಸಿ ತಿರುಗುತ್ತ ಹೋರಾಟದಲ್ಲಿ ನಿರತರಾಗಿದ್ದರು. ಸರ್ಕಾರ ಇವರನ್ನು ಮತ್ತೆ ದಸ್ತಗಿರಿ ಮಾಡಿ ಸೆರೆಯಲ್ಲಿ ಇಟ್ಟಿತು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಅಧಿಕಾರ ನಡೆಸುತ್ತಿದ್ದ ಕಾಂಗ್ರೆಸ್ ಸರ್ಕಾರದ ಏಕಾಧಿಕಾರದ ವಿರುದ್ಧ ಇವರು ಹೋರಾಟ ಆರಂಭಿಸಿದರು. ರಾಜ ತಂತ್ರ ಪ್ರಬಲವಾಗಿ ಜನತಂತ್ರವನ್ನು ಕಡೆಗಣಿಸಿದ್ದನ್ನು ಇವರು ವಿರೋಧಿಸಿದರು. ಪ್ರಜಾಪ್ರಭುತ್ವದ ಅಂಗಗಳಾದ ಸಂಸತ್ತು, ನ್ಯಾಯಾಲಯ, ಆಡಳಿತ ಮೂರು ಸಂವಿಧಾನ ಬದ್ಧವಾಗಿ ಕೆಲಸ ಮಾಡುವಂತಹ ವಾತಾವರಣ ದೇಶದಲ್ಲಿ ಸೃಷ್ಟಿ ಆಗಬೇಕೆಂದು ಇವರು ಬಯಸಿದರು. ಭ್ರಷ್ಟಾಚಾರ, ಸರ್ವಾಧಿಕಾರ ಇವನ್ನು ಎದುರಿಸಲು ಮಹಾ ಚಳುವಳಿಯೊಂದು ದೇಶದಲ್ಲಿ ಆರಂಭವಾಯಿತು.ಎಂದು ಅವರ ಸ್ವಾತಂತ್ರ ಚಳುವಳಿಯನ್ನು ವಿವರಿಸುತ್ತಾ ಹೋದರು.
ಸ್ವಾತಂತ್ರ್ಯ ನಂತರ ಮತ್ತು ಗಾಂಧೀಜಿಯವರ ಮರಣದ ನಂತರ ಜಯಪ್ರಕಾಶ್ ಅವರು ಕ್ರಮ ಕ್ರಮವಾಗಿ ಗಾಂಧಿ ವಿಚಾರದತ್ತ ಹೆಚ್ಚು ಹೆಚ್ಚು ಸರಿಯತೊಡಗಿದರು.
ಹಳ್ಳಿ ನಗರಗಳ ನಡುವಿನ ಆರ್ಥಿಕ ಅಂತರ ಇನ್ನೂ ಉಳಿದ ಅಸ್ಪಷ್ಟತೆಯೇ ಮುಂತಾದ ಸಾಮಾಜಿಕ ಅನ್ಯಾಯಗಳು ಸುತ್ತಲೂ ಬೆಳೆಯುತ್ತಿರುವ ರಾಜಕೀಯ ಭ್ರಷ್ಟಾಚಾರ, ವಂಚನೆ ಇವು ಜಯಪ್ರಕಾಶರ ಚಿತ್ತ ಸ್ವಾತ್ಯವನ್ನು ಕೆಡಿಸಿದವು. ಅದಕ್ಕಾಗಿಯೇ ವಿನೋಭಾಜಿಯವರೊಂದಿಗೆ ಸೇರಿ ಸರ್ವೋದಯ ಕಾರ್ಯಕ್ರಮಗಳನ್ನು ರಾಷ್ಟ್ರ ವ್ಯಾಪಿ ಪ್ರಮಾಣದಲ್ಲಿ ಸಂಘಟಿಸಿದರು. ಜಯಪ್ರಕಾಶರು ಮುಂಚೂಣಿಯ ನಾಯಕರಾಗಿ ಜನಪ್ರಿಯರಾಗಿದ್ದರೂ ಪ್ರಚಾರ ಪ್ರಸಿದ್ಧಿ ಹಾಗೂ ಉನ್ನತ ಅಧಿಕಾರ ಸ್ಥಾನಗಳನ್ನು ಅವರು ಎಂದೂ ಬಯಸಲಿಲ್ಲ ಸ್ವಪ್ರೇರಣೆಯಿಂದ ಅವರು ಇವುಗಳಿಂದ ದೂರ ಇದ್ದರು. ಜಿಪಿ ಯವರ ಅಹಿoಸಾತ್ಮಕವಾದ ಪ್ರಾಮಾಣಿಕ ಸರಣಿ ಅವರ ಸಮಾಜವಾದಿ ಕಾರ್ಯಕ್ರಮಗಳಿಗೆ ಯಶಸ್ಸನ್ನು ತಂದ ಅನೇಕ ನಿದರ್ಶನಗಳಿವೆ ಭೂದಾನ ಚಳುವಳಿ ಅಂತವುಗಳಲ್ಲಿ ಒಂದು.1967 ರಲ್ಲಿ ಬಿಹಾರದಲ್ಲಿ ಬರ ಬಂದಾಗ ಜೆ ಪಿ ಅವರ ಒಂದು ಬೇಡಿಕೆ ಅನೇಕ ದೇಶಗಳ ಸದ್ವಿವೇಕವನ್ನು ಜಾಗೃತಗೊಳಿಸಿ ನೆರವು ಪ್ರವಹಿಸುವಂತೆ ಮಾಡಿತು.ಹತ್ತು ವರ್ಷಗಳ ಕಾಲ ಕೂಟ ಯುದ್ಧದಲ್ಲಿ ತೊಡಗಿದ್ದ ನಾಗಾ ಬಂಡಾಯ ಗಾರರನ್ನು ನಿರ್ಭಯವಾಗಿ ಸಂದರ್ಶಿಸಿದ ಜಯಪ್ರಕಾಶರು ತಮ್ಮ ಸೌಜನ್ಯಪೂರ್ಣ ವಿವರಣೆಯಿಂದ ನಾಗಾಗಳ ಮನವೊಲಿಸಿ ಅವರು ಯುದ್ಧ ನಿಲ್ಲಿಸಿ ಮಾತುಕತೆಗೆ ಒಡಂಬಡುವಂತೆ ಅವರನ್ನು ಅಣಿಮಾಡಿದರು. ಕಾಶ್ಮೀರದ ವಿಚಾರದಲ್ಲಿ ಮತ್ತು ಪಾಕಿಸ್ತಾನದ ಜೊತೆಗಿನ ಸಂಬಂಧದ ವಿಚಾರದಲ್ಲಿ ಸರ್ಕಾರಕ್ಕೆ ಮತ್ತು ಜನನಾಯಕರಿಗೆ ತಮ್ಮಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು ಮತ್ತು ಇಂದಿರಾಗಾಂಧಿ ಅವರು ತುರ್ತುಪರಿಸ್ಥಿತಿ ಘೋಷಣೆ ಮಾಡಿದಾಗ ಎಲ್ಲ ನಾಯಕರ ಜೊತೆಗೆ ಇವರೂ ಸಹ ಜೈಲು ಸೇರಿದರು ಎಂದು ನೆನಪು ಮಾಡಿಕೊಂಡರು.
ಯಾವ ತೊಡಕಿನ ಸಮಸ್ಯೆಯನ್ನೇ ಆಗಲಿ ಅದನ್ನು ಬಿಡಿಸುವಲ್ಲಿ ಜೆಪಿ ಅವರು ತೋರಿಸುತ್ತಿದ್ದ ಅಪೂರ್ವ ತಾಳ್ಮೆ, ವಿವಿಧ ಅಭಿಪ್ರಾಯಗಳನ್ನು ಕೇಳುವ ಕುತೂಹಲ, ಮನುಷ್ಯನ ಮೂಲಭೂತ ಒಳ್ಳೆಯತನದಲ್ಲಿ ನಂಬಿಕೆ ಈ ಒಳ್ಳೆಯತನವನ್ನು ಮುಟ್ಟುವ ತಟ್ಟುವ ಅವರ ಪ್ರಾಮಾಣಿಕ ಪ್ರಯತ್ನ ಇವೇ ಅವರ ಯಶಸ್ಸಿನ ಗುಟ್ಟು. ಎರಡು ನೂರು ಜನ ಪೊಲೀಸರು ವರ್ಷಾನುವರ್ಷ ಇಡೀ ಚoಬಲ್ ಕಣಿವೆಯನ್ನು ಜಾಲಾಡಿಸಿ ಹುಡುಕಿದರೂ, ವೈಮಾನಿಕರು ಆ ಭಾಗಗಳಲ್ಲಿ ಬಾಂಬು ಸುರಿಸಿದರೂ ಆಗದಂಥ ಕೆಲಸ ನೂರಾರು ಜನ ಕೊಲೆಗಡುಕರು ಸುಲಿಗೆದಾರರು ತಮ್ಮ ಜೀವನ ವಿಧಾನವನ್ನೇ ಬದಲಿಸಿ ಬಂದು ಒಬ್ಬ ವ್ಯಕ್ತಿಗೆ ಶರಣಾಗತವಾದದ್ದು ಸಾಮಾನ್ಯವಲ್ಲ. ಒಳ್ಳೆಯ ಶೀಲ ಚಾರಿತ್ರ್ಯ, ಪ್ರಾಮಾಣಿಕತೆ ಒಬ್ಬ ವ್ಯಕ್ತಿ ಏನು ಸಾಧಿಸಬಹುದು ಎಂಬುದಕ್ಕೆ ಜಯಪ್ರಕಾಶ್ ನಾರಾಯಣರು ಉತ್ತಮ ನಿದರ್ಶನವಾಗಿದ್ದರು. ರೈತನಿಂದ ಹಿಡಿದು ರಾಜಕೀಯ ಸಮಸ್ಯೆಗಳಿಂದ ಬರುವ ಸರಕಾರಿ ಮಂತ್ರಿಗಳವರೆಗೆ ಜೆಪಿ ಅವರ ಮೃದು ಮಧುರ ಸೌಮ್ಯ ಭಾವನೆ ಸಿದ್ಧವಿರುತ್ತಿತ್ತು. ಜಯ ಪ್ರಕಾಶ ನಾರಾಯಣರು ಪ್ರಖ್ಯಾತ ಬರಹಗಾರರು ಚಿಂತಕರು ಆಗಿದ್ದರು. ಸಮಾಜವಾದವೇ ಏಕೆ , ಸಂಘರ್ಷದೆಡೆಗೆ, ಲಾಹೋರ್ ಕೋಟೆಯಲ್ಲಿ, ಭಾರತೀಯ ರಾಜನೀತಿಯ ಪುನರ್ ನಿರ್ಮಾಣಕ್ಕೆ ಒಂದು ಮನವಿ, ಸಮಾಜವಾದದಿಂದ ಸರ್ವೋದಯದ ಕಡೆಗೆ, ಜನತೆಗಾಗಿ ಸ್ವರಾಜ್ಯ, ಇವನ್ನು ಕುರಿತು ಇಂಗ್ಲಿಷ್ನಲ್ಲಿ ಕೃತಿ ರಚನೆ ಮಾಡಿದ್ದಾರೆ ಎಂದು ತಿಳಿಸಿದರು.
ದೇಶದಲ್ಲಿ ಸಂಪೂರ್ಣ ಕ್ರಾಂತಿ ಆಗಬೇಕು ಭ್ರಷ್ಟಾಚಾರ ತೊಲಗಬೇಕು ನಿಜವಾದ ಜನಶಕ್ತಿಯ ಆಳ್ವಿಕೆ ಆರಂಭವಾಗಬೇಕು ಆಡಳಿತದ ವಿಕೇಂದ್ರಿಕರಣವಾಗಬೇಕು ಹೊಸ ಶಿಕ್ಷಣ ರೂಪುಗೊಳ್ಳಬೇಕು ಇದು ಅವರ ಬಯಕೆಯಾಗಿತ್ತು. ಜಯಪ್ರಕಾಶ ಅವರು ಅಮೆರಿಕಾದ ಸಿಯಾಟಲ್ ನಲ್ಲಿ ಶಸ್ತ್ರಚಿಕಿತ್ಸೆ ಹೊಂದಿ ಮರಳಿದ ಮೇಲೆ ಈ ಆದರ್ಶ ಸಮಾಜದ ಸ್ಥಾಪನೆಗಾಗಿ ತಮ್ಮ ಕೆಲಸ ಮುಂದುವರೆಸಿದರು. 1979ರ ಅಕ್ಟೋಬರ್ 8ರಂದು ಜೈಪ್ರಕಾಶ್ ನಾರಾಯಣರು ಮರಣ ಹೊಂದಿದರು ಎಂದು ಹೇಳುತ್ತಾ ತಮ್ಮ ಉಪನ್ಯಾಸವನ್ನು ಮುಕ್ತಾಯ ಮಾಡಿದರು.
ಶರಣೆ ಗೌರಮ್ಮ ನಾಶಿ ಅವರು ಶರಣ ಪ್ರಜ್ಞೆಯನ್ನು ಇನ್ನೊಮ್ಮೆ ಎಲ್ಲರಿಗೂ ನೆನಪು ಮಾಡಿಕೊಡುತ್ತ, ವೇದಿಕೆಯ ಬಗೆಗೆ ಅತ್ಯಂತ ಅಭಿಮಾನದ ನುಡಿಗಳನ್ನಾಡಿ, ಜಯಪ್ರಕಾಶ ಅವರ ಬಗೆಗೆ ಸಹ ತಮ್ಮ ಮಾರ್ಗದರ್ಶನದ ನುಡಿಗಳನ್ನು ನಮ್ಮೊಂದಿಗೆ ಹಂಚಿಕೊಂಡರು.
ಶರಣೆ ವಿದ್ಯಾ ಮುಗ್ದುಮ್ ಅವರ ಪ್ರಾರ್ಥನೆ, ಪ್ರೊ. ಶಾರದಮ್ಮ ಪಾಟೀಲ ಅವರ ಸ್ವಾಗತ -ಪ್ರಾಸ್ತಾವಿಕ-ಪರಿಚಯ
ಶರಣೆ ಸುಧಾ ಪಾಟೀಲ ಅವರ ಶರಣು ಸಮರ್ಪಣೆ, ಶರಣೆ ಜಯಶ್ರೀ ಆಲೂರ ಅವರ ವಚನ ಮಂಗಳ, ಶರಣೆ ಜಯಶ್ರೀ ಭoಡಾರಿ ಅವರ ಕಾರ್ಯಕ್ರಮ ನಿರ್ವಹಣೆ ಮತ್ತು ಸಂವಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳವಳಿಕೆ ಮತ್ತು ಅಧ್ಯಯನ ಕೇಂದ್ರ -ಪುಣೆ